Site icon Vistara News

BJP Rathayatre: ಕಾಡಂಚಿನಲ್ಲಿ ಎಸ್‌ಟಿ ಸಮುದಾಯಗಳಿಗೆ ಪುನರ್ವಸತಿ ವ್ಯವಸ್ಥೆ: ಸಿಎಂ ಬೊಮ್ಮಾಯಿ ಭರವಸೆ

Cm Basavaraj Bommai assures rehabilitation arrangements for ST communities in forest fringes

#image_title

ಚಾಮರಾಜನಗರ: ಕಾಡಿನ ಮಧ್ಯೆ ವಾಸಿಸುವ ಎಸ್‌ಟಿ ಸಮುದಾಯಗಳಿಗೆ ಪ್ರಾಣಿಗಳ ಹಾವಳಿಯಿರುವುದರಿಂದ ಅವರಿಗೆ ಕಾಡಂಚಿನಲ್ಲಿ ಜಮೀನು ಒದಗಿಸಿ ಪುನರ್ವಸತಿ ವ್ಯವಸ್ಥೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಬಿಜೆಪಿ ವತಿಯಿಂದ ಬುಧವಾರ ಏರ್ಪಡಿಸಿದ್ದ ವಿಜಯ ಸಂಕಲ್ಪ ರಥ ಯಾತ್ರೆಗೆ (BJP Rathayatre) ಚಾಲನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ.

ಕಾಡಂಚಿನ ಸಮುದಾಯಗಳ ಬಗ್ಗೆ ಈ ವರ್ಷದ ಆಯವ್ಯಯದಲ್ಲಿ ವಿಶೇಷ ಗಮನ ನೀಡಲಾಗಿದೆ. ಅರಣ್ಯದಲ್ಲಿ ಬದುಕು ನಡೆಸುತ್ತಿರುವ ಜನರಿಗೆ ಜಮೀನುಗಳನ್ನು ಒದಗಿಸಲು ಕಾನೂನು ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುತ್ತಿದೆ. ಈ ಪ್ರದೇಶದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ(ಪಿಎಚ್‌ಸಿ) ಸಂಖ್ಯೆ ಹೆಚ್ಚಿಸುವ ಬೇಡಿಕೆ ಇದೆ. ಈ ವರ್ಷ ಹೊಸದಾಗಿ 68 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಪ್ರಾರಂಭಿಸಲು ಯೋಜನೆ ರೂಪಿಸಲಾಗಿದೆ. ಈ ಯೋಜನೆಯಡಿ ಜಿಲ್ಲೆಯ ಈ ಭಾಗದ ಕಾಡಂಚಿನಲ್ಲಿರುವ ಜನರಿಗಾಗಿ ಪಿಎಚ್‌ಸಿಗಳನ್ನು ಮಂಜೂರು ಮಾಡಲಾಗುವುದು ಎಂದರು.

ಇದನ್ನೂ ಓದಿ | BJP Rathayatre: ಮಿಷನ್‌ 150 ಗುರಿಯ ವಿಜಯ ಸಂಕಲ್ಪ ರಥಯಾತ್ರೆಗೆ ಜೆ.ಪಿ. ನಡ್ಡಾ ಚಾಲನೆ; ವಿ. ಸೋಮಣ್ಣ ಗೈರು

ಸ್ವಯಂ ಉದ್ಯೋಗ

ಸ್ತ್ರೀ ಸಾಮರ್ಥ್ಯ ಯೋಜನೆಯಡಿ ಪ್ರತಿ ಗ್ರಾಮದ 2 ಸ್ತ್ರೀಶಕ್ತಿ ಸಂಘಗಳಿಗೆ 5 ಲಕ್ಷದವರೆಗೆ ಅನುದಾನ ನೀಡಿ, ಉತ್ಪಾದನೆಗಳಿಗೆ ಮಾರುಕಟ್ಟೆ ಜೋಡಣೆ ಮಾಡಲಾಗುವುದು. ಅರಣ್ಯ ಉತ್ಪನ್ನಗಳ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಲು ಅವಕಾಶವಿದೆ. ಸ್ತ್ರೀ ಸಾಮರ್ಥ್ಯ ಯೋಜನೆಯಡಿ ಇದೇ ತಿಂಗಳು ಆರ್ಥಿಕ ನೆರವು, ತರಬೇತಿ ನೀಡಿ ಸ್ವಯಂ ಉದ್ಯೋಗ ಕಲ್ಪಿಸಲಾಗುವುದು. ಬೇಡರ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಮಹಿಳೆಯರಿಗೆ ಹಾಗೂ ಯುವಕರಿಗೆ ಸ್ವಯಂ ಉದ್ಯೋಗದ ಮೂಲಕ ಸ್ವಾವಲಂಬಿ ಬದುಕು ನೀಡಲಾಗುತ್ತಿದೆ ಎಂದರು.

ದುರ್ಬಲ ವರ್ಗದವರ ಶಿಕ್ಷಣ ಮತ್ತು ಉದ್ಯೋಗಕ್ಕೆ ಆದ್ಯತೆ

ರಾಜ್ಯದಲ್ಲಿ ಎಸ್‌ಸಿ ಎಸ್‌ಟಿ ಮೀಸಲಾತಿಯನ್ನು ಹೆಚ್ಚಿಸಲಾಗಿದೆ. ಈ ಸಮುದಾಯಗಳಿಗೆ 75 ಯೂನಿಟ್ ಉಚಿತ ವಿದ್ಯುತ್, ಮನೆ ನಿರ್ಮಾಣ ಹಾಗೂ ಜಮೀನು ಖರೀದಿಗೆ ಧನಸಹಾಯ, ಅಂಬೇಡ್ಕರ್ ಹಾಗೂ ಕನಕದಾಸ ಹಾಸ್ಟೆಲ್ ನಿರ್ಮಾಣ, ಹೀಗೆ ದುರ್ಬಲ ವರ್ಗದವರ ಶಿಕ್ಷಣ ಮತ್ತು ಉದ್ಯೋಗಕ್ಕೆ ಆದ್ಯತೆ ನೀಡಲಾಗುತ್ತಿದೆ. ಕೃಷಿ ಕಾರ್ಮಿಕರಾಗಿ ದುಡಿಯುವ ಹೆಣ್ಣುಮಕ್ಕಳಿಗೆ ಗೃಹಿಣಿ ಶಕ್ತಿ ಯೋಜನೆಯ ಮೂಲಕ ಪ್ರತಿ ಮಾಹೆ 1000 ರೂ.ಗಳನ್ನು ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಹೆಣ್ಣು ಮಕ್ಕಳಿಗೆ ಉಚಿತ ಬಸ್ ಪಾಸ್, ಪಿಯುಸಿಯಿಂದ ಡಿಗ್ರಿವರೆಗೆ ಉಚಿತ ಶಿಕ್ಷಣ ಸೇರಿ ಹಲವು ಜನಪರ ಯೋಜನೆಗಳನ್ನು ರೂಪಿಸಲಾಗಿದೆ. ರೈತ ವಿಮಾ ಯೋಜನೆ , ರೈತ ವಿದ್ಯಾನಿಧಿಯಂತಹ ರೈತಪರ ಯೋಜನೆಗಳನ್ನು ರೂಪಿಸಲಾಗಿದೆ ಎಂದರು.

ಇದನ್ನೂ ಓದಿ | BJP Rathayatre: ಆದಿವಾಸಿ, ಶೋಷಿತರ ಪರ ಮೋದಿ ಸರ್ಕಾರ ಕೆಲಸ; ಇಲ್ಲಿಯ ಚಿತ್ರಣವನ್ನೇ ಬದಲಿಸಲು ಬಂದಿದ್ದೇನೆ: ಜೆ.ಪಿ. ನಡ್ಡಾ

ವಿಜಯಸಂಕಲ್ಪ ಯಾತ್ರೆಯಿಂದ ಆತ್ಮವಿಶ್ವಾಸ

ವಿಜಯಸಂಕಲ್ಪ ಯಾತ್ರೆಯನ್ನು ಮಲೆಮಹದೇಶ್ವರ ಕ್ಷೇತ್ರದಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಪ್ರಾರಂಭಿಸಿದ್ದಾರೆ. ಇಲ್ಲಿಂದ ಪ್ರಾರಂಭವಾಗಿರುವ ವಿಜಯಸಂಕಲ್ಪ ಯಾತ್ರೆ ದಾವಣಗೆರೆ ಜಿಲ್ಲೆಯಲ್ಲಿ ಸಂಪೂರ್ಣಗೊಳ್ಳಲಿದೆ. ಜನಸಂಕಲ್ಪ ಯಾತ್ರೆಯಿಂದ ಹೆಚ್ಚಿನ ಪ್ರೇರಣೆ ದೊರೆತಿದ್ದು, ಪಕ್ಷದ ಆತ್ಮವಿಶ್ವಾಸ ಹೆಚ್ಚಿದೆ. ಕೇಂದ್ರ ಮತ್ತು ರಾಜ್ಯದ ಡಬಲ್ ಎಂಜಿನ್ ಸರ್ಕಾರದಿಂದ ಜನಕಲ್ಯಾಣ ಕಾರ್ಯಕ್ರಮಗಳನ್ನು ಸಾಕಾರಗೊಳಿಸಲಾಗುತ್ತಿದೆ. ಕರ್ನಾಟಕದಲ್ಲಿ ಭಾಜಪ ಸ್ಪಷ್ಟ ಬಹುಮತ ಪಡೆದು ದಿಗ್ವಿಜಯ ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಮತ್ತಿತರರು ಹಾಜರಿದ್ದರು.

Exit mobile version