ಉಡುಪಿ: ರಾಜ್ಯ ವಿಧಾನಸಭಾ ಚುನಾವಣೆಯ (Karnataka Election 2023) ದಿನಾಂಕ ಹತ್ತಿರ ಬರುತ್ತಿದ್ದಂತೆ ರಾಜಕಾರಣಿಗಳ ಟೆಂಪಲ್ ರನ್ ಶುರುವಾಗಿದೆ. ಟಿಕೆಟ್ ಘೋಷಣೆಯಾದ ಬಳಿಕ ಅಭ್ಯರ್ಥಿಗಳು ತಮ್ಮ ಆರಾಧ್ಯ ದೇವರ ಸನ್ನಿಧಿಗೆ ಹೋಗಿ ಪೂಜೆ ಮಾಡಿಸುವ ಮೂಲಕ ದೇವರ ಅನುಗ್ರಹ ಕೋರುತ್ತಿದ್ದಾರೆ. ಈ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರೂ ಸಹ ಧಾರ್ಮಿಕ ಸ್ಥಳಗಳಿಗೆ ಕುಟುಂಬದವರೊಂದಿಗೆ ಭೇಟಿ ನೀಡುತ್ತಾ ಬರುತ್ತಿದ್ದು, ಈಗ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ದಂಪತಿ ಸಮೇತ ಭೇಟಿ ನೀಡಿದ್ದಾರೆ. ಇದೇ ವೇಳೆ ದೇಗುಲಕ್ಕೆ ಖ್ಯಾತ ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಸಹ ಭೇಟಿ ನೀಡಿದ್ದು, ಸಿಎಂ ಜತೆ ಕಾಣಿಸಿಕೊಂಡಿದ್ದಾರೆ.
ಬಿಜೆಪಿಯು ಎಲ್ಲ ಪಕ್ಷಗಳಿಗಿಂತ ತಡವಾಗಿ ಟಿಕೆಟ್ ಘೋಷಣೆ ಮಾಡಿದ್ದರೂ 2 ಪಟ್ಟಿಗಳನ್ನು ಈಗಾಗಲೇ ರಿಲೀಸ್ ಮಾಡಿದೆ. ಈ ಹಿನ್ನೆಲೆಯಲ್ಲಿ ಸ್ವಲ್ಪ ರಿಲ್ಯಾಕ್ಸ್ ಆದಂತೆ ಕಾಣುತ್ತಿರುವ ಸಿಎಂ ಬೊಮ್ಮಾಯಿ ಕೊಲ್ಲೂರು ಮೂಕಾಂಬಿಕಾ ದೇವಿ ದರ್ಶನಕ್ಕೆ ದಂಪತಿ ಸಮೇತ ಆಗಮಿಸಿದ್ದಾರೆ.
ಈ ವೇಳೆ ಸಿಎಂ ಜತೆಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಮತ್ತಿತರರು ಭಾಗಿಯಾಗಿದ್ದರು. ಅಲ್ಲದೆ, ಸಿಎಂ ದೇಗುಲದಲ್ಲಿ ದರ್ಶನಕ್ಕೆ ಆಗಮಿಸಿದ್ದಾಗ ಅಲ್ಲಿ ಅವರ ಜತೆಗೆ ನಟ ರಿಷಬ್ ಶೆಟ್ಟಿ ಸಹ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.
ಉಡುಪಿಗೆ ಬಂದರೂ ಟಿಕೆಟ್ ವಂಚಿತರಿಗೆ ಕರೆ ಮಾಡದ ಸಿಎಂ
ಸಿಎಂ ಬೊಮ್ಮಾಯಿ ಉಡುಪಿಗೆ ಬಂದರೂ ಟಿಕೆಟ್ ವಂಚಿತರಿಗೆ ಕರೆ ಮಾಡಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಟಿಕೆಟ್ ವಂಚಿತ ಉಡುಪಿಯ ಶಾಸಕರಾದ ರಘುಪತಿ ಭಟ್, ಸುಕುಮಾರ ಶೆಟ್ಟಿ, ಲಾಲಾಜಿ ಆರ್. ಮೆಂಡನ್ ಅವರನ್ನು ಕರೆ ಮಾಡಿ ದೇಗುಲಕ್ಕೆ ಕರೆಸಿಕೊಂಡಿಲ್ಲ. ಅಲ್ಲದೆ, ಶಾಸಕ ರಘುಪತಿ ಭಟ್ ಅವರು ಸಿಎಂ ಬೊಮ್ಮಾಯಿಗೆ ಆತ್ಮೀಯರಾಗಿ ಗುರುತಿಸಿಕೊಂಡಿದ್ದರು. ಸಿಎಂ ಉಡುಪಿಗೆ ಬಂದರೆ ಶಾಸಕರ ಹೋಟೆಲ್‌ನಲ್ಲಿಯೇ ತಂಗುತ್ತಿದ್ದರು.
ಆದರೆ, ಈ ಬಾರಿ ಉಡುಪಿಗೆ ಬಂದರೂ ಅವರಿಗೆ ಕರೆ ಮಾಡಿಲ್ಲ. ಇನ್ನು ತಮಗೆ ಟಿಕೆಟ್ ಕೈತಪ್ಪಿದ್ದರ ರಘುಪತಿ ಭಟ್ ಸಹ ಬೇಸರವನ್ನು ವ್ಯಕ್ತಪಡಿಸಿದ್ದು, ತಮ್ಮನ್ನು ಪಕ್ಷ ನಡೆಸಿಕೊಂಡ ಬಗ್ಗೆ ಅಸಮಾಧಾನವನ್ನು ಹೊರಹಾಕಿದ್ದಾರೆ. ಟಿಕೆಟ್ ಕೈತಪ್ಪಿದ ಮೇಲೆಯೂ ಸಹ ಯಾರೂ ನನಗೆ ಕರೆ ಮಾಡಿಲ್ಲ ಎಂದು ಭಟ್ ಬೇಸರ ವ್ಯಕ್ತಪಡಿಸಿದ್ದರು.
ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಸೇರಿ ವಿವಿಧ ದೇವಾಲಯಗಳಿಗೆ ಭೇಟಿ ನೀಡಿದ್ದ ಸಿಎಂ
ಸಿಎಂ ಬಸವರಾಜ ಬೊಮ್ಮಾಯಿ ದಂಪತಿ ಬುಧವಾರ (ಏ. 12) ಧರ್ಮಸ್ಥಳ, ಕುಕ್ಕೆ ಶ್ರೀ ಸುಬ್ರಹ್ಮಣ್ಯ, ಮಂಗಳೂರಿನ ಮಂಗಳಾದೇವಿ ದೇವಸ್ಥಾನ, ಗರೋಡಿ ಬ್ರಹ್ಮ ಬೈದರ್ಕಳ ದೈವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದರು.
ಇದನ್ನೂ ಓದಿ: Murder attempt : ಕೊಡಗು ಜಿಲ್ಲಾ ವಿಹಿಂಪ ಅಧ್ಯಕ್ಷರ ಮೇಲೆ ಗುಂಡು ಹಾರಾಟ: ಕಾರಿಗೆ ತಾಗಿ ಅಪಾಯದಿಂದ ಪಾರು
ಧರ್ಮಸ್ಥಳದಿಂದ ಹೆಲಿಕಾಪ್ಟರ್ ಮೂಲಕ ತಡಬದ ಬಿಳಿನೆಲೆಗೆ ಆಗಮಿಸಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಿಎಂ ಬೊಮ್ಮಾಯಿ ದಂಪತಿ ತೆರಳಿದ್ದರು. ಬಳಿಕ ಸಿಎಂ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು. ಅಲ್ಲಿಂದ ಸಂಪುಟ ನರಸಿಂಹ ಸ್ವಾಮಿ ದೇವರ ದರ್ಶನ ಪಡೆದರು. ನಂತರ ಹೊಸಳಿಗಮ್ಮ ದೈವದ ದರ್ಶನ ಪಡೆದು ನಿರ್ಗಮಿಸಿದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಬಳಿಕ ಸಿಎಂ ಬೊಮ್ಮಾಯಿ ಮಂಗಳೂರಿನ ಮಂಗಳಾದೇವಿ ದೇವಸ್ಥಾನ, ಗರೋಡಿ ಬ್ರಹ್ಮ ಬೈದರ್ಕಳ ದೈವಸ್ಥಾನಕ್ಕೆ ಭೇಟಿ ನೀಡಿದ ದರ್ಶನ ಪಡೆದರು.