ಬೆಂಗಳೂರು: ರಾಜ್ಯದಲ್ಲಿನ ಮೂಲಸೌಕರ್ಯ ವ್ಯವಸ್ಥೆ, ನೀತಿಗಳು ಬಂಡವಾಳ ಹೂಡಿಕೆದಾರರನ್ನು(Invest Karnataka 2022) ನಿರಾಶೆಗೊಳಿಸುವುದಿಲ್ಲ. ರಾಜ್ಯದಲ್ಲಿ 6000 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುತ್ತಿದೆ. ಉತ್ತಮ ಮೂಲಸೌಕರ್ಯವುಳ್ಳ 50 ಸಾವಿರ ಎಕರೆ ಲ್ಯಾಂಡ್ ಬ್ಯಾಂಕ್ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಲಭ್ಯವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಗರದಲ್ಲಿ ಆಯೋಜಿಸಿದ್ದ ಇನ್ವೆಸ್ಟ್ ಕರ್ನಾಟಕ 2022 ಜಾಗತಿಕ ಹೂಡಿಕೆದಾರರ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಶುಕ್ರವಾರ ಮಾತನಾಡಿ, ಹುಬ್ಬಳ್ಳಿ ಧಾರವಾಡ, ಮಂಗಳೂರು, ಕಲಬುರ್ಗಿ, ಬಳ್ಳಾರಿ, ತುಮಕೂರು, ಮೈಸೂರು ಜಿಲ್ಲೆಗಳಲ್ಲಿ ಲ್ಯಾಂಡ್ ಬ್ಯಾಂಕ್ ಲಭ್ಯವಿದೆ. ಶಿವಮೊಗ್ಗ, ವಿಜಯಪುರದಲ್ಲಿ ವಿಮಾನ ನಿಲ್ದಾಣ ಶೀಘ್ರ ಆರಂಭವಾಗಲಿದೆ. ಅದೇ ರೀತಿ ಕಾರವಾರದಲ್ಲಿ ವಿಮಾನ ನಿಲ್ದಾಣವಾಗಲಿದೆ. ಈ ಸಮಾವೇಶ ಕರ್ನಾಟಕದ ಆರ್ಥಿಕತೆಯ ಮುಂದಿನ ಹಂತದ ಅಭಿವೃದ್ಧಿಗೆ ತಳಪಾಯವಾಗಲಿದೆ ಎಂದರು.
ಇದನ್ನೂ ಓದಿ | Invest Karnataka 2022 | ಹೂಡಿಕೆ ಪ್ರಸ್ತಾಪಗಳ ಅನುಷ್ಠಾನದಲ್ಲಿ ಈ ಬಾರಿ ಪ್ರಗತಿ: ಸಿಎಂ ಬೊಮ್ಮಾಯಿ
ಮೂರು ತಿಂಗಳೊಳಗೆ ಒಪ್ಪಂದಗಳ ಅನುಷ್ಠಾನ ಪ್ರಕ್ರಿಯೆ ಪ್ರಾರಂಭ
ಈ ಬಾರಿಯ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ(GIM) 9.8 ಲಕ್ಷ ಕೋಟಿ ರೂಪಾಯಿ ಮೌಲ್ಯದ ಒಪ್ಪಂದಗಳಿಗೆ ಸಹಿಯಾಗಿದ್ದು, ಇವುಗಳಲ್ಲಿ 2.83 ಲಕ್ಷ ಕೋಟಿ ರೂಪಾಯಿ ಬಂಡವಾಳ ಯೋಜನೆಗಳಿಗೆ ಈಗಾಗಲೇ ಅನುಮೋದನೆ ದೊರೆತಿದೆ. ಈ ಬಾರಿಯ ಹೂಡಿಕೆದಾರರ ಸಮಾವೇಶ ಪ್ರಾರಂಭವಾಗುವ ಮೊದಲೇ ಶೇ.29 ಯೋಜನೆಗಳಿಗೆ ಅನುಮೋದನೆ ಸಿಕ್ಕಿದೆ. ಸುಮಾರು 10 ಲಕ್ಷ ಕೋಟಿ ರೂಪಾಯಿ ಬಂಡವಾಳ ಒಪ್ಪಂದಗಳ ಸಾಕಾರಕ್ಕೆ ನಿಗದಿತ ಅವಧಿಯಲ್ಲಿ ಕ್ರಮ ಕೈಗೊಳ್ಳಲು ಇಲಾಖಾ ಕಾರ್ಯದರ್ಶಿಗಳಿಗೆ ತಿಳಿಸಲಾಗಿದೆ. ಮುಂದಿನ 3 ತಿಂಗಳ ಅವಧಿಯೊಳಗೆ ಬಂಡವಾಳ ಹೂಡಿಕೆಯ ಎಲ್ಲ ಒಪ್ಪಂದಗಳ ಅನುಷ್ಠಾನ ಪ್ರಕ್ರಿಯೆ ಪ್ರಾರಂಭವಾಗಬೇಕು. ಮೂರು ತಿಂಗಳ ನಂತರ ಈ ಬಗ್ಗೆ ಪಾರದರ್ಶಕ ವರದಿಯನ್ನು ಜನರಿಗೆ ನೀಡಬೇಕು ಎಂದು ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ತಿಳಿಸಿದರು.
ಕರ್ನಾಟಕ ಮಾತ್ರ ಮೂಲ ಸೌಕರ್ಯ ಕಲ್ಪಿಸುತ್ತಿದೆ
2000ನಲ್ಲಿ ಮೊದಲ ಹೂಡಿಕೆದಾರರ ಸಮಾವೇಶ ಮಾಡಲಾಗಿತ್ತು. 27 ಸಾವಿರ ಕೋಟಿ ರೂಪಾಯಿ ಹೂಡಿಕೆಯಾಗುವ ಭರವಸೆ ಇತ್ತು. ಆದರೆ ಶೇ.44 ಬಂಡವಾಳ ಹೂಡಿಕೆಯಾಯಿತು. 2010ರಲ್ಲಿ 3,94,768 ಕೋಟಿ ರೂಪಾಯಿ ಭರವಸೆ ನೀಡಲಾಗಿತ್ತು. ಶೇ.14 ಮಾತ್ರ ಸಾಕಾರವಾಯಿತು. 2012ರಲ್ಲಿ 6,77,158 ಕೋಟಿ ರೂಪಾಯಿ ಬಂಡವಾಳ ಭರವಸೆಯಲ್ಲಿ ಕೇವಲ ಶೇ.8, 2016ರಲ್ಲಿ 3,05,000 ಕೋಟಿ ರೂ.ಗಳ ಪೈಕಿ ಕೇವಲ ಶೇ.15 ಸಾಕಾರವಾಗಿದೆ. ಈ ಬಾರಿ ನಮ್ಮ ಸರ್ಕಾರ ಈ ರೀತಿ ಆಗಲು ಬಿಡುವುದಿಲ್ಲ. ಯಾವ ಸರ್ಕಾರವೂ ವಾಸ್ತವ ಅಂಶ ಹೇಳುವುದಿಲ್ಲ. ನಾನು ಪ್ರಾಮಾಣಿಕತೆಯಿಂದ ಪಾರದರ್ಶಕತೆಯಿಂದ ಇದನ್ನು ತಿಳಿಸುತ್ತಿದ್ದು, ನಾನು ನನ್ನ ರಾಜ್ಯದ ಜನತೆಗೆ ವಾಸ್ತವ ಹೇಳಬಯಸುತ್ತೇನೆ ಎಂದರು.
ಹೈಡ್ರೋಜನ್, ಅಮೊನಿಯಾ ಇಂಧನ ತಯಾರಿಕೆ ಗುರಿ
ಕರ್ನಾಟಕ ರಾಜ್ಯದ ಮೇಲೆ ಎಲ್ಲರೂ ಭರವಸೆ ಇಟ್ಟು ಬಂದಿದ್ದಾರೆ. ಆರ್ಥಿಕತೆಯ ದಿಗ್ಗಜರು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಿರುವಾಗ, ನಾವು ನಮ್ಮ ಹೆಜ್ಜೆಗಳನ್ನು ಮುಂದಿರಿಸುತ್ತಿದ್ದೇವೆ. ಕರ್ನಾಟಕ ಇಂದು ಯೋಚಿಸಿದ್ದನ್ನು ದೇಶ ನಾಳೆ ಯೋಚಿಸುತ್ತದೆ. ಆರ್ಥಿಕ ಹಿಂಜರಿತದ ಕಾರ್ಮೋಡದ ಮೇಲೆ ಬೆಳ್ಳಿ ರೇಖೆಗಳು ನಮಗೆ ಕಾಣುತ್ತಿವೆ. ಶೇ.63 ನವೀಕರಿಸಬಹುದಾದ ಇಂಧನವನ್ನು ಕರ್ನಾಟಕ ಉತ್ಪಾದಿಸುತ್ತಿದೆ. ನಾವು ಗಲ್ಫ್ ರಾಷ್ಟ್ರಗಳೊಂದಿಗೆ ಸ್ಪರ್ಧೆಗಿಳಿದು ಹೈಡ್ರೋಜನ್ ಇಂಧನ, ಅಮೊನಿಯಾವನ್ನು ಮೊದಲು ತಯಾರಿಸುತ್ತೇವೆ. ಫೆಬ್ರವರಿ, ಮಾರ್ಚ್‌ನಲ್ಲಿ ಹೈಡ್ರೊಜನ್, ಅಮೊನಿಯಾ ಇಂಧನವನ್ನು ತಯಾರಿಸುವ ಗುರಿ ನಮ್ಮದು. ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು ಎಂದರು.
ಅಂತ್ಯವಲ್ಲ, ಮಧ್ಯಂತರ
ಕರ್ನಾಟಕ ಎಲ್ಲಾ ರಂಗಗಳಲ್ಲಿ ಸದಾ ಮುಂಚೂಣಿಯಲ್ಲಿರುವ ರಾಜ್ಯ. ಸವಾಲುಗಳನ್ನು ನಾವು ಎದುರಿಸುತ್ತೇವೆ. ಹೂಡಿಕೆದಾರರ ಸವಾಲು ಮತ್ತು ಯಶಸ್ಸು ನಮ್ಮದೂ ಕೂಡ. ಇದು ಅಂತ್ಯವಲ್ಲ. ಮೂರು ತಿಂಗಳ ನಂತರ ಮತ್ತೆ ಆರಂಭವಾಗುತ್ತದೆ. ನಿರಂತರ ಅನುಷ್ಠಾನಕ್ಕೆ ಪ್ರಯತ್ನ ಮಾಡುತ್ತೇವೆ. ಕೇಂದ್ರ ಸಚಿವ ಭಗವಂತ ಖೂಬಾ ಅವರು ಕೇಂದ್ರದಿಂದ ಸಾಕಷ್ಟು ಸಹಕಾರ ನೀಡುತ್ತಿದ್ದಾರೆ. ಬೀದರ್‌ನಲ್ಲಿ ಸಿಪೆಟ್ ಸ್ಥಾಪನೆಗೆ ಭೂಮಿಪೂಜೆ ಮಾಡಲಾಗಿದೆ. ಕೈಗಾರಿಕಾ ಸಚಿವ ನಿರಾಣಿ ಹಾಗೂ ಅಧಿಕಾರಿಗಳು ಜಾಗತಿಕ ಉದ್ದಿಮೆದಾರರ ಉತ್ತಮ ಕೆಲಸ ಮಾಡಿದ್ದಾರೆ. ನಮ್ಮ ನಿರೀಕ್ಷೆ ಮೀರಿ ಹೂಡಿಕೆಯಾಗದೆ. ಅಧಿಕಾರಿಗಳು ದೊಡ್ಡ ಪ್ರಮಾಣದಲ್ಲಿ ಶ್ರಮ ವಹಿಸಿದ್ದಾರೆ ಎಂದು ಶ್ಲಾಘಿಸಿದರು.
ಕೇಂದ್ರ ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ್ ಖೂಬಾ, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಇಂಧನ ಸಚಿವ ಸುನೀಲ್ ಕುಮಾರ್, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಕೈಗಾರಿಕಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ. ವಿ.ರಮಣರೆಡ್ಡಿ, ಆಯುಕ್ತೆ ಗುಂಜನ್ ಕೃಷ್ಣಾ ಮೊದಲಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ | Invest Karnataka 2022 | ರಾಜ್ಯ ಸರ್ಕಾರದಿಂದ ಹತ್ತು ಹಲವು ಉದ್ಯಮ ಸ್ನೇಹಿ ಕ್ರಮ: ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್