ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಮಾಡಿ ಅದರ ಸಂಭ್ರಮವನ್ನು ಕಲ್ಯಾಣ ಕರ್ನಾಟಕ ಉತ್ಸವದ ಮೂಲಕ ಆಚರಿಸಲಾಗುತ್ತಿದೆ. ಕಲ್ಯಾಣ ಕಲ್ಯಾಣ ಕರ್ನಾಟಕ (Kalyana Karnataka Utsav 2023) ಭಾಗಕ್ಕೆ ಅಮೃತ ಕಾಲ ಶುರುವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವ-2023ರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ, ದೇಶಕ್ಕೆ ಅಮೃತ ಕಾಲ ಬಂದಂತೆ ಈ ಕಲ್ಯಾಣ ಕರ್ನಾಟಕ ಭಾಗಕ್ಕೂ ಅಮೃತಕಾಲ ಬಂದಿದೆ. ಈ ಭಾಗಕ್ಕೆ ಸ್ವಲ್ಪ ತಡವಾಗಿ ಸ್ವಾತಂತ್ರ್ಯ ಬಂದಿದ್ದರೂ ಕೆಚ್ಚದೆಯ ಹೋರಾಟದಿಂದ ಎರಡೆರಡು ಬಾರಿ ಸ್ವಾತಂತ್ರ್ಯಕ್ಕೆ ಹೋರಾಡಿದವರು ಈ ಭಾಗದವರಾಗಿದ್ದಾರೆ. ರಮಾನಾಂದ ತೀರ್ಥರು ಸೇರಿ ಇಲ್ಲಿನ ಅಸಂಖ್ಯಾತ ಹೋರಾಟಗಾರರ ತ್ಯಾಗ, ಬಲಿದಾನ ಮಾಡಿದ ವೀರರಿಗೆ ವಿಶೇಷ ನಮನ ಸಲ್ಲಿಸುವುದಾಗಿ ಹೇಳಿದರು.
ಈ ಭಾಗ ಬಹಳ ವರ್ಷ ಹಿಂದುಳಿದಿತ್ತು. ಈ ಭಾಗದ ಸಮಗ್ರ ಅಭಿವೃದ್ದಿಗೆ ಸಂವಿಧಾನದ ವಿಧಿ 371 ಜೆ ಆಗಿರಲಿಲ್ಲ. ಆ ನಂತರ ತಿದ್ದುಪಡಿ ಆದರೂ ಕೂಡ ನಾಯಕತ್ವದಲ್ಲಿ ಇಚ್ಛಾಶಕ್ತಿ ಕೊರತೆಯಿಂದ ಈ ಭಾಗ ಹಿಂದುಳಿದಿತ್ತು. ಈ ಭಾಗದ ಯುವಕರಿಗೆ ಯಾವುದೇ ಕೆಲಸ ಮಾಡುವ ಶಕ್ತಿ ಇದೆ. ರೈತರಿಗೆ ಬಂಗಾರದ ಬೆಳೆ ಬೆಳೆಯುವ ಶಕ್ತಿ ಇದೆ. ಕಾರ್ಮಿಕರಿಗೆ ದುಡಿಯುವ ಶಕ್ತಿ ಇದೆ. ಈ ಭಾಗದಲ್ಲಿ ಸಂಪದ್ಭರಿತ ನೈಸರ್ಗಿಕ ಶಕ್ತಿ ಇದೆ. ಆದರೂ ಇಚ್ಛಾ ಶಕ್ತಿಯ ಕೊರತೆಯಿಂದ ಸುಮಾರು ವರ್ಷಗಳ ಕಾಲ ಹಿಂದುಳಿದಿತ್ತು ಎಂದರು.
ಕಲ್ಯಾಣ ಕರ್ನಾಟಕ ಭಾಗದ ಜನರು ಹಿಂದುಳಿಯಲಿ ಎನ್ನುವ ಧೋರಣೆ ಈ ಭಾಗದ ಜನರ ಹಿಂದುಳಿಯುವಿಕೆಗೆ ಕಾರಣವಾಗಿತ್ತು. ಆದರೆ, ಈ ಭಾಗದಲ್ಲಿ ಮಂತ್ರಿ ಮಂಡಳ ಸಭೆ ನಡೆಸಿ ಅಭಿವೃದ್ಧಿಗೆ ನಾಂದಿ ಹಾಡಿದವರು ಮಾಜಿ ಸಿಎಂ ಯಡಿಯೂರಪ್ಪ. ಬೀದರ್-ಗುಲಬರ್ಗಾ ರೈಲ್ವೆ ಲೈನ್ ಹಾಗೂ ಕಲಬುರಗಿ ವಿಮಾನ ನಿಲ್ದಾಣ ಅವರ ಕೊಡುಗೆಯಾಗಿದೆ. ಈ ಭಾಗಕ್ಕೆ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದ ಶ್ರೇಯಸ್ಸು ಸಹ ಅವರಿಗೆ ಸಲ್ಲುತ್ತದೆ. ಈಗ ಈ ಭಾಗದ ಅಭಿವೃದ್ಧಿಗೆ ಸಹಕಾರಿಯಾಗಲು ಮಂಡಳಿಗೆ 3,000 ಕೋಟಿ ರೂಪಾಯಿ ನೀಡುವುದಾಗಿ ಹೇಳಿದ ಅವರು, ಈ ಅನುದಾನದಲ್ಲಿ ಮ್ಯಾಕ್ರೋ ಮತ್ತು ಮೈಕ್ರೋ ಯೋಜನೆಯಡಿ ತಲಾ 1500 ಕೋಟಿ ರೂ. ನೀಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು.
ಈ ವರ್ಷ 1,100 ಕ್ಕಿಂತ ಹೆಚ್ಚು ಶಾಲಾ ಕೊಠಡಿಗಳನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ಆಗುತ್ತಿವೆ. ಮುಂಬರುವ ವರ್ಷದಲ್ಲಿ ಇನ್ನೂ 1,000 ಕೊಠಡಿ ನಿರ್ಮಾಣ ಮಾಡಲಾಗುತ್ತದೆ. ಡಿಗ್ರಿ ಹಾಗೂ ಪಾಲಿಟೆಕ್ನಿಕ್ ಕಾಲೇಜು ನಿರ್ಮಾಣ, ನೀರಾವರಿ, ಕೌಶಲ ಅಭಿವೃದ್ಧಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಭಾಗದಲ್ಲಿ ನೂತನ 28 ಹೊಸ (ಸರ್ಕಾರಿ ಪ್ರಾಥಮಿಕ ಆಸ್ಪತ್ರೆ) ಪಿಎಚ್‌ಸಿ ಹಾಗೂ 4 ಸಿಎಚ್‌ಸಿಗಳನ್ನು ತೆರೆಯಲಾಗಿದೆ. ಕಲಬುರಗಿ ಜಯದೇವ ಆಸತ್ರೆಗೆ 150 ಕೋಟಿ ರೂಪಾಯಿ ಹಾಗೂ ಈ ಭಾಗದ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗಾಗಿ ಅನುಕೂಲವಾಗಲು ಬೆಂಗಳೂರಿನಲ್ಲಿ 50 ಕೋಟಿ ರೂಪಾಯಿ ವೆಚ್ಚದಲ್ಲಿ ಹಾಸ್ಟೆಲ್ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಸನ್ನತಿ ಅಭಿವೃಧ್ದಿಗೆ ಕ್ರಮ, ಬೀದರ್ ಹಾಗೂ ಮಳ ಖೇಡ ಕೋಟೆ ಅಭಿವೃದ್ಧಿಗೆ ತಲಾ ರೂ 50 ಕೋಟಿ ಹಾಗೂ ದತ್ತಾತ್ರೇಯ ದೇವಸ್ಥಾನದ ಅಭಿವೃದ್ದಿಗೆ ರೂ 57 ಕೋಟಿ ಅನುದಾನ ಘೋಷಣೆ ಮಾಡಿದ್ದೇನೆ. ಈ ಭಾಗದ ತಾಂಡಾ ನಿವಾಸಿಗಳಿಗೆ ಶಾಶ್ವತ ಸೂರು ಕಲ್ಪಿಸಲು ಇತ್ತೀಚಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 50,000 ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಿದ್ದಾರೆ. ಇದು ಗಿನ್ನಿಸ್ ಪುಸ್ತಕದಲ್ಲಿ ದಾಖಲೆಯಾಗಿದೆ ಎಂದರು.
ಇದನ್ನೂ ಓದಿ | Basavaraj Bommai: ನೇಕಾರ ಅಭಿವೃದ್ಧಿ ನಿಗಮ, ತೇರದಾಳದಲ್ಲಿ ಮಿನಿ ಜವಳಿ ಪಾರ್ಕ್ ನಿರ್ಮಾಣಕ್ಕೆ ಕ್ರಮ: ಸಿಎಂ ಬೊಮ್ಮಾಯಿ
ಕೆಕೆಆರ್ ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರು, ಮುಖ್ಯ ಅತಿಥಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಮತ್ತಿತರರು ಮಾತನಾಡಿದರು. ಇದೇ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕದ ಕುರಿತು ಸಮಗ್ರ ಮಾಹಿತಿಯನ್ನು ಒಳಗೊಂಡ ‘ ಕಲ್ಯಾಣ ದರ್ಶನ’ ಸ್ಮರಣ ಸಂಚಿಕೆನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಬಿಡುಗಡೆ ಮಾಡಿದರು.