ಹಾವೇರಿ: ಶಿಗ್ಗಾಂವಿ ಕ್ಷೇತ್ರದಲ್ಲಿ (Karnataka Election) ನನಗೆ ಅವಿರೋಧ ಆಯ್ಕೆ ಬೇಡ. ನನಗೆ ಕುಸ್ತಿನೇ ಬೇಕು, ಆಗಲೇ ಯಾರ ಶಕ್ತಿ ಏನು ಎಂದು ತಿಳಿಯುತ್ತದೆ ಎಂದು ಕಾಂಗ್ರೆಸ್ ನಾಯಕರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಹಿರಂಗ ಸವಾಲು ಹಾಕಿದರು.
ನಗರದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಣಕ್ಕೆ ಯಾರೂ ಬೇಕಾದರೂ ಬರಬಹುದು, ಸೆಡ್ಡು ಹೊಡೆದೇ ಬಿಡುತ್ತೇನೆ, ಬೇರೆ ಪ್ರಶ್ನೆಯೇ ಇಲ್ಲ. ವಿರೋಧಿಗಳು ಕುಸ್ತಿ ಪಟ್ಟು ಅಭ್ಯಾಸ ಮಾಡಿಕೊಂಡು ಬರಬೇಕು, ಏಕೆಂದರೆ ಸ್ಪರ್ಧೆಯಲ್ಲಿ ಹೊಸ ಕುಸ್ತಿ ಹೊಸ ಪಟ್ಟು ಇರಲಿದೆ ಹೇಳಿದರು.
ಮೀಸಲಾತಿ ನಿರ್ಣಯ ಮಾಡಿದಾಗ ತಲೆ ಮೇಲೆ ಕೈ ಇಟ್ಟುಕೊಂಡ ವಿರೋಧ ಪಕ್ಷಗಳು ಇನ್ನೂ ತಲೆ ಮೇಲಿನ ಕೈ ತೆಗೆದಿಲ್ಲ. ದೇಶದಲ್ಲಿಯೇ ಯಾರೂ ಮಾಡಿರದ ಎಸ್‌ಸಿ ಎಸ್‌ಟಿ ಮೀಸಲಾತಿ ಹೆಚ್ಚಳವನ್ನು ನಮ್ಮ ಸರ್ಕಾರ ಮಾಡಿದೆ ಎಂದು ತಿಳಿಸಿದರು.
ದೆಹಲಿಯಿಂದ ಬಂದ ವಿರೋಧ ಪಕ್ಷದ ನಾಯಕರೊಬ್ಬರು ಇದನ್ನು ಸಂವಿಧಾನ ವಿರೋಧಿ ಎಂದರು. ಆದರೆ ಕಾಂಗ್ರೆಸ್‌ನದ್ದು ದ್ವಿಮುಖ ನೀತಿ. ಸದಾಶಿವ ಆಯೋಗದ ವರದಿ ಅನುಷ್ಠಾನ ಮಾಡುವುದಾಗಿ ಒಂದೆಡೆ, ಮಾಡುವುದಿಲ್ಲ ಎಂದು ಮತ್ತೊಂದೆಡೆ ಹೇಳುತ್ತಾರೆ. ಇದು ದ್ವಿಮುಖ ನೀತಿ ಅಲ್ಲವಾ? ಜನರಿಗೆ ಸುಳ್ಳು ಹೇಳಿ ದಾರಿ ತಪ್ಪಿಸಿ ಆಡಳಿತ ಮಾಡಿದರು ಎಂದು ಕಿಡಿಕಾರಿದರು.
ಶಿಗ್ಗಾಂವಿ ಕ್ಷೇತ್ರದಲ್ಲೇ ಸ್ಪರ್ಧೆ
ಶಿಗ್ಗಾಂವಿ ನನ್ನ ಆತ್ಮವಿಶ್ವಾಸ, ಮತ್ತೊಂದು ಕ್ಷೇತ್ರದಲ್ಲಿ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ. ಮುಂದಿನ 5 ವರ್ಷಗಳಲ್ಲಿ 15 ವರ್ಷಗಳಲ್ಲಿ ಮಾಡಿದಷ್ಟು ಕೆಲಸ ಮಾಡಿ ತೋರಿಸುವುದಾಗಿ ಹೇಳಿದ ಸಿಎಂ, ಬೇರೆ ಬೇರೆ ಕ್ಷೇತ್ರಗಳಲ್ಲಿ ಆಹ್ವಾನ ಇದ್ದರೂ ನನಗೆ ಪ್ರೀತಿ ವಿಶ್ವಾಸ ಇರುವ ಶಿಗ್ಗಾಂವಿಯಲ್ಲಿ ಪರೀಕ್ಷೆಗೆ ಇಳಿಯುವುದಾಗಿ ಸ್ಪಷ್ಟಪಡಿಸಿದರು.
ಕ್ಷೇತ್ರದ ಜನ ಶಕ್ತಿ ತುಂಬಿದ್ದಾರೆ
ನಿನ್ನೆ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಆಚರಿಸಲಾಗಿದ್ದು, ಮೊದಲ ದಿನ ಶಿಗ್ಗಾಂವಿ ತಾಲೂಕಿನಲ್ಲಿ ಬಿಜೆಪಿ ಶಕ್ತಿ ಇಮ್ಮಡಿ ಆಗಿದೆ. ಈ ಕಾರ್ಯಕ್ರಮ ಬಿಜೆಪಿ ಮತ್ತೆ ರಾಜ್ಯದಲ್ಲಿ ಸಂಪೂರ್ಣವಾಗಿ ಅಧಿಕಾರಕ್ಕೆ ಬರುವ ದಿಕ್ಸೂಚಿಯಾಗಿದೆ. ಇಂದು ಪಕ್ಷ ಸೇರಿದವರು ಯಾರೂ ಹೊರಗಿನವರಲ್ಲ. ನನ್ನ 35 ವರ್ಷಗಳ ರಾಜಕೀಯ ಜೀವನದಲ್ಲಿ ಬೇರೆ ಬೇರೆ ಸಂದರ್ಭದಲ್ಲಿ ನನ್ನ ಜತೆ ಕೆಲಸ ಮಾಡಿದವರು. ಈಗ ನಾವೆಲ್ಲ ಒಂದುಗೂಡಿದ್ದೇವೆ. ನನ್ನ ಜತೆ ಹಲವಾರು ಜನ ಪಕ್ಷ ಕಟ್ಟಲು ಹೆಗಲು ಕೊಟ್ಟಿದ್ದರು. 2008ರ ಚುನಾವಣೆಯ ವಾತಾವರಣವೂ ಹೀಗೆ ಇತ್ತು ಎಂದು ಸ್ಮರಿಸಿದ ಮುಖ್ಯಮಂತ್ರಿಗಳು, ನನ್ನ ಜತೆ ಸೇರಿರುವ ಎಲ್ಲ ಹಿರಿಯರು ಹಾಗೂ ಯುವಕರನ್ನು ಸ್ವಾಗತಿಸುವುದಾಗಿ ತಿಳಿಸಿದರು.
ಇನ್ನು ಮುಂದೆ ಶಿಗ್ಗಾಂವಿ-ಸವಣೂರಿನಲ್ಲಿ ಒಂದೇ ಒಂದು ಪಕ್ಷದಿಂದ ಅಭಿವೃದ್ಧಿಯಾಗಲಿದೆ. ತಾಲೂಕನ್ನು ಮಾದರಿ ಕ್ಷೇತ್ರವಾಗಿ ಪರಿವರ್ತನೆ ಮಾಡಲು ನನಗೆ ಎಲ್ಲರೂ ಶಕ್ತಿ ತುಂಬಿದ್ದಾರೆ ಎಂದ ಅವರು, ಶಿಗ್ಗಾಂವಿ ಬಂಧುಗಳು ಒಳ್ಳೆದನ್ನು ಗುರುತಿಸಿ ಬೆಂಬಲಿಸುತ್ತಾರೆ. ಎಂಥ ಅಪಪ್ರಚಾರ ಆದರೂ ಆತ್ಮ ಸಾಕ್ಷಿಯಿಂದ ಬೆಂಬಲಿಸುತ್ತಾರೆ. ನನ್ನ ವಿರುದ್ಧ ಬಹಳ ದೊಡ್ಡ ಅಪಪ್ರಚಾರ ನಡೆದು ಅಂದು ಪ್ರಮುಖ ಪತ್ರಿಕೆಯಲ್ಲಿ ಬೊಮ್ಮಾಯಿ ಗೆಲ್ಲೋದು ಸಾಧ್ಯವಿಲ್ಲ ಎಂದು ಬರೆದಿದ್ದರು. ಫಲಿತಾಂಶ ಬಂದ ದಿನ ವಿಜಯೋತ್ಸವ ಆಚರಣೆ ನೋಡುವಂತೆ ನಾನು ಆ ಪತ್ರಕರ್ತನಿಗೆ ಹೇಳಿದ್ದೆ ಎಂದು ಸ್ಮರಿಸಿದರು.