Site icon Vistara News

ರಾಜ್ಯಕ್ಕೆ ಡಾ.ಸಿ.ಸೋಮಶೇಖರ್ ಕೊಡುಗೆ ಅಪಾರ ಎಂದ ಸಿಎಂ ಬೊಮ್ಮಾಯಿ

ಬೊಮ್ಮಾಯಿ

ಬೆಂಗಳೂರು: ಕರ್ನಾಟಕಕ್ಕೆ ಡಾ.ಸಿ.ಸೋಮಶೇಖರ್ ಅವರು ದೊಡ್ಡ ಕೊಡುಗೆ ನೀಡಿದ್ದಾರೆ. ಅವರು ಸದಾಕಾಲ ಕ್ರೀಯಾಶೀಲರಾಗಿ ಕೊಡುಗೆ ನೀಡುತ್ತಿರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಿವೃತ್ತ ಐಎಎಸ್‌ ಅಧಿಕಾರಿ ಡಾ.ಸಿ.ಸೋಮಶೇಖರ್ ಅವರ ಆತ್ಮಕಥನ ʼನೀನೊಲಿದ ಬದುಕುʼ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು. ಸೋಮಶೇಖರ್‌ ಅವರು ಅಧಿಕಾರಿಯಾಗಿ ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ಅಧಿಕಾರ ಇಲ್ಲದಾಗಲೂ ಅಷ್ಟೇ ನಿರಂತರವಾಗಿ ಸೇವೆ ಮಾಡುತ್ತಿದ್ದಾರೆ. ಅವರು ಗಡಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದು, ಅವರಿಗೆ ಗಡಿ, ಭಾಷೆ, ಅಧ್ಯಾತ್ಮ, ವಚನ ಸಾಹಿತ್ಯದ ಬಗ್ಗೆ ಅಪಾರ ಜ್ಞಾನ ಹಾಗೂ ಅನುಭವ ಇದೆ ಎಂದರು.

ಬದುಕನ್ನು ಒಲಿಸಿಕೊಂಡ ಧೀಮಂತ
ಸೋಮಶೇಖರ್ ಅವರು ಬರೆದಿರುವ, ಆದರೆ ಮುದ್ರಣಗೊಳ್ಳದ ಬರಹಗಳು ಬಹಳಷ್ಟಿವೆ. ಸೋಮಶೇಖರ್ ಅವರದ್ದು ವರ್ಣ ರಂಜಿತ ಬದುಕು. ಎಲ್ಲಾ ರಂಗದಲಿಯೂ ಬಹಳ ಆಸಕ್ತಿವುಳ್ಳವರು. ಒಲವನ್ನು ಬದುಕಿನಲ್ಲಿ ಗಳಿಸಿಕೊಳ್ಳಬೇಕಾಗುತ್ತದೆ. ತಾಯಿ ಮಗುವಿನ ಪ್ರೀತಿಯಿಂದ ಹಿಡಿದು ಎಲ್ಲಾ ಸಂಬಂಧಗಳಲ್ಲಿ ಒಲವು ಪಡೆದುಕೊಳ್ಳುವುದು ಕಷ್ಟದ ಕೆಲಸ. ನಾನು ಎಂಬುವುದು ಬಿಟ್ಟಾಗ ಒಲವು ಸಿಗುತ್ತದೆ. ಸೋಮಶೇಖರ್ ಅವರ ಬದುಕಿನಲ್ಲಿ ನಾನು ಎನ್ನುವುದು ಅತ್ಯಂತ ವಿರಳವಾಗಿ ಬಂದಿದೆ. ಯಾವುದೇ ಸ್ಥಾನಮಾನ ಸಿಕ್ಕರೂ ಜನರ ಸೇವೆ ಮಾಡಿದ್ದಾರೆ. ಅವರು ಅಧ್ಯಾತ್ಮವನ್ನು ಬಲ್ಲವರು, ಸಂಪೂರ್ಣವಾಗಿ ಬದುಕನ್ನು ಒಲಿಸಿಕೊಂಡು, ಗಳಿಸಿಕೊಂಡು ಸಾಕ್ಷಾತ್ಕಾರ ಮಾಡಿಕೊಂಡಿದ್ದಾರೆ‌ ಎಂದರು.

ಬಸವ ಪ್ರಶಸ್ತಿ ಪ್ರಾರಂಭಿಸಿದವರು
ಬಸವ ಪ್ರಶಸ್ತಿ ಪ್ರಾರಂಭಿಸಿದ ಸೋಮಶೇಖರ್, ಅಧಿಕಾರಿಗಳಿಗೆ, ಸಾಹಿತ್ಯ ವರ್ಗಕ್ಕೆ ಬೇಕಾದವರಾಗಿದ್ದಾರೆ. ಅವರು ಸಮಾಜಕ್ಕೆ ನಗುವನ್ನು ಹರಡುವ ಸ್ವಭಾವದವರು. ಜೀವನದಲ್ಲಿ ನೋವು ಅನುಭವಿಸಿದ್ದಾರೆ‌ ಅದನ್ನು ಮನದಾಳದಲ್ಲಿ ಇಟ್ಟುಕೊಂಡು ನಮಗೆಲ್ಲಾ ಸಂತೋಷ ನೀಡಿದ್ದಾರೆ‌. ಅವರ ಆಸೆಗಳನ್ನು ಈಡೇರಿಸುವ ದಿನಗಳು ದೂರ ಇಲ್ಲ. ಬಹಳಷ್ಟು ಆತ್ಮಕಥನಗಳಲ್ಲಿ ಹೇಳಿದ್ದಕ್ಕಿಂತ ಮುಚ್ಚಿಡುವುದೇ ಹೆಚ್ಚಿರುತ್ತದೆ. ಕನ್ನಡ ನಾಡಿಗೆ ಭಿನ್ನವಾದ, ಅಪರೂಪದ ಸಾಹಿತಿ, ಅಧಿಕಾರಿಯಾಗಿದ್ದಾರೆ ಎಂದರು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ, ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಸಚಿವರಾದ ಸುನಿಲ್‌ ಕುಮಾರ್, ವಿ. ಸೋಮಣ್ಣ, ನಿ.ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಉಪಸ್ಥಿತರಿದ್ದರು.

ಇದನ್ನೂ ಓದಿ | Opinion Poll | ಗುಜರಾತ್‌, ಹಿಮಾಚಲ ಪ್ರದೇಶದಲ್ಲಿ ಮತ್ತೆ ಬಿಜೆಪಿಗೇ ಅಧಿಕಾರ? ಸಮೀಕ್ಷೆ ಹೇಳುವುದೇನು?

Exit mobile version