Site icon Vistara News

Grama One: ತಂತ್ರಜ್ಞಾನ, ಸೇವಾ ಮನೋಭಾವವಿದ್ದರೆ ಸಾಮಾನ್ಯರಿಗೆ ಸರ್ಕಾರಿ ಸೌಲಭ್ಯ ತಲುಪುತ್ತದೆ: ಸಿಎಂ ಬೊಮ್ಮಾಯಿ

#image_title

ಬೆಂಗಳೂರು: ತಂತ್ರಜ್ಞಾನ ಮತ್ತು ಸೇವಾ ಮನೋಭಾವ ಜತೆಗೂಡಿದರೆ ದೇಶದಲ್ಲಿ ಸರ್ಕಾರದ ಸೌಲಭ್ಯಗಳನ್ನು ಗ್ರಾಮೀಣ (Grama One) ಪ್ರದೇಶದ ಸಾಮಾನ್ಯರಲ್ಲಿ ಸಾಮಾನ್ಯರಿಗೆ ತಲುಪಿಸಲು ಸಾಧ್ಯ ಎನ್ನುವುದನ್ನು ಗ್ರಾಮ ಒನ್ ಕಾರ್ಯಕ್ರಮದ ಯಶಸ್ಸು ನಿರೂಪಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿಕಾಸಸೌಧದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಒನ್ ಯೋಜನೆಯ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ಯಾವುದಾದರೂ ಒಂದು ವ್ಯವಸ್ಥೆಗೆ ಚಲನಶೀಲವಾದ ಶಕ್ತಿಯಿದ್ದರೆ ವೇಗವಾಗಿ ಮುಂದುವರಿಸಿಕೊಂಡು ಹೋಗಬಹುದು. ನಿಂತಲ್ಲೇ ನಿಂತರೆ ತುಕ್ಕು ಹಿಡಿಯುತ್ತದೆ. ಸರ್ಕಾರದ ಚಕ್ರ ನಿರಂತರವಾಗಿ ಚಲಿಸಲು ಕೆಳಹಂತದ ಕೆಲಸಗಳು ಸರಿಯಾಗಿ ನಡೆಯಬೇಕು. ಜನರ ಬೇಕು ಬೇಡಗಳ ಆಧಾರದ ಮೇಲೆ ಬಹಳಷ್ಟು ಸೇವೆಗಳು ಒದಗಿಸಲಾಗುತ್ತಿದೆ ಎಂದರು.

ಕಾನೂನಿನ ವ್ಯಾಪ್ತಿಯಲ್ಲಿಯೇ ಕೆಲಸ

ಸರ್ಕಾರ ತನ್ನ ವ್ಯವಸ್ಥೆಯಲ್ಲಿದ್ದ ಕೆಲವು ಅಧಿಕಾರವನ್ನು ಜನರಿಗೆ ನೀಡಿದೆ. ವ್ಯವಸ್ಥೆ ಯಶಸ್ವಿಯಾಗಲು ಸೇವಾ ಮನೋಭಾವ ಮುಖ್ಯ. ಮನೆ ಮನೆಗೆ ಸೇವೆ ತಲುಪಿಸುವ ಉದ್ದೇಶದಿಂದ ಯೋಜನೆ ಜಾರಿಯಾಗಿದ್ದು, ಸೇವೆ ಸೇವೆಯಾಗಿಯೇ ಉಳಿಯಬೇಕು. ಸೇವಾ ಮನೋಭಾವವನ್ನು ಮನಸ್ಸಿನಿಂದ ತೆಗೆಯಬಾರದು ಮಾಡಿದಾಗ ಹೆಚ್ಚಿನ ಸೇವೆ ನೀಡಲು ಸಾಧ್ಯವಿದೆ. ಜನರು ಹಳೆಯ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಇದು ಸೇವೆಗೆ, ಜೀವನೋಪಾಯಕ್ಕೆ ಅವಕಾಶವಾಗಿದೆ. ಜ್ಞಾನಾರ್ಜನೆಗೆ ಕೂಡ ಮೂಲವಾಗಿದೆ. ಸೇವೆಗಳನ್ನು ನೀಡಲು ನಿಮ್ಮನ್ನು ಸಬಲರಾಗಿಸಲಾಗಿದೆ. ಕಾನೂನಿನ ವ್ಯಾಪ್ತಿಯಲ್ಲಿಯೇ ಕೆಲಸ ಮಾಡಬೇಕು. ಜ್ಞಾನವಿದ್ದಲ್ಲಿ ಸಬಲೀಕರಣವಾಗುತ್ತದೆ ಎಂದರು.

ಇದನ್ನೂ ಓದಿ | B.S. Yediyurappa: ಬಾದಾಮಿಯಲ್ಲಿ ಸ್ಪರ್ಧೆ ಮಾಡದೇ ಇರುವುದು ಜನರಿಗೆ ಮಾಡುವ ದ್ರೋಹ; ಅಲ್ಲೇ ಸ್ಪರ್ಧಿಸಿ: ಸಿದ್ದರಾಮಯ್ಯಗೆ ಬಿ.ಎಸ್‌. ಯಡಿಯೂರಪ್ಪ ಸಲಹೆ

ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ ಒನ್ ಜಾರಿಯಲ್ಲಿದೆ. ಗ್ರಾಮ ಒನ್ ಕೇಂದ್ರ‌ದಿಂದ ಬಂದ ಅರ್ಜಿಗಳು ವಿಲೇವಾರಿ ಆಗಲು ವಿಳಂಬವಾದರೆ ತಹಸೀಲ್ದಾರ್ ಕಚೇರಿಗೂ ಇದಕ್ಕೂ ವ್ಯತ್ಯಾಸ ಇರುವುದಿಲ್ಲ. ಪ್ರಾಮಾಣಿಕತೆಯಿಂದ, ದಕ್ಷತೆಯಿಂದ, ವೇಗವಾಗಿ ಕೆಲಸಮಾಡಬೇಕು ಎಂದರು.

ಗ್ರಾಮ ಒನ್ ಕ್ರಾಂತಿಕಾರಿ ಯೋಜನೆ

ಗ್ರಾಮ ಒನ್‌ ಯೋಜನೆಗೆ ಅರ್ಥಿಕವಾಗಿ ಇನ್ನಷ್ಟು ಬಲ‌ ಕೊಡುವ ಕೆಲಸ ಮಾಡಲಾಗುವುದು. ತಂತ್ರಜ್ಞಾನ ‌ಕ್ರಾಂತಿಯಾಗಿದೆ. ಜನರಿಗೆ ಸರಳವಾಗಿ ಸೇವೆಗಳು ಸಿಗುವಂತೆ‌ ಮಾಡಲಾಗುವುದು‌. ಗ್ರಾಮ ಒನ್ ಕೇಂದ್ರಗಳಲ್ಲಿ ಇನ್ನಷ್ಟು ಸೇವೆಗಳು, ಅಂತರ್ಜಾಲಕ್ಕೆ ವೇಗ, ಮೆಮೊರಿ ಸಾಮರ್ಥ್ಯ ಹೆಚ್ಚಳ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಗ್ರಾಮ ಒನ್ ಕ್ರಾಂತಿಕಾರಿ ಯೋಜನೆ. ಸರ್ಕಾರವನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ದಿದೆ ಎಂದರು.

ಸರ್ಕಾರ ಮತ್ತು ಜನಸಾಮಾನ್ಯರ ಕೊಂಡಿ

ಗ್ರಾಮ ಒನ್ ಕಾರ್ಯಕರ್ತರಿಗೆ ಜಿಲ್ಲಾವಾರು ಪ್ರಶಸ್ತಿಗಳನ್ನು ನೀಡಲು ಸರ್ಕಾರ ತೀರ್ಮಾನ ಮಾಡಿದೆ. ಕಾರ್ಯಕರ್ತರು ತಮ್ಮ ಅನುಭವಗಳನ್ನು ದಾಖಲಿಸಬೇಕು. ಶೇ.10 ಕೆಲಸವನ್ನು ಹೆಚ್ಚಿಸುವ ನಿರ್ಧಾರ ಮಾಡಬೇಕು. ಸಮಾಜದಲ್ಲಿ ಹೊಸ ಯುವಕರ ಪಡೆ ಇದೆ. ಸರ್ಕಾರ ಮತ್ತು ಜನಸಾಮಾನ್ಯರ ನಡುವೆ ದಕ್ಷತೆಯಿಂದ ಕೊಂಡಿಯಂತೆ ಕೆಲಸ ಮಾಡುವ ವ್ಯವಸ್ಥೆ ಇದೆ ಎನ್ನುವ ಬಗ್ಗೆ ಜನರಲ್ಲಿ ವಿಶ್ವಾಸ ಮೂಡುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ | Mahadayi Dispute: ಮಹದಾಯಿ ಬಿಕ್ಕಟ್ಟು ಶಮನಕ್ಕೆ ಕೇಂದ್ರ ದಿಟ್ಟ ಹೆಜ್ಜೆ, ಮಹದಾಯಿ ಪ್ರವಾಹ್‌ ರಚನೆಗೆ ಅಸ್ತು, ಏನು ಉಪಯೋಗ?

6 ತಾಲೂಕುಗಳನ್ನು ಸಂಪೂರ್ಣವಾಗಿ ಕಾಗದ ರಹಿತ ಕಚೇರಿಗಳನ್ನಾಗಿ ಮಾಡಲು ಪ್ರಾಯೋಗಿಕ ಕ್ರಮ ಕೈಗೊಂಡಿದ್ದು, ನಾಡಕಚೇರಿಗಳನ್ನೂ ಕಾಗದ ರಹಿತ ಕಚೇರಿಗಳನ್ನಾಗಿಸಲಾಗುವುದು. ಸರ್ವರ್ ಸಾಮರ್ಥ್ಯವನ್ನು ಹೆಚ್ಚಿಸಲು ಅನುಮತಿ ನೀಡಲಾಗುವುದು. ಗ್ರಾಮೀಣ ಪ್ರದೇಶಗಳಲ್ಲಿ ಆಡಳಿತ ಸುಧಾರಣೆಯಾದರೆ ಎಲ್ಲರೂ ಯಶಸ್ವಿಯಾಗುತ್ತೇವೆ. ಅಧಿಕಾರದ ವಿಕೇಂದ್ರೀಕರಣದೊಂದಿಗೆ ಸೇವೆಗಳ ವಿಕೇಂದ್ರೀಕರಣವೂ ಆಗಬೇಕು ಎಂದ ಮುಖ್ಯಮಂತ್ರಿಗಳು, ಅಸಾಧ್ಯ ಎನ್ನುತ್ತಿದ್ದ ಕೆಲಸಗಳನ್ನು ಮಧ್ಯವರ್ತಿಗಳ ಹಾವಳಿ ಇಲ್ಲದೇ ಸರ್ಕಾರದ ಕೆಲಸಗಳನ್ನು ಜನರಿಗೆ ತಲುಪಿಸುತ್ತಿರುವುದಕ್ಕಾಗಿ ಗ್ರಾಮ ಒನ್‌ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದರು.

Exit mobile version