ಕಲಬುರಗಿ: 371 ಜೆ ವಿಧಿ ಆದ ನಂತರ ಕಲ್ಯಾಣ ಕರ್ನಾಟಕ ಭಾಗಕ್ಕೆ ಬಂದಿರುವ ಬಹು ದೊಡ್ಡ ಯೋಜನೆ ಮೆಗಾ ಜವಳಿ ಪಾರ್ಕ್ (PM MITRA Park) ಆಗಿದೆ. ಕಲಬುರಗಿಯಲ್ಲಿ ಪಿಎಂ ಮಿತ್ರ ಟೆಕ್ಸ್‌ಟೈಲ್ ಪಾರ್ಕ್ ನಿರ್ಮಾಣಕ್ಕೆ ಅನುಮೋದನೆ ಕೊಟ್ಟ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸುವೆ. ಮುಂದಿನ 10 ವರ್ಷದಲ್ಲಿ ಉದ್ಯಮಿಗಳು ಜಿಲ್ಲೆಗೆ ಬಂದು ಹೂಡಿಕೆ ಮಾಡುತ್ತಾರೆ. ಭವಿಷ್ಯದಲ್ಲಿ ಕಲಬುರಗಿ ಹೂಡಿಕೆದಾರರ ಕೇಂದ್ರ ಸ್ಥಾನವಾಗಲಿದೆ. ಈ ಭಾಗದ ಆರ್ಥಿಕ ಪ್ರಗತಿಗೆ ಮೆಗಾ ಜವಳಿ ಪಾರ್ಕ್ ದೊಡ್ಡ ಶಕ್ತಿ ತುಂಬುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಗರದ ಪಿಡಿಎ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಮಂಗಳವಾರ ಪಿಎಂ ಮಿತ್ರ ಪಾರ್ಕ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ಬಸವಣ್ಣನ ಈ ನಾಡಿನಲ್ಲಿ ಯಾವಾಗಲೂ ನೆನಪಾಗುವುದು ಕಾಯಕವೇ ಕೈಲಾಸ ಎಂಬ ತತ್ವ. ಕಾಯಕ ಮಾಡಿ ಜೀವನ ನಡೆಸಬೇಕು ಎಂದು ಬಸವೇಶ್ವರರು ಹೇಳಿದ್ದರು. ಇವತ್ತು ನಾವು ಕಾಯಕವನ್ನು ನೀಡುವ ಕೆಲಸ ಮಾಡುತ್ತಿದ್ದೇವೆ. ಕಲಬುರಗಿಯ ಆರ್ಥಿಕತೆಗೆ ವೇಗ ನೀಡುವ ಕೆಲಸವಾಗುತ್ತಿದೆ ಎಂದು ಹೇಳಿದರು.
ಕಲಬುರಗಿಯಲ್ಲಿ ಯಾವತ್ತೋ ಜವಳಿ ಪಾರ್ಕ್ ಆಗಬೇಕಿತ್ತು ಎಂದು ಪರೋಕ್ಷವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯನ್ನು ಪರೋಕ್ಷವಾಗಿ ಟೀಕಿಸಿದ ಅವರು, ಖರ್ಗೆ ಅವರು ಕೇಂದ್ರ ಕಾರ್ಮಿಕ ಸಚಿವರಾಗಿದ್ದಾಗಲೂ ಈ ಭಾಗಕ್ಕೆ ಏನೂ ಮಾಡಲಿಲ್ಲ. ಈ ಭಾಗದ ಜನ ವರ್ಷದಲ್ಲಿ ನಾಲ್ಕು ತಿಂಗಳು ಮುಂಬೈ, ಹೈದರಾಬಾದ್ ವಲಸೆ ಹೋಗುತ್ತಾರೆ. ಈ ವಲಸೆ ನಿಲ್ಲಿಸುವುದೇ ಬಲು ದೊಡ್ಡ ಸವಾಲಾಗಿದೆ. ಆರ್ಥಿಕತೆಯ ಬೆಳವಣಿಗೆ ಜತೆಗೆ ದುಡಿಯುವ ಕೈಗಳಿಗೆ ಕೆಲಸ ಕೊಡಬೇಕು. ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆಯಾಗುವುದರಿಂದ ಲಕ್ಷಾಂತರ ಜನರ ಬದುಕು ಬದಲಾವಣೆ ಆಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ | SC ST Reservation: ಪರಿಶಿಷ್ಟ ಜಾತಿ ಎಂದರೆ ಏನೆಂದು ಮೊದಲು ತಿಳಿದುಕೊಳ್ಳಿ; ಸಂವಿಧಾನದ ಪಾಠ ಮಾಡಿದ ಪಿ. ರಾಜೀವ್
ಬಿ.ಎಸ್.ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ ಮಾಡಿರುವುದು ಬಿಜೆಪಿ ಕುತಂತ್ರ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಅದು ಕಾಂಗ್ರೆಸ್ ಕುತಂತ್ರವಾಗಿದೆ. ಪ್ರತಿಭಟನೆಯಲ್ಲಿ ಸಿಕ್ಕಿರುವ ನಾಯಕರು ಕಾಂಗ್ರೆಸ್‌ನವರೇ ಹೊರತು ಬೇರೆಯವರಲ್ಲ. ಬಂಜಾರ ಸಮುದಾಯದ ಮುಖಂಡರನ್ನು ಕಾಂಗ್ರೆಸ್ ತಪ್ಪು ದಾರಿಗೆ ಎಳೆದಿದೆ. ಮೀಟಿಂಗ್ ಮಾಡಿ, ಜನರಿಗೆ ತಪ್ಪು ಸಂದೇಶ ರವಾನಿಸಿದ್ದಾರೆ. ಡಿ.ಕೆ.ಶಿವಕುಮಾರ್ ಸುಳ್ಳು ಹೇಳುವುದನ್ನು ಬಿಡಬೇಕು ಎಂದು ಕಿಡಿಕಾರಿದರು.
ಟ್ವೀಟ್ ಮಾಡಿ ಶುಭ ಕೋರಿದ ಪ್ರಧಾನಿ ನರೇಂದ್ರ ಮೋದಿ
ಕಳೆದ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಜತೆ ಹೊಂದಾಣಿಕೆ ಕುರಿತ ಸಿ.ಪಿ.ಯೋಗೇಶ್ವರ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ನಾವು ಈ ಸಲ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ, ಯಾವುದೇ ಪಕ್ಷದ ಜತೆ ಹೊಂದಾಣಿಕೆ ಇಲ್ಲ ಎಂದು ಅಮಿತ್ ಶಾ ಅವರು ಸ್ಪಷ್ಟವಾಗಿ ಹೇಳಿರುವುದಾಗಿ ತಿಳಿಸಿದರು.
ಚುನಾವಣೆಗಾಗಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ಆರೋಪಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್‌ಗೆ ಹೊಟ್ಟೆಕಿಚ್ಚು, ಅವರು ಮಾಡದೇ ಇರುವುದನ್ನು ನಾವು ಮಾಡಿದ್ದೇವೆ. ಇದೇ ವೇಳೆ ಕಾಂಗ್ರೆಸ್‌ನಿಂದ ವಲಸೆ ಹೋದವರು ಮತ್ತೆ ಕಾಂಗ್ರೆಸ್‌ಗೆ ಬರುತ್ತಾರೆ ಎಂಬ ಚೆಲುವ ನಾರಾಯಣಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಚೆಲುವ ನಾರಾಯಣ ಸ್ವಾಮಿಯೇ ವಲಸೆ ವ್ಯಕ್ತಿ, ಆತನ ಮಾತು ನಂಬುವುದಕ್ಕೆ ಆಗುತ್ತಾ? ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ | SC ST Reservation: ಮುಸ್ಲಿಮರು ಬೀದಿಗೆ ಇಳಿದಿದ್ದರೆ ಅಮಾಯಕರ ಬಲಿಯಾಗುತ್ತಿತ್ತು: ಬಿಜೆಪಿ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ
ಸಚಿವ ಮುರುಗೇಶ್ ನಿರಾಣಿ ಮಾತನಾಡಿ, ಇಡೀ ದೇಶದಲ್ಲಿ ಪಿಎಂ ಮೋದಿ ಏಳು ಟೆಕ್ಸ್‌ಟೈಲ್ ಪಾರ್ಕ್ ಮಂಜೂರು ಮಾಡಿದ್ದಾರೆ. ಕರ್ನಾಟಕದ ಕಲಬುರಗಿಗೆ ಸಿಎಂ ಬೊಮ್ಮಾಯಿ ಅವರು ಟೆಕ್ಸ್‌ಟೈಲ್ ಪಾರ್ಕ್ ಕೊಡುಗೆ ನೀಡಿದ್ದಾರೆ. ಸಿಎಂ ಬೊಮ್ಮಾಯಿ ಎಂಜಿನಿಯರ್ ಉದ್ಯಮಿಯಾಗಿದ್ದರು. ಹಾಗಾಗಿ ಅವರು ಈ ಭಾಗದಲ್ಲಿ ಉದ್ಯೋಗ ಕ್ರಾಂತಿ ಮಾಡಲಿದ್ದಾರೆ. ಈ ಭಾಗದಲ್ಲಿ 31 ಲಕ್ಷ ಟನ್ ಹತ್ತಿ ಬೆಳೆಯಲಾಗುತ್ತದೆ. ಜವಳಿ ಪಾರ್ಕ್‌ನಿಂದ ಹತ್ತಿ ಬೆಳೆಗಾರರಿಗೆ ಹೆಚ್ಚಿನ ಉತ್ತೇಜನ ಸಿಗಲಿದೆ. ಇದರಿಂದ ಹೊರರಾಜ್ಯ, ವಿದೇಶಗಳಿಗೆ ಹತ್ತಿ ರಫ್ತು ಮಾಡುವುದು ತಪ್ಪಲಿದ್ದು, ಸ್ಥಳೀಯವಾಗಿ ಲಕ್ಷಕ್ಕೂ ಅಧಿಕ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ತಿಳಿಸಿದರು.