ಬೆಂಗಳೂರು: ಸಂಗೊಳ್ಳಿ ರಾಯಣ್ಣನ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಪ್ರತಿ ಸರ್ಕಾರಿ ಕಾಲೇಜಿನಲ್ಲಿ ಸ್ಥಾಪಿಸಲು ಆದೇಶ ಹೊರಡಿಸಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನದ ವತಿಯಿಂದ ದೇವರಾಜ ಅರಸು ವೃತ್ತದ (ಖೋಡೆ ಸರ್ಕಲ್) ಬಳಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ 192ನೇ ಸ್ಮರಣೋತ್ಸವ ಅಂಗವಾಗಿ ಸಂಗೊಳ್ಳಿ ರಾಯಣ್ಣ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ನಮ್ಮ ಮಕ್ಕಳಿಗೆ ಯಾರು ನಿಜವಾಗಿಯೂ ತಮ್ಮ ಪ್ರಾಣವನ್ನು ತ್ಯಾಗ ಮಾಡಿ ಸ್ವಾತಂತ್ರ್ಯಕ್ಕೆ ಹೋರಾಡಿದರು ಎಂದು ತಿಳಿಯಬೇಕು. ನಮ್ಮ ಮಕ್ಕಳಿಗೆ ಪ್ರೇರಣೆ ನೀಡುವ ಶಕ್ತಿಗಳನ್ನು ಗುರುತಿಸುವ ಕೆಲಸವಾಗಬೇಕು. ಬೆಳಗಾವಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣನ ಹೆಸರಿಡುವ ಬಗ್ಗೆ ಆ ಭಾಗದ ನಾಯಕರನ್ನು ವಿಶ್ವಾಸಕ್ಕೆ ಪಡೆದು ತೀರ್ಮಾನ ಮಾಡಲಾಗುವುದು. ಸಂಗೊಳ್ಳಿ ರಾಯಣ್ಣನ ಸ್ಫೂರ್ತಿ ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೂ ಭಾರತ ಸುರಕ್ಷಿತವಾಗಿ ಇರಲಿದೆ. ಸಂಗೊಳ್ಳಿ ರಾಯಣ್ಣ ಮಾಡಿದ ಕಾರ್ಯಗಳಲ್ಲಿ ಒಂದೆರಡನ್ನಾದರೂ ನಾವು ಮಾಡಿದರೆ ದೇಶಕ್ಕೆ ಒಳಿತಾಗಲಿದೆ ಎಂದರು.
ಇಂದಿಗೂ ನಮ್ಮ ನಡುವೆ ಜೀವಂತ
ಸಂಗೊಳ್ಳಿ ರಾಯಣ್ಣ ಇಂದಿಗೂ ನಮ್ಮ ನಡುವೆ ಜೀವಂತವಿದ್ದಾರೆ. ಅವರು ಸಾಹಸ, ಶೌರ್ಯ, ಧೈರ್ಯ, ದೇಶಭಕ್ತಿಗಳ ವಿಚಾರದಲ್ಲಿ ಪ್ರೇರಣಾ ಶಕ್ತಿಯಾಗಿದ್ದಾರೆ. ಸಂಗೊಳ್ಳಿ ರಾಯಣ್ಣ ಸ್ಮರಣೆಗಾಗಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿದ್ದು, ಬೆಂಗಳೂರಿನ ರೈಲು ನಿಲ್ದಾಣಕ್ಕೆ ಅವರ ಹೆಸರು, ಸಂಗೊಳ್ಳಿ ರಾಯಣ್ಣನ ಮೂರ್ತಿ ಸ್ಥಾಪನೆ ಮಾಡುವುದು ಬಹಳ ಯೋಗ್ಯ ಕೆಲಸವಾಗಿದೆ. ಈ ಸ್ಥಳ ಪಡೆಯಲೂ ಸಣ್ಣ ಹೋರಾಟವಾಯಿತು. ವಾಟಾಳ್ ನಾಗರಾಜ್, ರೇವಣ್ಣ ಎಲ್ಲರೂ ಸೇರಿ ಈ ಕೆಲಸವನ್ನು ಮಾಡಿದ್ದಾರೆ ಎಂದರು.
184 ಕೋಟಿ ರೂ.ಗಳ ವೆಚ್ಚದಲ್ಲಿ ಸಂಗೊಳ್ಳಿ ರಾಯಣ್ಣ ವಸತಿ ಶಾಲೆಯನ್ನು ನಿರ್ಮಿಸಲಾಗುತ್ತಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನಮ್ಮ ಮನವಿಯ ಮೇರೆಗೆ ರಕ್ಷಣಾ ಶಾಲೆಯನ್ನು ನೀಡಿದ್ದು, ಸಂಸ್ಥೆ ಈಗಾಗಲೇ ಶಾಲೆ ಪ್ರಾರಂಭವಾಗಿದೆ. ಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಆಗಲಿದೆ. ಸಂಗೊಳ್ಳಿ ರಾಯಣ್ಣನ ಹೆಸರಿನ ಶಾಲೆ ಸೇನಾನಿಗಳಿಗೆ ತರಬೇತಿ ನೀಡುವ ಶಾಲೆಯಾಗಿದೆ. ನಂದಗಡದಲ್ಲಿ ಸ್ಮಾರಕ, ರಾಕ್ ಗಾರ್ಡನ್, ವಸ್ತು ಸಂಗ್ರಹಾಲಯ ನಿರ್ಮಾಣವಾಗುತ್ತಿದೆ. ಬೆಳಗಾವಿಯ ಸುವರ್ಣಸೌಧದ ಮುಂಭಾಗದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣನ ಮೂರ್ತಿ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿದೆ. ಇವೆಲ್ಲಾ ಬಹಳ ಅಗತ್ಯವಿರುವ ಕೆಲಸಗಳು ಎಂದರು.
ಇದನ್ನೂ ಓದಿ | Siddaramaiah : ಬಿಜೆಪಿಯವರು ಮಾಡುವ ಯಾವ ಆರೋಪಕ್ಕೂ ಸಾಕ್ಷಿ ಕೊಡುವುದಿಲ್ಲ : ಸಿದ್ದರಾಮಯ್ಯ ವಾಗ್ದಾಳಿ
ಸಂಗೊಳ್ಳಿ ರಾಯಣ್ಣ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದರೂ, ಚಿಕ್ಕಂದಿನಿಂದಲೇ ಸ್ವಾಭಿಮಾನದ ಬಗ್ಗೆ ಅಪಾರ ನಂಬಿಕೆ ಇಟ್ಟವರು. ಭಯಮುಕ್ತವಾದ ಬದುಕು ಅವರದು. ಸತ್ಯ, ನ್ಯಾಯ ನಿಷ್ಠುರವಾಗಿದ್ದ ಅವರು, ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರೊಂದಿಗೆ ದಿಟ್ಟತನದಿಂದ ಹೋರಾಡಿದಾಗ ಅವರ ಹಿಂದಿನ ನೈತಿಕ ಶಕ್ತಿಯಾಗಿ ಬೆಂಬಲವಾಗಿ ನಿಂತದ್ದು ಸಂಗೊಳ್ಳಿ ರಾಯಣ್ಣ ಹಾಗೂ ತಂಡ. ಆದರೆ, ಸಂಗೊಳ್ಳಿ ರಾಯಣ್ಣನನ್ನು ಬ್ರಿಟಿಷರು ಮೋಸದಿಂದ ಸೆರೆ ಹಿಡಿದು, ಹುಲಿಯನ್ನು ಹಿಡಿದಿದ್ದೇವೆ. ಇನ್ನೊಬ್ಬ ಸಂಗೊಳ್ಳಿ ರಾಯಣ್ಣ ಹುಟ್ಟಬಾರದು ಎಂದು ನೇಣಿಗೇರಿಸಿದರು ಎಂದರು.
ಸಚಿವರಾದ ಎಂ.ಟಿ. ಬಿ. ನಾಗರಾಜ್, ಮಾಜಿ ಸಚಿವ ಎಚ್.ಎಂ. ರೇವಣ್ಣ, ಮಾಜಿ ಶಾಸಕ ವಾಟಾಳ್ ನಾಗರಾಜ್, ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಮೊದಲಾದವರು ಉಪಸ್ಥಿತರಿದ್ದರು.