ಹಾವೇರಿ: ಕೊಡಗಿನಲ್ಲಿ ಪಾದಯಾತ್ರೆಗೆ ಕಾಂಗ್ರೆಸ್ ಸಿದ್ಧವಾಗಿದೆ. ಈ ಹಿಂದೆ ಬಳ್ಳಾರಿ ಪಾದಯಾತ್ರೆ ವೇಳೆಯ ಪರಿಸ್ಥಿತಿಯೇ ಈಗಲೂ ಆಗುತ್ತದೆ ಎಂದು ಕಾಂಗ್ರೆಸ್ ತಿಳಿದಿದೆ. ಇದು 2023ರ ಚುನಾವಣೆ, 2013 ಅಲ್ಲ. ಐದು ವರ್ಷಗಳ ಸಿದ್ದರಾಮಯ್ಯ ಅವರ ಆಡಳಿತವನ್ನು ಜನ ತಿರಸ್ಕರಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬಿಜೆಪಿಯದ್ದು ಜನೋತ್ಸವವಲ್ಲ ಭ್ರಷ್ಟೋತ್ಸವ ಎಂಬ ಮಾಜಿ ಸಿದ್ದರಾಮಯ್ಯ ಹೇಳಿಕೆಗೆ ನಗರದ ಪ್ರವಾಸಿ ಮಂದಿರ ಬಳಿ ಭಾನುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ “ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿಯಾಗಿದೆ. ದಿಂಬು, ಹಾಸಿಗೆ, ನೆಲ, ನೀರನ್ನೂ ಬಿಡದೆ ಅವರು ಭ್ರಷ್ಟಾಚಾರ ಮಾಡಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಅವರಿಗೆ ನೈತಿಕ ಹಕ್ಕಿಲ್ಲ. ಈಗಾಗಲೇ ಜನ ಅವರನ್ನು ತಿರಸ್ಕರಿಸಿದ್ದಾರೆʼʼ ಎಂದರು.
ಇದನ್ನೂ ಓದಿ | ಸಿದ್ದರಾಮಯ್ಯ ನಡೆಯಿಂದ ಲಿಂಗಾಯತ ಕೋಟೆಯಲ್ಲಿ ಕಂಪನ: ಡ್ಯಾಮೇಜ್ ಕಂಟ್ರೋಲ್‌ನತ್ತ ಕಾಂಗ್ರೆಸ್
“ಬಿಜೆಪಿಯಿಂದ ಜನೋತ್ಸವ ಆಗುತ್ತದೆ ಎಂಬ ಕಾರಣಕ್ಕೆ ಕಾಂಗ್ರೆಸ್ ಭಯ ಪಟ್ಟಿದೆ. ನಾವೇನೂ ಸಿದ್ದರಾಮೋತ್ಸವಕ್ಕೆ ಹೆದರಿಲ್ಲ. ಜನೋತ್ಸವ ಯಾವ ರೀತಿ ಮಾಡುತ್ತೇವೆ ಎಂದು ನೋಡಿ. ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವ ವಿಚಾರಕ್ಕೆ ಸ್ಪಂದಿಸಿ ಈ ಬಗ್ಗೆ ಹಿಂದೆಯೂ ಹೇಳಿದ್ದೇನೆ. ಮೀಸಲಾತಿಯನ್ನು ಹಿಂದುಳಿದ ವರ್ಗಗಳ ಆಯೋಗದ ವರದಿ ಆಧಾರದ ಮೇಲೆ ನಿರ್ಧಾರ ಮಾಡಲಾಗುತ್ತದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುತ್ತೇನೆʼʼ ಎಂದರು.
ಸಾವರ್ಕರ್ ವಿವಾದ ಸರ್ಕಾರಕ್ಕೆ ಕಪ್ಪುಚುಕ್ಕೆ ಅಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು “ಸರ್ಕಾರಕ್ಕೂ ಇದಕ್ಕೂ ಏನು ಸಂಬಂಧ? ಸರ್ಕಾರಕ್ಕೆ ಈ ವಿಚಾರ ಹೇಗೆ ಕಪ್ಪು ಚುಕ್ಕೆ ಆಗುತ್ತದೆ? ಐತಿಹಾಸಿಕ ಪುರುಷರ ಬಗ್ಗೆ ಪರ – ವಿರೋಧ ಚರ್ಚೆ ದೇಶದಲ್ಲಿ ಎಲ್ಲಾ ಕಾಲದಲ್ಲೂ ಇದೆ. ಸಾವರ್ಕರ್ ಬಗ್ಗೆ ಇಂದಿರಾ ಗಾಂಧಿಯವರೇ ಪ್ರಶಂಸಿದ್ದಾರೆ. ಅವರು ದೇಶದ ಶ್ರೇಷ್ಠ ಪುತ್ರ ಎಂದು ಲಿಖಿತವಾಗಿಯೇ ಹೇಳಿದ್ದಾರೆʼʼ ಎಂದರು.
ಇದನ್ನೂ ಓದಿ | ಸಾವರ್ಕರ್ ವಿಚಾರದಲ್ಲಿ ಕಾನೂನುಬದ್ಧವಾಗಿರಿ: ಪ್ರತಿಪಕ್ಷಗಳಿಗೆ ಬುದ್ಧಿ ಹೇಳಿದ ಸಿಎಂ ಬೊಮ್ಮಾಯಿ