Site icon Vistara News

Energy Department: ಇಂಧನ ಇಲಾಖೆಯ ಆರ್ಥಿಕ ಸದೃಢತೆಗೆ ಅಗತ್ಯ ಸುಧಾರಣಾ ಕ್ರಮ: ಸಿಎಂ ಬಸವರಾಜ ಬೊಮ್ಮಾಯಿ

CM Basavaraj Bommai says Reforms to strengthen the finances of Energy department

#image_title

ಬೆಂಗಳೂರು: ವಿದ್ಯುತ್ ಉತ್ಪಾದನೆ, ಹಂಚಿಕೆ, ವಿತರಣೆಯಲ್ಲಿ ದಕ್ಷತೆ, ನಷ್ಟ ತಡೆಯಲು ಹಾಗೂ ಇಂಧನ ಇಲಾಖೆಯ (Energy Department) ಆರ್ಥಿಕ ಸದೃಢತೆಗೆ ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬೆವಿಕಂ (ಬೆಸ್ಕಾಂ) ವ್ಯಾಪ್ತಿಯ ಬೆಂಗಳೂರು ನಗರ ಮತ್ತು ಗ್ರಾಮಾಂತರ, ರಾಮನಗರ, ಚಿತ್ರದುರ್ಗ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಮತ್ತು ದಾವಣಗೆರೆ ಜಿಲ್ಲೆಗಳ ಕಚೇರಿ ಕಟ್ಟಡಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಇಂಧನ ಇಲಾಖೆ ಹಾಗೂ ಸಾರಿಗೆ ಇಲಾಖೆಗೆ ನಷ್ಟದಲ್ಲಿದ್ದು, ಇವೆರಡೂ ಸಂಸ್ಥೆಗಳನ್ನು ಆರ್ಥಿಕವಾಗಿ ಸದೃಢಗೊಳಿಸಲು ಎರಡು ಪ್ರತ್ಯೇಕ ಸಮಿತಿಗಳನ್ನು ರಚಿಸಲಾಗಿದ್ದು, ವರದಿಯಂತೆ ಸುಧಾರಣಾ ಕ್ರಮಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು.

ಇದನ್ನೂ ಓದಿ | Ramesh Jarkiholi: ರಮೇಶ್‌ ಜಾರಕಿಹೊಳಿ ಮೆಂಟಲ್‌ ಕೇಸ್‌; ಆತನ ಬಗ್ಗೆ ನನಗೆ ಕೇಳಲೇಬೇಡಿ: ಡಿ.ಕೆ. ಶಿವಕುಮಾರ್

ಗ್ರಾಹಕರಿಗೆ ಸಮರ್ಪಕ ವಿದ್ಯುತ್ ಸೇವೆ

ಸುಮಾರು 16 ಸಾವಿರ ಕೋಟಿ ರೂ.ಗಳ ವಿದ್ಯುತ್ ಸಬ್ಸಿಡಿಯನ್ನು ನೀಡಿದ್ದರೂ ಎಸ್ಕಾಂಗಳು ಸಾಲದಲ್ಲಿವೆ. ಕಳೆದ ಒಂದೂವರೆ ವರ್ಷದಲ್ಲಿ ಇಂಧನ ಕ್ಷೇತ್ರಕ್ಕೆ 9 ಸಾವಿರ ರೂ.ಗಳನ್ನು ನೀಡಲಾಗಿದೆ. ಎಸ್ಕಾಂ ಹಾಗೂ ಕರ್ನಾಟಕ ವಿದ್ಯುತ್ ನಿಗಮಕ್ಕೆ ವಿಶೇಷ ಅನುದಾನ ನೀಡಲಾಗಿದೆ. ಬೇಸಿಗೆಯಲ್ಲಿ ವಿದ್ಯುಶ್ಛಕ್ತಿಯ ನಿರ್ವಹಣೆ ಹಾಗೂ ಸಿದ್ಧತೆ, ವಿದ್ಯುತ್ ಉತ್ಪಾದನೆ ಹಾಗೂ ಸಂಗ್ರಹಣೆ ಮಾಡುವುದು ಹಾಗೂ ಹೆಚ್ಚುವರಿ ವಿದ್ಯುತ್ ಮಾರಾಟ ಮಾಡಿ 2500 ಕೋಟಿ ರೂಪಾಯಿ ಲಾಭಾಂಶ ಪಡೆಯಲಾಗಿದೆ. ರೈತ, ಉದ್ಯಮಿ, ಬೀದಿಬದಿ ವ್ಯಾಪಾರಿ ಸೇರಿ ಎಲ್ಲ ವರ್ಗದ ಗ್ರಾಹಕರಿಗೆ ಸಮರ್ಪಕ ಸೇವೆ ನೀಡಲಾಗುತ್ತಿದೆ. ಬೇಸಿಗೆ ಕಾಲದಲ್ಲಿ ಹೆಚ್ಚಿನ ಸಂಖ್ಯೆಯ ಟ್ರಾನ್ಸ್‌ಫಾರ್ಮರ್‌ಗಳನ್ನು ಸಿದ್ಧಪಡಿಸಿಕೊಳ್ಳಲಾಗುತ್ತಿದೆ ಎಂದರು.

ಬಡಜನರಿಗೆ 40 ಯೂನಿಟ್ ವರೆಗೆ ಉಚಿತ ವಿದ್ಯುತ್

ಕುಟೀರ ಜ್ಯೋತಿ, ಭಾಗ್ಯ ಜ್ಯೋತಿ ಯೋಜನೆಯಡಿ ಬಡಜನರಿಗೆ 40 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದೆ. ಗೃಹೋಪಯೋಗದಲ್ಲಿ ಸಾಧಾರಣವಾಗಿ ಗರಿಷ್ಠ 60-70 ಯೂನಿಟ್ ಖರ್ಚಾಗುತ್ತದೆ. ಆದರೆ, ಸುಮ್ಮನೆ 200 ಯೂನಿಟ್ ಉಚಿತ ಕೊಡುತ್ತೇವೆ ಎಂದು ಹೇಳುವುದರಲ್ಲಿ ಏನು ಅರ್ಥ ಇದೆ. ಆದ್ದರಿಂದ ಇಂಧನ ಕ್ಷೇತ್ರದಲ್ಲಿ ಪವರ್ ಪಾಲಿಟಿಕ್ಸ್ ಮಾಡಬಾರದು. ಇದು ಜನರಿಗೆ ಮೋಸ ಮಾಡುವ ತಂತ್ರ ಎಂದು ಕಾಂಗ್ರೆಸ್‌ ನಾಯಕರನ್ನು ಪರೋಕ್ಷವಾಗಿ ಟೀಕಿಸಿದರು.

ಕೆಪಿಟಿಸಿಎಲ್‌ಗೆ 3000 ಕೋಟಿ ರೂಪಾಯಿ

ಕೇಂದ್ರ ಸರ್ಕಾರ ರೈತರಿಗೆ ಸೋಲಾರ್‌ ಪಂಪ್‌ಸೆಟ್‌ಗಳಿಗೆ ಸಹಾಯ ನೀಡುತ್ತಿದೆ. ಈ ವರ್ಷ ಬಜೆಟ್‌ನಲ್ಲಿ 3000 ಕೋಟಿ ರೂಪಾಯಿ ಸುಗಮ ವಿದ್ಯುತ್ ರವಾನೆಗಾಗಿ ಕೆಪಿಟಿಸಿಎಲ್‌ಗೆ ನೀಡುತ್ತಿದ್ದು, ಕೆಪಿಟಿಸಿಎಲ್ ಉದ್ಯೋಗಿಗಳ ವೇತನ ಪರಿಷ್ಕರಣೆಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ‌‌.‌ ಸೆಂಟರ್ ಆಫ್ ಎಕ್ಸಲೆನ್ಸ್‌ ಕೆಂದ್ರಗಳ ಮೂಲಕ ಉತ್ತಮ ಕೆಲಸಗಳು ಆಗಲಿ, ತಂತ್ರಜ್ಞಾನದ ಜತೆಗೆ ಮಾನವ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ ಎಂದರು.

ಇದನ್ನೂ ಓದಿ | ಮಂಗಳೂರು ಸ್ಫೋಟಕ್ಕೆ ಸಾದಾ ಕುಕ್ಕರ್‌ ಎಂದು ಹೇಳಿದ್ದ ಡಿ.ಕೆ. ಶಿವಕುಮಾರ್‌ ಈಗ ಏನು ಹೇಳ್ತಾರೆ: ಸಿಎಂ ಬೊಮ್ಮಾಯಿ ಪ್ರಶ್ನೆ

ಸ್ಕಾಡಾ-2ಗೆ ಅನುಮತಿ

ಇಂಧನ ಇಲಾಖೆ ಸ್ಕಾಡಾವನ್ನು ಅತ್ಯಂತ‌ ಯಶಸ್ವಿಯಾಗಿ ನಿರ್ವಹಣೆ ಮಾಡಿದೆ. ಸ್ಕಾಡಾ ಇದ್ದಿದ್ದರಿಂದ ಸುಮಾರು 200 ಕಿ.ಮೀ. ಜಾಲದ ಸ್ಕಾಡಾ-2ಗೆ ಅನುಮತಿ ನೀಡಲಾಗಿದೆ. ಇದನ್ನು ಮೇಲ್ದರ್ಜೇಗೇರಿಸುವುದರಿಂದ ದಕ್ಷತೆ ಹೆಚ್ಚಾಗಲಿದೆ. ಇದರ ಜತೆಗೆ ನವೀಕರಿಸಬಹುದಾದ ಇಂಧನವನ್ನು ಹೆಚ್ಚು ಬಳಸಿ ಪಂಪ್ ಸ್ಟೋರೇಜ್ ಸಾಮರ್ಥ್ಯ ಹೆಚ್ಚಿಸಲು ಕ್ರಮವಹಿಸಲಾಗಿದೆ. ಶರಾವತಿ ಯೋಜನೆಯನ್ನು ಪಂಪ್ ಸ್ಟೋರೇಜ್ ಅಡಿ ಕೈಗೊಳ್ಳಲಾಗಿದ್ದು, ನವೀಕರಿಸಬಹುದಾದ ಇಂಧನ ಬಳಕೆಗೆ ಸೋಲಾರ್ ಬ್ಯಾಟರಿಗಳ ತಯಾರಿಕೆಗೆ ಆದ್ಯತೆ ನೀಡುತ್ತಿದ್ದೇವೆ ಎಂದರು.

ಇಂಧನ ಸಚಿವ ಸುನೀಲ್ ಕುಮಾರ್, ಶಾಸಕ ಹಾಗೂ ವಿಧಾನಸಭೆಯಲ್ಲಿ ಸರ್ಕಾರದ ಮುಖ್ಯ ಸಚೇತಕ ಸತೀಶ್ ರೆಡ್ಡಿ, ಅಪರ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಂತೇಶ್ ಬೀಳಗಿ ಉಪಸ್ಥಿತರಿದ್ದರು.

Exit mobile version