ಮಂಗಳೂರು: ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಯಾವುದೇ ಬದಲಾವಣೆ ಇಲ್ಲ. ಡಿ.೨೬ರಿಂದ ಸದನದ ಕಾರ್ಯಕಲಾಪಗಳು ಯಥಾವತ್ತಾಗಿ ನಡೆಯುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮೂಡುಬಿದಿರೆಯಲ್ಲಿ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಕಾರ್ಯಕ್ರಮ ನಿಗದಿಯಾಗಿತ್ತು. ಮೋಹನ್ ಆಳ್ವ ಮತ್ತು ಪಿಜಿಆರ್ ಸಿಂಧ್ಯಾ ಅವರ ನೇತೃತ್ವದಲ್ಲಿ ಬಹಳ ಉತ್ತಮವಾದ ಕಾರ್ಯಕ್ರಮ ಆಗುತ್ತಿದೆ. ಪೂರ್ವ ನಿಯೋಜಿತ ಕಾರ್ಯಕ್ರಮಕ್ಕಾಗಿ ಅಧಿವೇಶನದ ಸಮಯದಲ್ಲಿ ಬಿಡುವು ಮಾಡಿಕೊಂಡು ಬಂದಿದ್ದೇನೆ. ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಎನ್.ಸಿ.ಸಿ ತರಹ ಮಕ್ಕಳಲ್ಲಿ ಶಿಸ್ತು ಮತ್ತು ದೇಶಪ್ರೇಮವನ್ನು ತರುವ ಸಂಸ್ಥೆಯಾಗಿದೆ ಎಂದರು.
ಕರ್ನಾಟಕದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರ ಅದಕ್ಕೆ ಸದಾಕಾಲ ಸಹಕಾರ ನೀಡುತ್ತಾ ಬಂದಿದೆ. ಈ ಬಾರಿ ದೇಶ ವಿದೇಶದಿಂದ ಎಲ್ಲರೂ ಬಂದಿದ್ದಾರೆ. ಅಲ್ಲಿಗೆ ಹೋಗಿ ಬೆಂಬಲ ಮತ್ತು ಉತ್ತೇಜನ ಕೊಡುವುದು ನನ್ನ ಕರ್ತವ್ಯ. ಅದಕ್ಕಾಗಿ ಬಂದಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ | NPS News | ಎನ್‌ಪಿಎಸ್ ರದ್ದುಪಡಿಸುವ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ: ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಭೇಟಿ
ಸುರತ್ಕಲ್ ಕೊಲೆ ಪ್ರಕರಣ; ಪೊಲೀಸರಿಂದ ಕ್ರಮ
ಆ ಘಟನೆ ನಡೆಯಬಾರದಿತ್ತು. ಪೊಲೀಸರ ತನಿಖೆ ಪ್ರಗತಿಯಲ್ಲಿದ್ದು ಸಾಕ್ಷ್ಯ ಸಂಗ್ರಹಿಸಲಾಗುತ್ತಿದೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗುತ್ತದೆ. ವಿಚಾರಣೆ ವೇಳೆ ಯಾವ ಕಾರಣಕ್ಕಾಗಿ, ಹಿನ್ನೆಲೆ ಏನು? ಸತ್ಯಾಸತ್ಯತೆ ಹೊರ ಬರುತ್ತದೆ ಎಂದರು.
ಶಾಂತಿ- ಸುವ್ಯವಸ್ಥೆ ಕಾಪಾಡಲು ಸಹಕರಿಸಿ
ದಕ್ಷಿಣ ಕನ್ನಡ, ಉಡುಪಿಯ ಜನರು ಊಹಾಪೋಹಗಳಿಗೆ ಅವಕಾಶ ಕೊಡದೇ, ಶಾಂತಿ- ಸುವ್ಯವಸ್ಥೆಗೆ ಧಕ್ಕೆಯಾಗುವಂತೆ ಯಾರು ಕೂಡ ನಡೆದುಕೊಳ್ಳಬಾರದು. ಶಾಂತಿಯುತವಾಗಿ ಪರಸ್ಪರ ವಿಶ್ವಾಸದಿಂದ ಹೋಗುವುದು ಅವಶ್ಯಕವಾಗಿದೆ. ಪೊಲೀಸರು ಯಾವುದೇ ಒತ್ತಾಯ, ಒತ್ತಡವಿಲ್ಲದೇ ಮುಕ್ತವಾಗಿ ತನಿಖೆ ಮಾಡುತ್ತಾರೆ. ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರೇ ಯಾರೇ ಇರಲಿ, ಅವರ ಮೇಲೆ ನೂರಕ್ಕೆ ನೂರು ಕಾನೂನಾತ್ಮಕ ಕ್ರಮ ನಾವು ತೆಗೆದುಕೊಳ್ಳುತ್ತೇವೆ. ಸಮಾಜದಲ್ಲಿ ಹಿಂಸೆಗೆ ದಾರಿ ಮಾಡಿಕೊಡುವರನ್ನು ಹತ್ತಿಕ್ಕುವ ಅವಶ್ಯಕತೆ ಇದೆ. ಅದು ನಮ್ಮ ಕರ್ತವ್ಯ, ಸಮಾಜದ ಕರ್ತವ್ಯ. ಕ್ರಿಯೆಗೆ ಪ್ರತಿಕ್ರಿಯೆ ಅಂತ ಅಲ್ಲ. ಪೊಲೀಸರು ನಿಷ್ಪಕ್ಷಪಾತವಾಗಿ, ಮುಕ್ತವಾಗಿ ತನಿಖೆ ಮಾಡುತ್ತಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇದನ್ನೂ ಓದಿ | ಅಜಾತಶತ್ರು ಜನ ನಾಯಕ ಅಟಲ್ ಬಿಹಾರಿ ವಾಜಪೇಯಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ