Site icon Vistara News

Shivaji Jayanti: ಭಾರತ ಚರಿತ್ರೆ ಬದಲಿಸಿದ ಯುಗ ಪುರುಷನೇ ಶಿವಾಜಿ: ಸಿಎಂ ಬೊಮ್ಮಾಯಿ

Shivaji Jayanti

#image_title

ಹಾವೇರಿ (ಶಿಗ್ಗಾಂವಿ): ಸಾವಿನ ನಂತರವೂ ಪ್ರಬಲ ಶಕ್ತಿ ಜನಪ್ರಿಯತೆ ಹೊಂದಿರುವವರು ವಿರಳ. ಅಂಥವರನ್ನು ನಾವು ಯುಗಪುರುಷರು ಎನ್ನುತ್ತೇವೆ. ಮಹಾತ್ಮ ಗಾಂಧಿ, ಸ್ವಾಮಿ ವಿವೇಕಾನಂದರು, ಸುಭಾಷ್ ಚಂದ್ರ ಬೋಸ್ ಯುಗಪುರುಷರು. ಅದೇ ರೀತಿ ಶಿವಾಜಿ (Shivaji Jayanti) ಭಾರತ ಚರಿತ್ರೆಯನ್ನು ಬದಲಾಯಿಸಿದ ಯುಗ ಪುರುಷ, ಸಾಧಕ ಹಾಗೂ ಪ್ರೇರಣಾ ಶಕ್ತಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಜಿಲ್ಲೆಯ ಶಿಗ್ಗಾಂವಿಯಲ್ಲಿ ಹಿಂದು ಹೃದಯ ಸಾಮ್ರಾಟ್ ಛತ್ರಪತಿ ಶಿವಾಜಿ ಮಹಾರಾಜರ 396ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ದೇಶವನ್ನು ಗುಲಾಮಗಿರಿಗೆ ಒಡ್ಡುವ ಸಂದರ್ಭದಲ್ಲಿ ಛತ್ರಪತಿ ಶಿವಾಜಿ ಪ್ರಬಲ ತಡೆ ಒಡ್ಡಿ ನಮ್ಮ ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಮರುಸ್ಥಾಪಿಸಿದರು. ಮೊಘಲರ ಆಡಳಿತದ ದಿನಗಳ ಸಂದರ್ಭದಲ್ಲಿ ದಕ್ಷಿಣ ಭಾರತವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವ ತೈಮೂರ್ ಷಡ್ಯಂತ್ರಕ್ಕೆ ಅನೇಕ ರಾಜ್ಯಗಳು ವಶವಾಗಿದ್ದವು. ಗುರು ಕೊಂಡೋಜಿ ಹಾಗೂ ತಾಯಿ ಜೀಜಾಬಾಯಿ ಅವರ ಪಾಠದಿಂದ ಧೈರ್ಯ, ಸೌರ್ಯ, ಆತ್ಮಬಲವನ್ನು ಜೋಡಿಸಿ ಶಿವಾಜಿ ಮಹಾರಾಜರು ಗೊರಿಲ್ಲಾ ಯುದ್ಧ ಕಲೆಯಿಂದ ವಿವಿಧ ಪ್ರಾಂತ್ಯಗಳನ್ನು ವಶಪಡಿಸಿಕೊಂಡರು. ಆ ಮೂಲಕ ಹಿಂದು ಸಮಾಜದ ಮೇಲೆ ನಡೆದ ದಾಳಿಯನ್ನು ತಡೆಗಟ್ಟುವಲ್ಲಿ ಯಶಸ್ವಿಯಾದರು ಎಂದು ಹೇಳಿದರು.

ಇದನ್ನೂ ಓದಿ | Karnataka Election 2023: ಮುಸ್ಲಿಂ ಖಬರಸ್ತಾನಗಳಿಗೆ 10 ಕೋಟಿ ರೂ. ಕೊಡೋ ಅವಶ್ಯಕತೆ ಏನಿತ್ತು?; ಹಿಂದು ರುದ್ರಭೂಮಿ ಏಕೆ ಕಂಡಿಲ್ಲ: ಮುತಾಲಿಕ್‌

ಶಿವಾಜಿ ಚರಿತ್ರೆ ಮಾತ್ರ ಬದಲಾಯಿಸಲಿಲ್ಲ, ಚರಿತ್ರೆಯನ್ನು ರಚಿಸಿದರು. ಚಾರಿತ್ರ್ಯವಂತ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ ಅವರು ಪ್ರಜೆಗಳನ್ನು ಸುಭಿಕ್ಷವಾಗಿಟ್ಟಿದ್ದರು. ಅಪ್ರತಿಮ ದೇಶಭಕ್ತ, ಜೀವನ ಚರಿತ್ರೆಯನ್ನು ಸ್ಮರಿಸಬೇಕು. ಶಿವಾಜಿಯ ಕುಲಕ್ಕೆ ಸೇರಿದ ಕ್ಷತ್ರಿಯರು ಅವರ ಜಯಂತಿ ಆಚರಿಸಿರುವುದು ಶ್ಲಾಘನೀಯ ಎಂದರು.

ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು

ಸಮುದಾಯ ಭವನದಲ್ಲಿ ಸಮಾಜದ ಏಳಿಗೆಗಾಗಿ ಕಾರ್ಯಕ್ರಮಗಳನ್ನು ರೂಪಿಸಿ, ಇತರೆ ಸಮಾಜಗಳನ್ನು ಒಳಗೊಂಡಂತೆ ಕೆಲಸ ಮಾಡಬೇಕು. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವ ದೃಷ್ಟಿಯಿಂದ ಕೆಲಸ ಮಾಡಬೇಕು. ಶಿಗ್ಗಾಂವಿ ಸವಣೂರಿನ ಅಭಿವೃದ್ಧಿಗಾಗಿ ನೂರಾರು ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಬರುವ ದಿನಗಳಲ್ಲಿ ಇನ್ನಷ್ಟು ಅನುದಾನ ಒದಗಿಸಲಾಗುವುದು. ಎಲ್ಲ ಸಮಾಜಗಳ ಬೇಡಿಕೆಗಳನ್ನು ಈಡೇರಿಸಲು ಎಲ್ಲ ಕ್ರಮಗಳನ್ನು ಜರುಗಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ದೂರದೃಷ್ಟಿಯ ಆಯವ್ಯಯ

ಈ ಬಾರಿಯ ಬಜೆಟ್‌ನಲ್ಲಿ ರೈತರಿಗಾಗಿ ಕಾರ್ಯಕ್ರಮಗಳನ್ನು ನೀಡಲಾಗಿದೆ. ಸಾಲದ ವಿಸ್ತರಣೆ, ರೈತರಿಗೆ ಪ್ರಥಮ ಬಾರಿ ಜೀವನಜ್ಯೋತಿ ಜೀವ ವಿಮೆ, 10 ಕೋಟಿ ರೂ.ಗಳ ಕಂತನ್ನು ಸರ್ಕಾರವೇ ನೀಡಲಿದೆ. ಯಶಸ್ವಿನಿ ಯೋಜನೆ ಮರು ಪ್ರಾರಂಭ, ಬೆಲೆ ಕುಸಿತವಾದಾಗ ರೈತರಿಗೆ ಅನುಕೂಲವಾಗಲು ಆವರ್ತ ನಿಧಿ, ಸಿರಿಧಾನ್ಯಗಳ ವರ್ಷಕ್ಕಾಗಿ ಹೆಕ್ಟೇರ್‌ಗೆ 10 ಸಾವಿರ ಪ್ರೋತ್ಸಾಹ ಧನ ನೀಡಲಾಗಿದೆ. ಪಿಯುಸಿ, ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ, ಶಾಲಾ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ, ಹೆಣ್ಣುಮಕ್ಕಳಿಗೆ ಉಚಿತ ಬಸ್ ಪಾಸ್, ಯುವಕರಿಗೆ ತರಬೇತಿ ನೀಡುವ ಕಾರ್ಯಕ್ರಮಗಳು ದೂರದೃಷ್ಟಿಯ ಕಾರ್ಯಕ್ರಮಗಳಾಗಿವೆ. ತಳಹಂತದ, ಅವಕಾಶ ವಂಚಿತರ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ, ಕಾರ್ಮಿಕರಿಗೆ ಸರ್ಕಾರದ ಕಾರ್ಯಕ್ರಮಗಳ ಮೂಲಕ ನೆರವು ನೀಡಲಾಗುತ್ತಿದೆ. ಜನಪರವಾದ ಬಜೆಟ್ ಹಾಗೂ ದುಡಿಯುವ ವರ್ಗದ ಕೈಬಲಪಡಿಸುವ ಬಜೆಟ್. ರಾಜ್ಯ ಹಾಗೂ ಈ ಕ್ಷೇತ್ರ ಸಮಗ್ರ ಅಭಿವೃದ್ಧಿಗೆ ಕೆಲಸ ಮಾಡುವುದಾಗಿ ಹೇಳಿದರು.

ಇದನ್ನೂ ಓದಿ | Shivaji Maharaj Jayanti: ಛತ್ರಪತಿ ಶಿವಾಜಿ ಮಹಾರಾಜರು ನಮಗೆ ಸ್ಫೂರ್ತಿ ಎಂದ ಪ್ರಧಾನಿ ನರೇಂದ್ರ ಮೋದಿ

ಶಿಗ್ಗಾಂವಿ ವಿರಕ್ತ ಮಠದ ಸಂಘ ಬಸವ ಮಹಾಸ್ವಾಮಿಗಳು, ಪುರಸಭೆ ಸದಸ್ಯ ಸುಭಾಷ್ ಚೌಹಾಣ್, ಮರಾಠಾ ಅಭಿವೃದ್ಧಿ ಮಂಡಳಿ ಸದಸ್ಯ ಪ್ರಭು, ಶ್ರೀಕಾಂತ್ ದುಡ್ಡೀಗೌಡ, ಮಲ್ಲಿಕಾರ್ಜುನ ಬಾಳೀಕಾಯಿ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.

Exit mobile version