ಬೆಂಗಳೂರು: ಶಿವಾಜಿನಗರ ಕ್ಷೇತ್ರದಲ್ಲಿ ಬಿಜೆಪಿ ಜಯಗಳಿಸಿದರೆ ರಾಜ್ಯದಲ್ಲಿ ಬಿಜೆಪಿಯು 130ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎನ್ನುವುದು ಕರ್ನಾಟಕ ರಾಜಕೀಯ (Karnataka Election) ದಿಕ್ಸೂಚಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಬೂತ್ ವಿಜಯ ಅಭಿಯಾನಕ್ಕೆ ಚಾಲನೆ ನೀಡಿ ಬೊಮ್ಮಾಯಿ ಮಾತನಾಡಿದರು.
ಬೂತ್ ಮಟ್ಟದಲ್ಲಿ ವಿಜಯ ಸಾಧಿಸಬೇಕು ಎಂಬ ಕಾರಣಕ್ಕೆ ಇಲ್ಲಿಂದ ಚಾಲನೆ ನೀಡಲಾಗಿದೆ. ನೀವು ಕಾರ್ಯಕ್ರಮಕ್ಕೆ ಎಲ್ಲಿ ಭಾಗವಹಿಸುತ್ತೀರಿ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಕೇಳಿದರು. ಬೆಂಗಳೂರಿನಲ್ಲೇ ಇರುತ್ತೇನೆ, ಪಕ್ಷಕ್ಕೆ ಅತ್ಯಂತ ಕಷ್ಟವಾಗಿರುವ ಕ್ಷೇತ್ರವನ್ನು ಕೊಡಿ ಎಂದು ಕೇಳಿದೆ. ನಮ್ಮ ಶಾಸಕರು ಇದ್ದಲ್ಲಿ ಬೇಡ ಎಂದೆ, ಶಿವಾಜಿನಗರ ಕ್ಷೇತ್ರ ಕೊಡಿ ಎಂದು ಕೇಳಿದೆ.
ಶಿವಾಜಿನಗರ ಒಂದು ಕಾಲದಲ್ಲಿ ಬಿಜೆಪಿ ಗೆದ್ದ ಸೀಟು. ಆಗ ಬಿಜೆಪಿ ಇಷ್ಟು ದೊಡ್ಡದಾಗಿ ಬೆಳೆದಿರಲಿಲ್ಲ. ಆದರೂ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ನಿರ್ಮಲ್ ಕುಮಾರ್ ಸುರಾನ ಗೆದ್ದಿದ್ದರು. ಇದರ ಅರ್ಥ ಏನೆಂದರೆ ನಾವು ಇಲ್ಲಿ ವಿಜಯ ಸಾಧಿಸುವುದು ನೂರಕ್ಕೆ ನೂರು ಗ್ಯಾರಂಟಿ. ಆದರೂ ನಾವು ಸಂಘಟಿತವಾಗಿ ಕೆಲಸ ಮಾಡಬೇಕು.
ನಾನು ಶಿವಾಜಿನಗರಕ್ಕೆ ಕೇವಲ ಈ ಕಾರ್ಯಕ್ರಮಕ್ಕೆ ಬಂದಿಲ್ಲ. ಶಿವಾಜಿನಗರ ಕ್ಷೇತ್ರದ ವಿಜಯಕ್ಕಾಗಿ ಬಂದಿದ್ದೇನೆ. ಹೆಚ್ಚಿನ ಸಮಯ ಇದಕ್ಕಾಗಿ ಕೊಡುತ್ತೇನೆ. ತಾವು ಯಾವಾಗ್ಯಾವಾಗ ಕರೆದರೂ ಬರುತ್ತೇನೆ. ಕ್ಷೇತ್ರದ ಅಭಿವೃದ್ಧಿಗೂ ಹೆಚ್ಚಿನ ಗಮನ ಕೊಡುತ್ತೇನೆ.
ನಾವು ಗೆಲ್ಲಬೇಕು ಎಂದರೆ ಬೂತ್ ಅನ್ನು ಸಶಕ್ತಗೊಳಿಸಬೇಕು. ಶಿವಾಜಿನಗರ ಎನ್ನುವಂತಹ ಕ್ಷೇತ್ರದಲ್ಲಿ ಬಿಜೆಪಿ ಗೆದ್ದರೆ ಕರ್ನಾಟಕದಲ್ಲಿ ಬಿಜೆಪಿ 130 ಸ್ಥಾನ ಗೆಲ್ಲುತ್ತದೆ ಎನ್ನುವುದಕ್ಕೆ ರಾಜಕೀಯ ದಿಕ್ಸೂಚಿ ಎಂದರು.
ಕಾರ್ಯಕ್ರಮದ ನಂತರ ಬೂತ್‌ನಲ್ಲಿ ಅನೇಕ ಮನೆಗಳಿಗೆ ತೆರಳಿ ಬಿಜೆಪಿ ಧ್ವಜವನ್ನು ಸ್ಥಾಪಿಸಿದರು. ಸಂಸದ ಪಿ.ಸಿ. ಮೋಹನ್ ಸೇರಿ ಅನೇಕರು ಉಪಸ್ಥಿತರಿದ್ದರು.
ಇದನ್ನೂ ಓದಿ | ಹಳೆ ಮೈಸೂರಿನಲ್ಲಿ ಶೇ.50 ಸೀಟು ಗೆಲ್ಲುತ್ತದೆ ಬಿಜೆಪಿ: ಬೂತ್ ವಿಜಯ ಅಭಿಯಾನಕ್ಕೆ ಅಮಿತ್ ಶಾ ಚಾಲನೆ ಎಂದ ಡಿ.ವಿ. ಸದಾನಂದಗೌಡ