Site icon Vistara News

Areca Subsidy: ಅಡಿಕೆಗೆ ಸಹಾಯ ಧನ ವಿಸ್ತರಣೆಗೆ ಕ್ರಮ: ಸಿಎಂ ಬೊಮ್ಮಾಯಿ

CM Basavaraj Bommai says Steps taken to extend subsidy for arecanut

ಚಿತ್ರದುರ್ಗ: ಹನಿ ನೀರಾವರಿ ವ್ಯವಸ್ಥೆ ಅಳವಡಿಕೆಗಾಗಿ ಎಸ್.ಸಿ, ಎಸ್.ಟಿ ಸಮುದಾಯಕ್ಕೆ ಶೇ. 90 ರಷ್ಟು ಸಹಾಯಧನ ನೀಡಲಾಗುತ್ತಿದೆ. ಸಾಮಾನ್ಯ ವರ್ಗದವರಿಗೆ ಶೇ.50 ರಿಂದ 75 ರಷ್ಟು ಹೆಚ್ಚಿಸಲಾಗಿದೆ. ತೋಟಗಾರಿಕೆಯಲ್ಲಿ ಅಡಿಕೆ ಬೆಳೆಯೂ ಸೇರಿದೆ. ರೈತರು ಅಡಿಕೆ ಬೆಳೆಗೂ ಹನಿ ನೀರಾವರಿ ಸಹಾಯಧನ ವಿಸ್ತರಣೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಅಡಿಕೆ ಬೆಳೆಗೆ ಸಹಾಯ ಧನ (Areca Subsidy) ವಿಸ್ತರಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಜಿಲ್ಲೆಯ ಹೊಳಲ್ಕೆರೆಯಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಅವರು ಮಾತನಾಡಿದ್ದಾರೆ. ಇದೇ ವೇಳೆ ನೀರಗಂಟಿಗಳು ಹಾಗೂ ಸ್ವಚ್ಛತಾ ಸಿಬ್ಬಂದಿ ವೇತನಕ್ಕೆ ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿರುವ ಬಗ್ಗೆ ಸ್ಪಂದಿಸಿ, ಚುನಾವಣೆ ಸಂದರ್ಭದಲ್ಲಿ ಬಹಳ ಜನ ಪ್ರತಿಭಟನೆ ಮಾಡುತ್ತಾರೆ. ನೀರಗಂಟಿಗಳ ಸಮಸ್ಯೆ ತಿಳಿದಿದ್ದು, ಅವರನ್ನು ಕರೆದು ಮಾತನಾಡಿ ಸಮಸ್ಯೆ ಬಗೆಹರಿಸಲಾಗುವುದು ಎಂದರು.

ಇದನ್ನೂ ಓದಿ | Rahul Gandhi: ಸರ್ವಾಧಿಕಾರಿ ಹೆದರಿದಾಗ ಪೊಲೀಸರನ್ನು ಕಳುಹಿಸುತ್ತಾನೆ: ಮೋದಿ ವಿರುದ್ಧ ಸುರ್ಜೆವಾಲ ಕಿಡಿ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಚಿತ್ರದುರ್ಗ ಜಿಲ್ಲೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಗಮಿಸುವ ಬಗ್ಗೆ ಖಾತರಿಪಡಿಸಿಲ್ಲ. ಬಹಳಷ್ಟು ಪ್ರಸ್ತಾವನೆಗಳು ಹೋಗಿದ್ದು, ದಿನಾಂಕ ನೋಡಿ ಇನ್ನೆರಡು ದಿನಗಳಲ್ಲಿ ಖಾತರಿ ಪಡಿಸಬಹುದು ಎಂದು ಸಿಎಂ ಮಾಹಿತಿ ನೀಡಿದರು.

ಕಾಲಮಿತಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಪೂರ್ಣ: ಸಿಎಂ ಬೊಮ್ಮಾಯಿ

ಚಿತ್ರದುರ್ಗ: ಮಧ್ಯ ಕರ್ನಾಟಕದ ಬರದ ನಾಡನ್ನು ಹಸಿರಾಗಿಸಲು ಭದ್ರಾ ಮೇಲ್ದಂಡೆ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದು ನಾವೇ, ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮಾಡುತ್ತಿರುವುದು ನಾವೇ. ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿ.ಎಸ್. ಯಡಿಯೂರಪ್ಪ ಹಾಗೂ ನಾನೇ ಆಗಮಿಸಿ ಉದ್ಘಾಟನೆಯನ್ನೂ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ಹೊಳಲ್ಕೆರೆ ಪಟ್ಟಣದಲ್ಲಿ ಭಾನುವಾರ ಹೊಳೆಲ್ಕೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಫಲಾನುಭವಿಗಳ ಸೌಲಭ್ಯ ಮತ್ತು ಸಲಕರಣೆಗಳ ವಿತರಣೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಇದನ್ನೂ ಓದಿ | Karnataka Election: ತುಮಕೂರು ಜಿಲ್ಲೆ 11 ಕ್ಷೇತ್ರದಲ್ಲೂ ಜೆಡಿಎಸ್‌ ಗೆಲುವು ನಿಶ್ಚಿತ; ನಿಖಿಲ್‌ ಕುಮಾರಸ್ವಾಮಿ ವಿಶ್ವಾಸ

ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ನಾನು ಜಲಸಂಪನ್ಮೂಲ ಸಚಿವನಾಗಿದ್ದೆ. ಆಗ ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಭದ್ರಾ ಮೇಲ್ದಂಡೆ ಯೋಜನೆ ರೂಪಿಸಿ, ಕಾಮಗಾರಿ ಆರಂಭಿಸಲಾಯಿತು. ಕೇಂದ್ರ ಸರ್ಕಾರ ಈ ಯೋಜನೆಗೆ ರೂ.5300 ಕೋಟಿಗಳ ಅನುದಾನವನ್ನು ಬಜೆಟ್‍ನಲ್ಲಿ ಮೀಸಲಿರಿಸಿದೆ. ಮಧ್ಯ ಕರ್ನಾಟಕದ ಜನರ ಭೂಮಿಗೆ ನೀರು ಕೊಟ್ಟು, ಬರದ ಭೂಮಿಯನ್ನು ಹಸಿರಾಗಿಸುವ ಕಾರ್ಯವನ್ನು ನಮ್ಮ ಸರ್ಕಾರ ಮಾಡುತ್ತಿದ್ದು, ಯೋಜನೆಯನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಹೊಳಲ್ಕರೆ ಪಟ್ಟಣದಲ್ಲಿ ಅಭಿವೃದ್ಧಿಯ ಹೊಳೆ ಹರಿದಿದೆ. ಈ ಕ್ಷೇತ್ರದಲ್ಲಿ ಕಳೆದ ನಾಲ್ಕೂ ಮುಕ್ಕಾಲು ವರ್ಷದಲ್ಲಿ 4116 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆ ಮಾಡಲಾಗಿದೆ. ಎಂ. ಚಂದ್ರಪ್ಪ ಜನೋಪಯೋಗಿ ಶಾಸಕ, ದಣಿವರಿಯದೆ ಕೆಲಸ ಮಾಡಿದ್ದಾರೆ. ನಾಲ್ಕು ವರ್ಷದಲ್ಲಿ ಹೊಳಲ್ಕೆರೆ ಕ್ಷೇತ್ರದ ಚಿತ್ರಣವೇ ಬದಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Exit mobile version