ಚಿತ್ರದುರ್ಗ: ಅತ್ಯಂತ ಕೆಳಸ್ತರದ ದುಡಿಯುವ ವರ್ಗಕ್ಕೆ ಸರ್ಕಾರ ನೀಡಿರುವ ಕಾರ್ಯಕ್ರಮಗಳು ಸರಿಯಾಗಿ ಮುಟ್ಟಿವೆ, ಒಂದು ವೇಳೆ ಕಾರ್ಯಕ್ರಮಗಳು ತಲುಪದಿದ್ದರೆ ಶೀಘ್ರವಾಗಿ ಅನುಷ್ಠಾನ ಮಾಡಲು ಆದೇಶ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದರು.
ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮ್ಮೇಳನ ಸಮಾರಂಭದಲ್ಲಿ ಮಾತನಾಡಿದ ಅವರು, ಕೆಳ ಸ್ತರದಲ್ಲಿ ಶಕ್ತಿ ಇಲ್ಲದವರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಫಲಾನುಭವಿಗಳ ಸಭೆ ಹಾಗೂ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಲ್ಲಾ ಜಿಲ್ಲೆಗಳಲ್ಲಿ ಉಸ್ತುವಾರಿ ಸಚಿವರು ಈ ಕಾರ್ಯಕ್ರಮ ನಡೆಸಲಿದ್ದಾರೆ ಎಂದು ಹೇಳಿದರು.
ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ
ಬಗರ್ ಹುಕುಂ ಸಾಗುವಳಿ ಮಾಡುವವರಿಗೆ ಹಕ್ಕುಪತ್ರ ನೀಡುವ ಸಂಬಂಧ ಸಮಿತಿಯಲ್ಲಿ ಕೆಲಸಗಳಾಗುತ್ತಿದ್ದು, ಫಾರಂ ನಂ 57 ಸಲುವಾಗಿ ಒಂದು ವರ್ಷ ವಿಸ್ತರಣೆಯೂ ಆಗಿದೆ. ಅದರಡಿ ವಿಲೇವಾರಿಗೆ ಆದೇಶ ನೀಡಿದ್ದು, ವಿಳಂಬವಾಗಿರುವಲ್ಲಿ ನೇರವಾಗಿ ಎ.ಸಿ ಅವರು ಸಭೆ ಮಾಡಿಸಿ ವಿತರಣೆ ಮಾಡಲು ಆದೇಶ ನೀಡಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯಡಿ ಕೇಂದ್ರ ಸರ್ಕಾರ 5300 ಕೋಟಿ ಒಡಗಿಸಿದ್ದು, ಶೀಘ್ರದಲ್ಲೇ ರಾಷ್ಟ್ರೀಯ ಯೋಜನೆಯೆಂದು ಘೋಷಿಸಲಾಗುವುದು. ಕೆ.ಎಸ್.ಆರ್.ಟಿ. ಸಿ ನೌಕರರಿಗೆ ವೇತನ ಹೆಚ್ಚಳ ಮಾಡುವ ಬಗ್ಗೆ ಅಧಿಕಾರಿಗಳು ಚರ್ಚೆ ಮಾಡುತ್ತಿದ್ದು, ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಇದನ್ನೂ ಓದಿ | Lokayukta raid: ಮುಖ್ಯಮಂತ್ರಿಯವರೇ, ನಿಮಗೆ ಇದಕ್ಕಿಂತ ಸಾಕ್ಷಿ ಬೇಕೇ?; ಕೂಡಲೇ ರಾಜೀನಾಮೆ ಕೊಟ್ಟು ಹೊರಡಿ: ಸಿದ್ದರಾಮಯ್ಯ
ಚಿತ್ರದುರ್ಗದಲ್ಲಿ ವೈದ್ಯಕೀಯ ಕಾಲೇಜಿಗೆ ಅನುದಾನ
ಅಜ್ಜಂಪುರದ ಬಳಿ ಭದ್ರಾವತಿ ಕಾಮಗಾರಿ ಬಾಕಿ ಉಳಿದಿರುವ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಅಲ್ಲಿ ರೈತರಿಗೆ ಪರಿಹಾರ ನೀಡುವ ಬಗ್ಗೆ ಅಲ್ಲಿಯ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಈ ಹಿಂದೆ ಚಿಕ್ಕಮಗಳೂರು ಭಾಗದಲ್ಲಿಯೂ ಇದೆ ಸಮಸ್ಯೆ ಇತ್ತು. ಸದಾನಂದಗೌಡರು ಮುಖ್ಯಮಂತ್ರಿಗಳಿದ್ದಾಗ ಸಭೆ ಕರೆದು ಬಗೆಹರಿಸಿದಂತೆಯೇ ಇದನ್ನು ಬಗೆಹರಿಸಲಾಗುವುದು. ಎಲ್ಲವನ್ನೂ ಕಾನೂನಿನ ಅಡಿಯಲ್ಲಿಯೇ ಕ್ರಮ ಕೈಗೊಳ್ಳಲಾಗುವುದು. ಚಿತ್ರದುರ್ಗದಲ್ಲಿ ವೈದ್ಯಕೀಯ ಕಾಲೇಜಿಗೆ ಅನುದಾನ ಒದಗಿಸಿ, ಖುದ್ದು ನಾನೇ ಬಂದು ಅಡಿಗಲ್ಲು ಹಾಕುವೆ ಎಂದರು.