Site icon Vistara News

Tumkur Smart City: ʼಸಮೃದ್ಧ ಕರ್ನಾಟಕʼ ಸ್ಥಾಪಿಸುವ ಗುರಿ ನಮ್ಮದು: ಸಿಎಂ ಬಸವರಾಜ ಬೊಮ್ಮಾಯಿ

CM Basavaraj Bommai says We aim to establish a Prosperous Karnataka

#image_title

ತುಮಕೂರು: ಬದುಕನ್ನು ಕಟ್ಟಿಕೊಡುವಂತಹ ಹಲವಾರು ಯೋಜನೆಗಳನ್ನು ಕೇಂದ್ರ ಹಾಗೂ ಕರ್ನಾಟಕ ರಾಜ್ಯ ಸರ್ಕಾರ ಜಾರಿಗೊಳಿಸಿದ್ದು, ತುಮಕೂರು (Tumkur Smart City) ಜಿಲ್ಲೆಯ 24 ಲಕ್ಷ ಜನರಿಗೆ ಉಭಯ ಸರ್ಕಾರಗಳ ವಿವಿಧ ಯೋಜನೆಗಳ ಸವಲತ್ತುಗಳನ್ನು ಒದಗಿಸಲಾಗಿದೆ. ಯೋಜನೆಗಳನ್ನು ಘೋಷಿಸುವುದಲ್ಲದೆ ಪೂರ್ಣ ಪ್ರಮಾಣದಲ್ಲಿ ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ನಮ್ಮ ಸರ್ಕಾರ ಮುಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ನಗರದ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತುಮಕೂರು ಮಹಾನಗರ ಪಾಲಿಕೆ ಹಾಗೂ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ವಿವಿಧ ಯೋಜನೆಗಳ ಲೋಕಾರ್ಪಣೆ ಹಾಗೂ ಫಲಾನುಭವಿಗಳ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ನಾಡಿನಲ್ಲಿ ಬಡತನವನ್ನು ಸಂಪೂರ್ಣವಾಗಿ ಅಳಿಸಿ ಸಮೃದ್ಧಿ ಕರ್ನಾಟಕ ಸ್ಥಾಪಿಸುವ ಸಂಕಲ್ಪ ಕೈಗೊಳ್ಳುತ್ತಿರುವುದಾಗಿ ಘೋಷಿಸಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ಗರೀಬ್ ಕಲ್ಯಾಣ್, ಆತ್ಮ ನಿರ್ಭರ್ ಭಾರತ್, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಯೋಜನೆಗಳ ಅನುದಾನ ನೇರವಾಗಿ ಫಲಾನುಭವಿಗಳ ಖಾತೆಗೆ ಡಿಬಿಟಿ ತಂತ್ರಜ್ಞಾನದ ಮೂಲಕ ಜಮೆಯಾಗುತ್ತಿದೆ. ರಾಜ್ಯದ ಸುಮಾರು 53.43 ಲಕ್ಷ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ಕಳೆದ ನಾಲ್ಕು ವರ್ಷದಲ್ಲಿ 16 ಸಾವಿರ ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಕೊಟ್ಟಿದ್ದು, 4,482 ಕೋಟಿ ರಾಜ್ಯ ಸರ್ಕಾರ ಕೊಟ್ಟಿದೆ ಎಂದರು.

ಇದನ್ನೂ ಓದಿ | Karnataka Election 2023: ಇನ್ನೂ ಒಂದು ತಿಂಗಳು ಜೆಡಿಎಸ್‌ ಶಾಸಕನಾಗಿಯೇ ಇರುವೆ, ನಂತರ ಕಾಂಗ್ರೆಸ್‌ಗೆ ಹೋಗುವೆ: ಕೆ.ಎಂ. ಶಿವಲಿಂಗೇಗೌಡ

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಕರ್ನಾಟಕಕ್ಕೆ 17 ಲಕ್ಷ ಮನೆಗಳನ್ನು ಮಂಜೂರು ಮಾಡಲಾಗಿದೆ. ಸ್ವಚ್ಛ ಭಾರತ್ ಯೋಜನೆಯಡಿ ಶೌಚಾಲಯವನ್ನು ನಿರ್ಮಿಸಲಾಗಿದೆ, ಜಲ ಜೀವನ್ ಮಿಷನ್ ಯೋಜನೆಯಡಿ ಜನರ ಮನೆಯ ಬಾಗಿಲಿಗೆ ಕುಡಿಯುವ ನೀರನ್ನು ನೀಡಿದ್ದೇವೆ, ದೀನ್ ದಯಾಳ್ ಯೋಜನೆಯ ಬೆಳಕು ಕಾರ್ಯಕ್ರಮದಡಿ ಕಳೆದ ಒಂದು ವರ್ಷದಲ್ಲಿ 2.28 ಲಕ್ಷ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ ಎಂದರು.

ಕಳೆದ ಮೂರು ವರ್ಷಗಳಲ್ಲಿ ಜೆ.ಜೆ.ಎಂ. ಯೋಜನೆಯಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುದಾನದಡಿ 40 ಲಕ್ಷ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಕಳೆದ 27 ವರ್ಷಗಳಲ್ಲಿ ಕೇವಲ 25 ಲಕ್ಷ ಮನೆಗಳಿಗೆ ಕುಡಿಯುವ ನೀರಿನ ಯೋಜನೆಯಿದ್ದು, ನಮ್ಮ ಡಬಲ್ ಎಂಜಿನ್ ಸರ್ಕಾರ ಮೂರೇ ವರ್ಷದಲ್ಲಿ 40 ಲಕ್ಷ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಿರುವುದು ದಾಖಲೆಯೇ ಸರಿ ಎಂದರು.

ರೈತರ ಮಕ್ಕಳು ಸಹ ಎಲ್ಲಾ ಕ್ಷೇತ್ರಗಳಲ್ಲೂ ಬೆಳೆಯಬೇಕು ಎಂಬ ನಿಟ್ಟಿನಲ್ಲಿ ರೈತ ವಿದ್ಯಾ ನಿಧಿ ಯೋಜನೆಯನ್ನು ಜಾರಿಗೆ ತಂದಿದ್ದು, ರಾಜ್ಯದ 12 ಲಕ್ಷ ರೈತರ ಮಕ್ಕಳು ಹಾಗೂ ತುಮಕೂರು ಜಿಲ್ಲೆಯ 18 ಸಾವಿರ ರೈತ ಮಕ್ಕಳು ರೈತ ವಿದ್ಯಾನಿಧಿ ಯೋಜನೆಯ ಸೌಲಭ್ಯ ಪಡೆದುಕೊಂಡಿದ್ದು, ಇಂತಹ ಹಲವು ಜನಪರ ಯೋಜನೆಗಳನ್ನು ಜಾರಿ ಮಾಡಿದ್ದೇವೆ ಎಂದರು.

ಇದನ್ನೂ ಓದಿ | Shramik Niwas: ಸದ್ದಿಲ್ಲದೆ ಸಿದ್ಧವಾಗುತ್ತಿದೆ ‘ಶ್ರಮಿಕ್ ನಿವಾಸ್’; ಕಾರ್ಮಿಕ ಇಲಾಖೆಯಿಂದ ಶ್ರಮಿಕರಿಗಾಗಿ ವಸತಿ ಯೋಜನೆ

ಹಿಂದೆಂದೂ ಕಂಡರಿಯದ ರೀತಿ 970 ಕೋಟಿ ರೂ.ಗಳ ಸ್ಮಾರ್ಟ್ ಸಿಟಿ ಯೋಜನೆಯನ್ನು ಘೋಷಿಸಿ ಅನುಷ್ಠಾನಗೊಳಿಸಲಾಗಿದೆ, ಎತ್ತಿನಹೊಳೆ ಯೋಜನೆಯೂ ಶೀಘ್ರವೇ ಪೂರ್ಣಗೊಳ್ಳಲಿದೆ ಎಂದು ಸಿಎಂ ಹೇಳಿದರು. ಇದೇ ಸಂದರ್ಭ ಕೃಷಿ ಇಲಾಖೆಯ ರೈತ ವಿದ್ಯಾ ನಿಧಿ ಯೋಜನೆ, ಪಿಎಂ ಕಿಸಾನ್ ಯೋಜನೆ, ರೈತ ಶಕ್ತಿ ಯೋಜನೆ, ಅಮೃತ್ ಯೋಜನೆ, ವಸತಿ ಯೋಜನೆ, ಜೇನು ಸಾಕಾಣಿಕೆ ಯೋಜನೆ, ಅಮೃತ ಕ್ರೀಡಾ ಯೋಜನೆ, ಹಾಲು ಉತ್ಪಾದಕರಿಗೆ ಉತ್ತೇಜನ ಸೇರಿದಂತೆ ಸಾಂಕೇತಿಕವಾಗಿ 18 ಫಲಾನುಭವಿಗಳಿಗೆ ಮುಖ್ಯಮಂತ್ರಿಗಳು ಚೆಕ್ ವಿತರಿಸಿದರು.

ಸಚಿವರಾದ ಸಿ.ಸಿ.ಪಾಟೀಲ್, ಎಸ್.ಟಿ. ಸೋಮಶೇಖರ್, ಬಿ.ಸಿ. ನಾಗೇಶ್, ಸಂಸದ ಜಿ.ಎಸ್. ಬಸವರಾಜು, ಶಾಸಕರಾದ ಎ.ಎಸ್. ಜಯರಾಮ್, ಡಾ. ಸಿ.ಎಂ. ರಾಜೇಶ್ ಗೌಡ, ವಿಧಾನ ಪರಿಷತ್ ಶಾಸಕ ಚಿದಾನಂದಗೌಡ, ಮಹಾಪೌರರಾದ ಎಂ. ಪ್ರಭಾವತಿ ಸುಧೀಶ್ವರ್, ಉಪಮಹಾಪೌರ ಟಿ.ಕೆ. ನರಸಿಂಹಮೂರ್ತಿ, ನಗರಾಭಿವೃದ್ಧಿ ಅಧ್ಯಕ್ಷ ಹೆಚ್.ಜಿ.ಚಂದ್ರಶೇಖರ್ ಹಾಗೂ ಸ್ಮಾರ್ಟ್ ಸಿಟಿ ಲಿಮಿಟೆಡ್ ಅಧ್ಯಕ್ಷ ರಾಕೇಶ್ ಸಿಂಗ್, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಜಿಲ್ಲಾ ಪಂಚಾಯತ್ ಸಿಇಒ ವಿದ್ಯಾಕುಮಾರಿ, ತುಮಕೂರು ಪಾಲಿಕೆ ಆಯುಕ್ತ ಎಚ್.ವಿ. ದರ್ಶನ್, ಸ್ಮಾರ್ಟ್ ಸಿಟಿ ಎಂ.ಡಿ. ರಂಗಸ್ವಾಮಿ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version