Site icon Vistara News

NCC Camp: ರಾಜ್ಯದಲ್ಲಿ ಈ ವರ್ಷ ಎರಡು ಎನ್‌ಸಿಸಿ ಶಿಬಿರ ಆಯೋಜನೆಗೆ ಕ್ರಮ: ಸಿಎಂ ಬಸವರಾಜ ಬೊಮ್ಮಾಯಿ

NCC CAMP

#image_title

ಬೆಂಗಳೂರು: ಈ ವರ್ಷ ಕಲ್ಯಾಣ ಕರ್ನಾಟಕ‌ ಹಾಗೂ ಮಧ್ಯ ಕರ್ನಾಟಕ ಭಾಗದಲ್ಲಿ ಎರಡು ಎನ್‌ಸಿಸಿ ಶಿಬಿರಗಳನ್ನು (NCC Camp) ಏರ್ಪಡಿಸಲಾಗುವುದು ಹಾಗೂ ಅದಕ್ಕೆ ಅಗತ್ಯವಿರುವ ಎಲ್ಲ ಸವಲತ್ತುಗಳನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪಾಲ್ಗೊಂಡಿದ್ದ ಕರ್ನಾಟಕ‌ ಹಾಗೂ ಗೋವಾ ರಾಜ್ಯ ಎನ್.ಸಿ. ಸಿ ಕೆಡೆಟ್‌ಗಳಿಗೆ ನಗರದ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಎನ್‌ಸಿಸಿ ಕೆಡೆಟ್‌ಗಳು ಗಣ ರಾಜ್ಯೋತ್ಸವ ಪರೇಡ್‌ನಲ್ಲಿ ಪಾಲ್ಗೊಂಡು ಕರ್ನಾಟಕ‌ ಹಾಗೂ ಗೋವಾ ರಾಜ್ಯ ಹೆಮ್ಮೆ ಪಡುವಂತೆ ಮಾಡಿದ್ದಾರೆ ಹಾಗೂ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪಾಲ್ಗೊಳ್ಳುವುದು ಸುಲಭವಲ್ಲ. 95 ಸಾವಿರ ಕೆಡೆಟ್‌ಗಳ ಪೈಕಿ 111 ಮಾತ್ರ ಆಯ್ಕೆಯಾಗಿದ್ದು, ಇದು ನಿಮ್ಮ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ ಎಂದರು.

ವಿದ್ಯಾರ್ಥಿಗಳಿಗೆ ಶಿಸ್ತು ಮುಖ್ಯ

ಅತ್ಯಂತ ಬಲಿಷ್ಠ, ಯುವ ಪರೇಡ್‌ ಅನ್ನು ಕಟ್ಟುವ ಉದ್ದೇಶದಿಂದ ಎನ್.ಸಿ.ಸಿ 1947 ರಿಂದಲೂ ಅಸ್ತಿತ್ವಕ್ಕೆ ಬಂದಿತು. ಜೀವನದಲ್ಲಿ ಶಿಸ್ತು ಬಹಳ ಮುಖ್ಯ. ಶಿಸ್ತು ಇದ್ದರೆ ವ್ಯಕ್ತಿತ್ವ ಬೆಳೆಯುತ್ತದೆ. ದೇಶಕ್ಕೆ ಚಾರಿತ್ರ್ಯ ಅಗತ್ಯ. ದೇಶಕ್ಕೆ ಚರಿತ್ರೆ ಇದೆ, ಆದರೆ ಚಾರಿತ್ರ್ಯ ಬೇಕಿದೆ. ಆಚಾರ್ಯರನ್ನು ಹೊಂದಿದ್ದೇವೆ. ಆಚರಣೆ ಬೇಕಿದೆ. ಆಚರಣೆ ಎನ್‌ಸಿಸಿಯಲ್ಲಿದೆ ಎಂದು ಅಭಿಪ್ರಾಯ ಪಟ್ಟರಲ್ಲದೇ ಆಧುನಿಕ ಜಗತ್ತಿನಲ್ಲಿ ಎನ್‌ಸಿಸಿಗೆ ಸೇರುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ಬೇಸರದ ಸಂಗತಿ. ಅಧಿಕಾರಿಗಳು ಎನ್ ಸಿ ಸಿ ಸೇರುವಂತೆ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಬೇಕು ಎಂದರು.

ರೆಜಿಮೆಂಟ್ ಮಾದರಿಯಲ್ಲಿ ಎನ್‌ಸಿಸಿ ಬೆಳೆಯಬೇಕು

ಎನ್‌ಸಿಸಿ ರೆಜಿಮೆಂಟ್ ಮಾದರಿಯಲ್ಲಿ ಬೆಳೆಯಬೇಕು. ಬೆಟಾಲಿಯನ್‌ಗಳನ್ನು ರೇಜಿಮೆಂಟ್‌ಗಳಾಗಿ ಕಟ್ಟಿದಂತೆಯೇ ಎನ್‌ಸಿಸಿ ಯನ್ನೂ ರೆಜಿಮೆಂಟ್‌ಗಳಾಗಿ ಬೆಳೆಸಬೇಕು. ಆಗ ಮಾತ್ರ ಎನ್‌ಸಿಸಿಗೆ ಪ್ರಾಮುಖ್ಯತೆ ದೊರೆಯುತ್ತದೆ ಹಾಗೂ ಯುವಕರೂ ಸೇರ್ಪಡೆಯಾಗಲು ಉತ್ತೇಜನ ದೊರೆಯುತ್ತದೆ ಎಂದರು.

ಈ ವರ್ಷ ಹೊಸ 75 ಯುನಿಟ್ ಪ್ರಾರಂಭ

ಎನ್‌ಸಿಸಿಯಲ್ಲಿ ಕಲಿತ ಧೈರ್ಯ, ಆತ್ಮವಿಶ್ವಾಸ ಜೀವನದಲ್ಲಿ ನಿಮ್ಮನ್ನು ಯಶಸ್ವಿಗೊಳಿಸುತ್ತದೆ. ರಾಜ್ಯ ಸರ್ಕಾರ ಎನ್‌ಸಿಸಿಗೆ ಅಗತ್ಯವಿರುವ ನೆರವು ನೀಡುತ್ತದೆ. ಕಳೆದ ವರ್ಷ ಸುಭಾಶ್‌ ಚಂದ್ರ ಬೋಸ್ ಅವರ ಜನ್ಮ ದಿನಾಚರಣೆ ಅಂಗವಾಗಿ 75 ಹೊಸ ಯುನಿಟ್ ಆರಂಭಿಸುವುದಾಗಿ ಹೇಳಿದ್ದೆವು. ಈ ವರ್ಷ ಹೊಸದಾಗಿ 75 ಯುನಿಟ್‌ ಆರಂಭವಾಗಲಿವೆ. ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ 75 ಯುನಿಟ್‌ಗಳನ್ನು ಸೇರಿಸಲಾಗಿದೆ. ಎನ್‌ಸಿಸಿಯನ್ನು ಪ್ರೌಢ ಶಾಲಾ ಮಟ್ಟಕ್ಕೆ ವಿಸ್ತರಿಸಬೇಕು. ಕರಾವಳಿಯಲ್ಲಿ ಈ ವರ್ಷ 2800ಕ್ಕೂ ಹೆಚ್ಚು ಹೊಸ ಎನ್‌ಸಿಸಿ ಕೆಡೆಟ್‌ಗಳು ಸೇರ್ಪಡೆಯಾಗಿದ್ದಾರೆ ಎಂದರು.

ಯುವಕರು ನಮ್ಮ ದೇಶದ ಆಸ್ತಿ

ನಮ್ಮ ಪ್ರಧಾನ ಮಂತ್ರಿಗಳು ದೇಶ ಮೊದಲು ಎಂದು ಆಲೋಚಿಸುತ್ತಾರೆ. ದೇಶ ಆರ್ಥಿಕವಾಗಿ ಬೆಳೆಯಬೇಕೆಂಬ ಆಲೋಚನೆ ಹೊಂದಿದ್ದಾರೆ‌. ಈಗ ನಾವು ವಿಶ್ವದಲ್ಲಿ 5ನೇ ಸ್ಥಾನದಲ್ಲಿದ್ದೇವೆ. ಹತ್ತು ವರ್ಷಗಳಲ್ಲಿ ದೇಶ ವಿಶ್ವದಲ್ಲಿ ನಂಬರ್ ಒನ್ ಸ್ಥಾನಕ್ಕೆ ತಲುಪುವ ಗುರಿ ಹೊಂದಿದ್ದೇವೆ. ಅದಕ್ಕೆ ಯುವಕರ ಪಾತ್ರ ಬಹಳ ಮುಖ್ಯ.ದೇಶದ ಶೇ 46 ಜನಸಂಖ್ಯೆಯ ಯುವಕರು ನಮ್ಮ ದೇಶದ ಆಸ್ತಿ ಎಂದು, ನಮ್ಮ ಪ್ರಧಾನಿ ದೇಶದ ಯುವಕರ ಸಾಮರ್ಥ್ಯ ಅರಿತು ಸ್ಕಿಲ್ ಇಂಡಿಯಾ ತರಬೇತಿ ಆರಂಭಿಸಿದರು. ಯುವಕರು ತಮ್ಮ ಪಠ್ಯ ಚಟುವಟಿಕೆಗಳ ಜತೆಗೆ ಪಠ್ಯೇತರ ಚಟುವಟಿಕೆಗಳ ಬಗ್ಗೆ ಆಸಕ್ತಿ ಇರುವವರಿಗೆ ಕೌಶಲ ತರಬೇತಿ. ನೀಡಲಾಗುವುದು ಎಂದರು.

ಸಚಿವರಾದ ಡಾ: ಸಿ.ಎನ್ ಅಶ್ವತ್ಥ್ ನಾರಾಯಣ್, ಬಿ.ಎ. ಬಸವರಾಜ , ಕರ್ನಾಟಕ ಹಾಗೂ ಗೋವಾ ರಾಜ್ಯಗಳ ಎನ್.ಸಿ.ಸಿ.ಕಂಟಿಂಜೆಂಟ್ ಮುಖ್ಯಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Exit mobile version