ಬೆಳಗಾವಿ: ನಗರದ ಸುವರ್ಣಸೌಧದ (Belagavi News) ಎದುರು ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯನ್ನು ಮಂಗಳವಾರ ಸಿಎಂ ಬಸವರಾಜ ಬೊಮ್ಮಾಯಿ ಅವರು ಲೋಕಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಬೆಳಗಾವಿ ಕರ್ನಾಟಕ ಕಿರೀಟ, ಬೆಳಗಾವಿಯ ಕಿರೀಟ ಎಂದರೆ ಸುವರ್ಣಸೌಧ. ಇದರ ಕಿರೀಟ ಎಂದರೆ ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಡಾ. ಬಿ.ಆರ್. ಅಂಬೇಡ್ಕರ್, ಮಹಾತ್ಮ ಗಾಂಧೀಜಿ ಎಂದು ಹೇಳಿದರು.
ಇದನ್ನೂ ಓದಿ | Karnataka Election: ಈ ಬಾರಿಯೂ ಅತಂತ್ರ ವಿಧಾನಸಭೆ? ಕುಮಾರಸ್ವಾಮಿ ಜತೆ ʼಸಂಧಾನʼಕ್ಕೆ ಬಂದವರಾರು?
ಬೆಳಗಾವಿ ಯಾವಾಗಲೂ ಐತಿಹಾಸಿಕ ಪ್ರಸಿದ್ಧ ಜಿಲ್ಲೆ. ಇಲ್ಲಿಯೇ ಕಿತ್ತೂರು ರಾಣಿ ಚೆನ್ನಮ್ಮ ಸ್ವಾತಂತ್ರ್ಯದ ಮೊದಲ ಕಹಳೆ ಮೊಳಗಿಸಿದರು. ರಾಯಣ್ಣನನ್ನು ನೇಣಿಗೇರಿಸಿದ್ದು ಇದೇ ಜಿಲ್ಲೆಯಲ್ಲಿ. ಮಹಾತ್ಮ ಗಾಂಧಿ ಅವರು ಮೊದಲ ಬಾರಿ ಕರ್ನಾಟಕಕ್ಕೆ ಭೇಟಿ ಕೊಟ್ಟಿದ್ದು ಕೂಡ ಬೆಳಗಾವಿಗೆ, ಹಾಗೆಯೇ ಡಾ.ಬಿ.ಆರ್.ಅಂಬೇಡ್ಕರ್ ಮೊದಲು ಭೇಟಿ ನೀಡಿದ್ದು ಚಿಕ್ಕೋಡಿ ವಿಭಾಗಕ್ಕೆ. ಹೀಗಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಬೆಳಗಾವಿಯ ಹೆಸರು ಅಚ್ಚಳಿಯದೆ ಉಳಿದಿದೆ ಎಂದು ಹೇಳಿದರು.
ಪ್ರೇರಣೆದಾಯಕ ಪ್ರತಿಮೆಗಳನ್ಜು ನಾವಿಂದು ಸುವರ್ಣಸೌಧ ಎದುರು ಲೋಕಾರ್ಪಣೆ ಮಾಡಿದ್ದೇವೆ. ಕಿತ್ತೂರು ಕರ್ನಾಟಕ ಕೃಷಿ, ಔದ್ಯೋಗಿಕ ಕ್ಷೇತ್ರ, ಶೈಕ್ಷಣಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಈ ಭಾಗದಲ್ಲಿ ಮತ್ತಷ್ಟು ಅಭಿವೃದ್ಧಿ ಆಗಬೇಕು ಎಂಬ ಬಯಕೆ ನನ್ನದಾಗಿದೆ. ಈ ಕಾರಣಕ್ಕೆ ನಾನು ಅಧಿವೇಶನ ವೇಳೆ 5,500 ಕೋಟಿ ರೂ.ಗಳ ವೆಚ್ಚದ ನೀರಾವರಿ ಯೋಜನೆಗಳನ್ನು ಘೋಷಿಸಿದ್ದೆ. ಆ ಎಲ್ಲ ಯೋಜನೆಗಳ ಶಂಕುಸ್ಥಾಪನೆ ಕಾರ್ಯಕ್ರಮ ನಡೆಯುತ್ತಿವೆ ಎಂದು ಹೇಳಿದರು.
ಹುಬ್ಬಳ್ಳಿಗೆ ಜಯದೇವ ಆಸ್ಪತ್ರೆ, ಬೆಳಗಾವಿಗೆ ಕಿದ್ವಾಯಿ ಆಸ್ಪತ್ರೆ ಬಂದಿದೆ. ಕಿತ್ತೂರು ಕರ್ನಾಟಕ ಅಭಿವೃದ್ಧಿ ಹೊಂದಿದರೆ ಸಮಗ್ರ ಕರ್ನಾಟಕವು ದೊಡ್ಡ ಪ್ರಮಾಣದ ಅಭಿವೃದ್ಧಿ ಹೊಂದಲಿದೆ. ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ಪ್ರಮಾಣದ ಹಣವನ್ನು ನಾನು ಬಜೆಟ್‌ನಲ್ಲಿ ಮೀಸಲಿಟ್ಟಿದ್ದೇನೆ. ಸಮಗ್ರ ಕರ್ನಾಟಕ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತಿದೆ. ಇನ್ನು ಮೂರ್ನಾಲ್ಕು ತಿಂಗಳಲ್ಲಿ ಸುವರ್ಣಸೌಧ ಬಳಿ ಗಾಂಧೀಜಿ ಪ್ರತಿಮೆಯೂ ಸಿದ್ಧವಾಗುತ್ತದೆ. ಅದು ಬೃಹತ್ ಪ್ರಮಾಣದ ಪ್ರತಿಮೆ ಆಗಿರುವ ಹಿನ್ನೆಲೆಯಲ್ಲಿ ಸ್ವಲ್ಪ ತಡವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ | PM MITRA Park: ಕಲ್ಯಾಣ ಕರ್ನಾಟಕಕ್ಕೆ ಶಕ್ತಿ ತುಂಬಲಿದೆ ಕಲಬುರಗಿ ಮೆಗಾ ಜವಳಿ ಪಾರ್ಕ್: ಸಿಎಂ ಬೊಮ್ಮಾಯಿ
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಸುವರ್ಣಸೌಧ ಎದುರು ಮೂವರ ಮಹನೀಯರ ಪ್ರತಿಮೆ ಲೋಕಾರ್ಪಣೆ ಆಗಿರುವುದು ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತಹ ದಿನವಾಗಿದೆ. ಸುವರ್ಣಸೌಧ ನಿರ್ಮಾಣದಿಂದ ಈ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳು ವೇಗ ಪಡೆಯುತ್ತಿವೆ. ಸುವರ್ಣಸೌಧದ ಒಳಗೂ ಬಸವೇಶ್ವರ ಸೇರಿ ಹಲವು ಮಹನೀಯರ ಭಾವಚಿತ್ರ ಹಾಕಿದ್ದೇವೆ. ನಾನು ಸ್ಪೀಕರ್ ಆದ ಬಳಿಕ ಈ ಕ್ರಮ ಕೈಗೊಂಡಿದ್ದು, ನಮ್ಮ ಜವಾಬ್ದಾರಿ ಹೆಚ್ಚಿಸಿದೆ. ನಮಗೆ ಸ್ವಾತಂತ್ರ್ಯ ಹಾಗೆಯೇ ಸಿಕ್ಕಿಲ್ಲ, ಹಲವು ಮಹನೀಯರ ಹೋರಾಟದ ಫಲ ಇದಾಗಿದೆ. ಅಂಥ ಮಹಾಪುರುಷರ ಭಾವಚಿತ್ರ ಒಳಗೆ ಹಾಗೂ ಹೊರಗೆ ಪ್ರತಿಮೆ ನಿರ್ಮಿಸಿರುವುದು ಸಮಯೋಚಿತ ಎಂದು ಹೇಳಿದರು.
ದೇಶ ಇಂದು ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ ಇರಲು ದೇಶದ ಸಂವಿಧಾನ ಕಾರಣ. ಅಂಥ ಸಂವಿಧಾನದ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಇಲ್ಲಿ ನಿರ್ಮಾಣವಾಗಿದೆ. ಇನ್ನೆರಡು ತಿಂಗಳಲ್ಲಿ ಮಹಾತ್ಮ ಗಾಂಧಿ ಪ್ರತಿಮೆಯನ್ನು ನಿರ್ಮಿಸುತ್ತೇವೆ. ಅದರ ಉದ್ಘಾಟನೆ ಕೂಡ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಾಡಲಿದ್ದಾರೆ ಎಂದು ಹೇಳಿದರು.
ಬೆಳಗಾವಿ ಪ್ರಾದೇಶಿಕ ಆಯುಕ್ತ ಎಂ.ಜಿ.ಹಿರೇಮಠ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಸಿ.ಸಿ.ಪಾಟೀಲ್, ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಶಂಕರ್ ಪಾಟೀಲ್ ಮುನೇನಕೊಪ್ಪ, ಎಂಎಲ್‌ಸಿ ಪ್ರಕಾಶ ಹುಕ್ಕೇರಿ, ಲಕ್ಷ್ಮಣ್ ಸವದಿ, ಶಾಸಕರಾದ ರಮೇಶ್ ಜಾರಕಿಹೊಳಿ, ಅಭಯ್ ಪಾಟೀಲ್, ಅನಿಲ್ ಬೆನಕೆ, ದುರ್ಯೋಧನ ಐಹೊಳೆ, ಪಿ.ರಾಜೀವ್, ಮಹಾದೇವಪ್ಪ ಯಾದವಾಡ, ಮಹಾಂತೇಶ ದೊಡ್ಡಗೌಡರ, ಶ್ರೀಮಂತ ಪಾಟೀಲ್ ಮತ್ತಿತರರು ಇದ್ದರು.