ಮಂಗಳೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಘೋಷಣೆ ಮಾಡಿದ ಬೆನ್ನಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ದಂಪತಿ, ಬುಧವಾರ ಧರ್ಮಸ್ಥಳ, ಕುಕ್ಕೆ ಶ್ರೀ ಸುಬ್ರಹ್ಮಣ್ಯ, ಮಂಗಳೂರಿನ ಮಂಗಳಾದೇವಿ ದೇವಸ್ಥಾನ, ಗರೋಡಿ ಬ್ರಹ್ಮ ಬೈದರ್ಕಳ ದೈವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಂಜುನಾಥಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಧರ್ಮಸ್ಥಳ, ಕುಕ್ಕೆ, ಸೋಮೇಶ್ವರಕ್ಕೆ ಆಗಾಗ ಭೇಟಿ ಕೊಡುತ್ತೇನೆ. ಚುನಾವಣೆ ಹಿನ್ನೆಲೆಯಲ್ಲಿ ಮತ್ತೆ ಬಂದು ಮಂಜುನಾಥನ ದರ್ಶನ ಪಡೆದಿದ್ದೇನೆ. ಸತ್ಯಕ್ಕೆ ಜಯವಾಗಲಿ, ಸಮಸ್ತ ಕನ್ನಡ ನಾಡು ಸುಭಿಕ್ಷೆಯಿಂದ ಇರಲಿ ಎಂದು ಪ್ರಾರ್ಥನೆ ಮಾಡಿರುವುದಾಗಿ ತಿಳಿಸಿದರು.
ಟಿಕೆಟ್ ವಂಚಿತ ಅಭ್ಯರ್ಥಿಗಳ ಬಳಿ ಮಾತನಾಡುತ್ತಿದ್ದೇನೆ. ಪಕ್ಷ ಅವರನ್ನು ಗೌರವದಿಂದ ಕಂಡು ಶಾಸಕರಾಗಿ ಮಾಡಿದೆ. ಅವರ ರಾಜಕೀಯ ಭವಿಷ್ಯವನ್ನು ಗೌರವ ಪೂರ್ವಕವಾಗಿ ಇರುವ ಹಾಗೆ ನಾನು ನೋಡಿಕೊಳ್ಳುತ್ತೇನೆ. ಲಕ್ಷ್ಮಣ ಸವದಿಗೆ ನನ್ನ ಮತ್ತು ಪಕ್ಷದ ಜತೆಗೆ ಭಾವನಾತ್ಮಕ ಸಂಬಂಧ ಇದೆ. ಸ್ವಲ್ಪ ಕೋಪದಲ್ಲಿ ಕೆಲ ವಿಷಯ ಹೇಳಿದ್ದಾರೆ. ಅವರೊಂದಿಗೆ ಮಾತನಾಡಿ ಸಮಸ್ಯೆ ಬಗೆ ಹರಿಸುತ್ತೇನೆ ಎಂದು ಹೇಳಿದರು.
ಬಿಜೆಪಿಯವರು ವಿನಯ್ ಕುಲಕರ್ಣಿಯನ್ನು ಟಾರ್ಗೆಟ್ ಮಾಡಿಲ್ಲ. ಎದುರಾಳಿ ಯಾರು ಎಂಬುವುದು ನನಗೂ ಮುಖ್ಯ. ನನ್ನ ಜನ ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಎದುರಾಳಿ ಯಾರೇ ಇದ್ದರೂ ನನಗೆ ಚುನಾವಣೆ ಎದುರಿಸುವುದು ಹೇಗೆ ಎಂಬುವುದು ಗೊತ್ತಿದೆ. ಈಶ್ವರಪ್ಪ ರಾಜಕೀಯ ನಿವೃತ್ತಿ ಆಗಿಲ್ಲ, ಚುನಾವಣೆ ರಾಜಕೀಯದಲ್ಲಿ ಇರುತ್ತಾರೆ. ಅವರ ಜತೆಗೆ ವರಿಷ್ಠರು ಈಗಾಗಲೇ ಮಾತನಾಡಿದ್ದಾರೆ. ಸುಳ್ಯದ ಅಂಗಾರ ಬಹಳ ಜೆಂಟಲ್‌ಮನ್ ರಾಜಕಾರಣಿ, ನಾನು ಅವರ ಜತೆ ಮಾತನಾಡುವೆ. ಎರಡನೇ ಪಟ್ಟಿ ನಾಳೆ ಅಥವಾ ನಾಡಿದ್ದು ಬಿಡುಗಡೆಯಾಗಲಿದೆ ಎಂದು ತಿಳಿಸಿದರು.
ಇದನ್ನೂ ಓದಿ | Karnataka Election 2023: ಜಗದೀಶ್ ಶೆಟ್ಟರ್ ಕಾಂಗ್ರೆಸ್‌ಗಾ? ಜೆಡಿಎಸ್‌ಗಾ?: ಎಚ್‌ಡಿಕೆ, ಶಾಮನೂರು ಹೇಳಿದ್ದೇನು?
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ದರ್ಶನ
ಧರ್ಮಸ್ಥಳದಿಂದ ಹೆಲಿಕಾಪ್ಟರ್ ಮೂಲಕ ತಡಬದ ಬಿಳಿನೆಲೆಗೆ ಆಗಮಿಸಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಿಎಂ ಬೊಮ್ಮಾಯಿ ದಂಪತಿ ತೆರಳಿದರು. ಅವರಿಗೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ಹಾಗೂ ಕಾರ್ಯನಿರ್ವಾಹಣಾಧಿಕಾರಿ ಡಾ. ನಿಂಗಯ್ಯ ಹೂಗುಚ್ಛ ನೀಡಿ ಸ್ವಾಗತಿಸಿದರು. ಬಳಿಕ ಸಿಎಂ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು. ಬಳಿಕ ಸಂಪುಟ ನರಸಿಂಹ ಸ್ವಾಮಿ ದೇವರ ದರ್ಶನ ಪಡೆದರು. ನಂತರ ಹೊಸಳಿಗಮ್ಮ ದೈವದ ದರ್ಶನ ಪಡೆದು ಅಲ್ಲಿಂದ ನಿರ್ಗಮಿಸಿದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಬಳಿಕ ಸಿಎಂ ಬೊಮ್ಮಾಯಿ ಮಂಗಳೂರಿನ ಮಂಗಳಾದೇವಿ ದೇವಸ್ಥಾನ, ಗರೋಡಿ ಬ್ರಹ್ಮ ಬೈದರ್ಕಳ ದೈವಸ್ಥಾನಕ್ಕೆ ಭೇಟಿ ನೀಡಿದ ದರ್ಶನ ಪಡೆದರು.