Site icon Vistara News

Basavaraj Bommmai: 50 ವರ್ಷದ ಕೆಲಸವನ್ನು ಸುರೇಶ್‌ ಗೌಡರು 5 ವರ್ಷದಲ್ಲಿ ಮಾಡಿದ್ದಾರೆ: ತುಮಕೂರು ಗ್ರಾಮಾಂತರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ರೋಡ್‌ ಶೋ

CM Basavaraj Bommmai praises Tumkur Rural candidate Suresh Gowda

#image_title

ಗೂಳೂರು(ತುಮಕೂರು ಗ್ರಾಮಾಂತರ): ಸುರೇಶ್ ಗೌಡರು ಒಬ್ಬ ಸಾಧಕರು. ಇದಕ್ಕೆ ಅವರು ಮಾಡಿರುವ ಕೆಲಸವೇ ಸಾಕ್ಷಿ. 50 ವರ್ಷದಲ್ಲಿ ಆಗುವ ಕೆಲಸವನ್ನು ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಸುರೇಶ್ ಗೌಡ್ರು 5 ವರ್ಷದಲ್ಲಿ ಮಾಡಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಹೇಳಿದರು. ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುರೇಶ್ ಗೌಡ ಪರವಾಗಿ ಗೂಳೂರಿನಲ್ಲಿ ರೋಡ್ ಶೋ ನಡೆಸಿ ಮಾತನಾಡಿದರು.

ಕಳೆದ ಬಾರಿ ಸುರೇಶ ಗೌಡರನ್ನು ಸೋಲಿಸಿ ಅಕ್ರಮವಾಗಿ ಶಾಸಕರಾಗಿ ಆಯ್ಕೆಯಾಗಲಾಗಿತ್ತು. ಸುರೇಶ್ ಗೌಡರು ಕಾನೂನಿನ ನ್ಯಾಯಯದಲ್ಲಿ ಗೆದ್ದಿದ್ದಾರೆ. ಅಲ್ಲಿ ಇವರ ಪರವಾಗಿ ತೀರ್ಪು ಬಂದಿದೆ. ಈಗ ಜನತಾ ನ್ಯಾಯಾಲಯದಲ್ಲಿ ತಾವು ನ್ಯಾಯ ಕೊಡಬೇಕು. ಆ ಮೂಲಕ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು. ಯಾವಾಗ ಜನತಾ ನ್ಯಾಯಾಲಯದಲ್ಲಿ ಗೆಲುವು ಸಿಗುತ್ತದೊ ಆಗ ಜರುಗಿದ್ದ ಅನ್ಯಾಯ, ಅಕ್ರಮ ಎಲ್ಲ ಸಕ್ರಮ ಆಗುತ್ತದೆ. ಅಲ್ಲಿಯವರೆಗೂ ನೀವು ವಿಶ್ರಮಿಸಬಾರದು ಎಂದು ಸಿಎಂ‌ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ಅಭಿವೃದ್ಧಿಯನ್ನು‌ ವಿರೋಧಿಸಿದ್ದವರು ಜೆಡಿಎಸ್
ಜೆಡಿಎಸ್ ಅಭ್ಯರ್ಥಿ ಬಗ್ಗೆ ನ್ಯಾಯಾಲಯವೇ ಸರ್ಟಿಫಿಕೇಟ್ ಕೊಟ್ಟಿದೆ. ಜೆಡಿಎಸ್‌ನವರು ಅಧಿಕಾರದಲ್ಲಿದ್ದಾಗ ಗೂಳೂರು ಏತ ನೀರಾವರಿ ಮಾಡಬಾರದು ಎಂದು ಯೋಜನೆಗೆ ವಿರೋಧಿಸಿ ಆದೇಶ ಮಾಡಿದ್ದರು. ನಾನು ನೀರಾವರಿ ಸಚಿವನಾಗಿ ಈ ಯೋಜನೆಯನ್ನು ಕೈಗೆತ್ತಿಕೊಂಡು ಒಂದೇ ವರ್ಷದಲ್ಲಿ ಇದಕ್ಕೆ ಅಡಿಗಲ್ಲು ಆಯ್ತು. ಸಿದ್ದಗಂಗಾ ಮಠದ ಹಿರಿಯ ಸ್ವಾಮೀಜಿಗಳು ಭೂಮಿ ಪೂಜೆ ಮಾಡಿದ್ದರು. ನಾವೇ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ಈ ಯೋಜನೆ ವೇಗವಾಗಿ ಕಾರ್ಯಗತವಾಗುವುದಕ್ಕೆ ನಮ್ಮ ಸುರೇಶ್ ಗೌಡರು ಕಾರಣ. ಜನರ ಸಮಸ್ಯೆಗಳನ್ನು ಪರಿಹಾರ ಮಾಡುವ ಶಕ್ತಿ ಸುರೇಶ್ ಗೌಡರಿಗೆ ಇದೆ ಎಂದು ಸಿಎಂ ಹೇಳಿದರು.

ಸುರೇಶ್ ಗೌಡರು ಮಗುವಿನಂಥವರು
ಮನಸ್ಸಿಟ್ಟು ಕೆಲಸ ಮಾಡೋರಿಗೆ ಸಿಟ್ಟು ಬರುತ್ತದೆ. ಅದು ಪ್ರೀತಿಯ ಸಿಟ್ಟು. ಸುರೇಶ್ ಗೌಡರದ್ದು ಮಗುವಿನಂತ ಮನಸ್ಸು. ಅವರ ಮನಸ್ಸು ಸ್ವಚ್ಛ ಇದೆ. ನಿಮ್ಮ ಮೇಲೆ ಅಪಾರ ಪ್ರೀತಿ ವಿಶ್ವಾಸ ಇದೆ. ಆದ್ದರಿಂದ ಕಳೆದ ಬಾರಿಯ ಅಕ್ರಮವನ್ನು ಈ ಬಾರಿ ಸಕ್ರಮ ಮಾಡಿ ಕಾಂಗ್ರೆಸ್ ಜೆಡಿಎಸ್ ಅನ್ನು ರಾಜ್ಯದಿಂದ ಧೂಳಿಪಟ ಆಗುವ ಹಾಗೆ ಮಾಡಬೇಕು. ಬಿಜೆಪಿಗೆ ಸ್ಪಷ್ಟ ಬಹುಮತ ಕೊಡಬೇಕು ಎಂದರು.

ಭ್ರಷ್ಟಾಚಾರದ ಇನ್ನೊಂದು ಹೆಸರು ಕಾಂಗ್ರೆಸ್:
ಕಾಂಗ್ರೆಸ್ ಆಡಳಿತದಲ್ಲಿ ಇದ್ದದ್ದು ಬರೀ ಭ್ರಷ್ಟಾಚಾರ. ಕಾಂಗ್ರೆಸ್ ಅಂದರೆ ಭ್ರಷ್ಟಾಚಾರ. ಎಸ್ಸಿ ಎಸ್ಟಿ ಮಕ್ಕಳ ಹಾಸ್ಟೆಲ್ ಹಾಸಿಗೆ ದಿಂಬಿನಲ್ಲೂ ಕಾಂಗ್ರೆಸ್ ಅವರು ಭ್ರಷ್ಟಾಚಾರ ಮಾಡಿದ್ದಾರೆ. ಪರಿವಾರದ ಪಕ್ಷ ಜೆಡಿಎಸ್ ಬಗ್ಗೆ ಮಾತನಾಡುವ ಅಗತ್ಯವಿಲ್ಲ. 2023ರಲ್ಲಿ ಆ ಎರಡೂ ಪಕ್ಷಗಳೂ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುತ್ತದೆ. ಈ ಬಾರಿ ತುಮಕೂರು ಗ್ರಾಮಾಂತರದಿಂದ ಸುರೇಶ್ ಗೌಡರನ್ನು 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿಕೊಂಡು ಬನ್ನಿ ಎಂದು ಸಿಎಂ ಬೊಮ್ಮಾಯಿ ಅವರು ಮತದಾರರಲ್ಲಿ‌ ಮನವಿ ಮಾಡಿಕೊಂಡರು.

ಇದನ್ನೂ ಓದಿ: Karnataka Election: ಬಿಜೆಪಿ ಜಯವಾಹಿನಿ ಯಾತ್ರೆ; ಯಲಹಂಕ, ನೆಲಮಂಗಲದಲ್ಲಿ ಸಿಎಂ ಬೊಮ್ಮಾಯಿ ಭರ್ಜರಿ ರೋಡ್‌ ಶೋ

Exit mobile version