Site icon Vistara News

Basavaraja Bommai : ಎಲ್ಲ ಮುಖ್ಯಮಂತ್ರಿಗಳ ಆಡಳಿತ ಅನಾವರಣಕ್ಕೆ ಮ್ಯೂಸಿಯಂ ಸ್ಥಾಪನೆ ಪ್ರತಿಪಾದಿಸಿದ ಬೊಮ್ಮಾಯಿ

KC Reddy statue

#image_title

ಬೆಂಗಳೂರು: ರಾಜ್ಯದ ಪ್ರಥಮ ಮುಖ್ಯಮಂತ್ರಿ ಕೆ.ಸಿ ರೆಡ್ಡಿ ಅವರ ಹುಟ್ಟೂರಲ್ಲಿ ಸ್ಮಾರಕ ನಿರ್ಮಿಸಲು ಸರ್ಕಾರ ಅಗತ್ಯ ಸಹಕಾರ ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ತಿಳಿಸಿದರು. ಅವರು ಶನಿವಾರ ವಿಧಾನ ಸೌಧದ ಆವರಣದಲ್ಲಿ ಕೆ.ಸಿ.ರೆಡ್ಡಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಿ ಮಾತನಾಡಿದರು.

ʻʻರಾಜ್ಯದ ಎಲ್ಲಾ ಮುಖ್ಯಮಂತ್ರಿಗಳ ಬಗ್ಗೆ ಸಾಹಿತ್ಯ ರಚನೆ ಮಾಡಿ ಜನರಿಗೆ ಹಾಗೂ ಮಕ್ಕಳಿಗೆ ತಿಳಿಸುವ ಕೆಲಸ ಮಾಡಬೇಕಿದೆ. ಕರ್ನಾಟಕ ಏಕೀಕರಣದ ಹೋರಾಟ, ಆಗಿನ ಜನರ ಮನಸ್ಥಿತಿ ಬೇರೆ ಬೇರೆ ಹೋರಾಟಗಳು, ಎಲ್ಲ ಮುಖ್ಯ ಮಂತ್ರಿಗಳು ತೆಗೆದುಕೊಂಡ ತೀರ್ಮಾನಗಳಿಗೆ ಸಂಬಂಧಿಸಿ ಒಂದು ಮ್ಯೂಸಿಯಂ ಮಾಡುವ ಅವಶ್ಯಕತೆ ಇದೆʼʼ ಎಂದರು.

ʻʻಸ್ವಾತಂತ್ರ್ಯ ಹೋರಾಟಗಾರರಾದ ಕೆ.ಸಿ. ರೆಡ್ಡಿ ಅವರು ಸ್ವಾತಂತ್ರ್ಯ ಬಂದ ಕೂಡಲೇ ರಾಜ್ಯದ ಪ್ರಥಮ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ರೈತ ಕುಟುಂಬದಿಂದ ಬಂದ ಅವರು ವಕೀಲರಾಗಿ, ಪತ್ರಕರ್ತರಾಗಿ ಕೆಲಸ ಮಾಡಿದ್ದಾರೆ. ಪ್ರಜಾಪ್ರತಿನಿಧಿ ಎಂಬ ಪಕ್ಷ ಕಟ್ಟಿದ್ದರು. ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾಗಿಯೂ ಕೆಲಸ ಮಾಡಿದ್ದ ಅವರು ಭವಿಷ್ಯದ ನಾಡು ಕಟ್ಟಲು ಅಗತ್ಯವಿರುವ, ಶಾಸನ ರಚನೆ, ಸರ್ಕಾರದ ಯಂತ್ರ ರಚನೆ ಎಲ್ಲವನ್ನು ತಾವಿದ್ದ ನಾಲ್ಕೂವರೆ ವರ್ಷದಲ್ಲಿ ನಮಗೆ ಬಳುವಳಿಯಾಗಿ ನೀಡಿದ್ದಾರೆ. ಅವರ ಆದರ್ಶ ನಮಗೆ ಬಿಟ್ಟು ಹೋಗಿದ್ದಾರೆ. ಆ ಮಹನೀಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವು ನಡೆಯಬೇಕು ಎನ್ನುವುದು ನಮ್ಮ ನಂಬಿಕೆʼʼ ಎಂದರು.

ಅವರ ಜನ್ಮ ದಿನಾಚರಣೆ ಸಂದರ್ಭದಲ್ಲಿ ಅವರ ಪ್ರತಿಮೆ ಮಾಡುವ ಬಗ್ಗೆ ತೀರ್ಮಾನಿಸಲಾಗಿತ್ತು. ಅದರಂತೆ ಕರ್ನಾಟಕ ಅಡಿಪಾಯ ಹಾಕಿದ ನಾಯಕನನ್ನು ನೆನೆಯಲು ವಿಧಾನಸೌಧದಲ್ಲಿ ಪ್ರತಿಮೆ ಅನಾವರಣ ಮಾಡಲಾಗಿದೆ ಎಂದರು ಬಸವರಾಜ ಬೊಮ್ಮಾಯಿ.

ಇದನ್ನೂ ಓದಿ : Kalasipalya Bus Stand: ಬಿಎಂಟಿಸಿಗೆ 1300 ವಿದ್ಯುತ್ ಚಾಲಿತ ಬಸ್ ಸೇರ್ಪಡೆ: ಸಿಎಂ ಬಸವರಾಜ ಬೊಮ್ಮಾಯಿ

Exit mobile version