ಬೆಂಗಳೂರು: ಪರಿಶಿಷ್ಟ ಜಾತಿಯ ಪಟ್ಟಿಯಿಂದ (SC ST Reservation) ಕೆಲವು ಜಾತಿಗಳನ್ನು ತೆಗೆಯಲಾಗುತ್ತಿದೆ ಎಂದು ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ಇದು ಕಾಂಗ್ರೆಸ್‌ನ ಕುತಂತ್ರವೇ ಹೊರತು, ಯಾರನ್ನೂ ತೆಗೆಯುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬುಧವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಕೆಲವು ಸಮುದಾಯಗಳಿಗೆ ಕಾಂಗ್ರೆಸ್ ನವರು ಸುಳ್ಳು ಮಾಹಿತಿ ಕೊಡುತ್ತಿದ್ದಾರೆ. ಬಂಜಾರ, ಭೋವಿ, ಕೊರಚ ಯಾರನ್ನೂ ಕೂಡಾ ಪಟ್ಟಿಯಿಂದ ತೆಗೆಯಲಾಗುವುದಿಲ್ಲ. ಈ ಬಗ್ಗೆ ಫೆಬ್ರವರಿ ತಿಂಗಳಲ್ಲಿ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ. ಇವರೆಲ್ಲಾ ಮಹಾರಾಜರ ಕಾಲದಿಂದಲೂ ಇರುವಂಥ ಸಮುದಾಯಗಳು. ಸಂವಿಧಾನ ಆದ ನಂತರ ಇದ್ದ ಆರು ಸಮುದಾಯಗಳಲ್ಲಿ ಇವೂ ಇದ್ದು, ಇದನ್ನು ತೆಗೆಯುವ ಪ್ರಶ್ನೆಯೇ ಇಲ್ಲ ಎಂದು ಆಧಾರ ಸಮೇತವಾಗಿ ನೀಡಲಾಗಿದೆʼʼ ಎಂದರು.
ಕುಮಾರಸ್ವಾಮಿಗೆ ಆಫರ್ ನೀಡಿದ್ದು ಯಾರು?
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಎರಡೂ ಪಕ್ಷಗಳ ವರಿಷ್ಠರು ಆಫರ್ ನೀಡಿದ್ದಾರೆ ಎಂಬ ಸುದ್ದಿಯ ಬಗ್ಗೆ ಪ್ರತಿಕ್ರಿಯೆ ನೀಡಿ, ಅವರಿಗೆ ಯಾರು ಯಾವಾಗ ಏನು ಕೊಡುಗೆ ನೀಡುತ್ತಾರೆ, ಅವರು ಏನು ಸ್ವೀಕಾರ ಮಾಡುತ್ತಾರೆ ಎಂದು ಅವರಿಗೇ ಗೊತ್ತು ಎಂದರು. ʻʻನಾವು ಬೇರೆ ಪಕ್ಷಗಳ ರೀತಿ ಸುಳ್ಳು ಅಂಕಿ ಸಂಖ್ಯೆಗಳನ್ನು ಹೇಳುವುದಿಲ್ಲ. ನಮಗೆ ಎಲ್ಲಾ ಸಮೀಕ್ಷೆಗಳ ವರದಿ ಬಂದಿದ್ದು, ನಾವು ಬೇರೆ ಪಕ್ಷಗಳಿಗಿಂತ ಮುಂದಿದ್ದೇವೆ ಎಂದರು. ಇದು ಪಕ್ಷದ ಆಂತರಿಕ ವಿಚಾರವಾಗಿದ್ದು, ಬಹಿರಂಗಪಡಿಸಲು ಆಗುವುದಿಲ್ಲʼʼ ಎಂದರು.
ಸ್ವತಂತ್ರ ಮತ್ತು ನ್ಯಾಯೋಚಿತ ಚುನಾವಣೆಗೆ ಸಹಕಾರ
ಕಳೆದ ಬಾರಿ 2018ರ ಮಾರ್ಚ್ 27ರಂದು ಚುನಾವಣೆ ಘೋಷಣೆಯಾಗಿತ್ತು. 27ರ ನಂತರ ಯಾವ ದಿನವಾದರೂ ಚುನಾವಣಾ ದಿನಾಂಕ ಘೋಷಣೆಯಾಗುವ ನಿರೀಕ್ಷೆಯಿತ್ತು. ಇದೀಗ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಕೂಡ ಜಾರಿಯಾಗಿದೆ., ಎಲ್ಲಾ ಪಕ್ಷಗಳೂ ನೀತಿ ಸಂಹಿತೆಯ ಪ್ರಕಾರ ನಡೆದುಕೊಳ್ಳಬೇಕಾಗುತ್ತದೆ. ಸ್ವತಂತ್ರ ಮತ್ತು ನ್ಯಾಯೋಚಿತ ಚುನಾವಣೆಗೆ ಎಲ್ಲರೂ ಸಹಕರಿಸಬೇಕೆಂದು ವಿನಂತಿ ಮಾಡಿದರು.
ಒಂದೂವರೆ ವರ್ಷದಲ್ಲಿ ಇಡೀ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ 5-6 ಬಾರಿ ಭೇಟಿ ನೀಡಿದ್ದು, ಕಳೆದ ಮೂರು ತಿಂಗಳಲ್ಲಿ ಪ್ರವಾಸ ಮಾಡದ ಜಿಲ್ಲೆಯೇ ಇಲ್ಲ. ನಮಗೆ ಸಂಪೂರ್ಣ ಹಾಗೂ ಸ್ಪಷ್ಟ ಬಹುಮತ ಬರುವ ವಿಶ್ವಾಸವಿದೆ. ಮತ್ತೊಮ್ಮೆ 2023 ರಲ್ಲಿ ಬಿಜೆಪಿ ಸರ್ಕಾರ ಸ್ಥಾಪನೆಯಾಗಲಿದೆ ಎಂದು ಸಿಎಂ ತಿಳಿಸಿದರು.
ಏಪ್ರಿಲ್ 9ಕ್ಕೆ ಪ್ರಧಾನಿಗಳ ಭೇಟಿ
ಚುನಾವಣಾ ಪ್ರಚಾರಕ್ಕೆ ಕೇಂದ್ರದ ನಾಯಕರು ಬರಲಿದ್ದಾರೆ. ಈ ಬಗ್ಗೆ ವೇಳಾಪಟ್ಟಿ ಸಿದ್ಧವಾಗುತ್ತಿದೆ. ಏಪ್ರಿಲ್ 9ರಂದು ಹುಲಿ ಕಾರ್ಯಕ್ರಮಕ್ಕೆ ಪ್ರಧಾನಿಗಳು ಮೈಸೂರಿಗೆ ಬರುವ ಕಾರ್ಯಕ್ರಮ ಮೊದಲೇ ನಿಗದಿಯಾಗಿತ್ತು. ಸರ್ಕಾರದ ಪೂರ್ವನಿಗದಿತ ಕಾರ್ಯಕ್ರಮ ಎಂದರು.
ಗರಿಷ್ಠ ಜನರನ್ನು ತಲುಪುವ ಪ್ರಚಾರ
ಈ ಬಾರಿಯ ಪ್ರಚಾರ ಗರಿಷ್ಠ ಜನರನ್ನು ತಲುಪುವಂತೆ ಡಿಜಿಟಟಲ್ ವ್ಯವಸ್ಥೆ ಮಾಡಲಾಗುತ್ತಿದೆ. ನಾಯಕರ ವ್ಯಾಪಕ ಪ್ರಚಾರ, ಪ್ರವಾಸ, ಪ್ರತಿ ಮತದಾರರಿಗೆ ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಕೇಂದ್ರ ರಾಜ್ಯ ಸರ್ಕಾರಗಳ ಯೋಜನೆಗಳನ್ನು ತಿಳಿಸಿದ್ದಾರೆ. ಪ್ರಚಾರ ವಿವಿಧ ಹಂತಗಳಲ್ಲಿರುತ್ತದೆ. ನಾಯಕರು ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ, ರಾಷ್ಟ್ರೀಯ ನಾಯಕರು ರಾಜ್ಯ ಮಟ್ಟದಲ್ಲಿ ಪ್ರಚಾರ ಮಾಡಲಿದ್ದು, ವ್ಯಾಪಕ ಪ್ರಚಾರ ಆಗಲಿದೆ ಎಂದರು.
ಪ್ರಧಾನ ಮಂತ್ರಿಗಳ ಕಾರ್ಯಕ್ರಮದ ಜೊತೆಗೆ ಅಮಿತ್ ಶಾ, ಜೆ.ಪಿ.ನಡ್ಡಾ ಅವರ ಪ್ರವಾಸ ಕಾರ್ಯಕ್ರಮವನ್ನು ಸಮಿತಿಗಳಲ್ಲಿ ನಿರ್ಧರಿಸಿ ಕರ್ನಾಟಕ ವ್ಯಾಪ್ತಿಯಲ್ಲಿ ಪ್ರಚಾರ ಮಾಡುವಾಗ ಯೋಜಿತವಾಗಿ ಮಾಡಲಾಗುವುದು. ಕಳೆದ ಬಾರಿ ಬಂದಂತೆಯೇ ಈ ಬಾರಿಯೂ ಬರಲಿದ್ದಾರೆ ಎಂದರು.
ಇದನ್ನೂ ಓದಿ : Karnataka Elections 2023 : ಬೊಮ್ಮಾಯಿ Vs ಡಿಕೆಶಿ; ನೀವು ಸಿಎಂ ಆಗಿದ್ದು ಹೇಗೆ ಎಂದು ಕೇಳಿದ DKS