Site icon Vistara News

Bommai College Days | ಲಾಸ್ಟ್‌ ಬೆಂಚ್‌ ಜೀವನವೇ ಬೆಸ್ಟ್‌! ಕಾಲೇಜ್‌ ಕ್ಯಾಂಪಸ್‌ ಮಿಸ್‌ ಮಾಡ್ಕೋತೀನಿ ಎಂದ ಸಿಎಂ ಬೊಮ್ಮಾಯಿ

CM Basavaraja bommai

ಬೆಂಗಳೂರು: “ರಾಜಕೀಯ ವ್ಯಕ್ತಿಯಾಗಿ ಕಷ್ಟದಲ್ಲಿದ್ದವರಿಗೆ ಸ್ಪಂದಿಸುವ ಕೆಲಸ ಮಾಡಿದ್ದೇನೆ. ರಾಜಕೀಯ ಸಾಕಷ್ಟು ಸವಾಲಿನ ವೃತ್ತಿಯಾದರೂ ತೃಪ್ತಿ ತಂದಿದೆ”- ಕಾಮನ್ ಮ್ಯಾನ್ ಸಿಎಂ ಎಂದೇ ಗುರುತಿಸಲ್ಪಡುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನದಾಳದ ಮಾತುಗಳಿವು. ಜೆ.ಪಿ ನಗರದ ಆರ್ ವಿ ಡೆಂಟಲ್ ಕಾಲೇಜಿನ ಆಡಿಟೋರಿಯಂನಲ್ಲಿ ಬುಧವಾರ ನಡೆದ ಯುವ ಸಂಭಾಷಣೆ- ಸಂವಾದ (Bommai College Days) ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಮುಖ್ಯಮಂತ್ರಿಗಳು ತಮ್ಮ ವಿದ್ಯಾರ್ಥಿ ಜೀವನ, ಜೀವನಾನುಭವ, ರಾಜಕೀಯ ವೃತ್ತಿ ಕುರಿತು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದರಲ್ಲದೆ ವಿದ್ಯಾರ್ಥಿಗಳಿಗೆ ಸಲಹೆಯನ್ನೂ ನೀಡಿದರು.

ʻನಿಮ್ಮ ಜೀವನದಲ್ಲಿ ಯಾವ ವೃತ್ತಿ, ಯಾವ ಹಂತ ನಿಮಗೆ ಸಾಕಷ್ಟು ಖುಷಿ ನೀಡಿದೆ?[ ಎಂಬ ಕೂ ಸಂಸ್ಥಾಪಕ ಅಪ್ರಮೇಯ ಅವರ ಪ್ರಶ್ನೆಗೆ ಮುಖ್ಯಮಂತ್ರಿಗಳು ಉತ್ತರಿಸುತ್ತಾ, ” ವಿದ್ಯಾರ್ಥಿ ಜೀವನವೇ ಅತ್ಯುತ್ತಮ. ನಾನು ವಿದ್ಯಾರ್ಥಿಯಾದ ದಿನಗಳನ್ನು ಸಾಕಷ್ಟು ನೆನೆಯುತ್ತೇನೆ. ಕೊನೆ ಬೆಂಚ್‌ನಲ್ಲಿ ಕೂರುವ ವಿದ್ಯಾರ್ಥಿಯ ದಿನಗಳು ಅತ್ಯಂತ ಖುಷಿ ನೀಡಿವೆ. ಒಬ್ಬ ಬ್ಯುಸಿನೆಸ್ ಮ್ಯಾನ್ ಆಗಿ ಖುಷಿ ನೀಡಿದರೆ, ಇನ್ನೊಬ್ಬರಿಗೆ ಉದ್ಯೋಗ ದೊರಕಿಸುವುದು ಮತ್ತೊಂದು ರೀತಿಯ ತೃಪ್ತಿಯ ಭಾವ ನೀಡುತ್ತದೆ” ಎಂದರು.

ಕೂ ಸಂಸ್ಥಾಪಕ ಅಪ್ರಮೇಯ ಅವರ ಜತೆ ಸಂವಾದ ನಡೆಸುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರು

ಭಾರತದ ಬೆಳವಣಿಗೆಯ ಎಂಜಿನ್ ಕರ್ನಾಟಕ
ʻʻಈ ದೇಶದ ಸಾಧ್ಯತೆಗಳು, ಅವಕಾಶಗಳು ಬೇರೆಯಲ್ಲೂ ಇಲ್ಲ. ನಮ್ಮ ಕರ್ತವ್ಯ ಕಾಲವಿದು ಎಂದು ಪ್ರಧಾನಮಂತ್ರಿಗಳು ಹೇಳಿದ್ದಾರೆ. ನಾವು ವಿಜ್ಞಾನ,ತಂತ್ರಜ್ಞಾನದಲ್ಲಿ ಮುಂದಿದ್ದೇವೆ. ಈ ಹಿಂದೆ ಭೂಮಿ ಇದ್ದವರು ಜಗತ್ತನ್ನು ಆಳುತ್ತಿದ್ದರು.
ಇಂದು ಜ್ಞಾನ ಇದ್ದವರು ಜಗತ್ತನ್ನು ಆಳುತ್ತಿದ್ದಾರೆ. ನಾವು ಜ್ಞಾನದ ಶತಮಾನದಲ್ಲಿದ್ದೇವೆ. ಕರ್ನಾಟಕ ಮತ್ತು ಭಾರತಕ್ಕೆ ದೊಡ್ಡ ಭವಿಷ್ಯವಿದೆʼʼ ಎಂದು ಮುಖ್ಯಮಂತ್ರಿಗಳು ಹೇಳಿದರು.

ಮೋದಿಯವರ ಜತೆಗಿನ ಒಡನಾಟ ಸ್ಮರಣೆ
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಒಡನಾಟದ ಬಗ್ಗೆ ಮಾತನಾಡಿದ ಅವರು, ʻʻಅವರ ಜೊತೆ ಯಾರೇ ಕೆಲವು ನಿಮಿಷ ಕಳೆದರೆ ಸಾಕು ಅವರ ಅಭಿಮಾನಿಯಾಗುತ್ತಾರೆ. ಮೋದಿಯವರಿಗೆ ಹೊಸತನ್ನು ಕಲಿಯುವ ಹಂಬಲವಿದೆ. ಎಲ್ಲವನ್ನೂ ಸಕಾರಾತ್ಮಕವಾಗಿಯೇ ನೋಡುವ ವ್ಯಕ್ತಿ. ಪರಿಪೂರ್ಣ ವ್ಯಕ್ತಿತ್ವವಿರುವ ವ್ಯಕ್ತಿ ಎಂದರೆ ಅದು ಮೋದಿ. ಅವರ ನೇತೃತ್ವದದಲ್ಲಿ ಭಾರತಕ್ಕೆ ಒಂದು ಸ್ಪಷ್ಟ ಗುರಿ ಸಿಕ್ಕಿದೆʼʼ ಎಂದರು.

ಕೆ.ಎಲ್.ಇ ಕಾಲೇಜು ದಿನಗಳ ಸ್ಮರಣೆ
ಕೆ.ಎಲ್.ಇ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದ ಕಾಲವನ್ನು ಮೆಲುಕು ಹಾಕಬಹುದೇ ಎಂಬ ವಿದ್ಯಾರ್ಥಿಯೊಬ್ಬನ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, “ನಾನು 40 ವರ್ಷದ ಹಿಂದಿನ ವಿದ್ಯಾರ್ಥಿ. ಈಗಲೂ ಕೂಡ ಕಾಲೇಜು ಕ್ಯಾಂಪಸ್ ಮಿಸ್ ಮಾಡಿಕೊಳ್ಳುತ್ತೇನೆ. ನಾವು ಓದುವಾಗ ಮೂರು ಶಾಖೆಗಳು ಮಾತ್ರವಿತ್ತು. ಉತ್ತಮ ಶಿಕ್ಷಕರು,ಇಷ್ಟದ ಶಿಕ್ಷಕರು, ಶಿಸ್ತಿನ ಶಿಕ್ಷಕರು ಕಾಲೇಜಿನಲ್ಲಿದ್ದರುʼ ಎಂದರು.

ಭಾರತ ಪ್ರವಾಸದ ಅನುಭವಗಳು
ಕಾಲೇಜಿನ ದಿನಗಳಲ್ಲಿ ಕೈಗೊಂಡ ಭಾರತ ಪ್ರವಾಸದ ಅನುಭವಗಳನ್ನು ಮೆಲುಕು ಹಾಕಿದ ಅವರು, ಪ್ರಾಂಶುಪಾಲರ ಅನುಮತಿಗಿಂತ ಮೊದಲೇ ಪ್ರವಾಸವನ್ನು ಆಯೋಜಿಸಿದ್ದೆವು. ಕಾಲೇಜಿನಲ್ಲಿ ಕ್ಯಾಂಟೀನ್ ನನ್ನ ನೆಚ್ಚಿನ ಸ್ಥಳವಾಗಿತ್ತು ಎಂದು ಸ್ಮರಿಸಿದರು.

ವಿದ್ಯಾರ್ಥಿಗಳು ಸಮಯ ಪಾಲಿಸಬೇಕು: ಸಿಎಂ ಸಲಹೆ
ವಿದ್ಯಾರ್ಥಿಗಳಿಗೆ, ಯುವಕರಿಗೆ ಯಾವ ಸಲಹೆ ನೀಡುವಿರಿ ಎಂಬ ಪ್ರಶ್ನೆಗೆ ಉತ್ತರಿಸಿ, ಯುವಕರು ಸಮಯ ಎಲ್ಲಿ ವ್ಯರ್ಥ ಮಾಡುತ್ತಿದ್ದೀರಿ ಎಂದು ಯೋಚಿಸಬೇಕು. ವಿದ್ಯಾರ್ಥಿಗಳು ಅಧ್ಯಯನ ಮಾಡದೇ ಟಿವಿ, ಆಟಕ್ಕೆ ಸಮಯ ಕೊಟ್ಟು ಒತ್ತಡ ಹೆಚ್ಚಾಗುತ್ತದೆ. ಸಮಯ ನಿರ್ವಹಣೆಯಿಂದ ಒತ್ತಡ ಕಡಿಮೆಯಾಗುತ್ತದೆ. ಸರಿಯಾಗಿ‌ ಸಮಯಕ್ಕೆ ನಿದ್ರೆ ಮಾಡಬೇಕು,ಬೆಳಗ್ಗೆ ಹೊತ್ತು ವ್ಯಾಯಾಮ ಮಾಡಬೇಕು ಎಂದರು.

ಅವಶ್ಯಕತೆ ಇದ್ದಷ್ಟು ಮಾತ್ರ ಸಾಮಾಜಿಕ ಜಾಲತಾಣ ಬಳಸಿ
ಸಾಮಾಜಿಕ ಜಾಲತಾಣವನ್ನು ಅವಶ್ಯಕತೆ ಇದ್ದಷ್ಟು ಮಾತ್ರ ಬಳಸಿ. ನೀವು ನಿಮ್ಮದೇ ಆದ ಯೋಚನಾಶಕ್ತಿಯನ್ನು ಬಳಸಿಕೊಳ್ಳಬೇಕು ಎಂದ ಮುಖ್ಯಮಂತ್ರಿಗಳು, ನಿಮ್ಮ ಮೇಲೆ ನಿಮಗೆ ಆತ್ಮವಿಶ್ವಾಸ, ನಂಬಿಕೆ ಇರಬೇಕು. ಆಗ ಖಂಡಿತ ಯಶಸ್ಸು ನಿಮ್ಮದಾಗಲಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಯಶಸ್ಸು ವೈಯಕ್ತಿಕ ಎಂದರು ಸಿಎಂ
ನಿಮ್ಮ ಪ್ರಕಾರ ಯಶಸ್ಸು ಅಂದ್ರೆ ಏನು, ನಿಮಗೆ ಸ್ಫೂರ್ತಿ ಯಾರು ಎಂದು ವಿದ್ಯಾರ್ಥಿಯೊಬ್ಬನ ಪ್ರಶ್ನೆಗೆ ಉತ್ತರಿಸಿ, ಯಶಸ್ಸು ಎನ್ನುವುದು ಪ್ರತಿಯೊಬ್ಬರಿಗೂ ವೈಯಕ್ತಿಕ. ಅಂದುಕೊಂಡಿದ್ದನ್ನು ಸಾಧಿಸಿದರೆ ಅದು ಯಶಸ್ಸು. ಆದರೆ ಸಾಧನೆ ಅದಕ್ಕಿಂತ ದೊಡ್ಡದು. ಯಶಸ್ಸು ವೈಯಕ್ತಿಕವಾದರೆ, ಸಾಧನೆ ಸಮಾಜಕ್ಕೆ ಪೂರಕ ಎಂದರು.

ಬೋರ್ಡ್ ಪರೀಕ್ಷೆಗಳನ್ನು ಮತ್ತಷ್ಟು ಡಿಜಿಟಲೀಕರಿಸಿ: ವಿದ್ಯಾರ್ಥಿನಿ ಮನವಿ
ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಇನ್ನೂ ಕೂಡ ಡಿಜಿಟಲೀಕರಣ ತಲುಪಿಲ್ಲ. ಅದಾಗಲು ಇನ್ನೂ ಸಮಯ ಬೇಕಿದೆ ಎಂದು ಸಿಎಂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಟ್ಯಾಬ್, ಮೊಬೈಲ್ ಅನೇಕ ವ್ಯವಸ್ಥೆಗಳ ಮಕ್ಕಳ ಬಳಿ ಇಲ್ಲ. ಮುಂದಿನ ದಿನಗಳಲ್ಲಿ ಡಿಜಿಟಲ್ ಶಿಕ್ಷಣ ಹೆಚ್ಚಾಗಲಿದೆ. ಸರ್ಕಾರದಿಂದಲೇ ಶಿಕ್ಷಣ ಕಲಿಸುವ ತಂತ್ರಾಂಶ ಸಿದ್ಧಪಡಿಸಲಾಗುತ್ತಿದೆ ಎಂದರು. ಬೈಜೂಸ್ ಮಾದರಿಯ ತಂತ್ರಾಂಶ ಸಿದ್ಧಪಡಿಸಲಾಗುವುದು ಎಂದರಲ್ಲದೆ, ವ್ಯವಸ್ಥೆ ಡಿಜಿಟಲೈಸೇಶನ್‌ಗೆ ಸಂಪೂರ್ಣ ಸಿದ್ದವಾದಾಗ ಸರ್ಕಾರ ಆ ನಿಟ್ಟಿನಲ್ಲಿ ಕೂಡ ಕ್ರಮ ತೆಗೆದುಕೊಳ್ಳುತ್ತದೆ ಎಂದರು.

ಸ್ವಾಮಿ ವಿವೇಕಾನಂದ ನನ್ನ ಸ್ಫೂರ್ತಿ
ಸಾಧಕನಿಗೆ ಸಾವು ಅಂತ್ಯವಲ್ಲ ಎಂದು ವಿವೇಕಾನಂದ ಹೇಳಿದ್ದಾರೆ ಸಾವಿನ ನಂತರವೂ ಸಾಧನೆ ಬದುಕುತ್ತದೆ. ನೀವೂ ಕೂಡ ಸಾಧಕರಾಗಬೇಕು ಎಂದು ಮುಖ್ಯ ಮಂತ್ರಿಗಳು ಸಲಹೆ ನೀಡಿದರು. ಸಂವಾದ ಕಾರ್ಯಕ್ರಮದಲ್ಲಿ , ಕ್ರೀಡಾಪಟು ಪಂಕಜ್ ಅಡ್ವಾಣಿ, ನಟಿ ಪ್ರಣೀತಾ, ಗಾಯಕ ಚಂದನ್ ಶೆಟ್ಟಿ, ಬಿಜೆಪಿ ಯುವ ಮೋರ್ಚಾದ ಅನಿಲ್ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಂವಾದದಲ್ಲಿ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಇದನ್ನೂ ಓದಿ | National Youth Festival | ರಾಜ್ಯ ಯುವನೀತಿಗೆ ಸ್ವಾಮಿ ವಿವೇಕಾನಂದರ ಸಂದೇಶವೇ ಪ್ರೇರಣೆ: ಸಿಎಂ ಬೊಮ್ಮಾಯಿ

Exit mobile version