ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತ್ತು ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ನಡುವಿನ ಪ್ರತಿಷ್ಠಾ ಸಮರಕ್ಕೆ ಕಾರಣವಾದ ರಾಜಹಂಸಗಡ ಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಪ್ರತಿಮೆ ಲೋಕಾರ್ಪಣೆ (Shivaji statue) ಕಾರ್ಯಕ್ರಮ ಗುರುವಾರ ಅದ್ಧೂರಿಯಾಗಿ ನಡೆಯಿತು. ಬೆಳಗಾವಿ ಗ್ರಾಮೀಣ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರೇ ಗೈರುಹಾಜರಾಗಿದ್ದರು.
ಮರಾಠಾ ಮತಗಳ ಮೇಲೆ ಕಣ್ಣಿಟ್ಟಿರುವ ರಾಜಕಾರಣಿಗಳ ನಡುವೆ ಶಿವಾಜಿ ಪ್ರತಿಮೆ ಸ್ಥಾಪನೆಯ ಕ್ರೆಡಿಟ್ ವಾರ್ ತುಂಬಾ ಜೋರಾಗಿ ನಡೆದಿತ್ತು. ತನ್ನ ಕ್ಷೇತ್ರದಲ್ಲಿ ಶಿವಾಜಿ ಪ್ರತಿಮೆ ಸ್ಥಾಪನೆ ಮಾಡಿಸಿದ್ದು ನಾನು ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೊಂಡರೆ, ಅವರ ವಿರುದ್ಧ ಸೋಲು ಅನುಭವಿಸಿದ್ದ ಬಿಜೆಪಿಯ ಸಂಜಯ್ ಪಾಟೀಲ್ ಅವರು ತಾನು ಅನುದಾನ ಕೊಡಿಸಿದ್ದು ಎಂದು ಹೇಳಿಕೊಂಡಿದ್ದರು. ಇದು ಕೊನೆಗೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಅವರ ಬದ್ಧ ರಾಜಕೀಯ ವಿರೋಧಿ ರಮೇಶ್ ಜಾರಕಿಹೊಳಿ ಅವರ ನಡುವಿನ ಜಟಾಪಟಿಯಾಗಿ ಪರಿವರ್ತನೆಯಾಗಿತ್ತು.
ಕಾಂಗ್ರೆಸ್ ಸರ್ಕಾರ ಅನುದಾನ ನೀಡಿದಾಗ ಶಿವಾಜಿ ಮೂರ್ತಿ ಆಗಿದೆ ಅಂತ ಲಕ್ಷ್ಮೀ ಹೆಬ್ಬಾಳ್ಕರ್ ವಾದ ಮಾಡಿದ್ದರೆ, ಬಿಜೆಪಿ ಸರ್ಕಾರ ಅನುದಾನ ನೀಡಿದಾಗ ಶಿವಾಜಿ ಮೂರ್ತಿ ಆಗಿದೆ ಅಂತ ಸಂಜಯ್ ವಾದ ಮಂಡಿಸಿದ್ದರು. ಈ ನಡುವೆ, ಮಾರ್ಚ್ 5ರಂದು ಪ್ರತಿಮೆ ಲೋಕಾರ್ಪಣೆ ಮಾಡುವುದಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಹಲವು ನಾಯಕರಿಗೆ ಆಹ್ವಾನ ನೀಡಿದ್ದರು.
ಇದನ್ನು ವಿರೋಧಿಸಿದ್ದ ರಮೇಶ್ ಜಾರಕಿಹೊಳಿ ಅವರು ಮಾರ್ಚ್ 2ರಂದು ಶಿವಾಜಿ ಪ್ರತಿಮೆ ಲೋಕಾರ್ಪಣೆಗೆ ಅಧಿಕೃತ ಕಾರ್ಯಕ್ರಮ ಆಯೋಜಿಸಿದ್ದರು. ಇದಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಆಗಮಿಸುತ್ತಾರಾ ಎಂಬ ಕುತೂಹಲವಿತ್ತು. ಅಂತಿಮವಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಗೈರುಹಾಜರಾಗಿದ್ದಾರೆ.
ಪ್ರತಿಮೆ ಲೋಕಾರ್ಪಣೆ ಮಾಡಿದ ಮುಖ್ಯಮಂತ್ರಿ
3.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ 50 ಅಡಿ ಎತ್ತರದ ಶಿವಾಜಿ ಪ್ರತಿಮೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿದರು. ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಲೋಕಾರ್ಪಣೆ ಮಾಡಿದ ಸಿಎಂ ಅವರು ಪುಷ್ಪ ನಮನವನ್ನೂ ಸಲ್ಲಿಸಿದರು.
ಫ್ಲೆಕ್ಸ್ ರಾಜಕೀಯ
ಈ ನಡುವೆ, ರಾಜಹಂಸಗಡ ಕೋಟೆಗೆ ತೆರಳುವ ಮಾರ್ಗದಲ್ಲಿ ದೊಡ್ಡ ಮಟ್ಟದಲ್ಲಿ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಪೈಪೋಟಿಗೆ ಬಿದ್ದ ರೀತಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್, ಸಂಜಯ್ ಪಾಟೀಲ್, ರಮೇಶ್ ಜಾರಕಿಹೊಳಿ ಬೆಂಬಲಿಗರು ಫ್ಲೆಕ್ಸ್ ಹಾಕಿದ್ದರು. ಈ ನಡುವೆ, ಮಾರ್ಗಮಧ್ಯೆ ಇರುವ ಲಕ್ಷ್ಮೀ ಹೆಬ್ಬಾಳ್ಕರ್ ಭಾವಚಿತ್ರದ ಬ್ಯಾನರ್‌ಗಳನ್ನು ಕಿಡಿಗೇಡಿಗಳು ಹರಿದು ಹಾಕಿದ್ದಾರೆ.
ಇದನ್ನೂ ಓದಿ : Shivaji Statue: ಹೆಬ್ಬಾಳ್ಕರ್‌ಗೆ ಜಾರಕಿಹೊಳಿ ಸೆಡ್ಡು; ಮಾ. 2ರಂದೇ ಶಿವಾಜಿ ಪ್ರತಿಮೆ ಲೋಕಾರ್ಪಣೆ ಮಾಡುವೆನೆಂದ ಸಾಹುಕಾರ್