ಬಾಗಲಕೋಟೆ: ಯುವಕರು, ಮಹಿಳೆಯರು ರಾಜ್ಯ ಮುನ್ನಡೆಸುವ ಎರಡು ಎಂಜಿನ್ ಇದ್ದಂತೆ. ಇವರಿಗೆ ಅನುಕೂಲಕರವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಅನೇಕ ಯೋಜನೆಗಳನ್ನು ಮಾಡಿದ್ದೇವೆ. ನೇಕಾರ ಸಮುದಾಯ ಅಭಿವೃದ್ಧಿಗಾಗಿ ನಿಗಮ ಸ್ಥಾಪನೆ ಮಾಡಲಾಗುತ್ತದೆ. ಜವಳಿ ಕ್ಷೇತ್ರ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ರಾಜ್ಯದ 25 ಸ್ಥಳಗಳಲ್ಲಿ ಮಿನಿ ಜವಳಿ ಪಾರ್ಕ್ ಘೋಷಣೆ ಮಾಡಿದ್ದು, ಅದರಲ್ಲಿ ತೇರದಾಳ ಕ್ಷೇತ್ರ ಇರುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಲ್ಲೆಯ ಬನಹಟ್ಟಿ ಪಟ್ಟಣದ ಎಸ್‌ಆರ್‌ಎ ಕಾಲೇಜು ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ವಾತಂತ್ರ್ಯ ನಂತರ ಯಾವುದಾದರೂ ಜಿಲ್ಲೆಗಳಿಗೆ ಅನ್ಯಾಯವಾಗಿದ್ದರೆ ಅವು ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆ ಎನ್ನಬಹುದು. ಐದು ನದಿಗಳು ಹರಿಯುತ್ತಿವೆ. ಆದರೆ, ನಮ್ಮ ಪಾಲಿನ ನೀರು ಬಳಕೆ ಮಾಡಿಕೊಳ್ಳಲು ಆಗಲಿಲ್ಲ. ಕೃಷ್ಣಾ ನ್ಯಾಯಾಧಿಕರಣ ತೀರ್ಪು ಬಂದಿದೆ. ಈ ಭಾಗದ ಸಮಗ್ರ ಅಭಿವೃದ್ಧಿ ಆಗಬೇಕಿದೆ. ಈ ಭಾಗದ ಅನೇಕ ಏತ ನೀರಾವರಿ ಯೋಜನೆಗಳನ್ನು ಮಾಡುವ ಮೂಲಕ ನೀರಾವರಿಗೆ ಕಾಯಕಲ್ಪ ಕೊಡುತ್ತಿದ್ದೇವೆ ಎಂದು ಹೇಳಿದರು.
ನೀವು ಅಧಿಕಾರಲ್ಲಿದ್ದಾಗ ಏನು ಮಾಡಿದ್ದೀರಿ, ನಾವು ಮಾಡಿದ ಅಭಿವೃದ್ಧಿ ಕಾರ್ಯದಲ್ಲಿ ಬರಿ ಮೊಸರಲ್ಲಿ ಕಲ್ಲು ಹುಡುಕುತ್ತೀರಿ. ರೈತರಿಗೆ ವಿಮೆಯಿರಲಿಲ್ಲ. ನಾವು ಬೆಳೆಗಳಿಗೆ ಆವರ್ತ ನಿಧಿ ಮಾಡಿದ್ದೇವೆ. ನೀರಾವರಿಗೆ ಹೆಚ್ಚು ಆದ್ಯತೆ ಕೊಟ್ಟಿದ್ದೇವೆ. ನೇಕಾರ್ ಸಮ್ಮಾನ್ ನಿಧಿ ಪ್ರಮಾಣ ಹೆಚ್ಚಳ ಮಾಡಿದ್ದೇವೆ. ಆದರೆ, ಕಾಂಗ್ರೆಸ್ ಸರ್ಕಾರ ಕೃಷ್ಣಾ ಮೇಲ್ದಂಡೆ ಯೋಜನೆ ಮುಳುಗಡೆ ಪ್ರದೇಶಕ್ಕೆ 10 ವರ್ಷ ಪರಿಹಾರ ನಿಗದಿ ಮಾಡಲಿಲ್ಲ. ಉನ್ನತ ಮಟ್ಟದ ಸಭೆ ಕರೆದು ಈ ಬಗ್ಗೆ ಕ್ರಮ ಕೈಗೊಳ್ಳಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಇದನ್ನೂ ಓದಿ | PM Modi: ದೆಹಲಿ ಕನ್ನಡಿಗರಿಗೆ ಮೋಡಿ ಮಾಡಿದ ಮೋದಿ; ಕನ್ನಡದ ಅಸ್ಮಿತೆ, ಸಂಸ್ಕೃತಿ ಹೊಗಳಿದ ನಮೋ; ಹೇಗಿತ್ತು ಪ್ರಧಾನಿ ಮತಬೇಟೆ?
ನಮ್ಮ ಸರ್ಕಾರ ಕೃಷ್ಣಾ ಮೇಲ್ದಂಡೆ ಯೋಜನೆ ಮುಳುಗಡೆ ಪ್ರದೇಶಕ್ಕೆ ಪರಿಹಾರ ನಿಗದಿಪಡಿಸಿ ಒಳ್ಳೆಯ ಕಾರ್ಯ ಮಾಡಿದ್ದೇವೆ. ರೈತರಿಗೆ ಭೂಮಿಗೆ ಪರಿಹಾರ ನೀಡಿ ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಯೋಜನೆ ಹಾಗೂ ಆಲಮಟ್ಟಿ ಜಲಾಶಯ ಎತ್ತರ 524 ಅಡಿಗೆ ಏರಿಸುವ ಕೆಲಸ ಮಾಡಲಾಗುವುದು ಎಂದ ಅವರು, ಸಿದ್ದಣ್ಣ (ಶಾಸಕ ಸಿದ್ದು ಸವದಿ) ದಣಿವರಿಯದೆ ಕೆಲಸ ಮಾಡುತ್ತಾರೆ. ವಾರಕ್ಕೊಮ್ಮೆ ಅಥವಾ ಎರಡು ದಿನ ಬೆಂಗಳೂರಿಗೆ ಬಂದು ಎಲ್ಲ ಕೆಲಸ ಮಾಡಿಕೊಳ್ಳುತ್ತಾರೆ. ಅವನ ಕಾಟಕ್ಕೇನೆ ಬೇಗ ಕೆಲಸ ಮಾಡಿ ಕಳುಹಿಸುತ್ತೇನೆ. ಆದರೆ ಆತ ಸ್ವಂತಕ್ಕೆ ಯಾವುದೇ ಕೆಲಸ ಕೇಳಿಲ್ಲ ಎಂದು ಹೇಳಿದರು.
ನನ್ನ ವಿರುದ್ಧ ಯಾರೇ ಸ್ಪರ್ಧೆ ಮಾಡಿದರೂ ಗೆಲ್ಲುತ್ತೇನೆ ಎಂದು ಸಿಎಂ ಬೊಮ್ಮಾಯಿ ಹೇಳಿರುವ ವಿಡಿಯೊ ಇಲ್ಲಿದೆ
ಕಾಂಗ್ರೆಸ್ ಸರ್ಕಾರ ಹೇಗಿತ್ತು ಎಂದರೆ ಈ ಹಿಂದೆ ಒಬ್ಬ ಶ್ರೀಮಂತ ಇದ್ದನಂತೆ. ಏನಾದರೂ ಕೇಳಲು ಹೋದರೆ
ದೇತಾ ಹುಂ (ಕೊಡುತ್ತೇನೆ) ಅಂತಿದ್ದರು. ನಂತರ ಒಂದು ತಿಂಗಳ ಬಳಿಕ ದಿಲಾತಾ ಹುಂ (ಕೊಡಿಸುತ್ತೇನೆ), ಇನ್ನೆರಡು ತಿಂಗಳ ಬಿಟ್ಟು ಹೋದರೆ ದೇನೆವಾಲೊ ಕೊ ದಿಖಾತಾ ಹುಂ (ಕೊಡವವರನ್ನು ತೋರಿಸುತ್ತೇನೆ) ಅಂತಾರೆ. ಇಂತಹ ರಾಜಕಾರಣ ಈಗ ನಡೆಯುತ್ತಿದೆ ಎಂದು ಹೇಳಿದರು.
ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಸಂಸದ ಪಿ.ಸಿ. ಗದ್ದಿಗೌಡರ್, ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ, ಸ್ಥಳೀಯ ಶಾಸಕ ಸಿದ್ದು ಸವದಿ ಭಾಗಿಯಾಗಿದ್ದರು.
ಎಲ್ಲರಿಗೂ ಅವಕಾಶವಿರುವ ನವ ಕರ್ನಾಟಕ ನಿರ್ಮಿಸೋಣ: ಸಿಎಂ ಬೊಮ್ಮಾಯಿ ಕರೆ
ಬಾಗಲಕೋಟೆ(ತೇರದಾಳ): ನವ ಕರ್ನಾಟಕದಲ್ಲಿ ಎಲ್ಲರಿಗೂ ಅವಕಾಶವಿರುವ, ಸಮೃದ್ಧಿ ಇರುವ ನಾಡನ್ನು ನಿರ್ಮಾಣ ಮಾಡೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದರು.
ಶ್ರೀಶೈಲ ಮಲ್ಲಿಕಾರ್ಜುನ ಭ್ರಮರಾಂಬ ದೇವಸ್ಥಾನಕ್ಕೆ ಅಡಿಗಲ್ಲು ಪೂಜೆ ನೆರವೇರಿಸಿ ಬಂಡಿಗಣಿ ಮಠ ಗ್ರಾಮದಲ್ಲಿ ಮಾತನಾಡಿ, ಕಾಯಕ ಹಾಗೂ ಕರ್ತವ್ಯದಲ್ಲಿ ಬಹಳ ವ್ಯತ್ಯಾಸವಿದೆ. ಕರ್ತವ್ಯದಿಂದ ಬಂದ ಉತ್ಪಾದನೆಗಳನ್ನು ದಾಸೋಹ ಮೂಲಕ ನೀಡಿದಾಗ ಅದು ಕಾಯಕ ಆಗುತ್ತದೆ. ಕಾಯಕನಿಷ್ಠೆಯನ್ನು ಪರಮಪೂಜ್ಯರು ದೊಡ್ಡ ಪ್ರಮಾಣದಲ್ಲಿ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಭಕ್ತಿ ಎಂಬುವುದು ಉತ್ಕೃಷ್ಟ ಪ್ರೀತಿ. ಕರಾರುರಹಿತ ಪ್ರೀತಿ ಭಕ್ತರಲ್ಲಿ ಬಂದಾಗ ಭಗವಂತ ಆಶೀರ್ವಾದ ಮಾಡುತ್ತಾನೆ ಎಂದರು.
ಎಲ್ಲ ರಂಗದಲ್ಲಿ ಅಭಿವೃದ್ಧಿ
ಶಾಸಕ ಸಿದ್ದು ಸವದಿಯವರ ನೇತೃತ್ವದಲ್ಲಿ ಈ ಭಾಗ ಹಿಂದೆಂದೂ ಕಾಣದ ಅಭಿವೃದ್ಧಿ ಕಂಡಿದೆ. ಎಲ್ಲ ರಂಗದಲ್ಲಿ ಅಭಿವೃದ್ಧಿಯಾಗುತ್ತಿದೆ. ಎಲ್ಲ ಜನಾಂಗದ ಶ್ರೇಯೋಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಅಭಿವೃದ್ಧಿ ರಿಪೋರ್ಟ್ ಕಾರ್ಡ್‌ನೊಂದಿಗೆ ಚುನಾವಣೆಗೆ ಹೋಗುತ್ತೇವೆ
ಶಿಗ್ಗಾಂವಿಯಲ್ಲಿ ಸಿಎಂ ವಿರುದ್ಧ ಲಿಂಗಾಯತ ಕಾರ್ಡ್ ಬಳಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನನಗೆ ನನ್ನ ಕ್ಷೇತ್ರದ ಜನರ ಮೇಲೆ ವಿಶ್ವಾಸವಿದೆ. ಯಾರು ನಿಂತರೂ ನಾನು ಗೆಲ್ಲುತ್ತೇನೆ ಎಂಬ ಆತ್ಮವಿಶ್ವಾಸ ಇದೆ. ಅಭಿವೃದ್ಧಿ ರಿಪೋರ್ಟ್ ಕಾರ್ಡ್‌ನೊಂದಿಗೆ ಚುನಾವಣೆಗೆ ಹೋಗುತ್ತೇವೆ ಎಂದು ತಿಳಿಸಿದರು.
ರಾಜ್ಯದ ನಾಯಕರು ಜನರಿಗೆ ಮುಖ ತೋರಿಸಲು ಆಗುತ್ತಿಲ್ಲ, ಅದಕ್ಕೆ ಕೇಂದ್ರದ ನಾಯಕರನ್ನು ಕರೆಸುತ್ತಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯಕ್ಕೆ ಕೇಂದ್ರ ಕೊಟ್ಟ ಯೋಜನೆಗಳ ಉದ್ಘಾಟನೆಗೆ ಪ್ರಧಾನಿ ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ ನಾಯಕರಾಗಿದ್ದು, ಅವರ ಜನಪ್ರಿಯತೆ ಹೆಚ್ಚಿದೆ. ಕಾಂಗ್ರೆಸ್ ಪಕ್ಷದಲ್ಲಿ ಜನಪ್ರಿಯ ನಾಯಕರಿಲ್ಲ ಎಂದರೆ ನಾನೇನು ಮಾಡಲಿ ಎಂದು ಟೀಕಿಸಿದರು.