Site icon Vistara News

ಸರ್ಕಾರಿ ನೌಕರರಿಗೆ ದಸರಾ ಗಿಫ್ಟ್‌: ಅಕ್ಟೋಬರ್‌ನಲ್ಲಿ 7ನೇ ವೇತನ ಆಯೋಗ ರಚನೆ ಎಂದ ಸಿಎಂ

State govt employees Award

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ವೇತನ ಮತ್ತಿತರ ಭತ್ಯೆಗಳನ್ನು ಪರಿಷ್ಕರಿಸಲು 2022ರ ಅಕ್ಟೋಬರ್‌ನಲ್ಲಿ ಏಳನೇ ವೇತನ ಆಯೋಗವನ್ನು ರಚಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಮಂಗಳವಾರ ಘೋಷಿಸಿದರು.

ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆಯೋಜಿಸಿದ್ದ ಮೊದಲ ʼರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನʼ ಸಮಾರಂಭದಲ್ಲಿ ಮಾತನಾಡಿದರು.

ಸರ್ಕಾರಿ ನೌಕರರು, ವಿಶೇಷವಾಗಿ ಎ ಮತ್ತು ಬಿ ವೃಂದದ ಗುಂಪಿನ ನೌಕರರು, ಪುಣ್ಯಕೋಟಿ ಯೋಜನೆಯಡಿ 11,000 ರೂಪಾಯಿ ನೀಡಿ, ಗೋವುಗಳನ್ನು ದತ್ತು ಪಡೆದು, ಗೋ ಸಂರಕ್ಷಣೆ ಮಾಡುವಂತೆ ಮನವಿ ಮಾಡಿದರು.

ಕಾರ್ಯಾಂಗವು ಸರ್ಕಾರದ ಪ್ರಮುಖವಾದ ಒಂದು ಭಾಗ ಮತ್ತು ಅಂಗ. ಬೆಳಗ್ಗೆಯಿಂದ ಸಂಜೆಯವರೆಗೆ ಮಾಡುವ ಕೆಲಸ ಕರ್ತವ್ಯ ಎನಿಸುತ್ತದೆ. ಬದುಕಿನಲ್ಲಿ ಸೇವೆ ಮಾಡಿ ಸಂತೃಪ್ತಿ ಪಡೆಯುವುದು ಕಾಯಕ. ಸರ್ಕಾರಕ್ಕೆ ತೆರಿಗೆ ಪಾವತಿಸುವ ಪ್ರಜೆಗಳೇ ನಮ್ಮ ಮಾಲೀಕರು. ಆದಕಾರಣ, ಕಾಲಕ್ಕೆ ತಕ್ಕಂತೆ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಪ್ರಜೆಗಳ ನೋವು ನಲಿವುಗಳಿಗೆ ಸ್ಪಂದಿಸಿ ಎಂದರು.

ರಾಜ್ಯ ಸರ್ಕಾರದ ವತಿಯಿಂದ ಪ್ರಪ್ರಥಮ ಬಾರಿಗೆ ಆಯೋಜಿಸಿದ್ದ ಸರ್ಕಾರಿ ನೌಕರರ ದಿನಾಚರಣೆಯ ಸುಸಂದರ್ಭದಲ್ಲಿ ಆರೋಗ್ಯ ಸಂಜೀವಿನಿ ನಗದು ರಹಿತ ವೈದ್ಯಕೀಯ ಸೇವಾ ಯೋಜನೆಗೆ ಚಾಲನೆ ನೀಡಿದ ಸಿಎಂ ಬೊಮ್ಮಾಯಿ, 30 ನೌಕರರಿಗೆ ತಲಾ ಐವತ್ತು ಸಾವಿರ ರೂ. ನಗದು ಒಳಗೊಂಡ ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಮಾಡಿದರು.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಮಾತನಾಡಿ, ಸರ್ಕಾರಿ ಸೇವೆಗೆ ಬರಲು ದೇವರ ಆಶೀರ್ವಾದ ಇರಬೇಕು. ಆದಕಾರಣ, ಸರ್ಕಾರಿ ನೌಕರರು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.

ಇದಕ್ಕೂ ಮುನ್ನ ಮಾತನಾಡಿದ ಕರ್ನಾಟಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಷಡಾಕ್ಷರಿ, ಮಾತನಾಡಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ರಾಜ್ಯ ಸರ್ಕಾರಿ ನೌಕರರಿಗೆ ಅನುಕೂಲವಾಗುವ 19 ಆದೇಶಗಳನ್ನು ಹೊರಡಿಸಿದ್ದಾರೆ. ಕೇಂದ್ರ ಸರ್ಕಾರದ ನಾಗರಿಕ ಸೇವಾ ದಿನಾಚರಣೆ ಹೊರತುಪಡಿಸಿದರೆ ಬೇರಾವುದೇ ರಾಜ್ಯ ಸರ್ಕಾರ ತನ್ನ ನೌಕರರ ದಿನಾಚರಣೆ ಆಚರಿಸುತ್ತಿರುವುದು ನಮ್ಮ ಕರ್ನಾಟಕದಲ್ಲಿ ಮಾತ್ರ ಎಂದರು.

ಕೂಡಲೇ ಏಳನೇ ವೇತನ ಆಯೋಗವನ್ನು ಘೋಷಿಸಿ ರಾಜ್ಯ ಸರ್ಕಾರಿ ನೌಕರರಿಗೆ ಮತ್ತು ಅವರ ಕುಟುಂಬದ ಎಲ್ಲ ಸದಸ್ಯರಿಗೆ ನೆರವಾಗುವಂತೆ ಹಾಗೂ ಕೊಡುಗೆ ಆಧಾರಿತ ನೂತನ ಪಿಂಚಣಿ ಯೋಜನೆ ರದ್ದು ಪಡಿಸಿ ಹಳೆಯ ಪಿಂಚಣಿ ಯೋಜನೆಯನ್ನು ಅನುಷ್ಠಾನಗೊಳಿಸಿ ಹೊಸ ಪೀಳಿಗೆಯ ಎರಡೂವರೆ ಲಕ್ಷ ನೌಕರರ ಬಾಳಲ್ಲಿ ಬೆಳಕು ಮೂಡಿಸುವಂತೆ ಸಿ. ಎಸ್. ಷಡಾಕ್ಷರಿ ಅವರು ಸಿಎಂ ಬೊಮ್ಮಾಯಿ ಅವರಲ್ಲಿ ಬೇಡಿಕೆ ಇಟ್ಟರು.

ಪ್ರಶಸ್ತಿ ಪುರಸ್ಕೃತರ ಪರವಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸಂಪುಟ ಶಾಖೆಯ ಉಪ ಕಾರ್ಯದರ್ಶಿ ಆರ್. ಚಂದ್ರಶೇಖರ್ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಆಡಳಿತ ಸುಧಾರಣಾ ವಿಭಾಗದ ಅಧೀನ ಕಾರ್ಯದರ್ಶಿ ಬಿ. ಎಸ್. ಲಕ್ಷ್ಮಣ್ ಅವರನ್ನು ಸಿಎಂ ಬೊಮ್ಮಾಯಿ ಗೌರವಿಸಿದರು.

ಕಂದಾಯ ಸಚಿವ ಆರ್ ಅಶೋಕ್, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿ ಪಿ. ಹೇಮಲತಾ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ | 8th Pay Commission| ಎಂಟನೇ ವೇತನ ಆಯೋಗ ಈ ವರ್ಷ ಇಲ್ಲ, 2026ಕ್ಕೆ ಮುಂದಿನ ಆಯೋಗ ಸಾಧ್ಯತೆ

Exit mobile version