Site icon Vistara News

Investment Proposal: ಫಾಕ್ಸ್‌ಕಾನ್ ಸೇರಿ 18 ಹೂಡಿಕೆ ಪ್ರಸ್ತಾವನೆಗಳಿಗೆ ಬೊಮ್ಮಾಯಿ ನೇತೃತ್ವದ ಸಭೆ ಅಸ್ತು

#image_title

ಬೆಂಗಳೂರು: ಕೈಗಾರಿಕೆಗಳಿಗೆ ಸಂಬಂಧಿಸಿದಂತೆ 61ನೇ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯು ಫಾಕ್ಸ್‌ಕಾನ್ ಸೇರಿದಂತೆ 75,393.57 ಕೋಟಿ ರೂಪಾಯಿ ಮೊದ 18 ಯೋಜನೆಗಳಿಗೆ (Investment Proposal) ಅನುಮೋದನೆ ನೀಡಿದೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಫಾಕ್ಸ್‌ಕಾನ್ ಸೇರಿ 10 ಹೊಸ ಯೋಜನೆ, 5 ವಿಸ್ತರಣೆ ಯೋಜನೆ ಮತ್ತು 3 ಹೆಚ್ಚುವರಿ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಈ 18 ಯೋಜನೆಗಳಿಂದ 77,606 ಜನರಿಗೆ ಉದ್ಯೋಗಾವಕಾಶ ನಿರೀಕ್ಷಿಸಲಾಗಿದೆ.

ಫಾಕ್ಸ್‌ಕಾನ್ ಹಾನ್ ಹೈ ಟೆಕ್ನಾಲಜಿ ಇಂಡಿಯಾ ಮೆಗಾ ಡೆವಲಪ್ ಮೆಂಟ್ ಪ್ರೈ.ಲಿ. (ಎಫ್.ಎಚ್.ಎಚ್) 50 ಸಾವಿರ ಮಂದಿಗೆ ಉದ್ಯೋಗ ಕಲ್ಪಿಸುವ 8,000 ಕೋಟಿ ರೂ. ವೆಚ್ಚದ ಯೋಜನೆ ಅನುಷ್ಠಾನಕ್ಕೆ ಒಪ್ಪಿಗೆ ನೀಡಲಾಗಿದೆ. 15 ದಿನಗಳ ಹಿಂದೆ ಫಾಕ್ಸ್‌ಕಾನ್ ಸಿಇಒ ಮತ್ತು ಅಧ್ಯಕ್ಷ ಯಂಗ್ ಲಿಯು ನೇತೃತ್ವದ ನಿಯೋಗ ರಾಜ್ಯಕ್ಕೆ ಭೇಟಿ ನೀಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಸಮಾಲೋಚನೆ ನಡೆಸಿತ್ತು. ಹೀಗಾಗಿ ಆ್ಯಪಲ್ ಫೋನ್ ತಯಾರಿಕೆಯ ಪಾಲುದಾರ ಸಂಸ್ಥೆ ಫಾಕ್ಸ್‌ಕಾನ್‌ಗೆ ದೇವನಹಳ್ಳಿ ಬಳಿ 300 ಎಕರೆ ಭೂಮಿ ನೀಡಲು ಸರ್ಕಾರ ಒಪ್ಪಿಗೆ ನೀಡಿದೆ.

ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಗ್ರೀನ್ ಹೈಡ್ರೋಜನ್, ಎಥೆನಾಲ್ ಉತ್ಪಾದನೆ, ಪವನ ವಿದ್ಯುತ್ ಸ್ಥಾವರ, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ಜೋಡಣೆ, ಲೀಥಿಯಂ ಬ್ಯಾಟರಿ ಮತ್ತು ಎಲೆಕ್ಟ್ರಿಕ್ ವಾಹನಗಳು, ಸಿಮೆಂಟ್ ಮತ್ತು ಸ್ಟೀಲ್ ಕಂಪನಿಗಳ ಪ್ರಸ್ತಾವನೆಗಳಿಗೆ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದರು.

ಇದನ್ನೂ ಓದಿ | BY Vijayendra: ದೆಹಲಿವರೆಗೆ ದೂರು ಹೋದರೆ ಆ ವ್ಯಕ್ತಿ ಎತ್ತರಕ್ಕೆ ಬೆಳೆದಿದ್ದಾನೆಂದು ಅರ್ಥ; ವಿಜಯೇಂದ್ರ ಹೇಳಿದ್ದು ಯಾರಿಗೆ?

ರಾಜ್ಯಕ್ಕೆ ಇಷ್ಟು ದೊಡ್ಡ ಮೊತ್ತದ ಬಂಡವಾಳ ಹರಿದುಬಂದಿರುವುದು ಸಂತಸ ತಂದಿದೆ. ಈ ಯೋಜನೆಗಳು ರಾಜ್ಯದ ಕೈಗಾರಿಕಾ ಪ್ರಗತಿಗೆ ಮತ್ತಷ್ಟು ವೇಗ ನೀಡಲಿದೆ. ರಾಷ್ಟ್ರದ ಉತ್ಪಾದನಾ ಕ್ಷೇತ್ರಕ್ಕೆ ಕರ್ನಾಟಕದ ಕೊಡುಗೆ ಗಮನಾರ್ಹವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ.ಮುರುಗೇಶ್ ಆರ್. ನಿರಾಣಿ ಮಾತನಾಡಿ, ಹೂಡಿಕೆ ಪ್ರಸ್ತಾವನೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ಬೊಮ್ಮಾಯಿ ಸರ್ಕಾರದ ಉದ್ಯಮ ಸ್ನೇಹಿ ನೀತಿಗಳು ಮತ್ತು ಉದ್ಯಮಗಳಿಗೆ ಪೂರಕ ಪರಿಸರ ವ್ಯವಸ್ಥೆಗೆ ಈ ಹೂಡಿಕೆಗಳು ಸಾಕ್ಷಿಯಾಗಿವೆ. ಕೈಗಾರಿಕಾ ಕ್ಷೇತ್ರದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.

ಇದನ್ನೂ ಓದಿ | Yuva Kranti: ಅಧಿಕಾರಕ್ಕೆ ಬಂದ ಒಂದೂವರೆ ವರ್ಷದಲ್ಲಿ 2.5 ಲಕ್ಷ ಉದ್ಯೋಗ ಭರ್ತಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಘೋಷಣೆ

ನವೀಕರಿಸಬಹುದಾದ ಇಂಧನ, ಎಥೆನಾಲ್, ಗ್ರೀನ್ ಹೈಡ್ರೋಜನ್ ಉತ್ಪಾದನೆ, ಏರೋಸ್ಪೇಸ್ ಮತ್ತು ಎಲೆಕ್ಟ್ರಾನಿಕ್ ಸಿಸ್ಟಮ್ ಮತ್ತು ಮ್ಯಾನುಫ್ಯಾಕ್ಚರಿಂಗ್ (ಇಎಸ್‌ಡಿಎಂ) ಕ್ಷೇತ್ರವನ್ನು ಉತ್ತೇಜಿಸಲು ಆಂಪ್ಲಸ್ ಆ್ಯಕ್ಟಿವ್ ಪ್ರೈ.ಲಿ., ಆಯನ ರಿನೀವೇಬಲ್ ಪವರ್ ಸಿಕ್ಸ್ ಪ್ರೈ.ಲಿ., ವಿಶ್ವರಾಜ್ ಶುಗರ್ ಇಂಡಸ್ಟ್ರೀಸ್‌ ಲಿ., ಟಾಟಾ ಅಡ್ವಾನ್ಸ್ ಡ್ ಸಿಸ್ಟಮ್ ಲಿ. ಮುಂತಾದ ಕಂಪನಿಗಳ ಪ್ರಸ್ತಾವನೆಗಳನ್ನು ಅನುಮೋದಿಸಲಾಗಿದೆ ಎಂದು ಹೇಳಿದರು.

ವಸತಿ ಸಚಿವ ವಿ.ಸೋಮಣ್ಣ, ಉನ್ನತ ಶಿಕ್ಷಣ, ಐಟಿ ಬಿಟಿ ಸಚಿವ ಡಾ. ಅಶ್ವತ್ಥನಾರಾಯಣ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್, ಕೈಗಾರಿಕಾಭಿವೃದ್ಧಿ ಆಯುಕ್ತರಾದ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಆರ್. ಗಿರೀಶ್, ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ಗಂಗಾಧರಯ್ಯ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Exit mobile version