ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಸರಣಿ ಹತ್ಯೆಗಳಿಗೆ ಸಂಬಂಧಿಸಿ ಮೊದಲೇ ಪೊಲೀಸ್ ಇಲಾಖೆಯ ಮೇಲೆ ಗರಂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದೀಗ ಗೃಹ ಸಚಿವರ ಮನೆಗೇ ಪ್ರತಿಭಟನಾಕಾರರು ನುಗ್ಗಿದ ಬಳಿಕ ಇನ್ನಷ್ಟು ಆಕ್ರೋಶಿತರಾಗಿದ್ದಾರೆ.
ಬೆಂಗಳೂರಿನ ಜಯಮಹಲ್‌ನಲ್ಲಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ನಿವಾಸಕ್ಕೆ ಬೆಳಗ್ಗೆ ಎಬಿವಿಪಿ ಕಾರ್ಯಕರ್ತರು ಮುತ್ತಿಗೆ ಹಾಕಿದ್ದರು. ಈ ವೇಳೆ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ತಳ್ಳಾಟ ನಡೆದಿದ್ದು, ಕೊನೆಗೆ ಲಾಠಿಚಾರ್ಜ್ ಕೂಡಾ ನಡೆದಿದೆ. ಈ ವಿದ್ಯಮಾನದಿಂದ ಸಿಟ್ಟಿಗೆದ್ದ ಸಿಎಂ ಅವರು ತಮ್ಮ ನಿವಾಸದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ತುರ್ತು ಸಭೆಯನ್ನು ಕರೆದಿದ್ದಾರೆ.
ಡಿಜಿಪಿ ಪ್ರವೀಣ್ ಸೂದ್ ಮತ್ತು ನಗರ ಪೊಲೀಸ್ ಕಮಿಷನರ್ ಹಾಗು ಗುಪ್ತಚರ ಇಲಾಖೆ ಕಮಿಷನರ್ ಕರೆದು ಮಾಹಿತಿ ಪಡೆದುಕೊಂಡ ಸಿಎಂ, ರಾಜ್ಯ ಗುಪ್ತಚರ ಇಲಾಖೆಗೆ ಏನಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.
ಶನಿವಾರ ಬೆಳಗ್ಗೆಯೇ ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಕೇಂದ್ರ ಸಚಿವ ಸದಾನಂದ ಗೌಡರ ಮನೆಗೆ ಬಿಜೆಪಿ ಹಾಗೂ ಎಬಿವಿಪಿ ಕಾರ್ಯಕರ್ತರು ಮುತ್ತಿಗೆ ಹಾಕಿದ್ದರ ಬಗ್ಗೆ ಮಾಹಿತಿ ಪಡೆದ ಬೊಮ್ಮಾಯಿ ಅವರು, ರಾಜ್ಯದಲ್ಲಿ ಗುಪ್ತಚರ ಇಲಾಖೆಗೆ ಏನಾಗಿದೆ, ಗೃಹ ಸಚಿವರ ಮನೆಗೆ ನುಗ್ಗಿ ಗಲಾಟೆ ಮಾಡೋದರ ಮಾಹಿತಿ ಇಲ್ಲವೇ ಎಂದು ಪ್ರಶ್ನಿಸಿದರು. ಗೃಹ ಸಚಿವರ ಮನೆಗೇ ಭದ್ರತೆ ಇಲ್ಲ ಅಂದ ಮೇಲೆ ಇನ್ನು ರಾಜ್ಯದ ಜನರನ್ನು ಹೇಗೆ ಕಾಪಾಡುತ್ತೀರಾ ಎಂದು ಪೊಲೀಸ್ ಅಧಿಕಾರಿಗಳ ಮೇಲೆ ಗರಂ ಆದರು ಸಿಎಂ.
ರಾಜ್ಯದಲ್ಲಿ ನಡೆದ ಮೂರು ಹತ್ಯೆಗಳು, ಬಿಜೆಪಿ ಕಾರ್ಯಕರ್ತರ ಆಕ್ರೋಶದ ಬಗ್ಗೆ ಮಾಹಿತಿ ಪಡೆದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ನಿಮಗೆ ಮಾಹಿತಿಯೇ ಇರಲ್ಲ ಎಂದು ಸಿಟ್ಟಾದರು.
iಇದನ್ನೂ ಓದಿ| Praveen Nettaru | ಗೃಹ ಸಚಿವರ ಮನೆಗೆ ಎಬಿವಿಪಿ ಕಾರ್ಯಕರ್ತರ ಮುತ್ತಿಗೆ, ರಾಜೀನಾಮೆಗೆ ಒತ್ತಾಯ