ಬೆಂಗಳೂರು: ನಗರದ ಮಲ್ಲೇಶ್ವರಂ 18ನೇ ಕ್ರಾಸ್ ಬಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಮಲ್ಲೇಶ್ವರ ಸ್ಕೂಲ್ ಮಾಡೆಲ್ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಇಂಡಿಯನ್ ಟೆಕ್ನಾಲಜಿ ಕಾಂಗ್ರೆಸ್ ಅಸೋಸಿಯೇಶನ್ ವತಿಯಿಂದ ಸ್ಥಾಪಿಸಿರುವ ಪುನೀತ್ (Puneeth Rajkumar) ಸ್ಯಾಟಲೈಟ್ ವರ್ಕ್ ಸ್ಟೇಷನ್ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಉದ್ಘಾಟಿಸಿದರು.
ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಮಲ್ಲೇಶ್ವರ ಮಾದರಿ ಶಾಲೆಯಲ್ಲಿ ಮಕ್ಕಳೇ ತಯಾರಿಸಿರುವ ಸ್ಯಾಟಲೈಟ್ ಅನಾವರಣವಾಗಿದೆ. ಇದು ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ಆಗಿರುವುದು ಮೆಚ್ಚುಗೆಯ ವಿಷಯ, ಬಹಳ ಯೋಗ್ಯ ವ್ಯಕ್ತಿಯ ಹೆಸರಿನಲ್ಲಿ ಕೆಲಸವಾಗುತ್ತಿದೆ. ಆಧುನಿಕ ವ್ಯವಸ್ಥೆಗಳನ್ನು ಒದಗಿಸುವ ಮೂಲಕ ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಮಲ್ಲೇಶ್ವರ ಮಾದರಿಯನ್ನು ಅನುಸರಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ | Kannada Sahitya Sammelana | ಸಾಹಿತ್ಯ ಸಮ್ಮೇಳನ ಲಾಂಛನ ಬಿಡುಗಡೆ; 20 ಸಮಿತಿ ರಚನೆ
ಆಕಾಶದೆತ್ತರಕ್ಕೆ ಮಲ್ಲೇಶ್ವರ ಶಾಲೆಯ ಖ್ಯಾತಿ ಏರಲಿ
ಪುನೀತ್ ರಾಜಕುಮಾರ್ ಅವರ ಪುಣ್ಯ ಸ್ಮರಣೆಯಂದು ಅವರಿಗೆ ಗೌರವ ಸಮರ್ಪಣೆ ಮಾಡುವ ರೀತಿಯಲ್ಲಿ ಈ ಸ್ಯಾಟಲೈಟ್ ಅನ್ನು ಗಗನಕ್ಕೇರಿಸುವ ಕೆಲಸ ಶ್ಲಾಘನೀಯ. ಆಕಾಶದೆತ್ತರಕ್ಕೆ ಮಲ್ಲೇಶ್ವರ ಶಾಲೆಯ ಖ್ಯಾತಿ ಏರಲಿ. ಪುನೀತ್ ಸದಾ ಹೊಸತನವನ್ನು ಹುಡುಕುವ, ಪ್ರಯೋಗಶೀಲ, ಅಂತಃಕರಣವುಳ್ಳ ವ್ಯಕ್ತಿ. ಅತ್ಯಂತ ಸಣ್ಣ ವಯಸ್ಸಿನಲ್ಲೇ ಈ ಲೋಕ ಬಿಟ್ಟರೂ ಅವರು ಬದುಕಿದ ಕೆಲ ದಿನಗಳಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ಭೂಮಿಯಲ್ಲಿ ಬಿಟ್ಟುಹೋಗಿದ್ದಾರೆ. ಪರೋಪಕಾರಿ ಕಾರ್ಯಗಳು, ವಿದ್ಯಾಭ್ಯಾಸ ನೀಡುವ ಸಂಸ್ಥೆ, ಅನಾಥ ಮಕ್ಕಳ ಶಕ್ತಿ ಧಾಮ, ಸಹಾಯ, ನಗುಮುಖದಿಂದ ಎಲ್ಲರ ದುಃಖ ದುಮ್ಮಾನಗಳನ್ನು ದೂರ ಮಾಡಿದ್ದಾರೆ. ಅವರು ನಮ್ಮ ಜತೆಗೆ ಎಂದಿಗೂ ಇರುತ್ತಾರೆ. ರಾಜ್ಯದ ಉದ್ದಗಲಕ್ಕೂ ಅವರ ಖ್ಯಾತಿ ಪಸರಿಸಿದೆ. ಮಲ್ಲೇಶ್ವರ ಶಾಲೆ ಪುನೀತ್ ಖ್ಯಾತಿಯನ್ನು ಸ್ಯಾಟಲೈಟ್ ಮೂಲಕ ಆಕಾಶದೆತ್ತರಕ್ಕೆ ಕೊಂಡೊಯ್ಯುತ್ತಾರೆ ಎಂದು ನಂಬಿದ್ದೇನೆ ಎಂದರು.
ಪ್ರಾಥಮಿಕ ಶಿಕ್ಷಣ ದಲ್ಲಿನೈತಿಕ ಮೌಲ್ಯ
ಶಿಕ್ಷಣ ಬಹಳ ಮುಖ್ಯ. 21 ನೇ ಶತಮಾನ ಜ್ಞಾನದ ಶತಮಾನ. ಜ್ಞಾನಾರ್ಜನೆ ಬಹಳ ಮುಖ್ಯವಾಗುತ್ತದೆ. ಕಲಿಯುವಾಗ ಗುಣಾತ್ಮಕ ಹಾಗೂ ನೈತಿಕ ವಿದ್ಯೆಯನ್ನು ಕಲಿಯಬೇಕು. ವಿಜ್ಞಾನ ಮತ್ತು ಗಣಿತವನ್ನು ಎಲ್ಲರೂ ಕಲಿಯಲೇಬೇಕು. ಎಲ್ಲರ ಜೀವನದಲ್ಲಿ ಇವು ಉಪಯೋಗಕ್ಕೆ ಬರುತ್ತವೆ. ವಿಜ್ಞಾನ ಮತ್ತು ಗಣಿತದಲ್ಲಿ ಭದ್ರ ಬುನಾದಿ ಹಾಕಲು ಭಾಷೆಯಲ್ಲಿಯೂ ಭದ್ರ ಬುನಾದಿಯನ್ನು ಹಾಕಬೇಕು. ಮಾತೃಭಾಷೆ ಸಹಜವಾಗಿ ಬರುವ ಭಾಷೆ. ಅದನ್ನು ಅಚ್ಚುಕಟ್ಟಾಗಿ ಕಲಿತರೆ ನಮ್ಮ ಜ್ಞಾನ ಉತ್ತಮಗೊಳ್ಳುತ್ತದೆ. ಪ್ರಶ್ನೆ ಕೇಳುವ ಹಕ್ಕು ಮಕ್ಕಳಿಗಿದೆ. ಮಕ್ಕಳು ಪ್ರಶ್ನೆ ಕೇಳಬೇಕು. ಶಿಕ್ಷಕರು ಕಲಿತು ಮಕ್ಕಳ ಉತ್ಸಾಹವನ್ನು ಪ್ರೋತ್ಸಾಹಿಸಬೇಕು. ಮಕ್ಕಳ ಗ್ರಹಣಶಕ್ತಿ ಹೆಚ್ಚಿರುವುದರಿಂದ ನೈತಿಕ ಮೌಲ್ಯ, ಭಾಷೆ, ವಿಜ್ಞಾನ ಹಾಗೂ ಗಣಿತವನ್ನು ಮೂಲಭೂತವಾಗಿ ಪ್ರಾಥಮಿಕ ಶಿಕ್ಷಣದಲ್ಲಿ ಕಲಿಸಬೇಕು. ಉನ್ನತ ಶಿಕ್ಷಣ ಕಲಿಯುವಾಗ ಮಕ್ಕಳಿಗೆ ಅನುಕೂಲವಾಗುತ್ತದೆ ಎಂದರು.
ತರ್ಕಬದ್ಧವಾಗಿ ಆಲೋಚಿಸಿ
ಮಕ್ಕಳು ತರ್ಕಬದ್ಧವಾಗಿ ಯೋಚಿಸಬೇಕು. ಯಾಕೆ, ಏನು, ಎಲ್ಲಿ, ಹೇಗೆ ಎಂದು ಪ್ರಶ್ನಿಸಬೇಕು. ಆಗ ತರ್ಕಬದ್ಧವಾಗಿ ಯೋಚಿಸಬಹುದು. ಬಾಯಿಪಾಠದ ಅಗತ್ಯವಿರುವುದಿಲ್ಲ. ಈ ಪಂಚಪ್ರಶ್ನೆಗಳು ಮಕ್ಕಳ ಯಶಸ್ಸಿನ ಮೆಟ್ಟಿಲುಗಳು, ಕಠಿಣ ಗಣಿತವನ್ನು ನಾಲ್ಕು ಜನರಿಗೆ ಹೇಳಿಕೊಟ್ಟರೆ, ಅದನ್ನು ಮರೆಯುವ ಪ್ರಮೇಯವೇ ಇರುವುದಿಲ್ಲ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರಲ್ಲದೇ ಜ್ಞಾನ ಹಂಚಿಕೊಂಡಷ್ಟೂ ಗಟ್ಟಿಯಾದ ಜ್ಞಾನದ ಭಂಡಾರ ಉಳಿಯಲಿದೆ ಎಂದರು.
ಉಜ್ವಲ ಭವಿಷ್ಯ
ಮಕ್ಕಳನ್ನು ಕಂಡಾಗ ಭಾರತ ಹಾಗೂ ಕನ್ನಡ ನಾಡಿನ ಭವಿಷ್ಯ ಉಜ್ವಲವಾಗಿದೆ ಎಂದು ಎನ್ನಿಸುತ್ತದೆ. ಮಕ್ಕಳಲ್ಲಿ ಉತ್ಸಾಹ, ಕುತೂಹಲ ಬಹಳ ಮುಖ್ಯ. ಮಕ್ಕಳಲ್ಲಿ ಕುತೂಹಲ ಹಾಗೂ ಮುಗ್ಧತೆ ಎರಡನ್ನೂ ಜೀವಂತವಾಗಿಡುವ ಶಿಕ್ಷಕ ನಂಬರ್ ಒನ್ ಗುರುವಾಗುತ್ತಾರೆ ಎಂದು ಅಭಿಪ್ರಾಯಪಟ್ಟರು.
ಸ್ಯಾಟಲೈಟ್ ನಿರ್ಮಾಣಕ್ಕೆ ಸರ್ಕಾರದ ಸಹಾಯ
ವಿದ್ಯೆ ಶಕ್ತಿ ಮತ್ತು ಅವಕಾಶಗಳನ್ನು ನೀಡುತ್ತದೆ. ಎಷ್ಟೇ ದೊಡ್ಡ ಸ್ಥಾನದಲ್ಲಿದ್ದರೂ ವಿದ್ಯೆ ಕಲಿಸಿದ ವಿನಯವನ್ನು ಬಿಟ್ಟುಕೊಡಬಾರದು. ಇತರರಿಗಾಗಿ ಬದುಕಿದಾಗ ಸುಖ, ಶಾಂತಿ, ನೆಮ್ಮದಿಯ ಬದುಕು ನಮ್ಮದಾಗುತ್ತದೆ. ನಾಡಿನ ಭವ್ಯ ಭವಿಷ್ಯಕ್ಕೆ ತಂತ್ರಜ್ಞಾನ, ನೈತಿಕತೆ, ವಿಜ್ಞಾನ ಸಹಾಯಕ. ಶಾಲೆಗಳಲ್ಲಿ ಬಹುಪಯೋಗಿ ಸ್ಯಾಟಲೈಟ್ ನಿರ್ಮಾಣ ಮಾಡುವ ಅವಕಾಶವಿದ್ದು, ಅಗತ್ಯವಿರುವ ತರಬೇತಿ, ವಿನ್ಯಾಸಕ್ಕೆ ತಗಲುವ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ ಎಂದು ಸಿಎಂ ಭರವಸೆ ನೀಡಿದರು.
ಮಲ್ಲೇಶ್ವರ ಎಂಬ ಕುಟುಂಬದ ಮುಖ್ಯಸ್ಥ
ಸಿ.ಎನ್. ಅಶ್ವತ್ಥನಾರಾಯಣ್ ಅವರು ಮಲ್ಲೇಶ್ವರ ಎಂಬ ಕುಟುಂಬದ ಮುಖ್ಯಸ್ಥನಂತೆ ಕೆಲಸ ಮಾಡುತ್ತಿದ್ದಾರೆ. ಅಂತಃಕರಣ ಎನ್ನುವುದು ಬಹಳ ಮುಖ್ಯ. ನಮಗೆ ಹುಟ್ಟಿದ ಮಕ್ಕಳು ಮಾತ್ರ ನಮ್ಮ ಮಕ್ಕಳು ಎನ್ನುವುದು ಸಂಕುಚಿತ ಭಾವನೆ. ನನ್ನ ಕ್ಷೇತ್ರದ ಎಲ್ಲ ಮಕ್ಕಳೂ ನನ್ನ ಮಕ್ಕಳು ಎಂದು ತಿಳಿದು, ಆ ಮಕ್ಕಳ ಭವಿಷ್ಯಕ್ಕೆ ಶಾಲೆಗಳ ಅಭಿವೃದ್ಧಿ ಮಾಡುವುದು. ಕೇವಲ ಕಟ್ಟಡಗಳು ಮಾತ್ರವಲ್ಲ ಕಲಿಕಾ ವ್ಯವಸ್ಥೆ, ಆಧುನೀಕರಣ, ಡಿಜಿಟಲೀಕರಣ, ಅಗತ್ಯವಿರುವ ವೈಫೈ, ಬ್ರಾಡ್ ಬ್ಯಾಂಡ್ ಮುಂತಾದ ವ್ಯವಸ್ಥೆ, ಶಿಕ್ಷಕರನ್ನು ತಯಾರಿಸಿ, ಕಲಿಕೆಯಲ್ಲಿ ಆಸಕ್ತಿ ಹುಟ್ಟಿಸಿ ಮಕ್ಕಳ ಬುದ್ಧಿಶಕ್ತಿ, ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗುತ್ತಿದೆ. ಇಡೀ ರಾಜ್ಯಕ್ಕೇ ಈ ಶಾಲೆಯನ್ನು ಮಾದರಿಯಾಗಿಸಲಾಗುವುದು ಎಂದರು.
ವಿದ್ಯಾರ್ಥಿಗಳಿಂದಲೇ ಪುನೀತ್ ಉಪಗ್ರಹ ನಿರ್ಮಾಣ
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ರಾಜ್ಯದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ೧.೯೦ ಕೋಟಿ ರೂಪಾಯಿ ವೆಚ್ಚದಲ್ಲಿ ‘ಎ ಕೆಜಿಸ೩ʼ(A KGS3) ಎಂಬ ಉಪಗ್ರಹ ನಿರ್ಮಿಸುತ್ತಿದ್ದಾರೆ. ನಟ ಪುನೀತ್ ರಾಜಕುಮಾರ್ ಅವರು ಚಲನಚಿತ್ರ ಹಾಗೂ ಸಮಾಜ ಸೇವಾ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಸ್ಮರಿಸಲು ರಾಜ್ಯ ಸರ್ಕಾರ ವಿದ್ಯಾರ್ಥಿ ಉಪಗ್ರಹಕ್ಕೆ ʼಪುನೀತ್ ರಾಜಕುಮಾರ್ʼ ಹೆಸರನ್ನು ಮರುನಾಮಕರಣ ಮಾಡಿದೆ. ಈ ಉಪಗ್ರಹವನ್ನು ನ.15ರಿಂದ ಡಿ.31ರೊಳಗೆ ಆಂಧ್ರಪ್ರದೇಶದ ಶ್ರೀಹರಿಕೋಟ ಉಪಗ್ರಹ ಉಡಾವಣಾ ಕೇಂದ್ರದಿಂದ ಉಡಾವಣೆ ಮಾಡಲಾಗುತ್ತದೆ. ರಾಜ್ಯದ ೧೦೦೦ ವಿದ್ಯಾರ್ಥಿಗಳಿಗೆ ಉಪಗ್ರಹ ಉಡಾವಣೆ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ | Karnataka Ratna | ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ರಜನಿಕಾಂತ್, ಜ್ಯೂ. ಎನ್‌ಟಿಆರ್ ಆಗಮನ