Site icon Vistara News

ವಿವೇಕ ಯೋಜನೆಗೆ ಚಾಲನೆ | ರಾಜ್ಯದಲ್ಲಿ 8000 ಶಾಲಾ ಕೊಠಡಿ, 4000 ಹೊಸ ಅಂಗನವಾಡಿ ನಿರ್ಮಾಣ ಎಂದ ಬೊಮ್ಮಾಯಿ

vivek bommai

ಕಲ್ಬುರ್ಗಿ: ರಾಜ್ಯದಲ್ಲಿ ಒಂದೇ ವರ್ಷದಲ್ಲಿ 8000 ಶಾಲಾ ಕೊಠಡಿಗಳ ನಿರ್ಮಾಣ, 4000 ಹೊಸ ಅಂಗನವಾಡಿಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಸೋಮವಾರ ಕಲಬುರಗಿ ತಾಲೂಕಿನ ಮಡಿಹಾಳ ತಾಂಡಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ವಿವೇಕ ಶಾಲಾ ಕೊಠಡಿಗಳ ಯೋಜನೆಯ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಕಲ್ಯಾಣ ಕರ್ನಾಟಕದ ಪ್ರತಿ ಕ್ಷೇತ್ರದಲ್ಲಿ 50 ಶಾಲಾ ಕೊಠಡಿಗಳಂತೆ ಒಟ್ಟು 2000 ಶಾಲಾ ಕೊಠಡಿಗಳನ್ನು ಇದೇ ವರ್ಷದಲ್ಲಿ ನಿರ್ಮಿಸಲಾಗುವುದು. ಕಲ್ಯಾಣ ಕರ್ನಾಟಕ ಭಾಗದಲ್ಲಿ 1060 ಕೊಠಡಿಗಳು ಮಂಜೂರಾಗಿದ್ದು, 900 ಕೊಠಡಿಗಳ ನಿರ್ಮಾಣಕ್ಕೆ ತಕ್ಷಣ ಮಂಜೂರಾತಿ ನೀಡಲಾಗುವುದು ಎಂದು ಹೇಳಿದರು.

ವಿವೇಕ ಕಟ್ಟಡ ಯೋಜನೆಗೆ ಚಾಲನೆ

೩ ವರ್ಷದಲ್ಲಿ ೮೦೦೦ ಕೊಠಡಿ
ಒಂದೇ ವರ್ಷದಲ್ಲಿ 7600 ಶಾಲಾ ಕೊಠಡಿಗಳ ನಿರ್ಮಾಣದ ಯೋಜನೆಯನ್ನು ಯಾವುದೇ ಸರ್ಕಾರದ ಅವಧಿಯಲ್ಲಿ ಆಗಿರಲಿಲ್ಲ. ಶಾಲೆಗಳಿಗೆ ದೊಡ್ಡ ಪ್ರಮಾಣದ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಈ ಯೋಜನೆಗೆ ನಮ್ಮ ಸರ್ಕಾರ ಪ್ರಾರಂಭಿಸಿದೆ. 8000 ಶಾಲಾ ಕೊಠಡಿಗಳ ನಿರ್ಮಾಣದ ಗುರಿಯಿದ್ದು, ಮುಂದಿನ ಎರಡು ಮೂರು ವರ್ಷಗಳಲ್ಲಿ ಇದೇ ಯೋಜನೆಯನ್ನು ಅನುಷ್ಠಾನಗೊಳಿಸುವ ಮೂಲಕ ರಾಜ್ಯದಲ್ಲಿ ಶಾಲಾ ಕೊಠಡಿಗಳ ಕೊರತೆಯನ್ನು ನೀಗಿಸಿದಂತಾಗುತ್ತದೆ. ಈ ದೂರದೃಷ್ಟಿಯ ಯೋಜನೆಯನ್ನು ಯಾವುದೇ ಸರ್ಕಾರ ಬಂದರೂ ನಿಲ್ಲಿಸಲು ಸಾಧ್ಯವಿಲ್ಲ. ಮುಂದಿನ ಅವಧಿಯಲ್ಲಿಯೂ ಬಿಜೆಪಿ ಸರ್ಕಾರವೇ ಬರುವ ವಿಶ್ವಾಸ ನಮಗಿದೆ ಎಂದು ತಿಳಿಸಿದರು.

ಈ ವರ್ಷ ರಾಜ್ಯದಲ್ಲಿ 4000 ಹೊಸ ಅಂಗನವಾಡಿಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ ತಲಾ 15 ಲಕ್ಷ ರೂ.ನಂತೆ ಅನುದಾನವನ್ನು ನೀಡಲಾಗಿದ್ದು, ಈ ಯೋಜನೆಯಡಿ 1500 ಅಂಗನವಾಡಿಗಳನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಶಾಲಾ ಕಟ್ಟಡದ ದುರಸ್ತಿಗೆ 200 ಕೋಟಿ ರೂ.
ಅಟಲ್ ಬಿಹಾರಿ ವಾಜಪೇಯಿ ಅವರ ಅವಧಿಯಲ್ಲಿ ಸರ್ವಶಿಕ್ಷಣ ಅಭಿಯಾನವನ್ನು ಮಾಡಲಾಯಿತು. ಹತ್ತು ವರ್ಷದ ಕಾರ್ಯಕ್ರಮವನ್ನು 2012 ವರೆಗೂ ಈ ಯೋಜನೆಯನ್ನು ವಿಸ್ತರಿಸಲಾಯಿತು. 2019ರವರೆಗೂ ಇಡೀ ರಾಜ್ಯದಲ್ಲಿ ಶಾಲಾ ಕೊಠಡಿಗಳ ನಿರ್ಮಾಣವಾಗಲಿಲ್ಲ. ಸುವ್ಯವಸ್ಥಿತ ಶಾಲಾಕೊಠಡಿಗಳ ನಿರ್ಮಾಣದ ಮಹತ್ವವನ್ನು ಮನಗಂಡ ನಮ್ಮ ಸರ್ಕಾರ ಇದಕ್ಕೆ ಪ್ರತ್ಯೇಕ ಅನುದಾನವನ್ನು ಮೀಸಲಿರಿಸಿತು. ಶಾಲಾ ಕಟ್ಟಡದ ದುರಸ್ತಿಗೂ 200 ಕೋಟಿ ರೂ.ಗಳನ್ನು ನೀಡಲಾಗಿದೆ ಎಂದರು.

ಮುಂದಿನ ಆ. 15ರೊಳಗೆ ಎಲ್ಲ ಶಾಲೆಗಳಲ್ಲಿ ಶೌಚಾಲಯ
ಶಾಲಾಮಕ್ಕಳಿಗೆ ಅದರಲ್ಲೂ ಹೆಣ್ಣುಮಕ್ಕಳಿಗೆ ಶಾಲೆಗಳಲ್ಲಿ ಶೌಚಾಲಯ ಇಲ್ಲದೇ ಆಗುತ್ತಿರುವ ಸಮಸ್ಯೆಯನ್ನು ಸರ್ಕಾರ ಪರಿಗಣಿಸಿ, ಮುಂದಿನ ಆಗಸ್ಟ್ 15 ರೊಳಗೆ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸುವ ಯೋಜನೆಯನ್ನು ಸಧ್ಯದಲ್ಲಿಯೇ ಪ್ರಾರಂಭಿಸಲಾಗುವುದು. ಮಕ್ಕಳ ಶಿಕ್ಷಣದಲ್ಲಿ ಅಂಗನವಾಡಿಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ ಎಂದರು.

ರಾಜ್ಯದ ಇತಿಹಾಸದಲ್ಲಿ ದಾಖಲೆ
ಮಾತಿನಲ್ಲಿ ಶಿಕ್ಷಣ, ಉದ್ಯೋಗ, ಸ್ವಾವಲಂಬನೆಯ ಬದುಕು ಸಾಧ್ಯವಾಗುವುದಿಲ್ಲ. ವಿಶೇಷ ಕಾರ್ಯಕ್ರಮಗಳನ್ನು ರೂಪಿಸಬೇಕು. ಗುರಿ ಇರಬೇಕು, ಕಾಲ ನಿಗದಿ ಮಾಡಿ ಅನುದಾನ ಬಿಡುಗಡೆ ಮಾಡಿ ಅಧಿಕಾರಿಗಳಿಗೆ ಕೆಲಸಕ್ಕೆ ಹಚ್ಚಬೇಕು. ಈ ವರ್ಷದ ಬಜೆಟ್ಟಿನ ಎಲ್ಲಾ ಘೋಷಣೆಗಳ ಅನುಷ್ಠಾನ ಪ್ರಾರಂಭವಾಗಿದೆ. ರಾಜ್ಯದ ಇತಿಹಾಸದಲ್ಲಿ ಇದು ಒಂದು ದಾಖಲೆ. ಎಲ್ಲರಿಗೂ ಸ್ಪಂದಿಸುವ ಕೆಲಸವಾಗುತ್ತಿದೆ. 32 ಸಾವಿರ ಅತಿಥಿ ಪ್ರಾಧ್ಯಾಪಕರನ್ನು ವರ್ಷದ ಪ್ರಾರಂಭದಲ್ಲಿಯೇ ನೇಮಿಸಲು ಅನುಮತಿ ನೀಡಲಾಯಿತು. ಅವರ ಗೌರವಧನವನ್ನು ಹೆಚ್ಚಿಸಲಾಯಿತು. 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದರು.

ಶಿಕ್ಷಣಕ್ಕೆ ಅತಿ ಹೆಚ್ಚಿನ ಮಹತ್ವ
ಮುಂದಿನ ಶೈಕ್ಷಣಿಕ ವರ್ಷಕ್ಕೆ ಅಗತ್ಯವಿರುವ ಶಿಕ್ಷಕರ ಸಂಖ್ಯೆಯನ್ನು ನೀಡಿದರೆ, ಮುಂದಿನ ಬಜೆಟ್ ನಲ್ಲಿ ಅದಕ್ಕೂ ಅನುಮತಿ ಒದಗಿಸುವುದಾಗಿ ಶಿಕ್ಷಣ ಸಚಿವರಿಗೆ ತಿಳಿಸಿದ್ದೇನೆ. ಶಿಕ್ಷಣಕ್ಕೆ ಅತಿ ಹೆಚ್ಚಿನ ಮಹತ್ವವನ್ನು ನಮ್ಮ ಸರ್ಕಾರ ನೀಡಿದೆ. ಬರುವ ವರ್ಷದಲ್ಲಿ ಯೋಗವನ್ನು ಶಾಲೆಗಳಲ್ಲಿ ಪ್ರಾರಂಭಿಸಲಾಗುವುದು. 100 ಹೊಸ ಪ್ರೌಢ ಶಾಲೆ ಹಾಗೂ 100 ಹೊಸ ಪದವಿಪೂರ್ವ ಕಾಲೇಜುಗಳನ್ನು ಪ್ರಾರಂಭಿಸಲು ಮಂಜೂರಾತಿಯನ್ನು ನೀಡಲಾಗಿದೆ. ಕಲ್ಯಾಣ ಕರ್ನಾಟಕ ನಿಜವಾಗಲೂ ಕಲ್ಯಾಣದ ನಾಡಾಗಬೇಕು ಎಂದರು.

ಅಭಿವೃದ್ಧಿಗೆ ವೇಗ
ಆರೋಗ್ಯ ಕ್ಷೇತ್ರದಲ್ಲಿಯೂ 67 ಪಿ. ಎಚ್.ಸಿ ಮೇಲ್ದರ್ಜೆಗೇರಿಸಲಾಗುತ್ತಿದೆ ಹಾಗೂ 24 ಪಿಎಚ್‍ಸಿ ಕೇಂದ್ರಗಳನ್ನು ಕಲ್ಯಾಣ ಕರ್ನಾಟಕದಲ್ಲಿಯೇ ನಿರ್ಮಿಸಲಾಗುತ್ತಿದೆ. ಕಲ್ಯಾಣ ಕರ್ನಾಟಕ ಮಂಡಳಿಗೆ 3000 ಕೊಟಿ ಒದಗಿಸಲಾಗಿದೆ. ಹಿಂದೇದೂ ಈ ಕೆಲಸ ಆಗಿರಲಿಲ್ಲ. ಮುಂದಿನ ಬಜೆಟ್ ನಲ್ಲಿ 5000 ಕೋಟಿ ರೂ.ಗಳನ್ನು ಮಂಡಳಿಗೆ ಒಗದಿಸುವುದಾಗಿ ಭರವಸೆ ನೀಡಿದರು. ಅಭಿವೃದ್ಧಿಗೆ ವೇಗ ನೀಡಲಾಗುವುದು. ನಿಜವಾದ ಕಲ್ಯಾಣಕರ್ನಾಟಕವನ್ನು ಕಟ್ಟುವುದು ನಮ್ಮ ಸಂಕಲ್ಪ ಎಂದು ತಿಳಿಸಿದರು.

ಸಮಾರಂಭದಲ್ಲಿ ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ, ಸಂಸದ ಉಮೇಶ್ ಜಾಧವ್, ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ ಮೊದಲಾದವರು ಉಪಸ್ಥಿತರಿದ್ದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸೋಮವಾ ಕಲಬುರ್ಗಿ ಜಿಲ್ಲೆ ಸೇಡಂ ಆರಾದ್ಯ ದೈವ ಮಹಾತ್ಮ ಕೊತ್ತಲ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಸದಾಶಿವ ಸ್ವಾಮೀಜಿ ಸನ್ಮಾನಿಸಿದರು. ಈ ವೇಳೆ ವಿವಿಧ ಮಠಾಧೀಶರು ಹಾಜರಿದ್ದರು.

ಇದನ್ನೂ ಓದಿ | Saffron politics| ವಿವೇಕ ಶಾಲೆ ಕೊಠಡಿಗಳಿಗೆ ಕೇಸರಿ ಬಣ್ಣ: ಮುಖ್ಯಮಂತ್ರಿ ಬೊಮ್ಮಾಯಿ ಸಮರ್ಥನೆ

Exit mobile version