Site icon Vistara News

Environment University : ಉತ್ತರ ಕನ್ನಡ ಜಿಲ್ಲೆಯಲ್ಲಿ ಪರಿಸರ ವಿಶ್ವವಿದ್ಯಾಲಯ ಸ್ಥಾಪನೆಗೆ ಕ್ರಮ; ಸಿಎಂ ಬೊಮ್ಮಾಯಿ

Bommai Environment

#image_title

ಉತ್ತರ ಕನ್ನಡ (ಸಿದ್ದಾಪುರ): ಉತ್ತರ ಕನ್ನಡ ಜಿಲ್ಲೆಯಲ್ಲಿ ಪರಿಸರ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಎಲ್ಲಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಮಂಗಳವಾರ ಸಿದ್ಧಾಪುರ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯವನ್ನು ನೆರವೇರಿಸಿ ಹಾಗೂ ವಿವಿಧ ಯೋಜನೆಗಳಡಿಯಲ್ಲಿ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿ ಮಾತನಾಡಿದರು.

‌ʻʻಭಾರತ ದೇಶದಲ್ಲಿ ನಿಂತ ನೀರಾಗಿದ್ದ ಅಭಿವೃದ್ಧಿ ಕೆಲಸಗಳಿಗೆ ಇಂದು ವೇಗ ನೀಡಲಾಗಿದೆ. ದೇಶದ ಪ್ರತಿ ಮನೆ ಮನೆಗೆ ಕುಡಿಯುವ ನೀರು ತಲುಪಿಸುವ ಗುರಿ ತಲುಪಿಸಲು ಜಲಜೀವನ್ ಮಿಷನ್ ಯೋಜನೆಯಡಿ ದೇಶದ 10 ಕೋಟಿ ಮನೆಗಳಿಗೆ ಕುಡಿಯುವ ನೀರು ತಲುಪಿಸಲಾಗಿದೆ. ರಾಜ್ಯದಲ್ಲಿ ಕಳೆದ 3 ವರ್ಷದಲ್ಲಿ 40 ಲಕ್ಷ ಮನೆಗಳಿಗೆ ನೀರು ತಲುಪಿಸಲಾಗಿದೆʼʼ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ʻʻಸರ್ವೋದಯದೊಂದಿಗೆ ನವೋದಯವನ್ನು ಸಾಧಿಸಿ, ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯನ್ನು ಮಾಡಲಾಗುತ್ತಿದೆ. ಭಾರತ ಬದಲಾವಣೆಯ ಪರ್ವದಲ್ಲಿದೆ. ಇಡೀ ವಿಶ್ವವೇ ಆರ್ಥಿಕ ಹಿಂಜರಿಕೆಯ ಪರಿಸ್ಥಿತಿಯಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿಯೂ ಭಾರತ ಶೇ. 6.7ರಷ್ಟು ಅಭಿವೃದ್ಧಿಯನ್ನು ಕಂಡಿದೆ. ದೇಶದ ಜನಸಂಖ್ಯೆಯನ್ನು ಶಾಪವೆಂದು ಪರಿಗಣಿಸುವ ಕಾಲವೊಂದಿತ್ತು. ಆದರೆ ಈಗ ಜನಸಂಖ್ಯೆಯ ಶೇ.46 ರಷ್ಟು ಯುವಜನರಿದ್ದು, ಪ್ರಧಾನಿ ಮೋದಿಯವರು ಈ ಯುವಶಕ್ತಿಯೇ ದೇಶದ ಶಕ್ತಿ ಎಂದರು. ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ದೇಶದ ಯುವಶಕ್ತಿ ಪ್ರಮುಖ ಪಾತ್ರವಹಿಸಲಿದೆ ಎಂದರು. ನಕಾರಾತ್ಮಕತೆಯಿಂದ ಸಕಾರಾತ್ಮಕತೆಯೆಡೆಗೆ, ಸವಾಲುಗಳನ್ನು ಅವಕಾಶಗಳಾಗಿ ಮಾಡಿಕೊಳ್ಳುವ ಕಾಲಘಟ್ದಲ್ಲಿ ನಾವಿದ್ದೇವೆʼʼ ಎಂದು ತಿಳಿಸಿದರು.

ಎಲ್ಲ ವರ್ಗದ ಜನರಿಗೆ ಸ್ವಾಭಿಮಾನದ ಬದುಕು

ರಾಜ್ಯದಾದ್ಯಂತ 438 ನಮ್ಮ ಕ್ಲಿನಿಕ್, ಉಚಿತ ಕಣ್ಣಿನ ಚಿಕಿತ್ಸೆ ಹಾಗೂ ಕನ್ನಡಕ ವಿತರಣೆ, ಶ್ರವಣ ಸಾಧನ ವಿತರಣೆ, ಡಯಾಲಿಸಿಸ್ ಸೈಕಲ್ ಗಳ ಹೆಚ್ಚಳ, ಕಿಮೋಥೆರಪಿ ಸೈಕಲ್‌ಗಳನ್ನು ಹೆಚ್ಚಿಸಲಾಗಿದೆ. ರಾಜ್ಯದಲ್ಲಿ 8000 ಶಾಲಾ ಕೊಠಡಿಗಳ ನಿರ್ಮಾಣ ದಾಖಲೆಯ ಕಾರ್ಯಕ್ರಮ ಎಂದರು ಬೊಮ್ಮಾಯಿ.

ಈ ವರ್ಷದ ಆಯವ್ಯಯದ ಶೇ.12 ರಷ್ಟು ಪ್ರಮಾಣವನ್ನು ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡಲಾಗಿದೆ. ಮೀನುಗಾರರಿಗೆ ವಿಶೇಷ ಯೋಜನೆಗಳು, ಎಸ್ ಸಿ ಎಸ್ ಟಿ , ಹಿಂದುಳಿದ ವರ್ಗದವರ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಯೋಜನೆಗಳಿಂದ ,ಜನರನ್ನು ಆರ್ಥಿಕ ಸ್ವಾವಲಂಬನೆಯನ್ನು ನೀಡಿ ಸ್ವಾಭಿಮಾನ ಬದುಕು ನಡೆಸಲು ಸರ್ಕಾರ ಸಹಕರಿಸುತ್ತಿದೆ. ಸರ್ಕಾರ ದುಡಿಯುವ ವರ್ಗಕ್ಕೆ ಬೆಂಬಲವನ್ನು ನೀಡುತ್ತಿದೆ. ದುಡಿಮೆಯೇ ದೊಡ್ಡಪ್ಪ ಎನ್ನುವ ಕಾಲ ಬಂದಿದೆ. ಅಭಿವೃದ್ಧಿ ಆಕಾಂಕ್ಷೆ ತಾಲ್ಲೂಕುಗಳನ್ನು ಗುರುತಿಸಲಾಗಿದೆ. ಸ್ತ್ರೀ ಸಾಮರ್ಥ್ಯ ಯೋಜನೆ, ಯುವಕರಿಗೆ ಸ್ವಾಮಿ ವಿವೇಕಾನಂದ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಶಿಕ್ಷಣ, ಉದ್ಯೋಗ, ಸಬಲೀಕರಣವನ್ನು ತಳವರ್ಗದವರಿಗೆ ನೀಡದರೆ ಅವರೂ ಮುಖ್ಯವಾಹಿನಿಗೆ ಸೇರುತ್ತಾರೆ ಎಂದರು.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಗೋವಿಂದ ಕಾರಜೋಳ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ : Sirsi News: ಕಾಗೇರಿ ಜನ ರಾಜಕಾರಣ ಮಾಡಿದವರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Exit mobile version