ದೆಹಲಿ: ನಗರದಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಜವಳಿ ಸಚಿವ ಪಿಯೂಷ್ ಗೋಯಲ್, ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಹಾಗೂ ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಭೇಟಿಯಾಗಿ ವಿವಿಧ ಬೇಡಿಕೆಗಳನ್ನು(PM Mitra Scheme) ಈಡೇರಿಸುವಂತೆ ಮನವಿ ಸಲ್ಲಿಸಿದರು.
ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿಯಾಗಿ ರಾಜ್ಯಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಚರ್ಚಿಸಿದರು. ಕರ್ನಾಟಕದ ಕಲಬುರಗಿ, ತುಮಕೂರು, ವಿಜಯಪುರ ಜಿಲ್ಲೆಗಳಲ್ಲಿ ಪಿಎಂ ಮಿತ್ರಾ ಯೋಜನೆಯಡಿ ಸಹಾಯಾನುದಾನ ಪಡೆದು ವಿಶ್ವಮಟ್ಟದ ಮೆಗಾ ಜವಳಿ ಪಾರ್ಕ್ ಸ್ಥಾಪನೆಗೆ ಕರ್ನಾಟಕ ಸರ್ಕಾರ ಮುಂದಾಗಿದೆ. ಈ ಮೂರು ಜಿಲ್ಲೆಗಳು ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಿಗೆ ಸಮೀಪದಲ್ಲಿದ್ದು, ಎಲ್ಲಾ ಪ್ರಮುಖ ನಗರಗಳು ಹಾಗೂ ಬಂದರುಗಳಿಗೆ ಕೂಡ ಸಂಪರ್ಕವಿದೆ. ಈ ಜಿಲ್ಲೆಗಳಲ್ಲಿ ಮೆಗಾ ಜವಳಿ ಪಾರ್ಕ್ ಸ್ಥಾಪನೆಯಿಂದಾಗಿ ಜವಳಿ ಕೇಂದ್ರವಾಗಿ ಜಿಲ್ಲೆಗಳನ್ನು ಪರಿವರ್ತಿಸಲು ಸಾಧ್ಯವಾಗಲಿದೆ. ಪ್ರಧಾನಮಂತ್ರಿಗಳ ಕನಸಿನಂತೆ ಜವಳಿ ಕೇತ್ರದಲ್ಲಿ ದೇಶ ಆತ್ಮನಿರ್ಭರವಾಗಲು ಕೂಡ ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | V.Sunil kumar | ಅನಿಮಲ್ ಪ್ಲಾನೆಟ್, ನ್ಯಾಟ್ ಜಿಯೋ ವೈಲ್ಡ್, ಬಿಬಿಸಿ ಅರ್ಥ್ ವಾಹಿನಿಗಳು ಕನ್ನಡದಲ್ಲೂ ಬರಲಿ: ಕೇಂದ್ರಕ್ಕೆ ಪತ್ರ
ಇದಲ್ಲದೆ ವಿಜಯಪುರ, ತುಮಕೂರು ಹಾಗೂ ಕಲಬುರಗಿ ಜಿಲ್ಲೆಗಳು ಶೈಕ್ಷಣಿಕ ಹಾಗೂ ತಾಂತ್ರಿಕ ಸಂಸ್ಥೆಗಳನ್ನು ಹೊಂದಿದ್ದು, ಕೌಶಲವುಳ್ಳ ಮಾನವ ಸಂಪನ್ಮೂಲವನ್ನು ಜವಳಿ ಉದ್ಯಮಕ್ಕೆ ಒದಗಿಸಲು ಶಕ್ತವಾಗಿರುವುದರಿಂದ ಕೇಂದ್ರ ಸರ್ಕಾರದ ಮಿತ್ರಾ ಯೋಜನೆಯಡಿ ಈ ಮೂರು ಜಿಲ್ಲೆಗಳನ್ನು ಸೇರ್ಪಡೆಗೊಳಿಸುವಂತೆ ಮನವಿ ಮಾಡಿದರು.
ರಾಜ್ಯಕ್ಕೆ 2 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬಿಡುಗಡೆ ಮಾಡಿ
ರಾಜ್ಯಕ್ಕೆ ಹತ್ತು ಸಾವಿರ ಮೆಟ್ರಿಕ್ ಟನ್ ಅಕ್ಕಿಯನ್ನು ಸರಬರಾಜನ್ನು ಸೀಮಿತಗೊಳಿಸಿರುವ ನೀತಿಯನ್ನು ಮರು ಪರಿಶೀಲಿಸಬೇಕು. ಭಾರತೀಯ ಆಹಾರ ನಿಗಮದ ವತಿಯಿಂದ ಮಾರ್ಚ್ 23 ರವರೆಗೆ ತೆರೆದ ಮಾರುಕಟ್ಟೆ ಮಾರಾಟ ಯೋಜನೆಯಡಿ 2 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ವಿಶೇಷ ಪ್ರಕರಣವಾಗಿ ಪರಿಗಣಿಸಿ ಬಿಡುಗಡೆ ಮಾಡುವಂತೆ ಹಾಗೂ ತಕ್ಷಣವೇ 50 ಸಾವಿರ ಮೆಟ್ರಿಕ್ ಟನ್ ಅಕ್ಕಿಯನ್ನು ಬಿಡುಗಡೆ ಮಾಡಲು ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರನ್ನು ಸಿಎಂ ಬೊಮ್ಮಾಯಿ ಕೋರಿದರು.
ರಕ್ಷಣಾ ಇಲಾಖೆ ವಶದಲ್ಲಿರುವ ಭೂಮಿಯನ್ನು ರಾಜ್ಯಕ್ಕೆ ಹಸ್ತಾಂತರಿಸಲು ಮನವಿ
ರಾಜ್ಯ ಸರ್ಕಾರಕ್ಕೆ ಸೇರಿದ ಬೆಳಗಾವಿ ಜಿಲ್ಲೆ ತುಕಮಟ್ಟಿ ಗ್ರಾಮದ 732.24 ಎಕರೆ ಪ್ರದೇಶವು ರಕ್ಷಣಾ ಪ್ರಾಧಿಕಾರದ ವಶದಲ್ಲಿದ್ದು, ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಭಿವೃದ್ಧಿಯ ದೃಷ್ಟಿಯಿಂದ ಈ ಭೂ ಪ್ರದೇಶವನ್ನು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಲು ರಕ್ಷಣಾ ಪ್ರಾಧಿಕಾರಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೋರಿದರು.
ಕರಡಿಧಾಮಗಳ ಸುತ್ತಮುತ್ತಲಿನ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಿ
ರಾಜ್ಯದ ಗುಡೆಕೋಟೆ ಕರಡಿಧಾಮ ಹಾಗೂ ಭೀಮಾಗಡ್ ಅಭಯಾರಣ್ಯಗಳ ಸುತ್ತಮುತ್ತಲಿನ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸುವಂತೆ ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಅವರಿಗೆ ಮುಖ್ಯಮಂತ್ರಿ ಬೊಮ್ಮಾಯಿ ಮನವಿ ಮಾಡಿದ್ದಾರೆ. ಈಗಾಗಲೇ ಕರಡು ಅಧಿಸೂಚನೆಯನ್ನು ರಾಜ್ಯ ಸಚಿವ ಸಂಪುಟ ಸಭೆ ಅನುಮೋದಿಸಿದ್ದು, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಶಿಫಾರಸ್ಸು ಮಾಡಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಉಪಸ್ಥಿತರಿದ್ದರು.
ಇದನ್ನೂ ಓದಿ | Ravana controversy | ಖರ್ಗೆಯನ್ನು ಧೃತರಾಷ್ಟ್ರನಿಗೆ ಹೋಲಿಸಿದ ರವಿಕುಮಾರ್, ಸೋನಿಯಾಗೂ ಪುತ್ರ ವ್ಯಾಮೋಹ ಅಂದ್ರು