Site icon Vistara News

ಮಗಳ ಚಿಕಿತ್ಸೆಗೆ ನೆರವು ಕೋರಿದ ಮಹಿಳೆ, ಎರಡೇ ಗಂಟೆಯಲ್ಲಿ ವ್ಯವಸ್ಥೆ ಮಾಡಿದ ಸಿಎಂ

ಸಿಎಂ ಬೊಮ್ಮಾಯಿ

ಬೆಂಗಳೂರು: ಮಗುವಿನ ಚಿಕಿತ್ಸೆಗೆ ನೆರವು ನೀಡಿ ಪುಣ್ಯಕಟ್ಟಿಕೊಳ್ಳಿ ಎಂಬ ಮಹಿಳೆಯೊಬ್ಬರ ಬೇಡಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇವಲ ಎರಡೇ ಗಂಟೆಯಲ್ಲಿ ಸ್ಪಂದಿಸಿ ಮಾನವೀಯತೆ ಮೆರೆದಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಮೈಸೂರಿನಲ್ಲಿ ನಡೆದ ಯೋಗ ದಿನದ ಕಾರ್ಯಕ್ರಮ ಮುಗಿಸಿ ಮಧ್ಯಾಹ್ನ ಬೆಂಗಳೂರಿನ ಆರ್‌ಟಿ ನಗರದ ನಿವಾಸಕ್ಕೆ ಆಗಮಿಸಿದರು. ಈ ವೇಳೆ ಜನತಾ ದರ್ಶನದಲ್ಲಿ ಬೆಳಗಾವಿಯ ಮಹಿಳೆ ಶಂಕರಮ್ಮ ಕಾದು ಕುಳಿತಿದ್ದರು. ತಮ್ಮ ಪುಟ್ಟ ಮಗಳು ಕೃಷ್ಣವೇಣಿ ದೃಷ್ಟಿ ದೋಷ ಮತ್ತು ಮೆದುಳು ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ಹೀಗಾಗಿ ನೆರವು ನೀಡಬೇಕು ಎಂದು ಬೇಡಿಕೊಂಡಿದ್ದಾರೆ. ಅದಕ್ಕೆ ಸ್ಪಂದಿಸಿದ ಸಿಎಂ ಬೊಮ್ಮಾಯಿ ಅವರು, ಮಗುವಿನ ಆರೋಗ್ಯದ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸುತ್ತದೆ, ಚಿಕಿತ್ಸೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಮಹಿಳೆಗೆ ಭರವಸೆ ನೀಡಿದ ಬಳಿಕ ಮುಖ್ಯಮಂತ್ರಿಗಳ ಕಚೇರಿ ಅಧಿಕಾರಿಗಳೊಂದಿಗೆ ಮಾತನಾಡಿದ ಬೊಮ್ಮಾಯಿ ಅವರು ಚಿಕಿತ್ಸೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಪಿ.ಎ.ಗೋಪಾಲ್‌ ಅವರು ತಕ್ಷಣವೇ ಧಾರವಾಡದ ಎಸ್‌ಡಿಎಂ ಆಸ್ಪತ್ರೆಯನ್ನು ಸಂಪರ್ಕಿಸಿ ಬೆಳಗಾವಿ ಜಿಲ್ಲೆಯ ಕೇಲಿಗ್ರಾಮದ ಶಂಕರಮ್ಮ ಎಂಬುವವರ ಮಗಳು ಕೃಷ್ಣವೇಣಿಯನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು, ಚಿಕಿತ್ಸೆ ನೀಡಿದ ನಂತರ ಬಿಲ್‌ಗಳನ್ನು ಮುಖ್ಯಮಂತ್ರಿಗಳ ಕಚೇರಿಗೆ ಸಲ್ಲಿಸಿದರೆ ವೆಚ್ಚವನ್ನು ಸಿಎಂ ಪರಿಹಾರ ನಿಧಿಯಿಂದ ಭರಿಸಲಾಗುವುದು ಎಂದು ಸೂಚಿಸಿದ್ದಾರೆ.
ಮಗುವಿನ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಹೇಳಿದ ಮುಖ್ಯಮಂತ್ರಿ ಮಾತು ಕೆಲವೇ ಗಂಟೆಗಳಲ್ಲಿ ಅಧಿಕೃತ ಭರವಸೆಯಾಗಿದೆ. ಮುಖ್ಯಮಂತ್ರಿಗಳ ಈ ಸ್ಪಂದನೆಗೆ ಮಗುವಿನ ತಾಯಿ ಶಂಕರಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | Modi In Karnataka | ಸಿಎಂ ಬೊಮ್ಮಾಯಿ ನೇತೃತ್ವದಲ್ಲೆ ಚುನಾವಣೆ?: ಮೋದಿ ಸಂಕೇತ

Exit mobile version