ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲುಗುಂಡಿಯಲ್ಲಿ ಭೂಕಂಪನದಿಂದ ಹಾನಿಗೊಂಡ ನಾಗೇಶ್ ಎಂಬುವವರ ಮನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಸಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೊಡಗು ಜಿಲ್ಲೆಯಲ್ಲಿ ಮಳೆ ಹಾನಿ ಪರಿಶೀಲನೆ ನಡೆಸಿದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ ಸಿಎಂ, ಭೂಕಂಪನದಿಂದ ಮನೆಗೆ ಹಾನಿಯಾದ ಕುಟುಂಬಸ್ಥರ ಸಮಸ್ಯೆಗಳನ್ನು ಆಲಿಸಿದರು.
ಬಳಿಕ ಸುಳ್ಯದಿಂದ ಪುತ್ತೂರು ತಾಲೂಕಿನ ಉಪ್ಪಿನಂಗಡಿಗೆ ತೆರಳಿದ ಅವರು, ನೇತ್ರಾವತಿ-ಕುಮಾರಧಾರ ಸಂಗಮ ಕ್ಷೇತ್ರ ವೀಕ್ಷಣೆ ಮಾಡಿದರು. ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ದೇವಸ್ಥಾನದ ಬಳಿ ನದಿಯ ನೀರಿನ ಮಟ್ಟ ವೀಕ್ಷಣೆ ನಂತರ, ಸೇತುವೆ ಬಳಿಯೇ ನಿಂತು ತೋಟಗಳ ಬೆಳೆ ಹಾನಿ ವೀಕ್ಷಿಸಿದರು. ಜತೆಗೆ ನದಿಪಾತ್ರದ ಗ್ರಾಮಗಳಲ್ಲಿ ಬೆಳೆ ಹಾನಿ ಮತ್ತು ಇತರ ಹಾನಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಮಳೆ ಹಾನಿ ಬಗ್ಗೆ ಸಿಎಂಗೆ ಮಾಹಿತಿ ನೀಡಿದರು.
ಆನಂತರ ಉಪ್ಪಿನಂಗಡಿಯಿಂದ ನೇರವಾಗಿ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್‌ಗೆ ತೆರಳಿದರು. ಅಲ್ಲಿ ಪಂಜಿಕಲ್ಲು ಗುಡ್ಡ ಕುಸಿತದಿಂದ ಮೃತರಾದ ಕುಟುಂಬಸ್ಥರಿಗೆ ಪರಿಹಾರ ಚೆಕ್ ವಿತರಣೆ ವಿತರಣೆ ಮಾಡಿದರು. ಕಂದಾಯ ಸಚಿವ ಆರ್.ಅಶೋಕ್, ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್, ಸಚಿವ ಎಸ್.ಅಂಗಾರ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮತ್ತಿತರರು ಇದ್ದರು.
ಇದನ್ನೂ ಓದಿ | Rain News| ಭೀಕರ ಮಳೆಗೆ ಬೀಳುತ್ತಿವೆ ಮನೆಗಳು, ತತ್ತರಿಸುತ್ತಿದೆ ಬದುಕು