Site icon Vistara News

Mali, Malagara Conference | ಸಣ್ಣ ವೃತ್ತಿಪರ ಸಮಾಜಗಳ ಅಭಿವೃದ್ದಿಗೆ 400 ಕೋಟಿ ಅನುದಾನ: ಸಿಎಂ ಬೊಮ್ಮಾಯಿ

Mali, Malagara Conference

ಬೆಳಗಾವಿ: ಕಡಿಮೆ ಜನಸಂಖ್ಯೆಯ ಸಮಾಜಗಳಿಗೆ ನ್ಯಾಯ ಒದಗಿಸುವ ದೃಷ್ಟಿಯಿಂದ ಮಾಳಿ, ಮಾಲಗಾರದಂತಹ (Mali, Malagara Conference) ಸಣ್ಣ ವೃತ್ತಿಪರ ಸಮಾಜಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ 400 ಕೋಟಿ ರೂಪಾಯಿ ಅನುದಾನ ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ರಾಯಬಾಗ ತಾಲೂಕಿನ ಮುಗಳಖೋಡದಲ್ಲಿ ಅಖಿಲ ಕರ್ನಾಟಕ ಮಾಳಿ, ಮಾಲಗಾರ ಸಮಾಜದ ರಾಜ್ಯ ಮಟ್ಟದ ದ್ವಿತೀಯ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಮತ್ತು ಯೋಗ್ಯ ಬೆಲೆ
ಕಡಿಮೆ ಜನಸಂಖ್ಯೆಯಿರುವ ವೃತ್ತಿಪರ ಸಣ್ಣ ಸಮಾಜಗಳು ರಾಜ್ಯದ ಆರ್ಥಿಕತೆಗೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಲೇ ಬಂದಿವೆ. ಮಾಳಿ, ಮಾಲಗಾರ ಸಮಾಜ ಸೇರಿದಂತೆ ದಿನನಿತ್ಯದ ಅವಶ್ಯಕತೆಯ ಉತ್ಪನ್ನಗಳ ಉತ್ಪಾದನೆಯಲ್ಲಿ ತೊಡಗಿರುವಂತಹ ಸಮಾಜಗಳಿಗೆ ಮುಂದಿನ ಆಯವ್ಯಯದಲ್ಲಿ ಮಾರುಕಟ್ಟೆ ಸೌಲಭ್ಯಗಳನ್ನು ಒದಗಿಸಲಾಗುವುದು. ಮಾಳಿ, ಮಾಲಗಾರ ನೇತೃತ್ವದ ಸಮಾಜಗಳ ಅಭಿವೃದ್ಧಿಗೆ ವಿಶೇಷ ನಿಗಮ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು. ಈ ಸಮಾಜ ಉತ್ಪಾದಿಸುವ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ, ಯೋಗ್ಯ ಬೆಲೆ ಒದಗಿಸಲು ಅವರ ಬಳಿಯೇ ಬಂದು ಅವರ ಉತ್ಪನ್ನಗಳನ್ನು ಖರೀದಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದರು.

ಮಾಳಿ, ಮಾಲಗಾರರ ಮಕ್ಕಳಿಗೆ ಉತ್ತಮ ಶಿಕ್ಷಣ ಪಡೆಯುವುದು ಬಹಳ ಮುಖ್ಯ. ನಿಗಮದ ಮೂಲಕ ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣ, ಯುವಕರಿಗೆ ಸ್ವಯಂ ಉದ್ಯೋಗ, ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿವೇತನ ನೀಡಲಾಗುವುದು. ಸಾವಿತ್ರಿಬಾಯಿ ಫುಲೆ ಇದೇ ಸಮಾಜದವರಾಗಿದ್ದು, ಹೆಣ್ಣಮಕ್ಕಳ ಶಿಕ್ಷಣಕ್ಕೆ ಪ್ರಾಶಸ್ತ್ಯ ನೀಡಿದ್ದರು. ದೇಶದ ಪ್ರಥಮ ಮಹಿಳಾ ಶಿಕ್ಷಕಿಯಾಗಿ ಸೇವೆ ಸಲ್ಲಿಸಿರುವ ಸಾವಿತ್ರಿಬಾಯಿ ಫುಲೆ ಹೆಸರಿನಲ್ಲಿ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ನೀಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಸಚಿವ ಗೋವಿಂದ ಕಾರಜೋಳ, ಶಾಸಕ ರಾಜೀವ್, ಲಕ್ಷ್ಮಣ ಸವದಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಸಮ್ಮೇಳನವನ್ನು ಧರ್ಮದ ಆಧಾರದಲ್ಲಿ ನೋಡುವುದು ಕನ್ನಡದ ಪರಂಪರೆಗೆ ಅವಮಾನ: ಮಹೇಶ್‌ ಜೋಶಿ

Exit mobile version