ಬೆಂಗಳೂರು: ನಿರಂತರವಾಗಿ ಮಳೆ (Rain News) ಸುರಿಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಬೊಕ್ಕಸದಿಂದ ಪ್ರವಾಹ ಹಾಗೂ ಮೂಲಸೌಕರ್ಯ ನಿರ್ವಹಣೆ ದುರಸ್ತಿಗೆ 600 ಕೋಟಿ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದ್ದು, ಇದರಲ್ಲಿ ಬೆಂಗಳೂರಿನಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ 300 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ತಿಳಿಸಿದ್ದಾರೆ.
ರಾಜ್ಯಾದ್ಯಂತ ಮಳೆ ಅನಾಹುತ ಹಿನ್ನೆಲೆಯಲ್ಲಿ ನಗರದ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಏರ್ಪಡಿಸಿದ್ದ 15 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಸಚಿವರ ಸಭೆಯಲ್ಲಿ ಮಾತನಾಡಿದ ಅವರು, ಮಳೆ ಹಾನಿ ಪರಿಹಾರ ಕಾರ್ಯಕ್ಕೆ ಈ ಹಿಂದೆ 500 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿತ್ತು. ಈಗ ಬೆಂಗಳೂರು ಹೊರತುಪಡಿಸಿ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರವಾಹ ನಿಯಂತ್ರಣಕ್ಕೆ 300 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದರು.
ಮಳೆ ಹಾನಿ ಪರಿಹಾರ ಕಾರ್ಯಕ್ಕೆ ಅಧಿಕಾರಿಗಳು ಸಮರೋಪಾದಿಯಲ್ಲಿ ಶ್ರಮಿಸುತ್ತಿದ್ದಾರೆ. ಭೀಕರ ಮಳೆಯ ಸಂದರ್ಭದಲ್ಲಿ ಬೆಂಗಳೂರಿನ ಜನತೆಯ ಸಹಕಾರವಿದ್ದರೆ ಈ ಸಂಕಷ್ಟವನ್ನು ನಾವು ಸಮರ್ಥವಾಗಿ ಎದುರಿಸುತ್ತೇವೆ. ಮಳೆ ನಿಂತ ಕೂಡಲೇ ಮೂಲ ಸೌಕರ್ಯ ದುರಸ್ತಿ ಕಾರ್ಯ ಮಾಡಲಾಗುತ್ತದೆ. ಈ ದೊಡ್ಡ ಸವಾಲನ್ನು ನಾವೆಲ್ಲರೂ ಒಟ್ಟಾಗಿ ಎದುರಿಸೋಣ ಎಂದು ಜನರಿಗೆ ಕರೆ ನೀಡಿದ್ದಾರೆ.
ಇದನ್ನೂ ಓದಿ | Rain News | ಬೆಳಗಾವಿ ಜಿಲ್ಲೆಯಲ್ಲಿ ನಿರಂತರ ಮಳೆಗೆ ಹೈರಾಣಾದ ಜನ
ಅಂಗಡಿ ಮಳಿಗೆಗಳಿಗೆ ಮಳೆ ಹಾನಿ ಪರಿಹಾರ ಕೊಡಲು ಕ್ರಮ ಕೈಗೊಳ್ಳಲಾಗುವುದು, ಎಷ್ಟು ಹಾನಿ ಆಗಿದೆ ಅದಕ್ಕೆ ಪರಿಹಾರ ಕೊಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಮಳೆ ನಿರಂತರವಾಗಿ ಆರು ತಿಂಗಳು ಮಳೆಯಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಶೇ.51 ಮಳೆ ಹೆಚ್ಚಾಗಿದೆ (1ರಿಂದ 5ರವರೆಗೆ). ಮುಂದಿನ ತಿಂಗಳಲ್ಲೂ ಹೆಚ್ಚಿನ ಮಳೆಯಾಗುವ ಸೂಚನೆ ಇದೆ. ಬೆಂಗಳೂರಿನಲ್ಲಿ ಶೇ.100 ರಿಂದ ಶೇ.150 ಮಳೆಯಾಗಿದ್ದು, ಬೆಂಗಳೂರಿನ ಒಟ್ಟು 164 ಕೆರೆ ತುಂಬಿ ಹರಿಯುತ್ತಿವೆ. ಬೆಂಗಳೂರಿನ ದಕ್ಷಿಣ ವಲಯದಲ್ಲಿ ಹೆಚ್ಚು ಮಳೆಯಾಗಿದೆ. ಎಲ್ಲ ದೊಡ್ಡ ಕೆರೆಗಳಿಗೆ ಸ್ಲೀವ್ಸ್ ಗೇಟ್ ನಿರ್ಮಾಣ ಮಾಡಲು ತೀರ್ಮಾನ ಮಾಡಲಾಗಿದೆ. ಇನ್ನೂ ನಾಲ್ಕು ದಿನಗಳ ಕಾಲ ಮಳೆ ಸುರಿಯಲಿದೆ. ಹೀಗಾಗಿ ಸಭೆಯಲ್ಲಿ ರಾಜ್ಯಾದ್ಯಂತ 17 ಜಿಲ್ಲೆಗಳ ಪರಿಸ್ಥಿತಿಯ ಮಾಹಿತಿ ಪಡೆದಿದ್ದೇನೆ ಎಂದರು.
ಎಷ್ಟು ಪರಿಹಾರ?
ಸೆಪ್ಟೆಂಬರ್ 1 ರಿಂದ 5 ರವರೆಗೆ ಮಳೆ ಹಾನಿಯಿಂದ 5,062 ಮಂದಿ ಜನರು ಕಾಳಜಿ ಕೇಂದ್ರಗಳಲ್ಲಿ ಇದ್ದಾರೆ. 32 ಸಾವಿರ ಎಕರೆ ಕೃಷಿ ಭೂಮಿ, 1374 ತೋಟಗಾರಿಕೆ ಪ್ರದೇಶ ಹಾನಿಯಾಗಿದೆ. ಒಟ್ಟು 430 ಮನೆಗಳು ತೀವ್ರವಾಗಿ ಹಾನಿಗೊಂಡಿದ್ದು, 255 ಕಿಲೋಮೀಟರ್ ರಸ್ತೆಗಳು ಹಾನಿಯಾಗಿವೆ. ಮನೆಗಳಿಗೆ ಕಡಿಮೆ ಹಾನಿ ಆಗಿರುವ ಕಡೆ 50 ಸಾವಿರ ರೂಪಾಯಿ ಕೊಡಬೇಕು. ತೀವ್ರ ಹಾನಿಯಾದ ಮನೆಗೆ 90 ಸಾವಿರ ರೂಪಾಯಿ ಪರಿಹಾರ ನೀಡಲು ಹೇಳಿದ್ದೇನೆ ಎಂದರು.
ಎಸ್‌ಡಿಆರ್‌ಎಫ್ ಕಂಪನಿ ಸ್ಥಾಪನೆಗೆ 9.5 ಕೋಟಿ ಬಿಡುಗಡೆ ಮಾಡಲಾಗಿದೆ. ಎಸ್‌ಡಿಆರ್‌ಎಫ್ 2 ತಂಡ ರಚನೆ ಮಾಡಲು ತೀರ್ಮಾನ ಮಾಡಿದ್ದೇವೆ. ಭಾನುವಾರ ರಾತ್ರಿ ಭೀಮೇಶ್ವರ ನದಿ ತುಂಬಿ ಉಕ್ಕಿ ಹರಿದಿದ್ದರಿಂದ ಟಿ.ಕೆ. ಹಳ್ಳಿಯ ಪಂಪ್ ಹೌಸ್ ಜಲಾವೃತವಾಗಿದೆ. ಇನ್ನು ಎರಡು ಮೂರು ದಿನದಲ್ಲಿ ಇದನ್ನ ಸರಿಪಡಿಸಿ ನೀರು ಪೂರೈಸಲು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಎಲ್ಲೆಲ್ಲಿ ಬೋರ್‌ವೆಲ್ ಇದೆ ಅದನ್ನು ರಿ ಜನರೇಟ್ ಮಾಡಿ ಇನ್ನೆರಡು ದಿನ ನೀರು ಸರಬರಾಜು ಮಾಡಲು ಸೂಚಿಸಿದ್ದೇನೆ. ಬೋರ್ ವೆಲ್ ಇಲ್ಲದ ಕಡೆ ಟ್ಯಾಂಕರ್‌ನಲ್ಲಿ ನೀರು ಸರಬರಾಜು ಮಾಡಲು ಬಿಬಿಎಂಪಿ ಮತ್ತು ಬಿಡಬ್ಲ್ಯುಎಸ್‌ಎಸ್‌ಬಿಗೆ ಸೂಚಿಸಿದ್ದೇನೆ. ಸ್ವಲ್ಪ ಸಮಯದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಮಳೆಯಾಗಿದೆ. ಹೀಗಾಗಿ 11 ಸಾವಿರ ಕೋಟಿ ರುಪಾಯಿ ನಷ್ಟದ ಅಂದಾಜು ಕೇಂದ್ರಕ್ಕೆ ಕಳುಹಿಸಿದ್ದೇವೆ ಎಂದರು.
ರಾಜಕೀಯ ಮಾಡುವುದು ಸರಿಯಲ್ಲ
ಸಪ್ತ ಸಚಿವರು ನಾಪತ್ತೆಯಾಗಿದ್ದಾರೆ ಎಂಬ ಕಾಂಗ್ರೆಸ್ ಆರೋಪಕ್ಕೆ ಸ್ಪಂದಿಸಿ, ಕಾಂಗ್ರೆಸ್ ಎಲ್ಲದರಲ್ಲೂ ರಾಜಕೀಯ ಮಾಡುತ್ತದೆ. ಜನ ಸಂಕಷ್ಟದಲ್ಲಿದ್ದಾಗ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಇಂತಹ ತುರ್ತು ಸಮಯದಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು, ಆದರೆ ರಾಜಕೀಯ ಮಾಡುವುದು ಸರಿಯಲ್ಲ ಎಂದು ತಿರುಗೇಟು ನೀಡಿದ ಅವರು, ಈಗಾಗಲೇ ಸೂಚನೆ ನೀಡಿರುವಂತೆ ಬೆಂಗಳೂರಿನ 8 ವಲಯಕ್ಕೂ ಈ ಹಿಂದೆ ಸೂಚಿಸಿದ ಸಚಿವರೇ ಕೆಲಸ ಮಾಡಿದ್ದಾರೆ. ಅವರು ಈಗಾಗಲೇ ಅಲರ್ಟ್ ಆಗಿ ಅವರವರ ವಲಯದಲ್ಲಿ ಮಳೆ ಹಾನಿ ಪರಿಶೀಲನಾ ಕಾರ್ಯದಲ್ಲಿ ತೊಡಗಿದ್ದಾರೆ ಎಂದರು.
ಜನೋತ್ಸವಕ್ಕೆ ಮಳೆ ಅಡ್ಡಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಸೆಪ್ಟೆಂಬರ್ 8ರಂದು ಕಾರ್ಯಕ್ರಮ ಮಾಡಲಾಗುತ್ತದೆ. ಮಂಗಳೂರಿನಲ್ಲಿ ಮಳೆ ಯಾಗುವ ಮುನ್ಸೂಚನೆ ಇತ್ತು. ಆದರೆ ಪ್ರಧಾನಿ ಮೋದಿ ಕಾಲಿಟ್ಟ ಕೂಡಲೇ ಬಿಸಿಲು ಬಂತು. ಈಗ ಸೆಪ್ಟೆಂಬರ್ 8ಕ್ಕೂ ಹಾಗೇ ಆಗುತ್ತದೆ ಎಂದು ಕಾರ್ಯಕ್ರವನ್ನು ಯಶಸ್ವಿಯಾಗಿ ಮಾಡುವ ವಿಶ್ವಾಸ ವ್ಯಕ್ತಪಡಿಸಿದರು.
ಸಭೆಯಲ್ಲಿ ಸಚಿವ ವಿ. ಸೋಮಣ್ಣ, ಆರ್. ಅಶೋಕ್, ಭೈರತಿ ಬಸವರಾಜ್, ಬಿಬಿಎಂಪಿ ಕಮಿಷನರ್ ಹಾಗೂ ಬಿಬಿಎಂಪಿ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು.
ಇದನ್ನೂ ಓದಿ | Cauvery Water | ಮಳೆ ನೀರಲ್ಲಿ ಮುಳುಗಿದ ಯಂತ್ರಾಗಾರಗಳು: ಇನ್ನೆರಡು ದಿನ ಬೆಂಗಳೂರಿಗೆ ಕಾವೇರಿ ನೀರಿಲ್ಲ