ಬೆಂಗಳೂರು: ಕಾಂಗ್ರೆಸ್ ಮಾಡಿರುವ ಕರ್ಮಕಾಂಡ ಮುಚ್ಚಿಹಾಕಲೆಂದೇ ಅವರು ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿಹಾಕಿದರು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಗರದಲ್ಲಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದ ಅಂಗವಾಗಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಭ್ರಷ್ಟಾಚಾರ ನಿಲ್ಲಿಸಿ ಬೆಂಗಳೂರು ಉಳಿಸಿ ಎಂದು ಕಾಂಗ್ರೆಸ್ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿಯಾಗಿದೆ. ಶೇ.60ರಷ್ಟು ಪ್ರೀಮಿಯಂ ಬೆಂಗಳೂರಿನಲ್ಲಿ ನೀಡಿರುವ ದಾಖಲೆ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದ ದಾಖಲೆಗಳಲ್ಲಿದೆ ಎಂದು ಆರೋಪಿಸಿದರು.
ಸುಮಾರು 800 ಕೋಟಿ ರೂ.ಗಳಲ್ಲಿ ಶೇ.60 ಪ್ರೀಮಿಯಮ್ ದೇಶದಲ್ಲಿ ಎಲ್ಲಿಯಾದರೂ ಕೊಟ್ಟಿದ್ದಾರೆಯೇ? ಇವರು ಅಂತಹ ಶೂರರು. ಇಷ್ಟು ಮುಕ್ತವಾಗಿ ಶೇ.40-60ರಷ್ಟು ಪ್ರೀಮಿಯಮ್ ಕೊಟ್ಟು ಭ್ರಷ್ಟಾಚಾರ ನಡೆಸಿ, ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ ಅದು ಸೋಗಲಾಡಿತನ. ತಾವು ಮಾಡಿರುವುದನ್ನು ಮುಚ್ಚಿಕೊಳ್ಳುವ ಸಲುವಾಗಿ ಈ ರೀತಿ ಹೇಳುತ್ತಿದ್ದಾರೆ. ನಮ್ಮ ಸರ್ಕಾರ ಈಗಾಗಲೇ ಲೋಕಾಯುಕ್ತಕ್ಕೆ ದೂರು ನೀಡಿದೆ. ಆರೋಪ ಮಾಡುತ್ತಿರುವುದರ ಪ್ರಕರಣದ ಬಗ್ಗೆ ವಿವರಗಳನ್ನು ಲೋಕಾಯುಕ್ತಕ್ಕೆ ನೀಡಲಿ ಎಂದರು.
ಇದನ್ನೂ ಓದಿ | Aam Aadmi Party : ಆಮ್ ಆದ್ಮಿ ಪಾರ್ಟಿಯ ನೂತನ ಪದಾಧಿಕಾರಿಗಳ ಘೋಷಣೆ
ನೈತಿಕ ಹಕ್ಕಿಲ್ಲ
ಲೋಕಾಯುಕ್ತ ಎಂಬ ಸ್ವತಂತ್ರ, ಸಂವಿಧಾನಬದ್ಧ ಸಂಸ್ಥೆಯನ್ನು ಮುಚ್ಚಿರುವ ಇವರು ನಮಗೆ ಪಾಠ ಹೇಳುತ್ತಾರೆ. ಲೋಕಾಯುಕ್ತ ಯಾಕೆ ಮುಚ್ಚಿದರು? ಇವರ ವಿರುದ್ಧ 59 ಪ್ರಕರಣಗಳು ಮುಖ್ಯಮಂತ್ರಿಗಳ ಸಮೇತವಾಗಿ ದಾಖಲಾಗಿತ್ತು. ಎಸಿಬಿ ಸೃಜಿಸಿ, ಪ್ರಕರಣ ಮುಚ್ಚಿಹಾಕಲು ಬಿ ವರದಿ ಹಾಕಿದರು. ಅವೆಲ್ಲವನ್ನೂ ಲೋಕಾಯುಕ್ತಕ್ಕೆ ಶಿಫಾರಸು ಮಾಡುತ್ತಿದ್ದೇವೆ. ಇವರಿಗೆ ಯಾವ ನೈತಿಕ ಹಕ್ಕಿದೆ. ಲೋಕಾಯುಕ್ತ ಮುಚ್ಚಿದ ಪ್ರಶಸ್ತಿ ಭ್ರಷ್ಟಾಚಾರ ಬೆಂಬಲಿಸಲು, ಅದರ ಪರವಾಗಿ, ಕುಮ್ಮಕ್ಕು ನೀಡಲು, ಭ್ರಷ್ಟಾಚಾರದೊಂದಿಗೆ ಕೈಜೋಡಿಸಿ ಸರ್ಕಾರ ನಡೆಸಿದರು. ಭ್ರಷ್ಟಾಚಾರ ಕಾಂಗ್ರೆಸ್ ಸರ್ಕಾರದ ಆಡಳಿತದ ಒಂದು ಭಾಗವಾಗಿತ್ತು. ಅದಕ್ಕಾಗಿ ಅದನ್ನು ಮುಚ್ಚಿಹಾಕಿದರು ಎಂದರು.
ಜನಬೆಂಬಲವಿದೆ
ಪ್ರಧಾನಿಗಳನ್ನು ಹಿಟ್ಲರ್ ಎಂದು ಕರೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರಧಾನಿಗಳು ವಿಶ್ವವ್ಯಾಪಿ ನಾಯಕರು. ಇಡೀ ಭಾರತ ದೇಶದಲ್ಲಿ ಜನಮನ್ನಣೆ ಗಳಿಸಿದವರು. ಅವರ ಬಗ್ಗೆ ಇರುವ ಸದಭಿಪ್ರಾಯ ಬಹುತೇಕ ಯಾವುದೇ ಪ್ರಧಾನಿಗಳಿಗಿಲ್ಲ. ಅಂಥವರ ಬಗ್ಗೆ ಮಾತನಾಡಿದರೆ ಜನ ನಂಬುವುದಿಲ್ಲ. ಅದು ಆಕಾಶಕ್ಕೆ ಉಗುಳಿದಂತೆ ಎಂದ ಸಿಎಂ, ಗುಜರಾತ್‌ನಲ್ಲಿ ಅವರು ಮುಖ್ಯಮಂತ್ರಿಗಳಾಗಿದ್ದಾಗ ಕಾಂಗ್ರೆಸ್ ನಾಯಕಿ ಮೌತ್ ಕಾ ಸೌದಾಗರ್ (ಸಾವಿನ ವ್ಯಾಪಾರಿ) ಎಂದಿದ್ದರು. ಆಗ ಅವರಿಗೆ ಹೆಚ್ಚು ಮತ ದೊರೆತು ಜಾಸ್ತಿ ಸ್ಥಾನಗಳು ದೊರೆಯಿತು. ಅವರು ಏನು ಹೇಳುತ್ತಾರೋ ಹೇಳಲಿ ಜನಬೆಂಬಲ ನಮ್ಮ ಜತೆಗಿದೆ, ಇನ್ನಷ್ಟು ಬೆಂಬಲ ಹೆಚ್ಚಾಗುತ್ತದೆ ಎಂದರು.