Site icon Vistara News

Millet and Organic Fair | ರೈತರ ಬದುಕಿನ ಅನಿಶ್ಚಿತತೆ ಹೋಗಲಾಡಿಸಲು ವೈಜ್ಞಾನಿಕ ಔಟ್ ಲುಕ್ ವರದಿ ಅಗತ್ಯ: ಸಿಎಂ

Millet and Organic Fair

ಬೆಂಗಳೂರು: ರೈತರ ಬದುಕಿನ ಅನಿಶ್ಚಿತತೆಯನ್ನು ಬದಲಾಯಿಸಲು ಔಟ್ ಲುಕ್ ವರದಿಯನ್ನು ವೈಜ್ಞಾನಿಕವಾಗಿ ಸಿದ್ಧಪಡಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು. ನಗರದ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಮೇಳ- 2023 (Millet and Organic Fair) ಉದ್ಘಾಟಿಸಿ ಮಾತನಾಡಿದರು.

ಬೇರೆ ದೇಶಗಳಲ್ಲಿ ಮುಂದಿನ ಋತುವಿಗೆ ಎಷ್ಟು ಮಳೆಯಾಗಬಹುದು ಎಂದು ಕಳೆದ 10 ವರ್ಷಗಳ ಮಳೆ ಮಾದರಿಯನ್ನು ಆಧರಿಸಿ, ಎಷ್ಟು ಬಿತ್ತನೆ, ಉತ್ಪಾದನೆ, ಅಂತಾರರಾಷ್ಟ್ರೀಯ ಮಾರುಕಟ್ಟೆ, ಸ್ಥಳೀಯ ಮಾರುಕಟ್ಟೆಗಳನ್ನು ಪರಿಶೀಲಿಸಿ, ಒಂದು ಬೆಲೆಯನ್ನು ನಿಗದಿ ಮಾಡುವ ಔಟ್‍ಲುಕ್ ವರದಿ ತಯಾರಿಸುತ್ತಾರೆ. ಇಂತಹ ವರದಿಯನ್ನು ಇಲ್ಲಿಯೂ ಸಿದ್ಧಪಡಿಸಬೇಕು ಎಂದು ತಿಳಿಸಿದರು.

ಇದನ್ನೂ ಓದಿ | Budget Session | ಫೆಬ್ರವರಿ 17ಕ್ಕೆ ಬೊಮ್ಮಾಯಿ ಸರ್ಕಾರದ ʼಚುನಾವಣಾ ಬಜೆಟ್‌ʼ

ರೈತ ಬೆಳೆಯುವ ಬೆಳೆಗೆ ಎಷ್ಟು ಖರ್ಚು, ಎಷ್ಟು ಧಾರಣೆ ದೊರೆಯುತ್ತದೆ ಎಂದು ತಿಳಿದರೆ, ಆ ಮೊತ್ತದೊಳಗೆಯೇ ಖರ್ಚು ಮಾಡುತ್ತಾನೆ. ಬೆಳೆ ಉಳಿಸುವ ಸಲುವಾಗಿ ಖರ್ಚು ಮಾಡುವ ಈ ವಿಧಾನದ ಬಗ್ಗೆ ಚರ್ಚೆ ಮಾಡಿ ಒಂದು ನಿರ್ಧಾರಕ್ಕೆ ಬರಲಾಗುತ್ತದೆ. ಈ ವರದಿಯನ್ನು ಇಲಾಖೆ ಹಾಗೂ ಕೃಷಿ ದರ ಆಯೋಗದ ಸಹಯೋಗದೊಂದಿಗೆ ಸಿದ್ಧಪಡಿಸಬೇಕು ಎಂದರು.

ಗ್ರಾಮೀಣ ಸಾಲ ಪದ್ಧತಿ ಬದಲಾಗಬೇಕು
ಗ್ರಾಮೀಣ ಆರ್ಥಿಕತೆ ಸುಧಾರಿಸಲು ಗ್ರಾಮೀಣ ಸಾಲ ಪದ್ಧತಿ ಬದಲಾಗಬೇಕು. ಭೂಮಿಯಿಂದ ಸಾಲದ ಅನುಪಾತವನ್ನು ಯಾರೂ ನಿರ್ವಹಣೆ ಮಾಡಿಲ್ಲ. 20 ಸಾವಿರ ರೂ. ನೀಡಬೇಕಾದರೆ 7 ರಿಂದ 8 ಸಾವಿರ ರೂ. ನೀಡಲಾಗುತ್ತದೆ. ನಿಖರವಾಗಿ ಸಾಲ ನೀಡಿದರೆ ರೈತ ಮಾರ್ವಾಡಿ ಎದುರು ಕೈ ಚಾಚುವುದನ್ನು ನಿಲ್ಲಿಸುತ್ತಾನೆ. ಹೀಗಾಗಿ ಗ್ರಾಮೀಣ ಸಾಲ ಪದ್ಧತಿ ಬದಲಾಗಬೇಕು ಎಂದು ಕೇಂದ್ರ ಹಣಕಾಸು ಸಚಿವರು ಹಾಗೂ ಕೃಷಿ ಸಚಿವರಿಗೆ ಒತ್ತಾಯ ಮಾಡಿದ್ದು, ನಬಾರ್ಡ್ ಸಾಲ ಪ್ರಮಾಣವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲು ಒತ್ತಾಯಿಸಲಾಗಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಈ ವರ್ಷ 33 ಲಕ್ಷ ರೈತರಿಗೆ ಶೂನ್ಯ ಬಡ್ಡಿಯಲ್ಲಿ ಸಾಲದ ನೆರವು ನೀಡಿದ್ದು, 3 ಲಕ್ಷ ಹೊಸ ರೈತರಿಗೆ ಸಾಲ ನೀಡಲಾಗಿದೆ. ಇದೊಂದು ದಾಖಲೆಯಾಗಿದೆ. ರೈತಶಕ್ತಿ ಯೋಜನೆ 10 ದಿನಗಳ ಕಾಲದಲ್ಲಿ ಪ್ರಾರಂಭಿಸಲಾಗಿದೆ. ಯಶಸ್ವಿನಿ ಯೋಜನೆಯನ್ನು ಮರುಪ್ರಾರಂಭಿಸಲಾಗಿದೆ. ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನವನ್ನು ನೀಡಲಾಗುತ್ತಿದೆ. 10 ಎಚ್.ಪಿ ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಈ ಯೋಜನೆಗೆ ಶುಲ್ಕ ಪಡೆಯಬೇಕೆಂದು ಹಿಂದಿನ ಸರ್ಕಾರಗಳು ಆಜ್ಞೆ ಮಾಡಿದ್ದವು. ಒಂದು ಪಂಪ್ ಗೆ 10 ಸಾವಿರ ರೂ.ಗಳನ್ನು ಪಡೆಯಬೇಕೆಂಬ ಪ್ರಸ್ತಾವನೆ ಹಿಂದಿನ ಸರ್ಕಾರದಲ್ಲಿತ್ತು. ಆದರೆ, ಈ ಪ್ರಸ್ತಾವನೆಯನ್ನು ಅನುಷ್ಠಾನ ಮಾಡುವ ಧೈರ್ಯ ಮಾಡಲಿಲ್ಲ ಎಂದು ತಿಳಿಸಿದರು.

ನಮ್ಮ ರಾಜ್ಯ ಹೆಚ್ಚುವರಿ ವಿದ್ಯುತ್ ಉತ್ಪಾದನೆ ಮಾಡುತ್ತಿರುವುದರಿಂದ ಹಾಗೂ ಸೋಲಾರ್ ಕೃಷಿ ಪಂಪ್‍ಸೆಟ್‌ಗಳಿಗೆ ನರೇಂದ್ರ ಮೋದಿಯವರ ಸರ್ಕಾರ ಯೋಜನೆಗಳನ್ನು ನೀಡಿ ದೊಡ್ಡ ಪ್ರಾಮಾಣದಲ್ಲಿ ಪ್ರೋತ್ಸಾಹಿಸಲಾಗುತ್ತಿದೆ. ರೈತ ವಿದ್ಯಾ ನಿಧಿಯಡಿ 11 ಲಕ್ಷ ರೈತರ ಮಕ್ಕಳು ಪ್ರಯೋಜನ ಪಡೆದಿದ್ದಾರೆ ಎಂದು ಸಿಎಂ ತಿಳಿಸಿದರು.

ಸಿರಿಧಾನ್ಯದ ಬೆಳೆ ಬಗ್ಗೆ ರೈತರಲ್ಲಿ ಜಾಗೃತಿ
ರಾಜ್ಯದಲ್ಲಿ ನವಣೆ, ಸಾಮೆ, ರಾಗಿ, ಜೋಳ ಸೇರಿದಂತೆ ಎಲ್ಲ ಸಿರಿಧಾನ್ಯಗಳನ್ನು ಬೆಳೆಯಲಾಗುತ್ತಿದೆ. ಈ ಹಿಂದೆ ಕೃಷಿ ಕೇವಲ ಆಹಾರ ಉತ್ಪಾದನೆಗೆ ಮಾತ್ರ ಸೀಮಿತವಾಗಿತ್ತು. ಈಗ ವಾಣಿಜ್ಯ ಉದ್ದೇಶಕ್ಕೆ ಮಾಡಲಾಗುತ್ತಿದೆ. ಆಹಾರ ಧಾನ್ಯ ಉತ್ಪಾದನೆ ಹಾಗೂ ವಾಣಿಜ್ಯ ಬೆಳೆಗಳ ನಡುವೆ ಸಮತೋಲನವನ್ನು ಕಾಯ್ದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಆಹಾರ ಸುರಕ್ಷತೆಗೆ ತೊಂದರೆಯುಂಟಾಗಬಹುದು. ಬರುವ ದಿನಮಾನದಲ್ಲಿ ಆಹಾರ ಕೊರತೆ ಉಂಟಾಗಬಹುದೆಂದು ವಿಶ್ವ ಆಹಾರ ತಜ್ಞರು ತಿಳಿಸಿದ್ದಾರೆ. ಆಹಾರದ ಪ್ರಮಾಣ, ಧಾನ್ಯಗಳು, ನಾರಿನಾಂಶ, ಪೌಷ್ಟಿಕಾಂಶ ಇರಬೇಕು ಎಂಬ ಬಗ್ಗೆ ಅಧ್ಯಯನ ಮಾಡಿ ಈ ವಿಷಯಗಳಲ್ಲಿ ರೈತರಲ್ಲಿ ಜಾಗೃತಿಯನ್ನು ಮೂಡಿಸಬೇಕು ಎಂದರು.

ಪಡಿತರದಲ್ಲಿ ಜೋಳ ಮತ್ತು ರಾಗಿ
ವಾಣಿಜ್ಯ ಬೆಳೆಯಾದ ಅಡಿಕೆ ಕಳೆದ ಎರಡು ವರ್ಷದಲ್ಲಿ ಇಳುವರಿ ಹೆಚ್ಚಾಗಿದೆ. ಸಿರಿಧಾನ್ಯಗಳ ಉತ್ತಮ ನೀರಾವರಿ ಹೆಚ್ಚಾಗಿದ್ದರಿಂದ ದೊಡ್ಡ ಪ್ರಮಾಣದಲ್ಲಿ ಭತ್ತ ಬೆಳೆಯಲಾಗುತ್ತಿದೆ. ರಾಜ್ಯದಲ್ಲಿ ಜೋಳ ಮತ್ತು ರಾಗಿಯನ್ನು ಜನ ಹೆಚ್ಚಾಗಿ ಬಳಸುತ್ತಾರೆ. ಕಳೆದ ಮೂರು ವರ್ಷದಿಂದ ಜೋಳ ಮತ್ತು ರಾಗಿಯನ್ನು ನಮ್ಮ ಪಡಿತರ ವ್ಯವಸ್ಥೆಯಲ್ಲಿ ಕೊಡಲಾಗುತ್ತಿದೆ. ಇದರಿಂದ ರೈತರು ಬೆಳೆದ ಬೆಳೆಗೆ ಹೆಚ್ಚಿನ ಬೆಲೆ ದೊರೆಯುತ್ತದೆ. ಇನ್ನು ಜನರಿಗೆ ಆರೋಗ್ಯ ಹಾಗೂ ರೈತರಿಗೆ ಲಾಭವನ್ನು ತರುವಂತಹ ಸಿರಿಧಾನ್ಯ ಕೃಷಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಪ್ರೋತ್ಸಾಹ ನೀಡಲು ಸಿರಿಧಾನ್ಯ ಮೇಳವನ್ನು ಆಯೋಜಿಸಲಾಗಿದೆ ಎಂದರು.

ಕೃಷಿ ವಿವಿಗಳು ಕ್ಯಾಂಪಸ್‌ ಬಿಟ್ಟು ಹೊರಬೇಕು
ಕೃಷಿಯಲ್ಲಿ ದೊಡ್ಡ ಪ್ರಮಾಣದ ಬದಲಾವಣೆ ಆಗಲಿದೆ. ಹವಾಮಾನದ ಬದಲಾವಣೆಗೆ ಅನುಗುಣವಾಗಿ ಕೃಷಿ ಕ್ಷೇತ್ರವನ್ನು ಸಜ್ಜುಗೊಳಿಸಲು ಕೃಷಿ ವಿಶ್ವವಿದ್ಯಾಲಯಗಳು ಸನ್ನದ್ಧವಾಗಬೇಕು. ಕೃಷಿ ಕ್ಷೇತ್ರದಲ್ಲಿನ ಇಂದಿನ ಸವಾಲುಗಳ ಬಗ್ಗೆ ಸಂಶೋಧನೆಗಳನ್ನು ಮಾಡಬೇಕು. ಹವಾಮಾನ ಬದಲಾವಣೆ, ಮಣ್ಣಿನ ಸವಕಳಿ, ಹೆಚ್ಚಿನ ನೀರು ಬಳಕೆ, ಜವುಳು, ಭೂಮಿಯ ಮೆಲೆ ರಾಸಾಯನಿಕದಿಂದ ಆಗುತ್ತಿರುವ ಸಮಸ್ಯೆ, ಕಳಪೆ ಹಾಗೂ ನಕಲಿ ಬೀಜ ಮಾರಾಟ ತಡೆಯುವ ಬಗ್ಗೆ ವಿಶ್ವ ವಿದ್ಯಾಲಯಗಳು ಕ್ರಮ ಕೈಗೊಳ್ಳಬೇಕು. ಕೃಷಿ ವಿವಿ ಸಂಶೋಧಕರು, ಕ್ಯಾಂಪಸ್‌ ಬಿಟ್ಟು ಹೊರ ಬಂದು ರೈತನ ಹೊಲವನ್ನೇ ಕ್ಯಾಂಪಸ್‌ ಅಗಿ ಮಾಡಿಕೊಳ್ಳಬೇಕು ಎಂದರು.

ಕೃಷಿ ಸಚಿವ ಬಿ.ಸಿ.ಪಾಟೀಲ್, ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ವಿಧಾನ ಪರಿಷತ್ ಸದಸ್ಯರಾದ ಟಿ. ಎ. ಶರವಣ, ಛಲವಾದಿ ನಾರಾಯಣಸ್ವಾಮಿ, ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ | BJP Karnataka : ಫೆಬ್ರವರಿ ಅಂತ್ಯಕ್ಕೆ ನಾಲ್ಕೂ ದಿಕ್ಕುಗಳಿಂದ ಬಿಜೆಪಿ ಯಾತ್ರೆ; ಜಿಲ್ಲಾ ಮಟ್ಟದಲ್ಲಿ ಪ್ರಣಾಳಿಕೆ: ಕಟೀಲ್‌ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ

Exit mobile version