Site icon Vistara News

ಮಾ.31ರೊಳಗೆ ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ 100 ಕೋಟಿ ರೂ; ಕ್ರಿಯಾಯೋಜನೆ ಸಲ್ಲಿಸಲು ಸಿಎಂ ಬೊಮ್ಮಾಯಿ ಸೂಚನೆ

ಗಡಿ ಅಭಿವೃದ್ಧಿ

#image_title

ಬೆಂಗಳೂರು: ಗಡಿಭಾಗದಲ್ಲಿ ಶಿಕ್ಷಣ, ಕೈಗಾರಿಕೆ, ಮೂಲಭೂತ ಸೌಕರ್ಯ, ಕನ್ನಡ ಭಾಷಾ ಅಭಿವೃದ್ಧಿಗಳ ಬಗ್ಗೆ ಕೆಲಸ ಮಾಡುವ ಅವಶ್ಯಕತೆ ಇದ್ದು, ಗಡಿ ಅಭಿವೃದ್ಧಿ ಪ್ರಾಧಿಕಾರಕ್ಜೆ ಮಾರ್ಚ್ 31 ರೊಳಗೆ 100 ಕೋಟಿ ರೂ.ಗಳನ್ನು ಒದಗಿಸಲಾಗುವುದು. ಈ ಅನುದಾನಕ್ಕೆ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿ ಸಲ್ಲಿಸಿ ಎಂದು ಪ್ರಾಧಿಕಾರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು.

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಆಯೋಜಿಸಿದ್ದ ʼಗಡಿನಾಡ ಚೇತನʼ ರಾಜ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗಡಿ ಅಭಿವೃದ್ಧಿ ಪ್ರಾಧಿಕಾರಕ್ಜೆ ಈಗಾಗಲೇ 25 ಕೋಟಿ ರೂಪಾಯಿ ನೀಡಲಾಗಿದೆ. ಮುಂದಿನ ಆಯವ್ಯಯದಲ್ಲಿಯೂ 100 ಕೋಟಿ ರೂ.ಗಳ ಅನುದಾನವನ್ನು ಒದಗಿಲಾಗುತ್ತದೆ. ಗಡಿಭಾಗದಲ್ಲಿರುವ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವಾಗಬೇಕು. ಗಡಿ ಆಚೆ ಇರುವ ಕನ್ನಡಿಗರೂ ನಮ್ಮವರು. ಅವರ ಬೇಡಿಕೆಗೂ ಸ್ಪಂದಿಸುವ ಕೆಲಸ ನಾವು ಮಾಡುತ್ತೇವೆ ಎಂದರು.

ಇದನ್ನೂ ಓದಿ | Traffic E-Challan: ಸಂಚಾರ ನಿಯಮ ಉಲ್ಲಂಘನೆಯ ದಂಡ ಪಾವತಿಗೆ ಶೇ. 50 ರಿಯಾಯಿತಿ; ಸಾರಿಗೆ ಇಲಾಖೆ ಆದೇಶ

ಗಡಿ ಭಾಗದ ಜನರ ಭವಿಷ್ಯ ಸುನಿಶ್ಚಿತಗೊಳಿಸುವುದು ನಮ್ಮ ಕರ್ತವ್ಯ

ಕರ್ನಾಟಕದ ಮುಖ್ಯಮಂತ್ರಿಯಾಗಿ ಭಾಷೆ, ಗಡಿ ಭಾಗದವರ ರಕ್ಷಣೆ, ಪೋಷಣೆ ಮತ್ತು ಭವಿಷ್ಯವನ್ನು ಸುನಿಶ್ಚಿತಗೊಳಿಸುವುದು ನನ್ನ ಕರ್ತವ್ಯ. ನಮ್ಮ ಗಡಿಯಲ್ಲಿನ ಕನ್ನಡಿಗರ ಅಭಿವೃದ್ಧಿಯ ಬಗ್ಗೆ ಮೊದಲು ನಾವು ಗಮನಹರಿಸಬೇಕು. ಗಡಿಭಾಗದಲ್ಲಿರುವ ಕನ್ನಡಿಗರನ್ನು ನಿರ್ಲಕ್ಷ್ಯ ಮಾಡುವುದಿಲ್ಲ. ಗಡಿಭಾಗದ ಕನ್ನಡಿಗರಿಗೆ ಎಲ್ಲ ಸೌಕರ್ಯ, ಅವಕಾಶ ನೀಡಿ, ಭವಿಷ್ಯವನ್ನು ಬರೆಯುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಗಡಿ ಪ್ರಾಧಿಕಾರಕ್ಕೆ ಮೊದಲು 8-10 ಕೋಟಿ ನೀಡುತ್ತಿದ್ದರು. ಈ ಹೆಚ್ಚಿನ ಅನುದಾನ ನೀಡಲಾಗುತ್ತಿದೆ ಎಂದರು.

ಕನ್ನಡಕ್ಕೆ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳು

ಕನ್ನಡದ ಶಬ್ದ, ಭಾವಾರ್ಥದಲ್ಲಿ ಶ್ರೀಮಂತವಾಗಿದೆ. ಈ ಭಾಷೆಯಲ್ಲಿ ಸ್ಪಷ್ಟತೆಯಿದ್ದು, ಕನ್ನಡಕ್ಕೆ ಭವ್ಯವಾದ ಭವಿಷ್ಯ ಇದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಕನ್ನಡಕ್ಕೆ ಅಂತರ್ಗತ ಶಕ್ತಿಯಿದ್ದು, ಯಾವುದೇ ಸರ್ಕಾರದ ರಕ್ಷಣೆಯ ಅವಶ್ಯಕತೆಯಿಲ್ಲ. ಕನ್ನಡ ಭಾಷೆಗೆ ಯಾವುದೇ ಆತಂಕವಿಲ್ಲ. ಕನ್ನಡಕ್ಕೆ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳು ಬಂದಿವೆ. ಎಲ್ಲ ಭಾಷೆಗಳ ಪೈಪೋಟಿ, ಪ್ರಭಾವವನ್ನು ಎದುರಿಸಿ, ಕನ್ನಡ ಸಾಹಿತ್ಯ ಜ್ಞಾನಪೀಠ ಪ್ರಶಸ್ತಿ ಪಡೆಯುತ್ತಿದೆ. ಸರಳ, ಸಾರ್ವಜನಿಕರ ಸಾಹಿತ್ಯ ನಮಗೆ ಅಗತ್ಯ. ಕನ್ನಡದಲ್ಲಿ ಇದು ಸಾಧ್ಯವಿದೆ. ಕನ್ನಡ ಉಳಿದಿದ್ದರೆ, ಬೆಳೆದಿದ್ದರೆ ಅದಕ್ಕೆಲ್ಲಾ ಸಾಹಿತಿಗಳು ಮೂಲ ಕಾರಣ ಎಂದರು.

ಇದನ್ನೂ ಓದಿ | Budget 2023 : ಕಾಂಗ್ರೆಸ್‌ ತಪ್ಪಿನಿಂದ ಮೇಕೆದಾಟು ವಿವಾದದಲ್ಲಿದೆ : ಕೇಂದ್ರ ಬಜೆಟ್‌ ಅಭಿವೃದ್ಧಿಗೆ ಪೂರಕ ಎಂದ ಸಿಎಂ ಬಸವರಾಜ ಬೊಮ್ಮಾಯಿ

ಕನ್ನಡದ ಏಕೀಕರಣ

ಗಡಿನಾಡಿನಲ್ಲಿ ಲಿಗಾಡೆ, ಪಟ್ಟದ್ದೇವರು ಆ ಕಾಲದಲ್ಲಿ ಮಾಡಿರುವ ಕೆಲಸ ಗಟ್ಟಿತನದ್ದು. ಕನ್ನಡದ ಏಕೀಕರಣ ಸುಲಭವಾಗಿರಲಿಲ್ಲ. ಸ್ವಾತಂತ್ರ್ಯದ ಪೂರ್ವದಲ್ಲಿ ಹಾಗೂ ನಂತರದಲ್ಲಿ ಆಡಳಿತಗಾರರು ಕನ್ನಡದ ಏಕೀಕರಣಕ್ಕೆ ಮಹತ್ವ ನೀಡಿ ಕನ್ನಡದ ಮನಸ್ಸುಗಳು ಒಂದಾದವು. ಅಂದೂ ಸಾಹಿತ್ಯ ಮಹತ್ವದ ಪಾತ್ರವನ್ನು ವಹಿಸಿತ್ತು. ಕನ್ನಡ ನಾಡಿನಲ್ಲಿ ಹುಟ್ಟಿದ್ದು ನಮ್ಮ ಪುಣ್ಯ. ಗಡಿ ಪ್ರಾಧಿಕಾರ ಉತ್ತಮ ಕೆಲಸ ಮಾಡಿದೆ. ಅವರ ಶಕ್ತಿಗೆ ಅಗತ್ಯ ಸಹಕಾರ, ಅನುದಾನವನ್ನು ಸರ್ಕಾರ ನೀಡಲಿದೆ. ಉತ್ತಮ ಕ್ರಿಯಾಯೋಜನೆ ತಯಾರಿಸಿ ಎಂದರು. ಪ್ರಶಸ್ತಿ ವಿಜೇತರಿಗೆ ಅಭಿನಂದಿಸಿದರು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ:ಸಿ.ಸೋಮಶೇಖರ್, ಎಂ.ಎಸ್.ಸಿಂಧೂರ, ಮಾಜಿ ಸಚಿವೆ ಲೀಲಾ ದೇವಿ ಆರ್.ಪ್ರಸಾದ್, ಅಶೋಕ್ ಚಂದರಗಿ ಉಪಸ್ಥಿತರಿದ್ದರು.

Exit mobile version