Site icon Vistara News

ಈ ಬಾರಿ ಗೆಲ್ಲುವ ಕುದುರೆ, ಗೆಲ್ಲಿಸೋ ಪಕ್ಷ ಒಂದಾಗಿವೆ: ಸಿಎಂ ಬೊಮ್ಮಾಯಿ

ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ಬಸವರಾಜ ಹೊರಟ್ಟಿ ಅವರು ನಾಲ್ಕು ದಶಕದಿಂದ ಸೇವೆ ಮಾಡುತ್ತಿದ್ದಾರೆ. ವಿರೋಧ ಪಕ್ಷದಲ್ಲಿದ್ದಾಗ ಅವರನ್ನು ಸೋಲಿಸಲು ಪ್ರಯತ್ನ ಮಾಡುತ್ತಿದ್ದೆವು. ಆದರೆ, ಅವರು ಸೋಲುವ ಪಕ್ಷದಲ್ಲಿದ್ದು ಗೆದ್ದು ಬಿಡುತ್ತಿದ್ದರು. ಇದೇ ಕಾರಣಕ್ಕೆ ನಮ್ಮ ಪಕ್ಷಕ್ಕೆ ಬಂದು ಬಿಡಿ ಎನ್ನುತ್ತಿದ್ದೆವು. ಈ ಬಾರಿ ಗೆಲ್ಲುವ ಕುದುರೆ, ಗೆಲ್ಲಿಸೋ ಪಕ್ಷ ಎರಡೂ ಒಂದಾಗಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಪಶ್ಚಿಮ ಶಿಕ್ಷಕರ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲಿ ಶನಿವಾರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಶಿಕ್ಷಕರನ್ನು ನೋಡಿದರೆ ದೇವರನ್ನು ನೋಡಿದಂತೆ, ಹೊರಟ್ಟಿ 42 ವರ್ಷ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಅವರಲ್ಲಿ ಛಲ ಹಾಗೂ ಸಕಾರಾತ್ಮಕವಾಗಿ ಚಿಂತಿಸುವ ಎರಡೂ ಗುಣಗಳಿದ್ದು, ನಿಜವಾದ ಶಿಕ್ಷಕರ ಪ್ರತಿನಿಧಿ ಎಂದರೆ ಹೊರಟ್ಟಿ. ಶಿಕ್ಷಕರು- ಹೊರಟ್ಟಿ ಅವರದ್ದು ಬಿಡಿಸಲಾಗದ ಸಂಬಂಧ, ತಾಯಿ-ಮಕ್ಕಳ ಸಂಬಂಧವಿದ್ದಂತೆ. ಹೀಗಾಗಿ ಅವರು ಈ ಬಾರಿ ದಾಖಲೆ ಮತಗಳ ಅಂತರದಲ್ಲಿ ಗೆಲ್ಲಬೇಕು ಎಂದು ಮನವಿ ಮಾಡಿದರು.

ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಮಾತನಾಡಿ, ಪ್ರತಿ ಚುನಾವಣೆಯಲ್ಲಿ ಬಿಜೆಪಿಗೆ ಮತ್ತು ನನಗೆ ನೇರ ಫೈಟ್‌ ನಡೆಯುತ್ತಾ ಇತ್ತು. ಈಗ ಎಲ್ಲ ಮತಗಳು ಒಂದಾಗಿವೆ, ಅತಿ ಹೆಚ್ಚು ಮತಗಳು ನನಗೆ ಬರುತ್ತವೆ. ಎಲ್ಲರೂ ಬಂದು ಮತ ಚಲಾವಣೆ ಮಾಡಬೇಕು. ನಾನು ಶಿಕ್ಷಕರ ನಂಬಿಕೆಯನ್ನು ಉಳಿಸಿಕೊಂಡು ಬಂದಿದ್ದೇನೆ. ನನಗೆ ನೀವು ಮತ್ತೊಮ್ಮೆ ಬೆಂಬಲ ನೀಡಬೇಕು ಎಂದರು.

ಇದನ್ನೂ ಓದಿ | ಮುಸ್ಲಿಮರಿಂದ ಪ್ರತಿಭಟನೆ ಭೀತಿ: ರಾಜ್ಯದಲ್ಲಿ ಕಟ್ಟೆಚ್ಚರ, ಮುಲಾಜಿಲ್ಲದೆ ಕ್ರಮಕ್ಕೆ ಸಿಎಂ ಬೊಮ್ಮಾಯಿ ಸೂಚನೆ

ಮಾಜಿ ಸಿಎಂ ಜಗದೀಶ ಶೆಟ್ಟರ್ ಮಾತನಾಡಿ, ಆಡಳಿತ ಸರಿಯಾಗಿ ನಡೆಯಬೇಕಾದರೆ ಬಿಜೆಪಿ ಗೆಲ್ಲಬೇಕು. ಎಲ್ಲ ಭಾಗದಲ್ಲೂ ಹೊರಟ್ಟಿ ಅವರ ಪರ ಅಲೆ ಇದೆ. ಈ ಹಿಂದೆ ನಾಲ್ಕೈದು ಬಾರಿ ಹೊರಟ್ಟಿ ಅವರನ್ನ ಸೋಲಿಸುವ ಪ್ರಯತ್ನ ಮಾಡಿದ್ದೆವು. ಆದರೆ ಅವರು ಸೋಲಲಿಲ್ಲ ನಾವು ಗೆಲ್ಲಲಿಲ್ಲ. ಈ ಹಿಂದೆ ಹೊರಟ್ಟಿ ವಿರುದ್ಧ ಬಿಜೆಪಿ ಇತ್ತು. ಆದ್ರೆ ಈಗ ಹೊರಟ್ಟಿ ಜತೆಗೆ ಬಿಜೆಪಿಯಾಗಿದೆ. ಹೊರಟ್ಟಿ ಅವರ ಮೇಲೆ ಶಿಕ್ಷಕರಿಗೆ ಸಾಕಷ್ಟು ವಿಶ್ವಾಸವಿದೆ. ಹೀಗಾಗಿ ಹೊರಟ್ಟಿ ಅವರಿಗೆ ಮತ ನೀಡಿ ಗೆಲ್ಲಿಸಿ ಎಂದು ಹುಬ್ಬಳ್ಳಿ ಶಿಕ್ಷಕ ಮತದಾರರಲ್ಲಿ ಮನವಿ ಮಾಡಿದರು.

ದೇಶದಲ್ಲಿ ಬದಲಾವಣೆ ಆಗುತ್ತಿದೆ
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಕೋವಿಡ್‌ ನಂತರದಲ್ಲಿ ದೇಶ ಹಾಗೂ ರಾಜ್ಯದಲ್ಲಿ ಬದಲಾವಣೆ ಆಗುತ್ತಿದೆ, ಜಗತ್ತು ಭಾರತದ ಕಡೆ ತಿರುಗಿ ನೋಡುತ್ತಿದೆ. ನಮ್ಮ ದೇಶ ಸಮರ್ಥ ನಾಯಕತ್ವವನ್ನು ಹೊಂದಿರುವ ಜತೆಗೆ ಸಾಕಷ್ಟು ಸಂಪನ್ಮೂಲಗಳನ್ನು ಹೊಂದಿದ್ದು, ಅವುಗಳ ಸದ್ಬಳಕೆಯಾಗಬೇಕು ಎಂದರು. ಮಕ್ಕಳಲ್ಲಿರುವ ಪ್ರತಿಭೆಯನ್ನು ಅನಾವರಣ ಮಾಡುವ ದೃಷ್ಟಿಯಿಂದ ಹೊಸ ಶಿಕ್ಷಣ ನೀತಿ(ಎನ್‌ಇಪಿ) ಜಾರಿ ಮಾಡಿದ್ದೇವೆ. ರಾಜ್ಯ ಸಭೆಯಲ್ಲಿ ಬಹುಮತದ ಹತ್ತಿರ ಬಂದಿದ್ದೇವೆ. ನಾವು ಬಿಲ್ ಪಾಸ್ ಮಾಡಬೇಕಾದರೆ ಪರಿಷತ್‌ನಲ್ಲಿ ಬಹುಮತಬೇಕು. ಪರಿಷತ್‌ನಲ್ಲಿ ನಮ್ಮ ಬಲ ಹೆಚ್ಚಾಗಬೇಕು. ಹೊರಟ್ಟಿ 42 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಹೊರಟ್ಟಿಯವರಿಗೆ ಬಹಳಷ್ಟು ಅನುಭವ ಇದೆ, ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ತಾಲೂಕುಗಳ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆಯಲಾಗಿದೆ

ಬೆಳಗಾವಿ: ವಿಧಾನ ಪರಿಷತ್ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ಚುನಾವಣೆಯ ಪ್ರಚಾರಕ್ಕೆ ಆಗಮಿಸಿದ್ದು, ಬೆಳಗಾವಿ ಮತ್ತು ಚಿಕ್ಕೋಡಿ ಕ್ಷೇತ್ರದ ಪಕ್ಷದ ಹಿರಿಯರು, ಶಾಸಕರು, ಸಚಿವರೊಂದಿಗೆ ಒಂದು ಸುತ್ತಿನ ಮಾತುಕತೆಯಾಗಿದೆ. ಕಳೆದ 10 – 12 ದಿನಗಳಿಂದ ಪ್ರಚಾರದಲ್ಲಿ ತೊಡಗಿದ್ದರು. ತಾಲೂಕುಗಳ ಸ್ಥಿತಿಗತಿ ಬಗ್ಗೆ ಸಂಪೂರ್ಣ ವಿವರಗಳನ್ನು ಪಡೆದಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಬಗ್ಗೆಯೂ ಮಾಹಿತಿಯನ್ನು ಪಡೆದಿದ್ದೇನೆ. ಜನರ ಪ್ರತಿಕ್ರಿಯೆ ನೋಡಿದಾಗ ಅರುಣ್ ಶಹಾಪುರ ಹಾಗೂ ಹನುಮಂತ ನಿರಾಣಿಯವರು ಆಯ್ಕೆಯಾಗುವುದು ನಿಶ್ಚಿತ. ಅತಿ ಹೆಚ್ಚು ಮತಗಳಿಂದ ಆಯ್ಕೆಯಾಗುತ್ತಾರೆ. ಈವರೆಗೆ ಎಲ್ಲ ವರ್ಗದ ಜನ ಅಭೂತಪೂರ್ವವಾದ ಬೆಂಬಲ ನೀಡಿದ್ದಾರೆ ಎಂದರು.

ಮಹದಾಯಿಗೆ ಶೀಘ್ರ ಅನುಮೋದನೆ: ಮಹದಾಯಿ ವಿಚಾರವಾಗಿ ಕೇಂದ್ರ ಸಚಿವರನ್ನು ಭೇಟಿಯಾದ ಮೇಲೆ ಡಿಪಿಆರ್‌ನಲ್ಲಿ ಕೆಲವು ಸ್ಪಷ್ಟೀಕರಣ ಕೇಳಿದ್ದರು. ಅವುಗಳನ್ನು ಒದಗಿಸಲಾಗಿದ್ದು, ಶೀಘ್ರವಾಗಿ ಅನುಮೋದನೆ ದೊರೆಯಿವ ವಿಶ್ವಾಸವಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ನಗೆ ಚಟಾಕಿ ಹಾರಿಸಿದ ಕೋರೆ
ಬೆಳಗಾವಿಯ ಚುನಾಚಣೆ ಪ್ರಚಾರಕ್ಕೆ ಆಗಮಿಸಿದ್ದಾಗ ಪ್ರಹ್ಲಾದ ಜೋಶಿ, ಬೊಮ್ಮಾಯಿ ಎಲ್ಲರೂ ಕೆ.ಎಲ್.ಇ.‌ ಸಂಸ್ಥೆಯ ವಿದ್ಯಾರ್ಥಿಗಳೇ ಎಂದು ಕೆಎಲ್‌ಇ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಭಾಷಣದ ವೇಳೆ ಹೇಳಿದರು. ಈ ವೇಳೆ ಹೊರಟ್ಟಿ ಹೆಸರು ಹೇಳದ ಹಿನ್ನೆಲೆಯಲ್ಲಿ ನಾನು ಕೂಡ ಇದೇ ಕಾಲೇಜಿನ ವಿದ್ಯಾರ್ಥಿ, ನನ್ನ ಹೆಸರನ್ನೇಕೆ ಬಿಟ್ಟಿರಿ ಎಂದ ಹೊರಟ್ಟಿ ಕೇಳಿದಾಗ ಪ್ರತಿಕ್ರಿಯಿಸಿದ ಕೋರೆ, ನನಗೆ ಅದು ಗೊತ್ತು. ಆದರೆ ನೀನು ಅನೇಕ ಬಾರಿ ಫೇಲ್ ಆಗಿದ್ದಿಯಾ, ಹೀಗಾಗಿ ನಿನ್ನ ಹೆಸರನ್ನು ಹೇಳಲಿಲ್ಲ ಎಂದಾಗ ಸಭೆಯಲ್ಲಿದ್ದವರು ಕೋರೆ ನಗೆ ಚಟಾಕಿಗೆ ಬಿದ್ದು ಬಿದ್ದು ನಕ್ಕರು.

ಇದನ್ನೂ ಓದಿ | ರಾಜ್ಯಸಭೆ ಚುನಾವಣೆ: ಹರಿಯಾಣದಲ್ಲಿ ಕಾಂಗ್ರೆಸ್‌ಗೆ ಮುಳ್ಳಾಗಿದ್ದು ಕುಲ್‌ದೀಪ್‌ ಬಿಷ್ಣೋಯ್‌ ಸೇಡು !

Exit mobile version