Site icon Vistara News

Basavaraja Bommai | ಹೆಂಡ್ತಿಗೆ ಸೀರೆ ಒಯ್ಬೋದಿತ್ತು, ಆದ್ರೆ ತಪ್ಪು ಕಂಡ್‌ ಹಿಡೀತಾರೆ: ಸಿಎಂಗೂ ಕಾಡಿದ Universal problem!

CM Basavaraj Bommai

ಬೆಳಗಾವಿ: ʻʻಮಳಿಗೆ ಒಳಗೆ ಬಂದಾಗ ನಾನೊಂದು ಇಳಕಲ್‌ ಸೀರೆ ನೋಡಿದೆ. ನಮ್ಮ ಮನೆಯವರಿಗೆ ಕೊಂಡುಕೊಳ್ಳಬೇಕು ಅಂತ ಅನ್ಕೊಂಡೆ. ಅದರೆ, ನಾನೇ ತೆಗೆದುಕೊಂಡು ಹೋದ್ರೆ ಅದರಲ್ಲಿ ತಪ್ಪು ಕಂಡ್ ಹಿಡೀತಾರೆ. ಹೀಗಾಗಿ ಅವರನ್ನೆ ಕರೆದುಕೊಂಡು ಬಂದು ಸೀರೆ ಖರೀದಿ ಮಾಡ್ತೀನಿʼʼ- ಹೀಗೆಂದು ತಮಾಷೆಯಾಗಿ, ಆದರೆ, ಅಷ್ಟೇ ಸೀರಿಯಸ್ಸಾಗಿ ಹೇಳಿದರು ಸಿಎಂ ಬಸವರಾಜ ಬೊಮ್ಮಾಯಿ! (Basavaraja Bommai)

ದಿನವಿಡೀ ಅಧಿವೇಶನ, ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ ಬುಧವಾರ ಬೆಳಗ್ಗಿನವರೆಗೂ ನಡೆದ ಮಾತುಕತೆ, ಫೋನ್‌ ಕರೆಗಳ ತಲೆಬಿಸಿ, ಒಕ್ಕಲಿಗರ ಮೀಸಲಾತಿ ಚರ್ಚೆ.. ಹೀಗಾಗಿ ನೂರಾ ಎಂಟು ವಿಷಯಗಳ ನಡುವೆ ತಲೆ ಹನ್ನೆರಡಾಣೆ ಆಗಿದ್ದರೂ ಬೊಮ್ಮಾಯಿ ಅವರು ಎಂದಿನ ಲವಲವಿಕೆಯಲ್ಲೇ ಇದ್ದರು. ಹಾಗೆ ಲಹರಿಯಲ್ಲಿ ಹುಟ್ಟಿದ್ದು ಈ ಸೀರೆ ವಿಷಯ.

ಅಂದಹಾಗೆ ಈ ಮಾತು ಬಂದಿದ್ದು, ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಏರ್ಪಡಿಸಿದ್ದ ಗ್ರಾಮೀಣ ಸ್ವಸಹಾಯ ಸಂಘಗಳ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮದಲ್ಲಿ. ಬೆಳಗಾವಿಯ ಸರ್ದಾರ್‌ ಮೈದಾನದಲ್ಲಿ ಈ ವಸ್ತುಪ್ರದರ್ಶನ ನಡೆಯುತ್ತಿದ್ದು, ಅದರ ಉದ್ಘಾಟನೆಗೆ ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಅವರು ಸಿಎಂ ಅವರನ್ನು ಕರೆದುಕೊಂಡು ಬಂದಿದ್ದರು.

ಸಿಎಂ ಅವರು ಸೀರೆ ಕತೆ ಹೇಳುತ್ತಿದ್ದಂತೆಯೇ ಕಾಲೆಳೆದ ಸಚಿವ ಅಶ್ವತ್ಥನಾರಾಯಣ ಅವರು, ಯಾವಾಗ ಖರೀದಿ ಮಾಡಿದ್ರಿ ಸರ್‌ ಎಂದು ಕೇಳಿದರು.
ʻʻಏ.. ಮೊನ್ನೆ ಬಸವನಗುಡಿಯಲ್ಲಿ ಖರೀದಿ ಮಾಡಿದಿನಪ್ಪʼʼ ಎಂದು ನಗುತ್ತಾ ಉತ್ತರ ನೀಡಿದರು ಸಿಎಂ ಬೊಮ್ಮಾಯಿ.

ಮುಖ್ಯಮಂತ್ರಿಗಳಿಂದ ಪ್ರದರ್ಶನದ ಉದ್ಘಾಟನೆ

ಎಷ್ಟಿದಾವಪ್ಪ ನಿನ್ನ ಕಡೆ ಎಂದು ಕಾಲೆಳೆದ ಸಿಎಂ
ವಸ್ತು ಪ್ರದರ್ಶನ ಹಾಗೂ ಮಾರಾಟ ಮಳಿಗೆ ಉದ್ಘಾಟಿಸಿದ ಸಿಎಂ ಅವರು, ಭಾಷಣದ ಸಂದರ್ಭದಲ್ಲಿ ಅಶ್ವತ್ಥನಾರಾಯಣ ಅವರು ಹೊಂದಿರುವ ಖಾತೆಗಳನ್ನು ಓದಿ, ಎಷ್ಟಿದಾವಲ್ಲ ನಿನ್ನ ಕಡೆ ಎಂದು ಪ್ರಶ್ನಿಸಿದರು.

ʻʻಎಷ್ಟು ಖಾತೆಗಳು ಇದಾವಪ್ಪ ನಿನ್ ಕಡೆʼʼ ಎಂಬ ಸಿಎಂ ಮರುಮಾತಿಗೆ ನಸು ನಕ್ಕರು ಸಚಿವ ಅಶ್ವತ್ಥ ನಾರಾಯಣ. ಸಿಎಂ ಮುಂದುವರಿದು, ʻʻಅಶ್ವತ್ಥ ನಾರಾಯಣ ಒಬ್ಬ ಡೈನಾಮಿಕ್ ಮಿನಿಸ್ಟರ್ʼʼ ಎಂದು ಬಣ್ಣಿಸಿದರು. ಐಟಿ ಬಿಟಿ ಕ್ಷೇತ್ರದಲ್ಲಿ ದೇಶದಲ್ಲಿಯೇ ರಾಜ್ಯವನ್ನು ನಂ. ೧ ಮಾಡಿದವರು ಅಶ್ವತ್ಥ ನಾರಾಯಣ ಎಂದರು.

ಮಹಿಳಾ ಶಕ್ತಿಗೆ ಸಿಎಂ ಪ್ರೋತ್ಸಾಹದ ಮಾತು
-ಕರ ಕುಶಲತೆ ನಮ್ಮ ಭಾರತೀಯ ನಾರಿಯರಿಗೆ ದೇವರು ಕೊಟ್ಟ ವರ. ಬೇರೆ ಯಾವುದೇ ದೇಶದ ಮಹಿಳೆಯರಿಗೆ ಈ ಕಲೆ ಕೊಟ್ಟಿಲ್ಲ. ಮುಂದಿನ ವರ್ಷದಿಂದ ರಾಜ್ಯದ 5 ಕಡೆ ಮಹಿಳಾ ಸ್ವಸಹಾಯ ಸಂಘಗಳ ಉತ್ಪನ್ನಗಳ ಶಾಶ್ವತ ವಸ್ತು ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಕಲ್ಪಿಸಲಾಗುವುದು. ಅಲ್ಲದೆ ಈ ಉತ್ಪನ್ನಗಳಿಗೆ ಆನ್ಲೈನ್ ಮಾರುಕಟ್ಟೆ ಕಲ್ಪಿಸುವ ಕೆಲಸ ಮಾಡುತ್ತೇವೆ. ಸ್ತ್ರೀ ಸಾಮರ್ಥ್ಯ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮ‌ಬೇಕು.

– ರಾಜ್ಯದಲ್ಲಿ ಸ್ತ್ರೀ ಸಾಮರ್ಥ್ಯ ಅನ್ನುವ ಯೋಜನೆ ಜಾರಿ ಮಾಡಿದ್ದೇವೆ. ಸ್ತ್ರೀ ಸಾಮರ್ಥ್ಯ ಯೋಜನೆ ಅನುಷ್ಠಾನಕ್ಕಾಗಿ ಬಜೆಟ್ ನಲ್ಲಿ ರೂ‌‌.1000 ಕೋಟಿ ಅನುದಾನ ಮೀಸಲಿರಿಸಲಾಗಿದೆ. ಈ ಯೋಜನೆಯಿಂದ ರಾಜ್ಯದ 33 ಸಾವಿರ ಮಹಿಳಾ ಸಂಘದ 5 ಲಕ್ಷ ಮಹಿಳೆಯರಿಗೆ ಲಾಭವಾಗಿದೆ. ಸ್ತ್ರೀ ಸಾಮರ್ಥ್ಯ ಯೋಜನೆಯಿಂದ ದೇಶದಲ್ಲಿ ದೊಡ್ಡ ಕ್ರಾಂತಿ ಉಂಟಾಗಲಿದೆ. ಮಹಿಳಾ ಸ್ವ ಸಂಘ ಉತ್ಪನ್ನಗಳ ಮಾರಾಟಕ್ಕೆ ರಾಜ್ಯದ 5 ಸ್ಥಳಗಳಲ್ಲಿ ಶಾಶ್ವತ ಪ್ರದರ್ಶನ ಮಾರಾಟ ಮಳಿಗೆ ನಿರ್ಮಾಣ ಮಾಡಲಾಗುವುದು.

-ಸ್ತ್ರೀ ಸಾಮರ್ಥ್ಯ ಯೋಜನೆ ಮೂಲಕ ದೇಶದ ಅಭಿವೃದ್ಧಿ ಮಾಡುತ್ತಿರುವುದು ನಮ್ಮ ತಾಯಂದಿರು. ಸ್ತ್ರೀ ಸಾಮರ್ಥ್ಯದ ಮೌಲ್ಯಮಾಪನವಾಗಬೇಕು. ಮಹಿಳೆಯರು ನಿರ್ವಹಿಸುವ ಮನೆ ಕೆಲಸ ಹಾಗೂ ಸೇವೆ ಸಾಮಾನ್ಯವಾದುದಲ್ಲ. ಮಹಿಳೆಯರ ಶ್ರಮಕ್ಕೆ ಯಾರು ಬೆಲೆ ನೀಡುವುದಿಲ್ಲ. ಮನೆ ಕೆಲಸ ಮಾಡುವ ಮಹಿಳೆಯರಿಗೂ ಗೌರವ ಸಿಗಬೇಕು. ಅವರ ಕೆಲಸದ ಮೌಲ್ಯ ಮಾಪನವಾಗಬೇಕು. ಅವರ ಕೆಲಸಕ್ಕ ಆದಾಯ ಬರಬೇಕು. ಗ್ರಾಮೀಣ ಭಾಗದಲ್ಲಿ ಮಹಿಳೆಯರು ಪುರುಷರ ರೀತಿಯಲ್ಲಿ ಹೆಚ್ಚು ಕೆಲಸ ಮಾಡುತ್ತಾರೆ. ‌ಆದರೆ ಅವರಿಗೆ ಕಡಿಮೆ ಕೂಲಿ ನೀಡುತ್ತಾರೆ. ದೀನ ದಲಿತ ಮಹಿಳೆಯರು ಆಹಾರ‌ ಕೊರತೆ ಎದುರಿಸುತ್ತಾರೆ. ಸ್ವಂತ ಭೂಮಿ ಇಲ್ಲದ ಅವರು ಬೇರೆಯವರ ಮನೆ ಹಾಗೂ ಜಮೀನಿನಲ್ಲಿ ದುಡಿಯುತ್ತಾರೆ.

ಜಲ ಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಎಂ ಕಾರಜೋಳ, ಹಣಕಾಸು ಇಲಾಖೆ ಎಸಿಎಸ್ ಐ.ಎಸ್ ಎನ್ ಪ್ರಸಾದ್, ಜಿ.ಪಂ.ಸಿಇಓ ದರ್ಶನ.ಹೆಚ್.ವಿ., ಶಾಸಕ ಅನಿಲ್ ಬೆಣಕೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಇದನ್ನು ಓದಿ | Startup policy | ಬೆಂಗಳೂರಿನಿಂದಾಚೆಗೂ ಟೆಕ್‌ ಕ್ರಾಂತಿ, 2027ರ ವೇಳೆಗೆ 25,000 ಸ್ಟಾರ್ಟಪ್‌ಗಳನ್ನು ಬೆಳೆಸುವ ಗುರಿ

Exit mobile version