ಬೆಂಗಳೂರು: ಕೆರೆಗಳು, ರಾಜಕಾಲುವೆಗಳ ಒತ್ತುವರಿಯಿಂದ ನಗರದಲ್ಲಿ ಮಳೆ ಬಂದಾಗ ಹಲವು ಪ್ರದೇಶಗಳು ಜಲಾವೃತವಾಗಿ, ಪ್ರವಾಹ ಸ್ಥಿತಿ ನಿರ್ಮಾಣವಾಗುತ್ತಿದೆ ಎಂಬ ಜನಾಕ್ರೋಶದ ಹಿನ್ನೆಲೆಯಲ್ಲಿ ಭೂ ಒತ್ತುವರಿದಾರರಗೆ ಬಿಸಿ ಮುಟ್ಟಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಭೂಮಿ ಅತಿಕ್ರಮಣ ಮಾಡಿರುವವರು ಎಷ್ಟೇ ಪ್ರಭಾವಿಗಳು ಅಥವಾ ಐಟಿ ಕಂಪನಿಗಳೇ ಇರಲಿ ಒತ್ತುವರಿ ತೆರವು ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ ಪ್ರತಿಕ್ರಿಯಿಸಿ, ಭೂಮಿ ಒತ್ತುವರಿಗೆ ಸಂಬಂಧಿಸಿದಂತೆ ಹಲವಾರು ಪ್ರಕರಣಗಳು ಈಗಾಗಲೇ ಕೋರ್ಟ್‌ನಲ್ಲಿವೆ. ಒತ್ತುವರಿ ತೆರವು ಮಾಡಿ ಎಂದೇ ನ್ಯಾಯಾಲಯಗಳೂ ಸೂಚನೆ ನೀಡಿವೆ. ಮಳೆಯಿಂದಾಗಿ ಜನಸಾಮಾನ್ಯರು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಹೀಗಾಗಿ ಯಾರೇ ರಾಜಕಾಲುವೆ ಒತ್ತುವರಿ ಮಾಡಿದ್ದರೂ ತೆರವು ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಇದರಿಂದ ಹಿಂದೆ ಸರಿಯುವ ಮಾತೇ ಇಲ್ಲ. ಒತ್ತುವರಿ ತೆರವು ಕಾರ್ಯ ಆರಂಭವಾಗಿದೆ, ಇದು ನಿಲ್ಲುವುದಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Rain News | ರಾಜ್ಯದಲ್ಲಿ ವರುಣನ ಆರ್ಭಟ, ವಿವಿಧೆಡೆ ಮನೆ ಕುಸಿತ; ಕೃಷಿ ಜಮೀನು ಜಲಾವೃತ
ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ನಗರದಲ್ಲಿ ಐಟಿ ಕಂಪನಿಗಳಿಂದಲೇ 30-40 ಕಡೆ ಭೂಮಿ ಒತ್ತುವರಿಯಾಗಿದೆ. ಸಿಎಂ ಸೂಚನೆ ಕೊಟ್ಟಿದ್ದಾರೆ, ಆದ್ದರಿಂದ ಒತ್ತುವರಿ ಕಾರ್ಯಚರಣೆ ನಿಲ್ಲುವುದಿಲ್ಲ. ಯಾರಾದರೂ ಕೋರ್ಟ್‌ಗೆ ಹೋದರೂ ಕಾನೂನು ಹೋರಾಟದ ಮೂಲಕವೇ ಒತ್ತುವರಿ ತೆರವು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಮಾತನಾಡಿ, ಪ್ರವಾಹದಿಂದ ನಗರದಲ್ಲಿ ಅನೇಕ ಪ್ರದೇಶಗಳು ಮುಳಗಿವೆ. ಇದನ್ನು ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ. ಭೂ ಒತ್ತುವರಿಯೇ ಇಂತಹ ಅವಾಂತರಗಳಿಗೆ ಕಾರಣವಾಗಿದೆ. ಹೀಗಾಗಿ ಯಾರು ಎಷ್ಟೇ ದೊಡ್ಡವರಿದ್ದರೂ ಒತ್ತುವರಿ ತೆರವು ಮಾಡುತ್ತೇವೆ. ರಾಜಾಕಾಲುವೆ ತೆರವಿಗೆ ಕೋರ್ಟ್‌ಗಳು ಸ್ಟೇ ಕೊಡಲ್ಲ ಎಂದು ತಿಳಿಸಿದ್ದಾರೆ.
ಬಾಗ್ಮನೆ ಟೆಕ್ ಪಾರ್ಕ್‌ನಿಂದ ಒತ್ತುವರಿ ಬಗ್ಗೆ ಪ್ರತಿಕ್ರಿಯಿಸಿ, ಯಾರೇ ಆಗಲಿ ಒತ್ತುವರಿ ಮಾಡಿದ್ದರೆ ತೆರವು ಮಾಡಿ ಎಂದು ಸಿಎಂ ಸೂಚಿಸಿದ್ದಾರೆ. ನನ್ನ ಕ್ಷೇತ್ರದಲ್ಲಿ 20ಕ್ಕೂ ಹೆಚ್ಚು ಕಡೆ ಭೂ ಒತ್ತುವರಿ ತೆರವು ಕಾರ್ಯ ನಡೆಯುತ್ತಿದೆ. ಐಟಿ ಪಾರ್ಕ್ ಇರಲಿ, ಮನೆ ಇರಲಿ ಒತ್ತುವರಿ ಮಾಡಿದ್ದರೆ ತೆರವು ಮಾಡುತ್ತೇವೆ. ಬಡವರಿದ್ದರೆ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡುತ್ತೇವೆ. ಬಿಡಿಎ, ಸೊಸೈಟಿ ಲೇಔಟ್, ಗಾಲ್ಫ್ ಕ್ಲಬ್‌ಗಳೂ ಒತ್ತುವರಿ ಮಾಡಿವೆ. ಹಲವು ಕೆರೆಗಳನ್ನು ಮುಚ್ಚಿ ಲೇಔಟ್ ಮಾಡಲಾಗಿದೆ ಎಂದ ಅವರು, ಸಾರ್ವಜನಿಕರು, ಐಟಿಬಿಟಿಗಳು ಅಷ್ಟೇ ಅಲ್ಲ, ಸರ್ಕಾರಿ ಸಂಸ್ಥೆಗಳೂ ಒತ್ತುವರಿ ಮಾಡಿವೆ. ಅವುಗಳನ್ನೂ ತೆರವು ಮಾಡಲು ನಿರ್ಧರಿಸುತ್ತೇವೆ ಎಂದು ತಿಳಿಸಿದ್ದಾರೆ.
ಸಿಎಂ ಬೆಂಗಳೂರು ಉಸ್ತುವಾರಿ ಆಗಿರುವ ಹಿನ್ನೆಲೆಯಲ್ಲಿ ಪರಿಹಾರ ಕಾರ್ಯಗಳಿಗೆ ಹಣ ಬೇಗನೇ ಬಿಡುಗಡೆ ಆಗುತ್ತದೆ. ಸಿಎಂಗೆ ಬೆಂಗಳೂರಿನ ಮೇಲೆ ವಿಶೇಷ ಪ್ರೀತಿ ಇದೆ. ಮಳೆ ವಿಚಾರದಲ್ಲಿ ಯಾರೂ ರಾಜಕಾರಣ ಮಾಡುವುದು ಬೇಡ ಎಂದ ಅವರು, ಕಂದಾಯ ಇಲಾಖೆಮ ಬಿಬಿಎಂಪಿ ಅಧಿಕಾರಿಗಳು ರಾಜಕಾಲುವೆ ಒತ್ತುವರಿ ತೆರವು ಮಾಡುವ ಜಾಗದಲ್ಲಿ ಇರಬೇಕೆಂದು ಸೂಚಿಸಲಾಗಿದೆ ಎಂದರು.
ಇದನ್ನೂ ಓದಿ | Rain News | ಬೆಳಗಾವಿ ಜಿಲ್ಲೆಯಲ್ಲಿ ಮಳೆ ಆರ್ಭಟ; 3 ದಿನದಲ್ಲಿ 35 ಮನೆ ಕುಸಿತ, 17ಕ್ಕೂ ಅಧಿಕ ಸೇತುವೆಗಳು ಜಲಾವೃತ