Site icon Vistara News

Rain News | ಭಟ್ಕಳದಲ್ಲಿ ಗುಡ್ಡ ಕುಸಿತದಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ವಿತರಿಸಿದ ಸಿಎಂ

Rain News

ಕಾರವಾರ: ಉತ್ತರಕನ್ನಡ ಜಿಲ್ಲೆಯ ಭಟ್ಕಳದ ಮುಠಳ್ಳಿಯಲ್ಲಿ ಭೀಕರ ಮಳೆಯಿಂದ ಮನೆ ಮೇಲೆ ಗುಡ್ಡ ಕುಸಿದು ನಾಲ್ವರು ಮೃತಪಟ್ಟಿದ್ದ (Rain News) ಹಿನ್ನೆಲೆಯಲ್ಲಿ ಬುಧವಾರ ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, 20 ಲಕ್ಷ ರೂಪಾಯಿ ಪರಿಹಾರ ವಿತರಿಸಿದರು.

ಮೃತ ಲಕ್ಷ್ಮೀ ನಾರಾಯಣ ನಾಯ್ಕ ಅವರ ಮನೆ ಇದ್ದ ಪ್ರದೇಶವನ್ನು ವೀಕ್ಷಿಸಿದ ಸಿಎಂ, ಘಟನೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಅಧಿಕಾರಿಗಳಿಂದ ಮಾಹಿತಿ ಪಡೆದರು. ಅಲ್ಲದೆ, ಹತ್ತಿರದ ಪ್ರದೇಶದಲ್ಲಿ ಅಪಾಯದಲ್ಲಿರುವ ಮನೆಗಳನ್ನು ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಇದೇ ವೇಳೆ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ.ನಂತೆ 20 ಲಕ್ಷ ರೂಪಾಯಿ ಚೆಕ್ ಅನ್ನು ವಿತರಣೆ ಮಾಡಿ ಮಾತನಾಡಿ, ಭಟ್ಕಳದ ಮುಟ್ಟಳ್ಳಿಯಲ್ಲಿ ನಡೆದ ದುರ್ಘಟನೆ ವಿಚಾರ ಕೇಳಿ ಬೇಸರವಾಗಿದೆ. ಮೃತರ ಕುಟುಂಬಕ್ಕೆ ಪರಿಹಾರ ನೀಡಲಾಗಿದ್ದು, ಭಟ್ಕಳದ ನೆರೆ ಸಂತ್ರಸ್ತರಿಗೂ ಪರಿಹಾರ ಒದಗಿಸಲಾಗುವುದು ಎಂದರು.

ಇದನ್ನೂ ಓದಿ | Weather Report | ರಾಜ್ಯಾದ್ಯಂತ ಅತಿವೃಷ್ಟಿಯ ತಲ್ಲಣ, ಮಳೆ ಅಬ್ಬರಿಸಲಿದೆ ಇನ್ನೂ ಎರಡು ದಿನ

ಜಿಲ್ಲೆಯಲ್ಲಿ ಸುಮಾರು ಅಂದಾಜು 40 ಕೋಟಿ ರೂ.ನಷ್ಟು ನಷ್ಟವಾಗಿರುವ ವರದಿ ದೊರಕಿದೆ. ಜಿಲ್ಲಾಡಳಿತದಲ್ಲಿರುವ ಎನ್‌ಡಿಆರ್‌ಎಫ್ ನಿಧಿಯಲ್ಲಿ 38 ಕೋಟಿ ರೂ. ವಿತರಿಸಲು ಸೂಚಿಸಲಾಗಿದೆ. ಅಂಗಡಿ ಹಾಗೂ ಕಟ್ಟಡಗಳ ನಷ್ಟಕ್ಕೆ ಹೆಚ್ಚಿನ ಅನುದಾನವನ್ನು ಸರ್ಕಾರದಿಂದ ವಿತರಣೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಕಂದಾಯ ಸಚಿವ ಆರ್. ಅಶೋಕ್, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ಶಾಸಕರಾದ ಸುನೀಲ್ ನಾಯ್ಕ, ರೂಪಾಲಿ ನಾಯ್ಕ, ದಿನಕರಶೆಟ್ಟಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಎಸ್ಪಿ ಸುಮ್ಮನ್ನಾ ಫೆನ್ನೇಕರ್ ಇದ್ದರು. 

ಮುಠಳ್ಳಿಯಲ್ಲಿ ಮಂಗಳವಾರ ರಾತ್ರಿ ಮನೆ ಮೇಲೆ ಗುಡ್ಡ ಕುಸಿತವಾಗಿ ಮನೆ ಮಾಲಕಿ ಲಕ್ಷ್ಮೀ ನಾರಾಯಣ ನಾಯ್ಕ (48), ಪುತ್ರಿ ಲಕ್ಷ್ಮೀ (33), ಪುತ್ರ ಅನಂತ ನಾರಾಯಣ ನಾಯ್ಕ(32), ಸಂಬಂಧಿಕ ಪ್ರವೀಣ್(೨೦) ಮೃತಪಟ್ಟಿದ್ದರು.

ಇದನ್ನೂ ಓದಿ | ಉತ್ತರ ಕನ್ನಡದಲ್ಲಿ ಭಾರಿ ಮಳೆ, ಭಟ್ಕಳದಲ್ಲಿ ನಾಲ್ವರನ್ನು ಬಲಿ ಪಡೆದ ಗುಡ್ಡ ಕುಸಿತ

Exit mobile version