Site icon Vistara News

Actress Leelavathi: ನಟಿ ಲೀಲಾವತಿಗೆ ಅಂತಿಮ ನಮನ ಸಲ್ಲಿಸಿದ ಸಿಎಂ, ಡಿಸಿಎಂ ಸೇರಿ ಗಣ್ಯರು

Siddaramaiah

ಬೆಂಗಳೂರು: ನೆಲಮಂಗಲದ ಅಂಬೇಡ್ಕರ್‌ ಮೈದಾನದ ಬಳಿಕ ಹಿರಿಯ ನಟಿ ಲೀಲಾವತಿ ಅವರ (Actress Leelavathi) ಅಂತಿಮ ದರ್ಶನಕ್ಕೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಬಿ.ಎಸ್‌.ಯರಿಯೂರಪ್ಪ ಸೇರಿ ರಾಜಕೀಯ ನಾಯಕರು ಹಾಗೂ ಚಿತ್ರರಂಗದ ಗಣ್ಯರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು.

ಅಂತಿಮ ದರ್ಶನ ಪಡೆದ ಬಳಿಕ ವಿನೋದ್‌ ರಾಜ್‌ ಅವರನ್ನು ಸಿಎಂ ಸಿದ್ದರಾಮಯ್ಯ ಅವರು ತಬ್ಬಿಕೊಂಡು ಸಾಂತ್ವನ ಹೇಳಿದರು. ಇದೇ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್‌, ಮಾಜಿ ಸಚಿವ ಸೋಮಣ್ಣ, ವಾಟಾಳ್‌ ನಾಗರಾಜ್‌, ನಟ ರಮೇಶ್‌ ಅರವಿಂದ್‌, ಉಪೇಂದ್ರ, ದ್ವಾರಕೀಶ್, ಶ್ರೀನಾಥ್‌, ಸಾಧು ಕೋಕಿಲ, ನಟಿ ತಾರಾ, ಶೃತಿ, ಉಮಾಶ್ರೀ, ಪೂಜಾ ಗಾಂಧಿ, ಸುಧಾರಾಣಿ ಮತ್ತಿತರ ಚಿತ್ರರಂಗದ ಕಲಾವಿದರು ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು.

Leelavathi Final Tribute : ಪಶುವೈದ್ಯ ಆಸ್ಪತ್ರೆ ದಾನ ಕೊಟ್ಟವರು ಇವರೇ ಮೊದಲು | DCM DK Shivakumar

ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರು ಲೀಲಾವತಿ ಅವರ ಅಂತಿಮ ದರ್ಶನ ಪಡೆದರು.

ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಅಂತಿಮ ನಮನ ಸಲ್ಲಿಸಿದರು.

ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ : ಮುಖ್ಯಮಂತ್ರಿ ಸಿದ್ದರಾಮಯ್ಯ

ಅಂತಿಮ ದರ್ಶನ ಪಡೆದು ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಕನ್ನಡ ಚಿತ್ರರಂಗ ಕಂಡಂತಹ ಬಹುಮುಖ ಪ್ರತಿಭೆಯಾಗಿದ್ದ ನಟಿ ಲೀಲಾವತಿಯವರಿಗೆ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರವನ್ನು ನೆರವೇರಿಸಲು ಆದೇಶಿಸಲಾಗಿದೆ ಎಂದು ತಿಳಿಸಿದರು.

ಲೀಲಾವತಿಯವರು ಅನಾರೋಗ್ಯದಿಂದ ಬಳಲುತ್ತಿದ್ದಾಗ ಅವರ ನಿವಾಸಕ್ಕೆ ತೆರಳಿ ಅವರ ಯೋಗಕ್ಷೇಮ ವಿಚಾರಿಸಿದ್ದೆ. ಆಗ ಅವರ ಮಗ ವಿನೋದರಾಜ್ ರನ್ನು ಭೇಟಿಯಾಗಿ, ಅವರಿಗೆ ಯಾವುದೇ ರೀತಿಯ ಸಹಾಯ ಮಾಡಲು ಸರ್ಕಾರ ಸಿದ್ಧವಿದೆ ಎಂದು ಧೈರ್ಯ ತುಂಬಲಾಗಿತ್ತು. ಲೀಲಾವತಿ ಹಾಗೂ ವಿನೋದರಾಜ್ ಅವರ ತಾಯಿಮಗನ ಸಂಬಂಧ ಆದರ್ಶಮಯವಾದದ್ದು ಎಂದರು.

ನೈಜ್ಯ ನಟನೆ

ರಂಗಭೂಮಿಯಿಂದ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ ಲೀಲಾವತಿಯವರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ನೈಜ್ಯ ನಟನೆಗೆ ಹೆಸರಾಗಿದ್ದ ಅವರು ದಕ್ಷಿಣ ಭಾರತದ ಎಲ್ಲ ಭಾಷಾ ಚಿತ್ರರಂಗದಲ್ಲಿ ನಟಿಸಿದ್ದಾರೆ. ಬಹುಭಾಷಾ ಕಲಾವಿದರಾಗಿದ್ದ ಲೀಲಾವತಿಯವರು ನಾಯಕಿ, ಪೋಷಕ ನಟಿಯಾಗಿ ಪಾತ್ರಗಳಿಗೆ ಜೀವ ತುಂಬುತ್ತಿದ್ದರು. ಡಾ. ರಾಜ್ ಕುಮಾರ್ ಹಾಗೂ ಲೀಲಾವತಿಯವರದು ಜನಪ್ರಿಯ ಜೋಡಿಯಾಗಿದ್ದು, ತನ್ನ ವಿದ್ಯಾರ್ಥಿ ದೆಸೆಯಲ್ಲಿ ಗೆಜ್ಜೆಪೂಜೆ, ಕುಲವಧು, ಭಕ್ತ ಕುಂಬಾರ ಸೇರಿದಂತೆ ಅನೇಕ ಚಲನಚಿತ್ರಗಳನ್ನು ವೀಕ್ಷಿಸಿರುವುದಾಗಿ ಮುಖ್ಯಮಂತ್ರಿಗಳು ಸ್ಮರಿಸಿದರು.

ಪ್ರಾಣಿಗಳನ್ನು ಕಂಡರೆ ಪ್ರೀತಿ

ಲೀಲಾವತಿಯವರು ಒಬ್ಬ ಪರಿಪೂರ್ಣ ಕಲಾವಿದರಾಗಿದ್ದರು. ಐತಿಹಾಸಿಕ, ಸಾಮಾಜಿಕ, ಪೌರಾಣಿಕ ಪಾತ್ರಗಳನ್ನು ಲೀಲಾಜಾಲವಾಗಿ, ಮನೋಜ್ಞವಾಗಿ ಅಭಿನಯಿಸುತ್ತಿದ್ದರು. ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಲೀಲಾವತಿಯವರು ಆಸ್ಪತ್ರೆ, ಪಶುವೈದ್ಯಕೀಯ ಆಸ್ಪತ್ರೆ ಗಳನ್ನು ನಿರ್ಮಿಸಿದ್ದರು. ರೈತಾಪಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದ ಲೀಲಾವತಿಯವರು ಪ್ರಾಣಿಗಳನ್ನು ಪ್ರೀತಿಯಿಂದ ಕಾಣುತ್ತಿದ್ದರು. ಪ್ರಾಣಿಗಳೆಡೆಗಿನ ಪ್ರೀತಿ ಅವರಿಗೆ ರಕ್ತಗತವಾಗಿ ಬಂದಿದೆ ಎಂದು ಸಿಎಂ ತಿಳಿಸಿದರು.

ಮನುಷ್ಯತ್ವದ ಮೂರ್ತರೂಪ

ಕರೋನಾ ಸಂದರ್ಭದಲ್ಲಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯ ಮಾಡುತ್ತಿದ್ದ ಲೀಲಾವತಿಯವರು ಮನುಷ್ಯತ್ವದ ಮೂರ್ತರೂಪವಾಗಿದ್ದರು. ತಾನು ಗಳಿಸಿದ್ದನ್ನು ಪರರಿಗೆ ಹಂಚುವ ದೊಡ್ಡ ಗುಣ ಅವರಲ್ಲಿತ್ತು. ಅವರ ಪ್ರತಿಭೆಗೆ ಪದ್ಮಶ್ರೀ ಪ್ರಶಸ್ತಿ ಯಂತಹ ರಾಷ್ಟ್ರಮಟ್ಟದ ಪ್ರಶಸ್ತಿ ದೊರೆಯದಿರುವುದು ದುರಂತ ಎಂದು ಮುಖ್ಯಮಂತ್ರಿ ತಿಳಿಸಿದರು.

ಇದನ್ನೂ ಓದಿ | Actress Leelavathi: ಅನ್ನ, ನೀರು ಬಿಟ್ಟಿದೆ ಲೀಲಾವತಿ ಅವರ ಪ್ರೀತಿಯ ಶ್ವಾನ; ಕಣ್ಣೀರಿಟ್ಟ ವಿನೋದ್‌!

ನಟಿ ಲೀಲಾವತಿ ಯವರ ಸಾವು ಆಘಾತವನ್ನುಂಟು ಮಾಡಿದ್ದು, ಕನ್ನಡ ಚಿತ್ರರಂಗವಲ್ಲದೇ , ಭಾರತೀಯ ಸಿನಿಮಾ ರಂಗಕ್ಕೂ ಲೀಲಾವತಿಯವರ ನಿಧನದಿಂದ ತುಂಬಲಾರದ ನಷ್ಟವುಂಟಾಗಿದೆ. ಅವರ ಕುಟುಂಬ ಹಾಗೂ ಅಪಾರ ಅಭಿಮಾನ ಬಳಗಕ್ಕೆ ಅವರ ಅಗಲಿಕೆಯ ದು:ಖವನ್ನು ಭರಿಸುವ ಶಕ್ತಿಯನ್ನು ಭಗವಂತನು ನೀಡಲಿ ಎಂದು ಸಿಎಂ ಹಾರೈಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version