ಬೆಂಗಳೂರು: ಪಿಎಸ್‌ಐ ನೇಮಕಾತಿಗೆ ಸಂಬಂಧಿಸಿ ಕನಕಗಿರಿ ಬಿಜೆಪಿ ಶಾಸಕ ಬಸವರಾಜ ದಡೇಸೂಗೂರು 15 ಲಕ್ಷ ರೂಪಾಯಿ ಪಡೆದ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಪ್ರತಿ ಪಕ್ಷಗಳು ಶಾಸಕನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಿವೆ. ಈ ಬಗ್ಗೆ ಸ್ಪಂದಿಸಿರುವ ಸಿಎಂ ಬಸವರಾಜ ಬೊಮ್ಮಾಯಿ ತನಿಖೆಯ ಸುಳಿವು ನೀಡಿದ್ದಾರೆ.
ಶಾಸಕರು ಹಣ ಪಡೆದ ಆರೋಪದ ಆಡಿಯೊ ವೈರಲ್ ಆಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ ಬೊಮ್ಮಾಯಿ, ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದೆ. ಈಗಾಗಲೇ ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಹೊಸದಾಗಿ ಬರುವ ಆರೋಪಗಳ ಬಗ್ಗೆ ತನಿಖೆ ನಡೆಸಲಾಗುತ್ತದೆ. ಯಾರ ಮೇಲೆ ಆರೋಪ ಬಂದರೂ ತನಿಖೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | ಸಿಎಂ ಬೊಮ್ಮಾಯಿಗೆ ಕರೆ ಮಾಡಿ ಅಭಿನಂದಿಸಿದ ಯೋಗಿ ಆದಿತ್ಯನಾಥ್ !: ಬಿ.ಕೆ. ಹರಿಪ್ರಸಾದ್ ವ್ಯಂಗ್ಯ
ವ್ಯಕ್ತಿಯೊಬ್ಬರಿಂದ 15 ಲಕ್ಷ ರೂಪಾಯಿ ಪಡೆದ ಕುರಿತ ಆಡಿಯೊ ಧ್ವನಿ ತಮ್ಮದೇ ಎಂದು ಶಾಸಕ ಬಸವರಾಜ ದಡೇಸೂಗೂರು ಮಂಗಳವಾರ ಒಪ್ಪಿಕೊಂಡಿದ್ದರು. ಆದರೆ ಪಿಎಸ್‌ಐ ನೇಮಕಾತಿಗೆ ಹಣ ಪಡೆದಿರುವ ಆರೋಪವನ್ನು ಈಗಾಗಲೇ ನಿರಾಕರಿಸಿರುವ ಶಾಸಕ ಬಸವರಾಜ ದಡೇಸೂಗೂರು, ತಾವು ಬೇರೆ ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸುವ ಬಗ್ಗೆ ವ್ಯಕ್ತಿಯೊಬ್ಬರು ಮಾತನಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ನ್ಯಾಯಾಂಗ ತನಿಖೆ ಮಾಡಬೇಕು ಎಂದ ಡಿಕೆಶಿ
ಪಿಎಸ್‌ಐ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬಸವರಾಜ್ ಆಡಿಯೊ ವೈರಲ್ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸರ್ಕಾರ ಎಂದರೆ ಯಾರು? ಸರ್ಕಾರ ಎಂದರೆ ಮಂತ್ರಿ, ಮುಖ್ಯಮಂತ್ರಿ. ಬಿಜೆಪಿ ಶಾಸಕನ ಆಡಿಯೊದಲ್ಲಿ ಸರ್ಕಾರಕ್ಕೆ ಕೊಡುವ ಹಣ ಕೊಡಬೇಕು ಎಂದು ಹೇಳಿದ್ದಾರೆ. ಇದೇ ಕಾರಣಕ್ಕಾಗಿ ನ್ಯಾಯಾಂಗ ತನಿಖೆ ಮಾಡಬೇಕು ಎಂದು ಹೇಳುತ್ತಿದ್ದೇವೆ. ಲೋಕಾಯುಕ್ತ ತನಿಖೆ ನಡೆದರೂ ಏನು ಪ್ರಯೋಜನ ಆಗುವುದಿಲ್ಲ ಎಂದು ಹೇಳಿದರು.
ʻʻಸರ್ಕಾರವನ್ನು ಟೀಕಿಸಿದ್ದಕ್ಕೆ ಪ್ರಿಯಾಂಕ್ ಖರ್ಗೆ ಅವರನ್ನು ಹೆದರಿಸಲು ನೋಟಿಸ್ ಕೊಟ್ಟು ವಿಚಾರಣೆಗೆ ಕರೆಯುತ್ತಾರೆ. ಮುಖ್ಯಮಂತ್ರಿಗಳೇ ನಿಮ್ಮ ಕೈಲಿ ಸರ್ಕಾರ ನಡೆಸಲು ಆಗುವುದಿಲ್ಲ, ಮಾಧುಸ್ವಾಮಿ ಹೇಳಿದ ಹಾಗೆ ಹೇಗೋ ಮುಂದೆ ತಳ್ಳುತ್ತಿದ್ದೀರಿ. ಇನ್ನು ನಾಲ್ಕು ಜನ ಸೇರಿಸ್ಕೊಂಡು ತಳ್ಳಿಸಿಕೊಂಡು ಆಡಳಿತ ನಡೆಸಿʼʼ ಎಂದು ವ್ಯಂಗ್ಯವಾಡಿದರು.
ವಿಚಾರಣೆಗೆ ಒಳಪಡಿಸಿದರೆ ಶಾಸಕರ ಮಾತಿನ ನಿಗೂಢತೆ ತಿಳಿಯಲಿದೆ : ಕೆಪಿಸಿಸಿ ಟ್ವೀಟ್
ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಅಭ್ಯರ್ಥಿ ಬಳಿ 15 ಲಕ್ಷ ಹಣ ಪಡೆದಿದ್ದು ಬೆಳಕಿಗೆ ಬಂದ ಬೆನ್ನಲ್ಲೇ ಶಾಸಕ ಬಸವರಾಜ್ ದಡೇಸೂಗೂರ ಅವರು ತಡಬಡಿಸುತ್ತಿದ್ದಾರೆ! ಹಣ ಪಡೆದವರು ಯಾರು, ಏನು ವ್ಯವಹಾರ ಎಂಬುದು ತಿಳಿದಿಲ್ಲವಂತೆ, ಅದರೂ ಸಮಸ್ಯೆ ಬಗೆಹರಿಸಲು ಹೋಗಿದ್ದರಂತೆ!, ವಿಚಾರಣೆಗೆ ಒಳಪಡಿಸಿದರೆ ಶಾಸಕರ ಮಾತಿನ ನಿಗೂಢತೆ ತಿಳಿಯಲಿದೆ ಅಲ್ಲವೇ ಬಸವರಾಜ ಬೊಮ್ಮಾಯಿ ಅವರೇ ಎಂದು ಕೆಪಿಸಿಸಿ ಟ್ವೀಟ್ ಮಾಡಿ ಟೀಕಿಸಿದೆ.
ʻʻಹಣ ಪಡೆದ ಬಗ್ಗೆ ಶಾಸಕರು ಮಾತಾಡಲು ನಿರಾಕರಿಸುತ್ತಿರುವುದೇಕೆ? ಅಡಿಯೋದಲ್ಲಿ ಸರ್ಕಾರಕ್ಕೆ ಹಣ ಕೊಡಿಸಿದ್ದೇನೆ ಎಂದು ಹೇಳಿದ ಶಾಸಕರು ಯಾರಿಗೆ ಕೊಡಿಸಿದ್ದಾರೆ ಎಂದು ಹೇಳಲು ಹಿಂಜರಿಯುತ್ತಿರುವುದೇಕೆ? ಪಿಎಸ್‌ಐ ಹಗರಣದ ತನಿಖೆ ಪ್ರಾಮಾಣಿಕವಾಗಿ ನಡೆದಿದ್ದೇ ಆದರೆ ಅರ್ಧ ಮಂತ್ರಿಮಂಡಲ, ಮುಕ್ಕಾಲು ಪಾಲು ಬಿಜೆಪಿ ಶಾಸಕರು ಜೈಲು ಪಾಲಾಗುವುದು ನಿಶ್ಚಿತʼʼ ಎಂದು ಹೇಳಿದೆ.
ಒಂದು ಅಕ್ರಮವನ್ನು ಮುಚ್ಚಿಕೊಳ್ಳಲು ಹತ್ತಾರು ಸುಳ್ಳು ಹೇಳುವ ಅಗತ್ಯ ಬೀಳುತ್ತದೆ, ಬಿಜೆಪಿಯ ಪರಿಸ್ಥಿತಿಯೂ ಆದೇ ಆಗಿದೆ, ಈ ಶಾಸಕರ ಸ್ಥಿತಿಯೂ ಹಾಗೆಯೇ ಆಗಿದೆ. ಹಣ ಪಡೆದವರ ಬಗ್ಗೆ ಗೊತ್ತಿಲ್ವಂತೆ, ಆದರೂ ʼಬಗೆಹರಿಸಲು’ ಹೋಗಿದ್ದರಂತೆ!, ಪಿಎಸ್‌ಐ ಆಕ್ರಮದಲ್ಲಿ ಇವರಂತೆ ಇನ್ನೆಷ್ಟು ದೊಡ್ಡ ಮನುಷ್ಯರಿದ್ದಾರೆ ಎಂದು ಹೇಳಿದೆ.
ಇದನ್ನೂ ಓದಿ | BJP ತೆಕ್ಕೆಗೆ ಮೈಸೂರು ಮೇಯರ್ ಗದ್ದುಗೆ: ಕೇಳದೇ ಇದ್ದರೂ JDSನವರೇ ಮತ ನೀಡಿದ್ದಾರೆ ಎಂದ ಪಕ್ಷ !