Site icon Vistara News

ಬೀದಿಯಲ್ಲಿ ಬಿದ್ದವರನ್ನು ಬಾದಾಮಿಗೆ ತಂದವರಾರು?: ಸಿದ್ದರಾಮಯ್ಯ ಕುರಿತು ಸಿ.ಎಂ. ಇಬ್ರಾಹಿಂ ಪ್ರಶ್ನೆ

ಸಿಎಂ ಇಬ್ರಾಹಿಂ

ಬಾಗಲಕೋಟೆ: ಭಾರತದ ಇತಿಹಾಸದಲ್ಲೇ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಹಾಗೂ ಶಾಸಕಾಂಗ ಪಕ್ಷದ ನಾಯಕ ಬಿಜೆಪಿಗೆ ಮೊದಲ ಪ್ರಾಶಸ್ತ್ಯದ ಮತ ಹಾಕಿಸಿದ್ದು ಎಂದೂ ನೋಡಿಲ್ಲ. ರಾಜ್ಯಸಭೆ ಚುನಾವಣೆ ಬಗ್ಗೆ ಸೋನಿಯಾ ಗಾಂಧಿಗೆ ಪತ್ರ ಬರೆದರೂ ಈ ಬಗ್ಗೆ ಪ್ರತಿಕ್ರಿಯೆ ಇಲ್ಲ. ಹಾಗೆಯೇ ಡಿ.ಕೆ. ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಕೂಡ ಎಲ್ಲೂ ಉತ್ತರ ಕೊಡುತ್ತಿಲ್ಲ. ಹಾಗಾದರೆ ಬಿಜೆಪಿ ಬಿ ಟೀಮ್ ಯಾರು ಎಂದು ಜನ ತೀರ್ಮಾನ ಮಾಡುತ್ತಾರೆ ಎಂದು ಜೆಡಿಎಸ್‌ ರಾಜ್ಯ ಅಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದ್ದಾರೆ. ಬೀದಿಯಲ್ಲಿ ಬಿದ್ದಿದ್ದವರನ್ನು ಬಾದಾಮಿಗೆ ಕರೆತಂದವರು ಯಾರು? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಬಾಗಲಕೋಟೆ ಜೆಡಿಎಸ್ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಸಿ.ಎಂ. ಇಬ್ರಾಹಿಂ ಮಾತನಾಡಿದರು. ಎಚ್‌.ಡಿ. ಕುಮಾರಸ್ವಾಮಿ ಮತ್ತೆ ಸಿಎಂ ಹೇಗೆ ಆಗುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬೀದಿಯಲ್ಲಿ ಬಿದ್ದ ಸಿದ್ದರಾಮಯ್ಯನನ್ನು ಬಾದಾಮಿಗೆ ತಂದವರು ಯಾರು? ನಾನು ತಾನೆ? ನನ್ನ ಜತೆ ಮಂತ್ರಿಯಾಗಿದ್ದ ಬಿ.ಬಿ. ಚಿಮ್ಮನಕಟ್ಟಿ, ತಿಮ್ಮಾಪುರ ಹಾಗೂ ಎಸ್.ಆರ್. ಪಾಟಿಲ್ ಅವರನ್ನು ಒಪ್ಪಿಸಿ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಬಾದಾಮಿಯಲ್ಲಿ ನಿಲ್ಲಿಸಿದೆವು. ವೈಎಸ್‌ಆರ್ ಜಗನ್, ಡಿಎಂಕೆ ಪಕ್ಷದ ಸ್ಟಾಲಿನ್ ಯಾವ ರಾಷ್ಟ್ರೀಯ ಪಕ್ಷದವರಲ್ಲ, ಆದರೂ ಅವರು ಸಿಎಂ ಆಗಿಲ್ಲವೇ? ಹಾಗೆಯೇ ನಾವೂ ಮುಂದಿನ ದಿನದಲ್ಲಿ ಆಡಳಿತಕ್ಕೆ ಬರುತ್ತೇವೆ ಎಂದರು.

ಇದನ್ನೂ ಓದಿ | ಹಾಕಿರುವ ತೇಪೆಗಿಂತ ಉಳಿದಿರುವ ತೂತುಗಳೇ ಹೆಚ್ಚು: ಪಠ್ಯ ಪರಿಷ್ಕರಣೆ ಕುರಿತು ಸಿದ್ದರಾಮಯ್ಯ ಟೀಕೆ

ಸಿದ್ದರಾಮಯ್ಯ ಕ್ಷೇತ್ರ ಇನ್ನೂ ಫೈನಲ್ ಆಗಿಲ್ಲ ಎಂಬ ಪ್ರಶ್ನೆಗೆ ಸ್ಪಂದಿಸಿದ ಅವರು, ಅವರಿಗೆ ಕ್ಷೇತ್ರ ಇಲ್ಲವೇ ಇಲ್ಲ. ಅವರ ಜತೆಯಲ್ಲಿ ಇವತ್ತು ಯಾರಿದ್ದಾರೆ ಹೇಳಿ?, ನಾನೊಬ್ಬನೇ ಮಾತಾಡುತ್ತೇನೆ, ನನ್ನ ಪರ ಯಾರೂ ಮಾತನಾಡಲ್ಲ ಅಂತ ಸ್ವತಃ ಸಿದ್ದರಾಮಯ್ಯ ಹೇಳಿದ್ದಾರೆ. ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಹೊಂದಿಕೆ ಆಗುವುದಿಲ್ಲ. ಅದು(ಕಾಂಗ್ರೆಸ್)ಕ್ಯಾಬರೆ, ಜೆಡಿಎಸ್ ಭರತನಾಟ್ಯ, ಬಿಜೆಪಿ ಆಂಗ್ಲೋ ಇಂಡಿಯನ್, ಕ್ಯಾಬರೆಯಲ್ಲಿ ನರ್ತನ ಮಾಡೋರು ಡಿ.ಕೆ.ಶಿವಕುಮಾರ್ ಎಂದರು.

ಇತ್ತೀಚೆಗೆ ಭರತ ನಾಟ್ಯದಿಂದ(ಜೆಡಿಎಸ್) ಕ್ಯಾಬರೆಗೆ(ಕಾಂಗ್ರೆಸ್) ಹೋಗುವ ಮಂದಿ ಜಾಸ್ತಿಯಾಗಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕಿಯಿಸಿ, ಸೆಪ್ಟೆಂಬರ್, ಅಕ್ಟೋಬರ್ ಆದಮೇಲೆ ವಿಪರೀತ ಜನ ಬರುತ್ತಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್‌ನಿಂದಲೇ ಜೆಡಿಎಸ್‌ಗೆ ತುಂಬಾ ಜನ ಹೊರ ಬರುತ್ತಾರೆ ಎಂದಿದ್ದಾರೆ.

ಇದನ್ನೂ ಓದಿ | ಹಾಕಿರುವ ತೇಪೆಗಿಂತ ಉಳಿದಿರುವ ತೂತುಗಳೇ ಹೆಚ್ಚು: ಪಠ್ಯ ಪರಿಷ್ಕರಣೆ ಕುರಿತು ಸಿದ್ದರಾಮಯ್ಯ ಟೀಕೆ

Exit mobile version