ಬೀದರ್: ಜೆಡಿಎಸ್ ರಾಜ್ಯಾಧ್ಯಕ್ಷರಾಗಿರುವ ಸಿ.ಎಂ. ಇಬ್ರಾಹಿಂ ಅವರು ತನ್ನ ಮಗನನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಿಸಿಕೊಡು ದೇವಾ.. ಎಂದು ದರ್ಗಾದಲ್ಲಿ ಪ್ರಾರ್ಥನೆ ಮಾಡಿದ್ದಾರೆ. ಈ ವೇಳೆ ಅವರು ಬಿಕ್ಕಿ ಬಿಕ್ಕಿ ಅತ್ತು ಪ್ರಾರ್ಥನೆ ಮಾಡುತ್ತಿರುವ ವಿಡಿಯೊಗಳು ವೈರಲ್ ಆಗಿವೆ.
ಸಿ.ಎಂ. ಇಬ್ರಾಹಿಂ ಅವರ ಪುತ್ರ ಸಿ.ಎಂ. ಫಯಾಜ್ ಅವರಿಗೆ ಹುಮನಾಬಾದ್ ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ ಸಿಗುವುದು ಪಕ್ಕಾ ಆಗಿದೆ. ಇದು ಮುಸ್ಲಿಂ ಬಾಹುಳ್ಯ ಇರುವ ಮತ ಕ್ಷೇತ್ರವಾಗಿದ್ದು, ಗೆಲುವಿನ ನಿರೀಕ್ಷೆಯಲ್ಲಿ ಪಕ್ಷ ಮತ್ತು ಇಬ್ರಾಹಿಂ ಇಬ್ಬರೂ ಕಾಯುತ್ತಿದ್ದಾರೆ.
ಈ ನಡುವೆ, ಶನಿವಾರ ಬೀದರ್‌ನ ಚಿಟಗುಪ್ಪ ತಾಲೂಕಿನ ಹಜ್ರತ್ ಸಯ್ಯದ್ ಮಖ್ಬೂಬ್ ಹುಸೇನಿ ದರ್ಗಾಕ್ಕೆ ಪುತ್ರನೊಂದಿಗೆ ಭೇಟಿ ನೀಡಿದ ಇಬ್ರಾಹಿಂ ಅಲ್ಲಿನ ಗೋರಿಯ ಮುಂದೆ ನಿಂತು ಬಿಕ್ಕಿಬಿಕ್ಕಿ ಅಳುತ್ತಾ ಕಣ್ಣೀರು ಹಾಕಿದ್ದಾರೆ.
ʻʻಏಳು ನೂರು ಕಿಮಿ ದೂರದಿಂದ ಮಗ ಬಂದಿದ್ದಾನೆ. ನನ್ನ ಮಗನನ್ನು ನೀನೇ ರಕ್ಷಿಸಬೇಕು. ಅವನಿಗೆ ಜಯವನ್ನು ಕರುಣಿಸಬೇಕು. ಅವನನ್ನು ಕಾಪಾಡಬೇಕು. ನಿನ್ನ ಮುಂದೆ ನಾನು ಪ್ರಾರ್ಥನೆ ಮಾಡುತ್ತಿದ್ದೇನೆʼʼ ಎಂದು ದೇವನ ಮುಂದೆ ಪ್ರಾರ್ಥನೆ ಸಲ್ಲಿಸಿದ್ದಾರೆ
ʻʻನನಗೆ ಇರುವುದು ಒಬ್ಬ ಮಗ. ಆ ಮಗನಿಗೆ ಆಶೀರ್ವಾದ ಮಾಡುʼʼ ಎಂದು ಬೇಡಿಕೊಂಡಿದ್ದಾರೆ ಸಿ.ಎಂ. ಇಬ್ರಾಹಿಂ.
ದೇವರ ಮುಂದೆ ಪ್ರಾರ್ಥನೆ ಸಲ್ಲಿಸುವಾಗ ಭಾವುಕರಾಗಿ ಕಣ್ಣೀರು ಬರುವುದು ನಿಜ. ಆದರೆ, ಸಿ.ಎಂ. ಇಬ್ರಾಹಿಂ ಅವರು ಆ ಭಾಗದ ಮುಸ್ಲಿಮರನ್ನು ಓಲೈಸುವುದಕ್ಕಾಗಿ ದರ್ಗಾದಲ್ಲಿ ಕಣ್ಣೀರು ಹಾಕಿದರೇ ಎಂಬ ಪ್ರಶ್ನೆಯೂ ಎದ್ದುಬಂದಿದೆ. ಜೆಡಿಎಸ್ ನಾಯಕರಾಗಿರುವ ಕುಮಾರಸ್ವಾಮಿ ಅವರಂತೂ ಸಾರ್ವಜನಿಕವಾಗಿ ಭಾವುಕರಾಗುವುದಕ್ಕೆ ಪ್ರಸಿದ್ಧಿಯನ್ನೇ ಪಡೆದಿದ್ದಾರೆ. ಅದು ಕೆಲವು ಕಡೆ ಉತ್ತಮ ಫಲಿತಾಂಶವನ್ನೇ ನೀಡಿದೆ.
ಈಗ ಸಿ.ಎಂ. ಇಬ್ರಾಹಿಂ ಅವರು ಕೂಡಾ ಇದೇ ದಾರಿಯನ್ನು ಹಿಡಿದಿದ್ದಾರೆ ಎಂಬ ಸಂಶಯವೂ ಕಂಡುಬಂದಿದೆ.
ಇದನ್ನೂ ಓದಿ : Karnataka Election : ನಮ್ಮ 123 ಸೀಟು ಅತ್ಲಾಗಿರಲಿ, ನಿಮ್ಮ ಸೀಟಿನ ಕಥೆ ಹೇಳಿ; ಸಿದ್ದರಾಮಯ್ಯಗೆ ಕುಮಾರಸ್ವಾಮಿ ವ್ಯಂಗ್ಯ