Site icon Vistara News

ಫೀಡರ್‌ ಸೌರೀಕರಣ ಯೋಜನೆ: ಸರ್ಕಾರಿ ಜಾಗ ಗುರುತಿಸಿ, ತ್ವರಿತವಾಗಿ ಹಸ್ತಾಂತರಿಸಲು ಸಿಎಂ ಸೂಚನೆ

CM Siddaramaiah

ಬೆಂಗಳೂರು: ಪಿಎಂ ಕುಸುಮ್‌ ಯೋಜನೆ ಘಟಕ- ಸಿ (PM-KUSUM scheme- Component C) ಫೀಡರ್‌ ಸೌರೀಕರಣಕ್ಕಾಗಿ ರಾಜ್ಯದ 400 ಉಪಕೇಂದ್ರಗಳ ಬಳಿ ಸೌರ ವಿದ್ಯುತ್‌ ಘಟಕ ಸ್ಥಾಪನೆಗೆ ಇಂಧನ ಇಲಾಖೆಗೆ ಜಮೀನು ಹಸ್ತಾಂತರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ಕ್ರಮ ವಹಿಸಲು ಸುತ್ತೋಲೆ ಹೊರಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಪಿಎಂ ಕುಸುಮ್‌ ಘಟಕ ಸಿ (PM-KUSUM Component C) ಯೋಜನೆಗೆ ಗುರುತಿಸಿದ ಸರ್ಕಾರಿ ಭೂಮಿಯನ್ನು ಯೋಜನೆಯ ಅನುಷ್ಠಾನಕ್ಕಾಗಿ ಕಂದಾಯ ಇಲಾಖೆಗೆ ಹಸ್ತಾಂತರಿಸುವ ಕುರಿತು ಉನ್ನತ ಮಟ್ಟದ ಸಭೆ ನಡೆಸಿದರು.

ಇದನ್ನೂ ಓದಿ | Ballari News: ಮಾಜಿ ಸಂಸದೆ ಶಾಂತಾ ವೈಎಸ್‌ಆರ್‌ಸಿಪಿ ಸೇರ್ಪಡೆ; ರಾಜ್ಯ ರಾಜಕಾರಣದಿಂದ ಆಂಧ್ರ ರಾಜಕೀಯಕ್ಕೆ!

400 ವಿದ್ಯುತ್‌ ಉಪಕೇಂದ್ರಗಳ ಸಮೀಪದಲ್ಲಿ ಫೀಡರ್‌ ಸೌರೀಕರಣ ಅನುಷ್ಠಾನಕ್ಕಾಗಿ 3000 ಎಕರೆ ಭೂಮಿ ಅಗತ್ಯವಿದೆ. ಜಿಲ್ಲಾಧಿಕಾರಿಗಳಿಗೆ ಭೂಮಿ ಹಂಚಿಕೆ ಮಾಡಲು ಅಧಿಕಾರ ಪ್ರತ್ಯಾಯೋಜನೆ ಮಾಡಿದರೆ ತ್ವರಿತವಾಗಿ ಯೋಜನೆ ಅನುಷ್ಠಾನ ಮಾಡಲು ಸಾಧ್ಯವಿದೆ. ಇದರಿಂದ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು ಹೊತ್ತಿನಲ್ಲೇ ವಿದ್ಯುತ್‌ ಪೂರೈಕೆ ಮಾಡಲು ಸಹ ಸಾಧ್ಯವಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ ಅವರು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ಇಂಧನ ಇಲಾಖೆಯ ಸಂಬಂಧಿಸಿದ ಅಧಿಕಾರಿಗಳು ಸ್ಥಳೀಯ ತಹಸೀಲ್ದಾರರೊಂದಿಗೆ ಜಮೀನು ಗುರುತಿಸಿ, ಸೂಕ್ತ ಪ್ರಸ್ತಾವನೆ ಕೂಡಲೇ ಕಳುಹಿಸಿ, ಹಸ್ತಾಂರಕಕ್ಕೆ ಕ್ರಮ ಕೈಗೊಳ್ಳಲು ಸೂಚಿಸಿದರು.

ಕಂದಾಯ ಇಲಾಖೆಯು ಇಂಧನ ಇಲಾಖೆಗೆ ಭೂಮಿಯನ್ನು ಲೀಸ್‌ ಆಧಾರದಲ್ಲಿ ಹಸ್ತಾಂತರಿಸಲು ಸೂಚಿಸಿದರು. ಆದರೆ ಈ ಆಸ್ತಿಯನ್ನು ಇಂಧನ ಇಲಾಖೆ ಖಾಸಗಿಯವರಿಗೆ ಹಸ್ತಾಂತರಿಸುವಂತಿಲ್ಲ ಎಂಬ ಷರತ್ತಿನೊಂದಿಗೆ ಹಸ್ತಾಂತರಿಸಲು ಸೂಚಿಸಿದರು.

ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್‌ ನಡೆಸಿ ಖುದ್ದು ಸೂಚನೆ ನೀಡುವುದಾಗಿ ಹಾಗೂ ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರಿಗೂ ಈ ಕುರಿತು ಆದ್ಯತೆ ನೀಡಲು ಸೂಚಿಸುವುದಾಗಿ ತಿಳಿಸಿದರು.

ಇದನ್ನೂ ಓದಿ | Bengaluru Film Festival: ಫೆ.29 ರಿಂದ ಮಾ.7 ರವರೆಗೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

ಸಭೆಯಲ್ಲಿ ಇಂಧನ ಸಚಿವ ಕೆ.ಜೆ. ಜಾರ್ಜ್‌, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜು, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್‌, ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತಾ, ಮುಖ್ಯಮಂತ್ರಿಯವರ ಕಾರ್ಯದರ್ಶಿ ಡಾ. ಕೆ.ವಿ. ತ್ರಿಲೋಕಚಂದ್ರ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್‌ ಕಟಾರಿಯಾ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version