ಬೆಂಗಳೂರು: ಪಠ್ಯಪುಸ್ತಕ ವಿವಾದ ಹಾಗೂ ಇಡೀ ಪರಿಷ್ಕೃತ ಪಠ್ಯ ವಾಪಸ್‌ಗೆ ಒತ್ತಾಯಿಸಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವರು ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಮಹತ್ವದ ಸಭೆ ನಡೆಸಿದರು. ವಿವಾದಿತ ಅಂಶಗಳ ಕುರಿತು ಸಮಗ್ರವಾಗಿ ಪರಿಶೀಲಿಸಿ, ಸರ್ಕಾರದ ಮುಂದಿರುವ ಆಯ್ಕೆಯ ಕುರಿತು ಸಮಾಲೋಚನೆ ನಡೆಸಿದರು.
ನಗರದ ರೇಸ್ ಕೋರ್ಸ್ ರಸ್ತೆಯ ಸರ್ಕಾರಿ ನಿವಾಸದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ವಿವಾದ ಕುರಿತು ಚರ್ಚಿಸಲು ಕರೆದಿದ್ದ ತುರ್ತು ಸಭೆಯನ್ನು ಸರ್ಕಾರಿ ನಿವಾಸದಿಂದ ಆರ್.ಟಿ.ನಗರದ ಖಾಸಗಿ ನಿವಾಸಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸ್ಥಳಾಂತರಿಸಿದರು. ಸಿಎಂ ನಿರ್ದೇಶನದ ಮೇರೆಗೆ ಆರ್.ಟಿ ನಗರ ನಿವಾಸಕ್ಕೆ ಸಚಿವ ಬಿ.ಸಿ ನಾಗೇಶ್ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ತೆರಳಿದ್ದರು.
ಸಿಎಂಗೆ ಪಠ್ಯ ಪರಿಷ್ಕರಣೆ ಬಗ್ಗೆ ವರದಿ ನೀಡಿದ ಅಧಿಕಾರಿಗಳು, ಪಠ್ಯಪುಸ್ತಕದ ಯಾವ ಸಾಲುಗಳು ವಿವಾದಕ್ಕೆ ಕಾರಣವಾಗಿವೆ. ಯಾವುದನ್ನು ಕೈಬಿಡಲಾಗಿದೆ, ಯಾವುದನ್ನ ಸೇರಿಸಲಾಗಿದೆ ಎಂಬ ಮಾಹಿತಿಯನ್ನು ಸಭೆಯಲ್ಲಿ ನೀಡಿದರು. ನಂತರ ಸಚಿವ ಬಿ.ಸಿ ನಾಗೇಶ್ ಅವರಿಂದಲೂ ಮತ್ತಷ್ಟು ಮಾಹಿತಿಯನ್ನು ಪಡೆದ ಸಿಎಂ ಬೊಮ್ಮಾಯಿ, ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ಬರೆದಿರುವ ಪತ್ರದ ಬಗ್ಗೆಯೂ ಚರ್ಚೆ ನಡೆಸಿದರು.
ಸದ್ಯದ ಪರಿಸ್ಥಿತಿಯಲ್ಲಿ ಪರಿಷ್ಕೃತ ಪಠ್ಯ ವಾಪಸ್ ಕಷ್ಟಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಏನು ಮಾಡಬಹುದು, ಯಾವ ಉತ್ತರವನ್ನು ಗೌಡರಿಗೆ ನೀಡಬೇಕು ಎನ್ನುವ ಕುರಿತು ಮಾತುಕತೆ ನಡೆದಿದೆ. ವಿಸ್ತೃತ ಚರ್ಚೆ ನಡೆಸಿ ಸಭೆ ಮುಗಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಎಲ್ಲ ಆಯಾಮದಲ್ಲಿಯೂ ಅವಲೋಕನ ಮಾಡಿ ಸೂಕ್ತ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಿದ್ದು, ಗುರುವಾರ(ಜೂ.23ರಂದು) ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ.
ಸಭೆ ಬಳಿಕ ಮಾತನಾಡಿದ ಸಚಿವ ಬಿ.ಸಿ ನಾಗೇಶ್, ಪಠ್ಯಪುಸ್ತಕ ಪರಿಷ್ಕರಣೆಗೆ ಆಕ್ಷೇಪ ವ್ಯಕ್ತಪಡಿಸಿ ಮಾಜಿ ಪ್ರಧಾನಮಂತ್ರಿ ದೇವೇಗೌಡ ಅವರು, ಸಿಎಂಗೆ ಪತ್ರ ಬರೆದಿದ್ದರು. ಅದರ ಬಗ್ಗೆ ವಿವರಣೆ ಪಡೆಯಲು ಸಿಎಂ ಸಭೆ ಕರೆದಿದ್ದರು, ಅವರಿಗೆ ಪೂರ್ಣ ಮಾಹಿತಿ ನೀಡಿದ್ದೇವೆ. ಕೆಲವು ಕಂಟೆಂಟ್ ಬಗ್ಗೆ ಹೆಚ್ಚಿನ ಮಾಹಿತಿ ಕೇಳಿದರು. ನಾಳೆ ಅದರ ಮಾಹಿತಿಯನ್ನು ನೀಡುತ್ತೇವೆ ಎಂದು ತಿಳಿಸಿರುವುದಾಗಿ ಹೇಳಿದರು.
ಇದನ್ನೂ ಓದಿ | ಪಠ್ಯ ಪುಸ್ತಕ ಪರಿಷ್ಕರಣೆ: ಗೌಡರ ಪತ್ರದ ಹಿನ್ನೆಲೆಯಲ್ಲಿ ಇಂದು ಮಹತ್ವದ ಸಭೆ